
ಬೆಂಗಳೂರು, 13 ನವೆಂಬರ್ (ಹಿ.ಸ.):
ಗ್ರಾಮೀಣ ಅಭಿವೃದ್ಧಿಯಲ್ಲಿ ಗ್ರಾಮದ ಹಿರಿಯ ಮಾತಿನಷ್ಟೇ ಮಕ್ಕಳ ಧ್ವನಿಗೂ ಬೆಲೆ ನೀಡಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದ್ದಾರೆ.
ಬೆಂಗಳೂರು ಜಕ್ಕೂರಿನ ಮಹಾತ್ಮಾ ಗಾಂಧೀ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿಂದು ಮಕ್ಕಳ ದಿನಾಚರಣೆ ಅಂಗವಾಗಿ ವಿಶೇಷ ಮಕ್ಕಳ ಗ್ರಾಮಸಭೆಗೆ ವಿಧ್ಯುಕ್ತ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಮಕ್ಕಳು ಮುಂದಿನ ಪ್ರಜೆಗಳಷ್ಟೇ ಅಲ್ಲ, ಇಂದಿನ ನಾಗರಿಕರೂ ಆಗಿದ್ದಾರೆ. ಹೀಗಾಗಿ ಮಕ್ಕಳನ್ನು ಪಂಚಾಯತಿಗಳ ಸೌಲಭ್ಯ ಬಳಸಿಕೊಳ್ಳುವರನ್ನಾಗಿ ಮಾತ್ರ ಮಾಡದೆ, ಅವರನ್ನು ಗ್ರಾಮದ ಅಭಿವೃದ್ಧಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಮತ್ತು ಪ್ರಶ್ನಿಸುವ ಪಾಲುದಾರರನ್ನಾಗಿ ಪರಿಗಣಿಸಿ ಎಂದರು.
10 ವಾರಗಳ ಕಾಲ ಮಕ್ಕಳ ಗ್ರಾಮಸಭೆ:
ರಾಜ್ಯದ್ಯಂತ ಇಂದಿನಿಂದ 10 ವಾರಗಳ ಕಾಲ ಅಂದರೆ ಜ.24ರವರೆಗೆ ರಾಜ್ಯದ 5927 ಗ್ರಾಮ ಪಂಚಾಯತಿಗಳಲ್ಲಿ ಮಕ್ಕಳ ಗ್ರಾಮಸಭೆ ನಡೆಸುವ ಮೂಲಕ ಶಾಲಾ ವಿದ್ಯಾರ್ಥಿಗಳಿಗೆ ಮಕ್ಕಳ ಹಕ್ಕು, ನೈರ್ಮಲ್ಯ, ಗ್ರಾಮಾಭಿವೃದ್ಧಿಯ ಪರಿಚಯ ಮಾಡಿಸಲಾಗುವುದು. ಬಾಲ್ಯವಿವಾಹ, ಬಾಲ ಕಾರ್ಮಿಕರ ಪದ್ಧತಿಯ ಬಗ್ಗೆಯೂ ಅರಿವು ಮೂಡಿಸಿ ಮಕ್ಕಳನ್ನು ಉತ್ತಮ ಸಮಾಜದ ನಿರ್ಮಾಣಕ್ಕೆ ಸಜ್ಜುಗೊಳಿಸಲಾಗುವುದು ಎಂದರು.
ಗ್ರಾಮಸಭೆಯಲ್ಲಿ ಮಕ್ಕಳಿಗೆ ಪರಿಸರ ಪಾಠ:
ಇಂದು ನಾವೆಲ್ಲರೂ ಜಾಗತಿಕ ತಾಪಮಾನ ಏರಿಕೆ, ಹವಾಮಾನ ಬದಲಾವಣೆಯ ಕಾಲಘಟ್ಟದಲ್ಲಿದ್ದು, ಹಸಿರು ಹೊದಿಕೆ ಹೆಚ್ಚಾದರೆ ಮಾತ್ರ ಮನುಷ್ಯ ಉಳಿಯಲು ಸಾಧ್ಯ. ಹೀಗಾಗಿ ಮಕ್ಕಳು ಪರಿಸರ ಕಾಳಜಿ ಬೆಳೆಸಿಕೊಳ್ಳಬೇಕು ಎಂದರು.
ಇಡೀ ಜಗತ್ತಿಗೆ ಮಾರಕವಾಗಿರುವ ಏಕ ಬಳಕೆ ಪ್ಲಾಸ್ಟಿಕ್ ಬಳಸದಂತೆ ಮಕ್ಕಳು ಪರಿಸರ ಪ್ರಜ್ಞೆ ಬೆಳೆಸಿಕೊಳ್ಳಬೇಕು. ತಮ್ಮ ಪಾಲಕರಿಗೆ, ಪೋಷಕರಿಗೂ ಏಕ ಬಳಕೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ತಿಳಿಸಬೇಕು, ಮರ ಕಡಿಯದಂತೆ ಹಠ ಮಾಡಬೇಕು. ಮನೆ ಮುಂದೆ ಸಸಿ ನೆಟ್ಟು ಮರ ಬೆಳೆಸಬೇಕು ಎಂದರು.
ಎಲ್ ನಿ ನೋ ಪ್ರಭಾವದಿಂದ ಮಳೆಯ ಕೊರತೆ ಆಗಿರುವ ಹಿನ್ನೆಲೆಯಲ್ಲಿ ನೀವು ಹಿತ ಮಿತವಾಗಿ ನೀರು ಬಳಕೆ ಮಾಡಬೇಕು. ಈ ಬಗ್ಗೆ ನಿಮ್ಮ ಮನೆಯವರಿಗೂ ಜಾಗೃತಿ ಮೂಡಿಸಬೇಕು ಎಂದರು.
10 ವಾರಗಳ ಕಾಲ ನಡೆಯಲಿರುವ ಮಕ್ಕಳ ಗ್ರಾಮಸಭೆ, ಮಕ್ಕಳಿಗೆ ಸ್ವಚ್ಛತೆಯ ಅರಿವು ಮೂಡಿಸಲೂ ಸಹಕಾರಿಯಾಗಲಿದೆ. ಈ ಸಭೆಯಲ್ಲಿ ಮಕ್ಕಳಿಗೆ ಶೌಚಲಯಗಳ ಬಳಕೆಗೆ ಉತ್ತೇಜಿಸಬೇಕು.
ಅವರ ಶಾಲೆಯಲ್ಲಿ ಶೌಚಾಲಯದ ಸಮಸ್ಯೆ, ನೀರಿನ ಸಮಸ್ಯೆ, ಆಟದ ಮೈದಾನ ಇತ್ಯಾದಿ ಯಾವುದೇ ಕೊರತೆ ಇದ್ದರೆ ಅಭಿವ್ಯಕ್ತಪಡಿಸಲು ಅವಕಾಶ ನೀಡಬೇಕು ಮತ್ತು ಸಮಸ್ಯೆ ಪರಿಹರಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ರಾಜ್ಯದಾದ್ಯಂತ ನಡೆಯಲಿರುವ ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳು ಕೇಳುವ ಪ್ರತಿಯೊಂದು ಪ್ರಶ್ನೆಯನ್ನೂ ಗಂಭೀರವಾಗಿ ಪರಿಗಣಿಸಿ. ಉಪೇಕ್ಷೆ ಮಾಡಬೇಡಿ ಎಂದ ಸಚಿವರು, ಮಕ್ಕಳು ಮುಂದಿಡುವ ಬೇಡಿಕೆಗಳನ್ನು ಗ್ರಾಮ ಪಂಚಾಯಿತಿಯ ಕ್ರಿಯಾ ಯೋಜನೆಯಲ್ಲಿ ಸೇರಿಸಿ, ಅವುಗಳಿಗೆ ಸೂಕ್ತ ಪರಿಹಾರ ಒದಗಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಬೆಂಗಳೂರು ಮಕ್ಕಳಿಗೆ ಗ್ರಾಮ ಪರಿಚಯ:
ಬೆಂಗಳೂರಿನಲ್ಲಿ ಓದುತ್ತಿರುವ ಬಹುತೇಕ ಮಕ್ಕಳಿಗೆ ಗ್ರಾಮಗಳ ಕಲ್ಪನೆಯೇ ಇಲ್ಲ. ಗ್ರಾಮ ಪಂಚಾಯತಿಗಳು ಹೇಗೆ ನಡೆಯುತ್ತವೆ ಎಂಬ ಅರಿವಿಲ್ಲ. ಹೀಗಾಗಿಯೇ ಇಂದು ಬೆಂಗಳೂರು ಜಕ್ಕೂರಿನಲ್ಲಿರುವ ಈ ಮಾದರಿ ಪಾರಂಪರಿಕ ಗ್ರಾಮದಲ್ಲಿ ಮಕ್ಕಳ ಗ್ರಾಮ ಸಭೆ ಆಯೋಜಿಸಲಾಗಿದೆ. ಈ ಸಭೆಯಲ್ಲಿ ಮಕ್ಕಳು ಪಾಲ್ಗೊಂಡಿದ್ದಾರೆ. ಇವರಿಗೆ ಮೈಸೂರಿನ ನಸೀರ್ ಸಾಬ್ ತರಬೇತಿ ಸಂಸ್ಥೆಯ ನುರಿತ ಸಂಪನ್ಮೂಲ ವ್ಯಕ್ತಿಗಳು ಗ್ರಾಮಪಂಚಾಯತಿ ಮತ್ತು ಗ್ರಾಮಸಭೆಯ ಮಹತ್ವ ತಿಳಿಸಿಕೊಡಲಿದ್ದಾರೆ ಎಂದರು.
ಮಕ್ಕಳಿಗೆ ಶಿಕ್ಷಣದ ಹಕ್ಕು, ರಕ್ಷಣೆಯ ಹಕ್ಕು, ವಿಕಾಸದ ಹಕ್ಕು ಮತ್ತು ಭಾಗವಹಿಸುವಿಕೆಯ ಹಕ್ಕುಗಳಿವೆ. ನಮ್ಮ ಸಂವಿಧಾನ ನಿಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ ನೀಡಿದೆ. ಈ ಹಕ್ಕುಗಳನ್ನು ಚಲಾಯಿಸಲು 'ಮಕ್ಕಳ ಗ್ರಾಮಸಭೆ' ಒಂದು ಅತ್ಯುತ್ತಮ ವೇದಿಕೆಯಾಗಿದೆ. ಇದು ನಿಮ್ಮಲ್ಲಿ ನಾಯಕತ್ವದ ಗುಣ ಬೆಳೆಸುತ್ತದೆ ಎಂದರು.
ನೀವೆಲ್ಲರೂ ವಿದ್ಯಾವಂತರಾದರಷ್ಟೇ ಸಾಲದು, ಬುದ್ಧವಂತರಾಗಬೇಕು. ಕ್ರಿಯಾಶೀಲರಾಗಬೇಕು, ಸೃಜನಶೀಲತೆ ಬೆಳೆಸಿಕೊಳ್ಳಬೇಕು. ಆಗ ನಿಮ್ಮ ವೈಯಕ್ತಿಕ ವ್ಯಕ್ತಿತ್ವದ ವಿಕಾಸವೂ ಆಗುತ್ತದೆ. ಸಮಾಜಕ್ಕೆ ಅವರು ಕೊಡುಗೆ ನೀಡಲು ಅವಕಾಶ ಆಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಇಲಾಖೆಯ ಕಾರ್ಯದರ್ಶಿ ರಂದೀಪ್ ಡಿ, ಆಯುಕ್ತರಾದ ವೆಂಕಟರಾಜ್, ಬೆಂಗಳೂರು ನಗರದ ಸಿಇಓ ಯತೀಶ್, ಎಂ.ಜಿ.ಐ.ಆರ್.ಇ.ಡಿ. ಕಾರ್ಯ ನಿರ್ವಾಹಕ ನಿರ್ದೇಶಕಿ ಡಾ. ಗಾಯತ್ರಿ ರೆಡ್ಡಿ ಮತ್ತಿತರರು ಪಾಲ್ಗೊಂಡಿದ್ದರು.
ಬೆಂಗಳೂರು ಶಾಲಾ ಮಕ್ಕಳಿಗೆ ಗ್ರಾಮದ ಪರಿಚಯ ಮಾಡಿಸಿದ ಈಶ್ವರ ಖಂಡ್ರೆ
ಮಕ್ಕಳ ಗ್ರಾಮಸಭೆಯ ಅಂಗವಾಗಿ ವಿವಿಧ ಶಾಲೆಯ ನೂರಾರು ಮಕ್ಕಳೊಂದಿಗೆ ಜಕ್ಕೂರಿನ ಮಾದರಿ ಪಾರಂಪರಿಕ ಗ್ರಾಮದಲ್ಲಿ ಸುತ್ತಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ನಗರದ ಮಕ್ಕಳಿಗೆ ಹಳ್ಳಿಯ ಪರಿಚಯ ಮಾಡಿಸಿದರು.
ಒಕ್ಕಲಿಗರು, ಬಡಗಿಗಳು, ಕುಂಬಾರರು, ಹೈನುಗಾರಿಕೆ ಮಾಡುವವರು, ಕಮ್ಮಾರರು, ಮಡಿವಾಳರು, ಕುಲಕರ್ಣಿ, ಶ್ಯಾನುಭೋಗರು ಗ್ರಾಮದಲ್ಲಿ ಏನು ಕೆಲಸ ಮಾಡುತ್ತಿದ್ದರು ಎಂದು ತಾವೇ ಸ್ವತಃ ವಿವರಿಸಿದರು.
ಹಳ್ಳಿಗಳಲ್ಲಿ ಹಿಂದೆ ಮಡಕೆ, ಕುಡಿಕೆಗಳೇ ಪ್ರಧಾನವಾಗಿದ್ದವು, ಎತ್ತಿನ ಬಂಡಿಯೇ ಸಾರಿಗೆಯ ಪ್ರಮುಖ ಸಾಧನವಾಗಿದ್ದವು, ಬೆರಣಿ, ಕಟ್ಟಿಗೆಯೇ ಅಡುಗೆ ಮಾಡಲು ಉರುವಲಾಗಿತ್ತು ಎಂದು ಮಾಹಿತಿ ನೀಡಿದರು.
ಮಕ್ಕಳ ಗ್ರಾಮಸಭೆಯ ಅಣಕು ಪ್ರದರ್ಶನವನ್ನೂ ಈಶ್ವರ ಖಂಡ್ರೆ ವೀಕ್ಷಿಸಿದರು.
ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಆಧುನಿಕ ಭಾರತದ ನಿರ್ಮಾತೃ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟರು.
ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳ ಗ್ರಾಮಸಭೆ ಉದ್ದೇಶಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದಾಗ ಭಾರತ 520 ರಾಜ ಸಂಸ್ಥಾನಗಳಾಗಿ ಹಂಚಿ ಹೋಗಿತ್ತು. ಕಡು ಬಡತನವಿತ್ತು.
ಅನಕ್ಷರತೆ ಇತ್ತು. ದೇಶದಲ್ಲಿ ಒಟ್ಟಾರೆ ಸಾಕ್ಷರತೆ ದರವೇ (Literacy rate) ಶೇ.24ರಷ್ಟಿತ್ತು. ಎಲ್ಲ ಊರಿನಲ್ಲಿ ಶಾಲೆ, ಆಸ್ಪತ್ರೆಯೂ ಇರಲಿಲ್ಲ. ಆಗ ಲಕ್ಷಾಂತರ ಶಾಲೆ, ಆಸ್ಪತ್ರೆ ಕಟ್ಟಿಸಿದ ಕೀರ್ತಿ ನೆಹರೂ ಅವರಿಗೆ ಸಲ್ಲುತ್ತದೆ ಎಂದರು.
ನೆಹರೂ ಅವರು ರಸಗೊಬ್ಬರ ಕಾರ್ಖಾನೆ, ಉಕ್ಕಿನ ಕಾರ್ಖಾನೆ, ಸಕ್ಕರೆ ಕಾರ್ಖಾನೆ, ಜವಳಿ ಗಿರಣಿ, ತೈಲ ಮತ್ತು ನೈಸರ್ಗಿಕ ಅನಿಲ ಆಯೋಗ, ಎಚ್.ಎಂ.ಟಿ., ಎಲ್.ಐ.ಸಿ. ಸೇರಿದಂತೆ ನೂರಾರು ಕೈಗಾರಿಕೆ ಸ್ಥಾಪಿಸಿದರು.
ನೀರಾವರಿಗಾಗಿ ಹಾಗೂ ಕುಡಿಯುವ ನೀರಿಗಾಗಿ ಹತ್ತಾರು ಜಲಾಶಯ ಕಟ್ಟಿಸಿದರು. ಜಲಾಶಯಗಳನ್ನು ಟೆಂಪಲ್ಸ್ ಆಫ್ ಮಾಡರ್ನ್ ಇಂಡಿಯಾ ಎಂದು ಕರೆದಿದ್ದರು ಎಂದು ಸ್ಮರಿಸಿದರು.
ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ, ಇಂದು ಭಾರತ ಐಟಿ ಬಿಟಿ ನಗರಿ, ಸಿಲಿಕಾನ್ ಸಿಟಿ, ಬುದ್ಧಿವಂತರ ದೇಶ ಎಂದು ಕರೆಸಿಕೊಂಡದ್ದರೆ ಅದರ ಹಿಂದೆ ಪ್ರಥಮ ಪ್ರಧಾನಿ ನೆಹರೂ ಅವರ ದೊಡ್ಡ ಕೊಡುಗೆ ಇದೆ.
ಪಂಡಿತ್ ನೆಹರೂ ಅವರಿಗೆ ಮಕ್ಕಳನ್ನು ಕಂಡರೆ ತುಂಬಾ ಅಕ್ಕರೆ ಇತ್ತು, ಅವರ ಜನ್ಮ ದಿನವನ್ನು ದೇಶದಾದ್ಯಂತ ಮಕ್ಕಳ ದಿನವೆಂದು ಆಚರಿಸಲಾಗುತ್ತದೆ ಎಂದು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R