ಬಾಗಲಕೋಟೆ: ನ. 15 ರಂದು ಭಗವಾನ್ ಬಿರ್ಸಾ ಮುಂಡಾ ಜಯಂತಿ;ಆಚರಣೆಗೆ ಸಿದ್ಧತೆ – ರಾಜು ನಾಯ್ಕರ
ಬಾಗಲಕೋಟೆ, 13 ನವೆಂಬರ್ (ಹಿ.ಸ.) ಬ್ರಿಟಿಷ್ ಸಾಮ್ರಾಜ್ಯಶಾಹಿಯ ದಬ್ಬಾಳಿಕೆಯ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಬುಡಕಟ್ಟು ಸಮುದಾಯದ ಮಹಾನ್ ಸ್ವಾತಂತ್ರ್ಯ ಸೇನಾನಿ ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನದ ಅಂಗವಾಗಿ, ನವೆಂಬರ್ 15 ರಂದು ರಾಜ್ಯಾದ್ಯಂತ ‘ಜನಜಾತಿಯ ಗೌರವ ದಿವಸ’ವನ್ನು ಅತ್ಯಂತ ಅರ್ಥಪೂರ್ಣವ
ಮುಂಡ ಜಯಂತಿಗೆ ಆಗ್ರಹ


ಬಾಗಲಕೋಟೆ, 13 ನವೆಂಬರ್ (ಹಿ.ಸ.)

ಬ್ರಿಟಿಷ್ ಸಾಮ್ರಾಜ್ಯಶಾಹಿಯ ದಬ್ಬಾಳಿಕೆಯ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಬುಡಕಟ್ಟು ಸಮುದಾಯದ ಮಹಾನ್ ಸ್ವಾತಂತ್ರ್ಯ ಸೇನಾನಿ ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನದ ಅಂಗವಾಗಿ, ನವೆಂಬರ್ 15 ರಂದು ರಾಜ್ಯಾದ್ಯಂತ ‘ಜನಜಾತಿಯ ಗೌರವ ದಿವಸ’ವನ್ನು ಅತ್ಯಂತ ಅರ್ಥಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ತಿಳಿಸಿದರು.

ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬುಡಕಟ್ಟು ಸಮುದಾಯದ ಅಸ್ಮಿತೆ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಬಿರ್ಸಾ ಮುಂಡಾ ಅವರ ಕೊಡುಗೆಯನ್ನು ಸ್ಮರಿಸಿದರು.

ನಮ್ಮ ನಾಡಿನ ಹೆಮ್ಮೆಯ ವೀರರಾದ ಹಲಗಲಿ ಬೇಡರು ಹಾಗೂ ಕ್ರಾಂತಿವೀರ ಸಿಂಧೂರ ಲಕ್ಷ್ಮಣ ಅವರು ಬ್ರಿಟಿಷರ ವಿರುದ್ಧ ಹೇಗೆ ಪ್ರಾಣದ ಹಂಗು ತೊರೆದು ಹೋರಾಡಿದರೋ, ಅದೇ ಮಾದರಿಯಲ್ಲಿ ಭಗವಾನ್ ಬಿರ್ಸಾ ಮುಂಡಾ ಅವರು ಬುಡಕಟ್ಟು ಜನರ ಹಕ್ಕುಗಳು, ಜಲ, ಜಂಗಲ್, ಜಮೀನು ಹಾಗೂ ಸಮಾನತೆಗಾಗಿ ಬ್ರಿಟಿಷರ ವಿರುದ್ಧ ಸಿಡಿದೆದ್ದ ಮಹಾನ್ ನಾಯಕರಾಗಿದ್ದಾರೆ ಎಂದು ರಾಜು ನಾಯ್ಕರ ಬಣ್ಣಿಸಿದರು.

ಕೇವಲ 25ನೇ ವಯಸ್ಸಿನಲ್ಲಿಯೇ ಬ್ರಿಟಿಷ್ ಆಡಳಿತದ ನಿದ್ದೆಗೆಡಿಸಿದ್ದ ಬಿರ್ಸಾ ಮುಂಡಾ ಅವರ ತ್ಯಾಗ ಮತ್ತು ಬಲಿದಾನ ಇಂದಿನ ಯುವಪೀಳಿಗೆಗೆ ಸದಾ ಸ್ಫೂರ್ತಿಯಾಗಿದೆ. ಅವರ ಹೋರಾಟದ ಇತಿಹಾಸವನ್ನು ಪ್ರತಿಯೊಬ್ಬರಿಗೂ ತಲುಪಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಅವರ ಜನ್ಮದಿನವನ್ನು ‘ಜನಜಾತಿಯ ಗೌರವ ದಿವಸ’ವನ್ನಾಗಿ ಘೋಷಿಸಿ ಗೌರವ ಸಲ್ಲಿಸಿದೆ ಎಂದರು.

ನವೆಂಬರ್ 15 ರಂದು ಬಾಗಲಕೋಟೆ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ಮಂಡಲ ಕೇಂದ್ರಗಳಲ್ಲಿ ಭಗವಾನ್ ಬಿರ್ಸಾ ಮುಂಡಾ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ 'ಜನಜಾತಿಯ ಗೌರವ ದಿವಸ'ವನ್ನು ಆಚರಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು, ಎಸ್ಟಿ ಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಮುದಾಯದ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಪದಾಧಿಕಾರಿಗಳು, ಎಸ್ಟಿ ಮೋರ್ಚಾ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande