ಶಿಕ್ಷಕರು, ಪ್ರಾಧ್ಯಾಪಕರನ್ನು ಭಾರತ್ ಜೋಡೋ ಸಂಘಟನೆಗಳ ಕೆಲಸಕ್ಕೆ ನಿಯೋಜಿಸಿರುವುದು ಕಾನೂನುಬಾಹಿರ: ಗೋವಿಂದಗೌಡ್ರ
ಗದಗ, 14 ನವೆಂಬರ್ (ಹಿ.ಸ.) ಶಿಕ್ಷಕರು ಹಾಗೂ ಪ್ರಾಧ್ಯಾಪಕರನ್ನು ಶೈಕ್ಷಣಿಕ ಚಟುವಟಿಕೆಗಳನ್ನು ಹೊರತುಪಡಿಸಿ ಇತರೆ ಕೆಲಸಗಳಿಗೆ ನಿಯೋಜಿಸಬಾರದೆಂಬ ಸರ್ಕಾರದ ಸುತ್ತೋಲೆ ಇದ್ದರೂ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರು ಮತ್ತು ಕಾಲೇಜು ಪ್ರಾಧ್ಯಾಪಕರನ್ನು ಭಾರತ್ ಜೋಡೋ ಸಂಘಟನೆಗಳ ಕೆಲಸಕ್ಕೆ ನಿಯೋಜಿಸ
ಫೋಟೋ


ಗದಗ, 14 ನವೆಂಬರ್ (ಹಿ.ಸ.)

ಶಿಕ್ಷಕರು ಹಾಗೂ ಪ್ರಾಧ್ಯಾಪಕರನ್ನು ಶೈಕ್ಷಣಿಕ ಚಟುವಟಿಕೆಗಳನ್ನು ಹೊರತುಪಡಿಸಿ ಇತರೆ ಕೆಲಸಗಳಿಗೆ ನಿಯೋಜಿಸಬಾರದೆಂಬ ಸರ್ಕಾರದ ಸುತ್ತೋಲೆ ಇದ್ದರೂ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರು ಮತ್ತು ಕಾಲೇಜು ಪ್ರಾಧ್ಯಾಪಕರನ್ನು ಭಾರತ್ ಜೋಡೋ ಸಂಘಟನೆಗಳ ಕೆಲಸಕ್ಕೆ ನಿಯೋಜಿಸಿರುವುದು ಕಾನೂನುಬಾಹಿರ ಕ್ರಮವಾಗಿದೆ. ಕೂಡಲೇ ಅವರನ್ನು ಈ ಕೆಲಸದಿಂದ ಬಿಡುಗಡೆಗೊಳಿಸಿ ಮೂಲ ಕರ್ತವ್ಯಕ್ಕೆ ನಿಯೋಜಿಸಬೇಕೆಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಆರ್. ಗೋವಿಂದಗೌಡ್ರ ಒತ್ತಾಯಿಸಿದ್ದಾರೆ.

ಈ ಕುರಿತು ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಅವರು, ಪರೀಕ್ಷೆಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ಶಿಕ್ಷಕರು ಹಾಗೂ ಪ್ರಾಧ್ಯಾಪಕರನ್ನು ಶಿಕ್ಷಣಕ್ಕೆ ಸಂಬಂಧವಿಲ್ಲದ ಕೆಲಸಕ್ಕೆ ನಿಯೋಜಿಸಿರುವುದರಿಂದ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಶಿಕ್ಷಕರು ಫಲಿತಾಂಶ ಸುಧಾರಣೆ, ವಿದ್ಯಾರ್ಥಿಗಳ ದಾಖಲಾತಿ ಹಾಗೂ ಹಾಜರಾತಿ ಹೆಚ್ಚಳಕ್ಕಾಗಿ ಮನೆಮನೆಗೆ ಭೇಟಿ, ಮಧ್ಯಾಹ್ನದ ಬಿಸಿಯೂಟ ನಿರ್ವಹಣೆ, ಶಾಲಾ ಚಟುವಟಿಕೆಗಳ ಆನ್ಲೈನ್ ಮಾಹಿತಿ ರವಾನೆ, ವಿವಿಧ ಪಠ್ಯೇತರ ಸ್ಪರ್ಧೆಗಳ ಆಯೋಜನೆ, ಎನ್ಎಂಎಂಎಸ್ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಗಳ ಅರ್ಜಿ ಸಲ್ಲಿಕೆ ಸೇರಿದಂತೆ ಹಲವು ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹೆಚ್ಚುವರಿ ಹೊರೆ ನೀಡುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದ್ದಾರೆ.

ಭಾರತ್ ಜೋಡೋ ಸಂಘಟನೆಗಳ ಕೆಲಸ ಸುಮಾರು ಎರಡು ವರ್ಷಗಳ ಕಾಲ ನಡೆಯಲಿದ್ದು, ಈ ಕಾರ್ಯಕ್ಕೆ ಶಿಕ್ಷಕರನ್ನು ಬಳಸಿಕೊಳ್ಳುವ ಬದಲು ಬೇರೆ ಇಲಾಖೆಗಳ ಸಿಬ್ಬಂದಿಯನ್ನು ನಿಯೋಜಿಸಬೇಕು. ಎಸ್ಎಸ್ಎಲ್ಸಿ ಪರೀಕ್ಷೆಗಳ ಫಲಿತಾಂಶ ಸುಧಾರಣೆಗೆ ಶ್ರಮಿಸುತ್ತಿರುವ ಶಿಕ್ಷಕರ ಮೇಲೆ ಹೆಚ್ಚುವರಿ ಒತ್ತಡ ಹೇರುವುದರಿಂದ ವಿದ್ಯಾರ್ಥಿಗಳ ಫಲಿತಾಂಶದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು ಎಂದು ಎಚ್ಚರಿಸಿದ್ದಾರೆ.

ಅಲ್ಲದೆ, ಶಿಕ್ಷಣ ಇಲಾಖೆಯ ಸಿಬ್ಬಂದಿ ಶರಣು ಗೊಗೇರಿ ಅವರನ್ನು ಬೇರೆ ಬೇರೆ ಇಲಾಖೆಗಳ ಪ್ರಭಾರಿಯಾಗಿ ನಿಯೋಜಿಸಿರುವುದನ್ನು ಹಿಂಪಡೆದು, ಅವರ ಮೂಲ ಇಲಾಖೆಯಾದ ಶಿಕ್ಷಣ ಇಲಾಖೆಗೆ ಮರಳಿ ನಿಯೋಜಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಶಿಕ್ಷಣ ವ್ಯವಸ್ಥೆಯ ಹಿತದೃಷ್ಟಿಯಿಂದ ಶಿಕ್ಷಕರು ಹಾಗೂ ಪ್ರಾಧ್ಯಾಪಕರನ್ನು ಕೂಡಲೇ ಭಾರತ್ ಜೋಡೋ ಸಂಘಟನೆಗಳ ಕೆಲಸದಿಂದ ವಿಮುಕ್ತಿಗೊಳಿಸಿ, ಶೈಕ್ಷಣಿಕ ಕರ್ತವ್ಯಕ್ಕೆ ಮರಳಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ವೆಂಕನಗೌಡ ಆರ್. ಗೋವಿಂದಗೌಡ್ರ ಆಗ್ರಹಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande