
ಬೆಂಗಳೂರು, 13 ನವೆಂಬರ್ (ಹಿ.ಸ.):
60 ದಿನಗಳ ಪೆರೋಲ್ ಅವಧಿ ಮುಗಿದರೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಮರಳದೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯೊಬ್ಬ ತಲೆಮರೆಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಪರಾರಿಯಾಗಿರುವ ಕೈದಿ ಹಾಗೂ ಆತನಿಗೆ ಶ್ಯೂರಿಟಿ ನೀಡಿದ್ದ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪರಾರಿಯಾಗಿರುವ ಕೈದಿಯನ್ನು 32 ವರ್ಷದ ಎ. ಹುಸೇನ್ ಅಲಿಯಾಸ್ ನಸ್ರುಲ್ ಹುಸೇನ್ (ಕೈದಿ ಸಂಖ್ಯೆ 12440) ಎಂದು ಗುರುತಿಸಲಾಗಿದೆ. ಅಪಹರಣ ಮತ್ತು ಕೊಲೆ ಪ್ರಕರಣಗಳಲ್ಲಿ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
ಬೆಂಗಳೂರು ಕೇಂದ್ರ ಕಾರಾಗೃಹದ ಪ್ರಭಾರ ಮುಖ್ಯ ಅಧೀಕ್ಷಕ ಬಿ.ಆರ್. ಅಂದಾನಿ ಸಲ್ಲಿಸಿರುವ ದೂರಿನ ಪ್ರಕಾರ, 2021ರ ಅಕ್ಟೋಬರ್ 16ರಂದು ನ್ಯಾಯಾಲಯವು ಹುಸೇನ್ಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 364(ಎ) ಅಡಿಯಲ್ಲಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿತ್ತು.
ಅಲ್ಲದೆ, ಕೊಲೆ ಪ್ರಕರಣದ ಸೆಕ್ಷನ್ 302ರ ಅಡಿಯಲ್ಲಿ ಮತ್ತೊಂದು ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಲಾಗಿತ್ತು. ಸಾಕ್ಷ್ಯ ನಾಶಪಡಿಸಿದ ಆರೋಪದಡಿ ಸೆಕ್ಷನ್ 201ರ ಅಡಿಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡವನ್ನೂ ವಿಧಿಸಲಾಗಿತ್ತು. ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ ಆರು ತಿಂಗಳ ಸರಳ ಜೈಲು ಶಿಕ್ಷೆ ಅನುಭವಿಸಬೇಕೆಂದು ನ್ಯಾಯಾಲಯ ಆದೇಶಿಸಿತ್ತು.
2026ರ ಸೆಪ್ಟೆಂಬರ್ 10ರಂದು ಇಬ್ಬರು ಜಾಮೀನುದಾರರು ಭದ್ರತಾ ಬಾಂಡ್ ಸಲ್ಲಿಸಿದ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯದ ಆದೇಶದಂತೆ ಹುಸೇನ್ಗೆ 60 ದಿನಗಳ ಪೆರೋಲ್ ಮಂಜೂರು ಮಾಡಲಾಗಿತ್ತು. ಪೆರೋಲ್ ಅವಧಿ ಪೂರ್ಣಗೊಂಡ ಬಳಿಕ ನವೆಂಬರ್ 8ರಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಮರಳಿ ಶರಣಾಗಬೇಕಿತ್ತು.
ಆದರೆ, ನಿಗದಿತ ದಿನಾಂಕದಂದು ಜೈಲಿಗೆ ಹಾಜರಾಗದೆ ನಾಪತ್ತೆಯಾಗಿದ್ದಾನೆ ಎಂದು ಕಾರಾಗೃಹದ ಅಧಿಕಾರಿಗಳು ದೂರಿನಲ್ಲಿ ತಿಳಿಸಿದ್ದಾರೆ.
ಪೆರೋಲ್ ಷರತ್ತುಗಳನ್ನು ಪಾಲಿಸುವಂತೆ ನೋಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ತುಮಕೂರು ಮೂಲದ ಎಸ್. ಗಂಗಯ್ಯ (50) ಮತ್ತು ಡಿ. ಕಪ್ಪಣ್ಣ (35) ಎಂಬ ಇಬ್ಬರು ಶ್ಯೂರಿಟಿದಾರರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವಂತೆ ಕಾರಾಗೃಹದ ಅಧಿಕಾರಿಗಳು ಮನವಿ ಮಾಡಿದ್ದಾರೆ.
ದೂರಿನ ಆಧಾರದ ಮೇಲೆ ಪೊಲೀಸರು ಕೈದಿ ಹುಸೇನ್ ಹಾಗೂ ಇಬ್ಬರು ಶ್ಯೂರಿಟಿದಾರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಕೈದಿಯ ಪತ್ತೆಗಾಗಿ ವಿಶೇಷ ಪೊಲೀಸ್ ತಂಡ ರಚಿಸಲಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R