
ಕಲಬುರಗಿ, 13 ನವೆಂಬರ್ (ಹಿ.ಸ.):
ಕಬ್ಬಿನ ದರ ನಿಗದಿ ವಿಚಾರವಾಗಿ ರಾಜ್ಯ ಸರ್ಕಾರ ಈಗಾಗಲೇ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದೆ. ಬೆಳಗಾವಿ ಜಿಲ್ಲೆಯಲ್ಲಿ ನೀಡುವ ದರವನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ನೀಡಲು ಸಾಧ್ಯವಿಲ್ಲ. ಏಕೆಂದರೆ ಎರಡೂ ಭಾಗಗಳಲ್ಲಿನ ಕಬ್ಬಿನ ಇಳುವರಿ ವಿಭಿನ್ನವಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ನೀಡುವ ಕಬ್ಬಿನ ದರವನ್ನು ನಮ್ಮ ಭಾಗದಲ್ಲಿ ಯಾವತ್ತೂ ನೀಡಿಲ್ಲ. ಅಲ್ಲಿನ ಇಳುವರಿಯೇ ಬೇರೆ, ನಮ್ಮ ಭಾಗದ ಇಳುವರಿಯೇ ಬೇರೆ. ರಾಜ್ಯ ಸರ್ಕಾರ ತನ್ನ ಕಡೆಯಿಂದ ಎಲ್ಲಾ ಪ್ರಯತ್ನಗಳನ್ನು ಮಾಡಿದೆ.
ಇನ್ನು ನಾವೇನು ಮಾಡಬೇಕು ಹೇಳಿ? ರೈತರು ಯಾರ ಪ್ರಚೋದನೆಗೂ ಒಳಗಾಗಬಾರದು. ರೈತರು ಒಂದು ಹೆಜ್ಜೆ ಮುಂದೆ ಬಂದರೆ ಸರ್ಕಾರವೂ ಒಂದು ಹೆಜ್ಜೆ ಮುಂದೆ ಬರಲಿದೆ ಎಂದು ಹೇಳಿದರು.
ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ ಈಗ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಎನ್ಡಿಆರ್ಎಫ್ ವಿಚಾರವಾಗಿ ಮಾತನಾಡಿದ್ದಾರೆಯೇ? ರಾಜ್ಯದ ತೆರಿಗೆ ಹಣವನ್ನು ತೆಗೆದುಕೊಂಡು ಲಕ್ಷದೀಪೋತ್ಸವ ಮಾಡುತ್ತಾರೆಯೇ? ಎಂದು ಪ್ರಶ್ನಿಸಿದರು.
ಮೆಟ್ರೋ ಅನುದಾನ ವಿಚಾರವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ
ಬೆಂಗಳೂರು ಮೆಟ್ರೋ ಯೋಜನೆಗೆ ರಾಜ್ಯ ಸರ್ಕಾರವೇ ಹೆಚ್ಚಿನ ಅನುದಾನ ನೀಡಿದೆ. ಬಿಜೆಪಿ ನಾಯಕರು ಈ ವಿಚಾರದಲ್ಲಿ ಸರಿಯಾದ ಮಾಹಿತಿ ತಿಳಿದುಕೊಳ್ಳಬೇಕು. ಸರ್ಕಾರದ ಹಣಕಾಸಿನ ಕೊರತೆ (ಫಿಸ್ಕಲ್ ಡೆಫಿಸಿಟ್) ಆಧರಿಸಿ ಸಾಲ ನೀಡಲಾಗಿದೆ.
ಆ ಸಾಲವನ್ನು ಮರುಪಾವತಿ ಮಾಡಬೇಕಿರುವುದು ರಾಜ್ಯ ಸರ್ಕಾರವೇ. ಬಿಎಂಆರ್ಸಿಎಲ್ನಲ್ಲಿ ರಾಜ್ಯ ಸರ್ಕಾರವೂ ಪಾಲುದಾರ ಸಂಸ್ಥೆಯಾಗಿದೆ ಎಂದು ಸ್ಪಷ್ಟಪಡಿಸಿದರು.
ನಿಗಮ ಮಂಡಳಿ ನೇಮಕಾತಿಯಲ್ಲಿ ಲೋಪ ಒಪ್ಪಿಕೊಂಡ ಖರ್ಗೆ
ನಿಗಮ ಮಂಡಳಿಗಳಿಗೆ ನೇಮಕಾತಿ ಮಾಡುವ ಸಂದರ್ಭದಲ್ಲಿ ಕೆಲವು ಲೋಪಗಳಾಗಿವೆ ಎಂದು ಪ್ರಿಯಾಂಕ್ ಖರ್ಗೆ ಒಪ್ಪಿಕೊಂಡರು. ಈ ಪಟ್ಟಿ ಒಂದೂವರೆ ವರ್ಷದ ಹಿಂದೆಯೇ ಸಿದ್ಧವಾಗಿತ್ತು. ಶಾಸಕರಿಗೆ ಹೆಚ್ಚಿನ ಆಯ್ಕೆಯ ಅವಕಾಶ ನೀಡಲಾಗಿತ್ತು.
ಕೆಲವು ಕಡೆ ಆರ್ಎಸ್ಎಸ್ ಕಾರ್ಯಕರ್ತರಿಗೆ ಸ್ಥಾನ ನೀಡಲಾಗಿದೆ ಎಂಬ ಆರೋಪಗಳಿವೆ. ಆದರೆ, ಅವರು ಈಗಾಗಲೇ ಆರ್ಎಸ್ಎಸ್ ತೊರೆದು ಬಂದಿರಬಹುದು ಎಂದು ಹೇಳಿದರು.
ಎಸ್ಐಆರ್ ಅಕ್ರಮದ ಆರೋಪ ಸಾಬೀತಾಗಿದೆ
ಎಸ್ಐಆರ್ ಪ್ರಕ್ರಿಯೆ ಬೋಗಸ್ ಎಂಬುದು ಸಾಬೀತಾಗಿದೆ ಎಂದು ಆರೋಪಿಸಿದ ಖರ್ಗೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಕುರಿತು ರಾಜ್ಯ ಚುನಾವಣಾ ಆಯೋಗವೇ ತೀರ್ಮಾನ ಕೈಗೊಳ್ಳಲಿದೆ ಎಂದರು.
ಉತ್ತರ ಪ್ರದೇಶದಲ್ಲಿ ಎಸ್ಐಆರ್ ವಿಚಾರವಾಗಿ ಏನಾಗುತ್ತಿದೆ ಎಂಬುದನ್ನು ಗಮನಿಸಬೇಕು. ಅಲ್ಲಿ ಒಂದೂವರೆ ಕೋಟಿ ಹಿಂದೂಗಳ ಮತಗಳನ್ನು ಅಳಿಸಲಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿಯೇ ಹೇಳಿದ್ದಾರೆ.
ಇದೀಗ ಚುನಾವಣಾ ಆಯೋಗ ಹೈಪರ್ ಆ್ಯಕ್ಟಿವ್ ಆಗಿದೆ. ಈ ಕುರಿತು ಅಲ್ಲಿನ ದಾಖಲೆಗಳನ್ನು ಇನ್ನೆರಡು-ಮೂರು ದಿನಗಳಲ್ಲಿ ನೀಡುತ್ತೇನೆ ಎಂದು ತಿಳಿಸಿದರು.
ಮೂರನೇ ಮುಖ್ಯಮಂತ್ರಿ ಹೇಳಿಕೆಗೆ ತಿರುಗೇಟು
ಅಧಿವೇಶನದ ಬಳಿಕ ರಾಜ್ಯಕ್ಕೆ ಮೂರನೇ ಮುಖ್ಯಮಂತ್ರಿ ಬರುತ್ತಾರೆ ಎಂಬ ಮಾಜಿ ಸಚಿವ ಬಿ. ಶ್ರೀರಾಮುಲು ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ಮೊದಲು ಈ ಬಾರಿ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದನ್ನು ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಶ್ರೀರಾಮುಲು ಅವರು ಯಾವ ಅರ್ಥದಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ. ಪ್ರಧಾನಿ ಮೋದಿ ಅವರೇ ಬಂದು ಕಿವಿಯಲ್ಲಿ ಹೇಳಿದ್ದಾರೆಯೇ ಅಥವಾ ಅಮಿತ್ ಶಾ ಬಂದು ಹೇಳಿದ್ದಾರೆಯೇ ಎಂಬುದನ್ನು ಅವರನ್ನೇ ಕೇಳಬೇಕು ಎಂದು ವ್ಯಂಗ್ಯವಾಡಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R