
ಬೆಂಗಳೂರು, 12 ನವೆಂಬರ್ (ಹಿ.ಸ.):
ಬರ ಪರಿಹಾರದ ವಿಚಾರದಲ್ಲಿ ರಾಜ್ಯ ಸರ್ಕಾರ ಮಾಡುತ್ತಿರುವುದು ಸರಿಯಿಲ್ಲ. ಇದರಲ್ಲೂ ಕೂಡ ರಾಜಕೀಯ ಮಾಡುತ್ತಿದೆ. ಬರ ಪರಿಹಾರದ ವಿಚಾರದಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಜೆಪಿ ನಗರದ ಅವರ ನಿವಾಸದಲ್ಲಿ ಭೇಟಿ ಮಾಡಿ ತಮ್ಮ ಮಗಳ ಮದುವೆ ಆಮಂತ್ರಣ ನೀಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬರ ಪರಿಹಾರಕ್ಕೆ ಅದರದ್ದೇ ಆದಂತ ಮಾನದಂಡ ಇದೆ. ಎಸ್ ಡಿ ಆರ್ ಎಫ್ ನಲ್ಲಿ ಮುಂಗಡ ಮೊದಲೇ ಕೊಟ್ಟಿರುತ್ತಾರೆ. ಜಿಲ್ಲಾಧಿಕಾರಿಗಳ ಬಳಿಯೂ ಸಾಕಷ್ಟು ಹಣ ಇದೆ. ರೈತರಿಗೆ ಪರಿಹಾರ ನೀಡುವಾಗ ಸರ್ಕಾರದ ಬೊಕ್ಕಸದಿಂದ ನೀಡಬೇಕು ಆಮೇಲೆ ಕೇಂದ್ರದಿಂದ ಬರುತ್ತದೆ ಎಂದು ಹೇಳಿದರು.
ನಾನು ಮುಖ್ಯಮಂತ್ರಿ ಆಗಿದ್ದಾಗ ನೆರೆ ಬಂದಿತ್ತು ಆಗ ಕೂಡಲೇ ಸರ್ಕಾರದಿಂದ ಹಣ ಬಿಡುಗಡೆ ಮಾಡಿದ್ದೆವು. ಒಣ ಬೆಸಾಯಕ್ಕೆ ಕೇಂದ್ರ ಸರ್ಕಾರ 6500 ಕೊಟ್ಟರೆ ನಾವು 13000 ನೀಡಿದ್ದೇವೆ ನೀರಾವರಿಗೆ ಅವರು 12500 ಕೊಟ್ಟರೆ ನಾವು 25000 ಕೊಟ್ಟಿದ್ದೆವು. ಆಗ ಕೇಂದ್ರದಲ್ಲಿ ನಮ್ಮದೇ ಸರ್ಕಾರ ಇದ್ದರೂ ಕೂಡ ನಾವು ಕಾಯಲಿಲ್ಲ ಸಂಕಷ್ಟ ಇದ್ದಾಗ ಧಾವಿಸಿದರೆ ಮಾತ್ರ ಅದು ಪರಿಹಾರ ಸಮಸ್ಯೆ ಬಗೆಹರಿದು ಮುಂಗಾರು ಹಿಂಗಾರು ಎಲ್ಲ ಮುಗಿದ ನಂತರ ಬಂದರೆ ಅದು ಸಂವೇದನಶೀಲ ಅಲ್ಲ ಎಂದು ಹೇಳಿದರು.
*ಮೆಟ್ರೊ ಸಾಲಕ್ಕೆ ಕೇಂದ್ರದ ಗ್ಯಾರೆಂಟಿ*
ನಮ್ಮ ಮೆಟ್ರೊ ಅನುದಾನ ಬಿಡುಗಡೆ ಕುರಿತು ನಡೆಯುತ್ತಿರುವ ಚರ್ಚೆಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೆಟ್ರೊ ಯೋಜನೆಗೆ ಪ್ರತ್ಯೇಕವಾಗಿ ಶೇ 60 ರಿಂದ 65% ರಷ್ಟು ಸಾಲ ಇದೆ. ಅದನ್ನು ಮೆಟ್ರೋ ಆದಾಯದಿಂದ ಬರುತ್ತದೆ. ಅದರಲ್ಲಿ ಕೊಡುತ್ತಾರೆ. ಇವರು ದಾರಿ ತಪ್ಪಿಸುವಂತಹ ಕೆಲ ಮಾಡಬಾರದು. ಜನರ ಕಣ್ಣಿಗೆ ಮಣ್ಣು ಎರಚುವಂತಹ ಕೆಲಸ ಮಾಡಬಾರದು. ಸಾಲ ಮರುಪಾವತಿ ಸರ್ಕಾರ ಮಾಡಲ್ಲ ಜನ ಮಾಡುತ್ತಾರೆ. ಮೆಟ್ರೋ ಟಿಕೆಟ್ ನಿಂದ ಬರುವ ಹಣದಿಂದ ಸಾಲ ಮರುಪಾವತಿ ಆಗುತ್ತದೆ. ಸರ್ಕಾರದ ಬೊಕ್ಕಸದಿಂದ ಸಾಲ ತೀರಿಸುವುದಿಲ್ಲ. ಸಾಲಕ್ಕೆ ಕೇಂದ್ರ ಸರ್ಕಾರದ ಗ್ಯಾರಂಟಿ ಆದ ಮೇಲೇನೆ ಸಾಲ ದೊರೆಯುತ್ತದೆ. ಆರೇಂಜ್ ಲೈನ್ ಗೆ ನಾನು ಮುಖ್ಯಮಂತ್ರಿ ಇದ್ದಾಗ ಎರಡೂವರೆ ಸಾವಿರ ಕೋಟಿ ರೂಪಾಯಿ ಕೊಟ್ಟಿದ್ದೆ. ರಾಜ್ಯದ ದೃಷ್ಟಿಯಿಂದ ಮೆಟ್ರೋ ಲೈನ್ ಗೆ ಏನು ಅನುಮತಿ ಬೇಕೋ ಅದನ್ನು ಕೊಡಿಸುತ್ತೇವೆ. ಮೆಟ್ರೋ ಯೋಜನೆಗೆ ಕೇಂದ್ರ ಹಾಗೂ ರಾಜ್ಯದ ಪಾಲು 50:50 ಇರುತ್ತದೆ ಎಂದು ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.