
ವಿಜಯಪುರ, 13 ನವೆಂಬರ್ (ಹಿ.ಸ.)
ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ವತಿಯಿಂದ ನವೆಂಬರ್ 15ರಂದು ನಡೆಯಲಿರುವ ಗೆಜೆಟೆಡ್ ಪ್ರೊಬೇಷನರ್ಸ್ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಪೂರ್ವಭಾವಿ ಪರೀಕ್ಷೆಯನ್ನು ಸಂಪೂರ್ಣ ಪಾರದರ್ಶಕವಾಗಿ ಹಾಗೂ ಯಾವುದೇ ಲೋಪದೋಷಗಳಿಲ್ಲದೆ ನಡೆಸಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಡಾ. ಆನಂದ್. ಕೆ. ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಒಟ್ಟು 20 ಪರೀಕ್ಷಾ ಕೇಂದ್ರಗಳಲ್ಲಿ 8,117 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಹಾಗೂ ಮಧ್ಯಾಹ್ನ 2ರಿಂದ ಸಂಜೆ 4ರವರೆಗೆ ಎರಡು ಅಧಿವೇಶನಗಳಲ್ಲಿ ಪರೀಕ್ಷೆ ಜರುಗಲಿದೆ ಎಂದು ಮಾಹಿತಿ ನೀಡಿದರು.
ಪ್ರಶ್ನೆಪತ್ರಿಕೆಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾ ಖಜಾನೆಯಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಸಾಗಿಸಲು 8 ಮಾರ್ಗಗಳನ್ನು ಗುರುತಿಸಲಾಗಿದ್ದು, ಪ್ರತಿ ಮಾರ್ಗಕ್ಕೂ ಮಾರ್ಗಾಧಿಕಾರಿ ಹಾಗೂ ಶಸ್ತ್ರಸಜ್ಜಿತ ಪೊಲೀಸ್ ಬೆಂಗಾವಲು ನಿಯೋಜಿಸಲಾಗಿದೆ. ಪರೀಕ್ಷೆ ಆರಂಭವಾಗುವ ಕನಿಷ್ಠ ಒಂದು ಗಂಟೆ ಮುಂಚಿತವಾಗಿ ಎಲ್ಲ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆ ತಲುಪಲಿದೆ.
ಪ್ರತಿ ಪರೀಕ್ಷಾ ಕೊಠಡಿ ಹಾಗೂ ಪ್ರಶ್ನೆಪತ್ರಿಕೆ ತೆರೆಯುವ ಭದ್ರತಾ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಎಲ್ಲ ಕೇಂದ್ರಗಳ ದೃಶ್ಯಾವಳಿಗಳನ್ನು ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸ್ಥಾಪಿಸಿರುವ ನಿಯಂತ್ರಣ ಕೊಠಡಿಯಿಂದ ನೇರ ವೆಬ್ಕಾಸ್ಟಿಂಗ್ ಮೂಲಕ ಮೇಲ್ವಿಚಾರಣೆ ಮಾಡಲಾಗುವುದು. ಪ್ರತಿ ನಾಲ್ಕು ಕೇಂದ್ರಗಳಿಗೆ ಓರ್ವ ವೀಕ್ಷಕರನ್ನು ನೇಮಿಸಲಾಗಿದ್ದು, ಗುರುವಾರ ಸಂಜೆ ನಡೆಸಿದ ಪ್ರಾಯೋಗಿಕ ಪರೀಕ್ಷೆಯಲ್ಲಿ ಎಲ್ಲ ಕೇಂದ್ರಗಳ ನೇರ ಪ್ರಸಾರ ಯಶಸ್ವಿಯಾಗಿದೆ ಎಂದು ಡಿಸಿ ವಿವರಿಸಿದರು.
ಪ್ರತಿ ಕೊಠಡಿಯಲ್ಲಿ ಜಾಮರ್ ಅಳವಡಿಸಲಾಗಿದ್ದು, ಇಬ್ಬರು ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಒಬ್ಬರು ಪ್ರಶ್ನೆ ಮತ್ತು ಉತ್ತರ ಪತ್ರಿಕೆಗಳ ನಿರ್ವಹಣೆ ಮಾಡಿದರೆ, ಮತ್ತೊಬ್ಬರು ಕೊಠಡಿಯೊಳಗೆ ಮರು ತಪಾಸಣೆ ನಡೆಸಿ ಜಾಮರ್ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲಿದ್ದಾರೆ.
ಪ್ರತಿ ಕೇಂದ್ರದಲ್ಲಿ ಪ್ರತ್ಯೇಕ ತಪಾಸಣಾ ತಂಡ ಮತ್ತು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಪ್ರಿಸ್ಕಿಂಗ್ ತಪಾಸಣೆಯ ಬಳಿಕ ಮುಖ ಗುರುತಿಸುವಿಕೆ (ಫೇಸ್ ರೆಕಗ್ನಿಷನ್) ಮೂಲಕ ಹಾಜರಾತಿ ದೃಢಪಡಿಸಲಾಗುತ್ತದೆ. ಪ್ರವೇಶ ಪತ್ರ, ಗುರುತಿನ ಚೀಟಿ ಹಾಗೂ ಪೆನ್ ಹೊರತುಪಡಿಸಿ ಮೊಬೈಲ್, ಬ್ಯಾಗ್, ಪುಸ್ತಕ ಸೇರಿದಂತೆ ಯಾವುದೇ ವಸ್ತುಗಳನ್ನು ಒಳಗೆ ತೆಗೆದುಕೊಂಡು ಹೋಗುವಂತಿಲ್ಲ.
ಈ ಬಾರಿ ಒಎಂಆರ್ ಉತ್ತರ ಪತ್ರಿಕೆಯಲ್ಲಿ 'ಉತ್ತರ ಗೊತ್ತಿಲ್ಲ' ಎಂಬ ಐದನೇ ಆಯ್ಕೆಯನ್ನು ಪರಿಚಯಿಸಲಾಗಿದೆ. ಉತ್ತರ ತಿಳಿಯದ ಪ್ರಶ್ನೆಗಳಿಗೆ ಇದನ್ನು ಶೇಡ್ ಮಾಡಲು ಪರೀಕ್ಷೆ ಮುಗಿದ ಬಳಿಕ 5 ನಿಮಿಷ ಹೆಚ್ಚುವರಿ ಸಮಯ ನೀಡಲಾಗುವುದು. ಮೂರು ಪ್ರತಿಗಳ ಒಎಂಆರ್ ಹಾಳೆಯ ಮೂಲ ಪ್ರತಿಯನ್ನು ಪರೀಕ್ಷೆ ಮುಗಿದ ತಕ್ಷಣ ಜಿಲ್ಲಾ ಪಂಚಾಯಿತಿ ಕಚೇರಿಯ ಸ್ಕ್ಯಾನಿಂಗ್ ಕೇಂದ್ರದಲ್ಲಿ ಸ್ಕ್ಯಾನ್ ಮಾಡಿ ಕೆಪಿಎಸ್ಸಿ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು.
ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಕಲಂ 163ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ವ್ಯಾಪ್ತಿಯ ಸೈಬರ್ ಕೆಫೆ, ಜೆರಾಕ್ಸ್ ಅಂಗಡಿ ಮತ್ತು ಕೋಚಿಂಗ್ ಸೆಂಟರ್ಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಎಲ್ಲ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಅನಧಿಕೃತ ವ್ಯಕ್ತಿಗಳಿಗೆ ಆವರಣದೊಳಗೆ ಪ್ರವೇಶವಿಲ್ಲ. ಮೊದಲ ಅಧಿವೇಶನ ಮುಗಿದ ತಕ್ಷಣ ಅಭ್ಯರ್ಥಿಗಳು ಕೇಂದ್ರದಿಂದ ಹೊರಬರಬೇಕು; ಮಧ್ಯಾಹ್ನದ ಅಧಿವೇಶನಕ್ಕೆ ಹೊಸದಾಗಿ ಪ್ರಿಸ್ಕಿಂಗ್ ಮತ್ತು ಮುಖ ಗುರುತಿಸುವಿಕೆ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.
ಧಾರ್ಮಿಕ ಉಡುಪು ಧರಿಸಿ ಬರುವ ಅಭ್ಯರ್ಥಿಗಳು ಪರೀಕ್ಷೆ ಆರಂಭವಾಗುವ ಎರಡೂವರೆ ಗಂಟೆ ಮುಂಚಿತವಾಗಿ ಹಾಜರಾಗಬೇಕು; ಅವರ ತಪಾಸಣೆಗೆ ಪ್ರತ್ಯೇಕ ಅಧಿಕಾರಿಗಳನ್ನು ನೇಮಿಸಲಾಗಿದೆ. ಜೊತೆಗೆ ಪ್ರತಿ ಕೇಂದ್ರದಲ್ಲೂ ಆರೋಗ್ಯ ಇಲಾಖೆಯಿಂದ ಇಎನ್ಟಿ (ENT) ತಜ್ಞರನ್ನು ನಿಯೋಜಿಸಲಾಗಿದೆ. ವಾಟ್ಸ್ಆ್ಯಪ್, ಟೆಲಿಗ್ರಾಂ, ಫೇಸ್ಬುಕ್ಗಳಲ್ಲಿ ವದಂತಿ ಹಾಗೂ ನಕಲಿ ಸುದ್ದಿ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಭ್ಯರ್ಥಿಗಳು ವದಂತಿಗಳಿಗೆ ಕಿವಿಗೊಡದೆ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬೇಕು ಎಂದು ಎಸ್ಪಿ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ ಗುಳೇದಗುಡ್ಡ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande