
ವಿಜಯಪುರ, 13 ನವೆಂಬರ್ (ಹಿ.ಸ.)
ಐತಿಹಾಸಿಕ ನಗರಿ ವಿಜಯಪುರದಲ್ಲಿ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಹೊಸ ಚಿಂತನೆಗಳಿಗೆ ವೇದಿಕೆಯಾಗುವ ಬೃಹತ್ ಸಮಾರಂಭವೊಂದನ್ನು ಆಯೋಜಿಸಲು ಭರದ ಸಿದ್ಧತೆಗಳು ನಡೆಯುತ್ತಿವೆ ಎಂದು ಶಿವಯ್ಯಸ್ವಾಮೀಜಿ ತಿಳಿಸಿದ್ದಾರೆ.
ಭಾರತೀಯ ಸಂತ ಮಹಾ ಪರಿಷತ್ (ಬಿ.ಎಸ್.ಎಂ.ಪಿ.) ಹಾಗೂ ವಿಜಯಪುರ ಜಿಲ್ಲಾ ಮಠಾಧೀಶರ ಒಕ್ಕೂಟದ ಸಹಭಾಗಿತ್ವದಲ್ಲಿ, ಬಿ.ಎಸ್.ಎಂ.ಪಿ. ಸಹಕಾರದೊಂದಿಗೆ 2027ರ ಜನವರಿ 31ರಂದು ಈ ಐತಿಹಾಸಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಬಿ.ಎಸ್.ಎಂ.ಪಿ.ಯ ಎರಡು ಮಹತ್ವದ ಕ್ರಿಯಾ ಯೋಜನೆಗಳಾದ 'ಏಕರೂಪ ಆಚಾರ ಸಂಹಿತೆ' ಮತ್ತು 'ಏಕರೂಪ ಸಾಮಾಜಿಕ ಹಾಗೂ ಸಾಮಾನ್ಯ ಸಂಸ್ಕಾರ ಶಿಕ್ಷಣ'ವನ್ನು ಜಾರಿಗೆ ತರುವ ಕುರಿತು ಗಂಭೀರ ಚರ್ಚೆ ನಡೆಯಲಿದೆ. ಜೊತೆಗೆ ವಿಜಯಪುರ ಜಿಲ್ಲೆಯ ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳ ಕುರಿತ ವರದಿಯನ್ನು ಮಂಡಿಸಲಾಗುವುದು.
ಬಂಥನಾಳದ ಪೂಜ್ಯ ಸಂಗನಬಸವ ಮಹಾಸ್ವಾಮಿಗಳು ನಾಡಿನ ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಿಗೆ ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸುವ ಕಿರು ಸಾಕ್ಷ್ಯಚಿತ್ರವನ್ನು ಈ ವೇದಿಕೆಯಲ್ಲಿ ಲೋಕಾರ್ಪಣೆಗೊಳಿಸಲಾಗುತ್ತದೆ. ಅಲ್ಲದೆ, ಮುಂದಿನ ಪೀಳಿಗೆಗೆ ಅವರ ಆದರ್ಶಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಶ್ರೀಗಳ ಹೆಸರಿನಲ್ಲಿ ಸ್ಮಾರಕ ನಿರ್ಮಾಣ ಹಾಗೂ ಪ್ರಮುಖ ಸ್ಥಳಗಳಿಗೆ ನಾಮಕರಣ ಮಾಡುವ ಕುರಿತು ಬಿ.ಎಸ್.ಎಂ.ಪಿ.ಯ ಗಮನ ಸೆಳೆಯಲಾಗುವುದು.
ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಗುರು ಗಂಗಾಧರೇಶ್ವರ ಶಿವಯೋಗಿಗಳು ಹಾಗೂ ಷ.ಬ್ರ. ಪಂಡಿತಾರಾಧ್ಯರ ಐತಿಹಾಸಿಕ ಕಾರ್ಯಗಳನ್ನು ಜನಸಾಮಾನ್ಯರಿಗೆ ಪರಿಚಯಿಸುವ ಉದ್ದೇಶವಿದೆ. ಈ ಕುರಿತು ಕಲಬುರಗಿಯ ಚಾಲುಕ್ಯ ಅಧ್ಯಯನ ಪೀಠದ ವತಿಯಿಂದ ವಿಶೇಷ ವಿಚಾರ ಮಂಡನೆ ನಡೆಯಲಿದೆ.
ಕೊಟ್ಟನಾಳದ ಬಸವಲಿಂಗಪ್ಪ ವೀರಸಂಗಪ್ಪ ದೇಶಮುಖ ಅವರ ಸ್ಮರಣಾರ್ಥ ನೆನಪಿನ ಭವನ ನಿರ್ಮಾಣ ಮಾಡುವಂತೆ ಕೇಂದ್ರ ಸರ್ಕಾರದ ಗಮನ ಸೆಳೆಯುವ ಮಹತ್ವದ ನಿರ್ಣಯವನ್ನು ಸಮಾವೇಶದಲ್ಲಿ ಕೈಗೊಳ್ಳಲಾಗುವುದು.
ಉತ್ತರ ಭಾರತದ ಅನೇಕ ಸಂತರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಗಳು ರಾಷ್ಟ್ರಮಟ್ಟದಲ್ಲಿ ವ್ಯಾಪಕವಾಗಿ ಗುರುತಿಸಿಕೊಂಡಿವೆ. ಆದರೆ, ದಕ್ಷಿಣ ಭಾರತದ ವೀರರಾದ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕ, ಸುರಪುರದ ರಾಜಾ ವೆಂಕಟಪ್ಪ ನಾಯಕ ಹಾಗೂ ಕೊಟ್ಟನಾಳ ಮತ್ತು ಜಂಬಗಿಯ ಬಸವಲಿಂಗಪ್ಪ ದೇಶಮುಖರಂತಹ ಮಹನೀಯರ ತ್ಯಾಗ ಮತ್ತು ಹೋರಾಟಗಳು ನಿರೀಕ್ಷಿತ ಮಟ್ಟದಲ್ಲಿ ರಾಷ್ಟ್ರಮಟ್ಟದ ಜನಮಾನಸವನ್ನು ತಲುಪಿಲ್ಲ ಎಂಬುದು ಆಯೋಜಕರ ಕಳಕಳಿಯಾಗಿದೆ. ಈ ಮಹನೀಯರ ದೇಶಪ್ರೇಮವನ್ನು ನಾಡಿನ ಜನತೆಗೆ ಮತ್ತು ಯುವಪೀಳಿಗೆಗೆ ಪರಿಚಯಿಸುವುದು ಈ ಸಮಾರಂಭದ ಮುಖ್ಯ ಗುರಿಯಾಗಿದೆ.
ಈ ಸಮಾರಂಭದಲ್ಲಿ ಯಾವುದೇ ರಾಜಕೀಯ ಪಕ್ಷ ಅಥವಾ ರಾಜಕೀಯ ವಿಚಾರಧಾರೆಗಳಿಗೆ ಆದ್ಯತೆ ನೀಡಲಾಗುತ್ತಿಲ್ಲ ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ. ಧರ್ಮದಿಂದ ವಿಮುಖರಾಗುತ್ತಿರುವ ಇಂದಿನ ಯುವಪೀಳಿಗೆಯಲ್ಲಿ ಸಂಸ್ಕಾರ ಹಾಗೂ ಧಾರ್ಮಿಕ ಜಾಗೃತಿ ಮೂಡಿಸುವುದು, ಜೊತೆಗೆ ಭಾರತ ಮಾತೆಯ ನೆಲ, ಜಲ ಹಾಗೂ ಧರ್ಮದ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಮೂಲ ಆಶಯವಾಗಿದೆ.
ಕಾರ್ಯಕ್ರಮದ ಯಶಸ್ಸಿಗಾಗಿ ಬಿ.ಎಸ್.ಎಂ.ಪಿ. ಕಾರ್ಯಕರ್ತರು ಹಾಗೂ ಯರನಾಳ, ಕರಿಭಂಟನಾಳ, ಮಹಾಜಲಗಾಂವ, ಬಂಥನಾಳ, ಕೊಟ್ಟನಾಳ ಮತ್ತು ಜಂಬಗಿ (ಎ) ಭಾಗಗಳ ಅಭಿಮಾನಿ ಬಳಗದವರು ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ಐತಿಹಾಸಿಕ ಸಮಾರಂಭದ ಸಂದೇಶವನ್ನು ನಾಡಿನ ಮನೆಮನೆಗೂ ತಲುಪಿಸಲು ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳು ಸಂಪೂರ್ಣ ಸಹಕಾರ ನೀಡಬೇಕು ಎಂದು ಶಿವಯ್ಯಸ್ವಾಮೀಜಿ ಮನವಿ ಮಾಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande