ಬಿ.ಎಡ್ ನಾಲ್ಕನೇ ಸೆಮಿಸ್ಟರ್ ಫಲಿತಾಂಶ ಪ್ರಕಟ: ಆರು ದಿನಗಳಲ್ಲೇ ಫಲಿತಾಂಶ ನೀಡಿದ ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು ವಿಶ್ವವಿದ್ಯಾಲಯವು ಬಿ.ಎಡ್ 4ನೇ ಸೆಮಿಸ್ಟರ್ ಫಲಿತಾಂಶವನ್ನು ಪರೀಕ್ಷೆ ಮುಕ್ತಾಯಗೊಂಡ ಕೇವಲ 6 ದಿನಗಳಲ್ಲಿ ಪ್ರಕಟಿಸಿದ್ದು, ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ವರದಾನವಾಗಿದೆ.
BU-BEd-4th-Sem-Results


ಬೆಂಗಳೂರು, 13 ನವೆಂಬರ್ (ಹಿ.ಸ.):

ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಹಾಗೂ ಉದ್ಯೋಗದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ವಿಶ್ವವಿದ್ಯಾಲಯ ಮಹತ್ವದ ಹೆಜ್ಜೆಯಿಟ್ಟಿದೆ. ಬಿ.ಎಡ್ ನಾಲ್ಕನೇ ಸೆಮಿಸ್ಟರ್ ಪರೀಕ್ಷೆ ಮುಕ್ತಾಯಗೊಂಡ ಕೇವಲ ಆರು ದಿನಗಳಲ್ಲೇ ಫಲಿತಾಂಶ ಪ್ರಕಟಿಸುವ ಮೂಲಕ ದಾಖಲೆ ನಿರ್ಮಿಸಿದೆ.

ನವೆಂಬರ್ 6ರಂದು ಪರೀಕ್ಷೆಗಳು ಮುಕ್ತಾಯಗೊಂಡಿದ್ದು, ನವೆಂಬರ್ 13ರಂದು ಫಲಿತಾಂಶ ಪ್ರಕಟಿಸಲಾಗಿದೆ. ಒಟ್ಟು 2,469 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 9,817 ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಅಲ್ಪಾವಧಿಯಲ್ಲೇ ಪೂರ್ಣಗೊಳಿಸಿ ತ್ವರಿತ ಫಲಿತಾಂಶ ಪ್ರಕಟಿಸಲಾಗಿದೆ.

ಶಿಕ್ಷಕರ ನೇಮಕಾತಿಗೆ ಅನುಕೂಲ

ರಾಜ್ಯದಲ್ಲಿ ಒಟ್ಟು 16 ಸಾವಿರ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ನವೆಂಬರ್ 16 ಕೊನೆಯ ದಿನವಾಗಿದೆ. ಬಿ.ಎಡ್ ನಾಲ್ಕನೇ ಸೆಮಿಸ್ಟರ್ ಫಲಿತಾಂಶ ವಿಳಂಬವಾಗಿದ್ದರೆ ಈ ಬಾರಿ ಪರೀಕ್ಷೆ ಬರೆದ ಪದವೀಧರರು ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸುವ ಅವಕಾಶ ಕಳೆದುಕೊಳ್ಳುವ ಆತಂಕ ಎದುರಾಗಿತ್ತು.

ಇದನ್ನು ಮನಗಂಡ ಬೆಂಗಳೂರು ವಿಶ್ವವಿದ್ಯಾಲಯ ತುರ್ತಾಗಿ ಮೌಲ್ಯಮಾಪನ ಕಾರ್ಯ ಪೂರ್ಣಗೊಳಿಸಿ ಫಾಸ್ಟ್‌ಟ್ರ್ಯಾಕ್ ವ್ಯವಸ್ಥೆಯಲ್ಲಿ ಫಲಿತಾಂಶ ಪ್ರಕಟಿಸಿದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಲು ಅವಕಾಶ ದೊರೆತಂತಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande