ಮಂಡ್ಯದಲ್ಲಿ ಎಆರ್ಎಐ ಘಟಕ ಸ್ಥಾಪನೆಗೆ ರೈತರ ವಿರೋಧ: ಕೃಷಿ ಭೂಮಿ ಬಿಟ್ಟುಕೊಡಲು ನಕಾರ
ಮಂಡ್ಯ, 10 ನವೆಂಬರ್ (ಹಿ.ಸ.): ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಕನಸಿನ ಯೋಜನೆಯಾದ ಮಂಡ್ಯದಲ್ಲಿ ವಾಹನ ಸಂಶೋಧನಾ ಸಂಸ್ಥೆ (ಎಆರ್‌ಎಐ) ಘಟಕ ಸ್ಥಾಪನೆಗೆ ಆರಂಭದಲ್ಲೇ ರೈತರ ವಿರೋಧ ವ್ಯಕ್ತವಾಗಿದೆ. ಬೃಹತ್ ಕೈಗಾರಿಕೆ ಸ್ಥಾಪನೆಗಾಗಿ ರಾಜ್ಯ ಸರ್ಕಾರ ಗುರುತಿಸಿರುವ 105 ಎಕರೆ ಕೃಷಿ ಭೂಮಿಯನ್ನು ಬಿಟ
mandya-arai-unit-faces-farmers-opposition-over-land-acquisition


ಮಂಡ್ಯ, 10 ನವೆಂಬರ್ (ಹಿ.ಸ.):

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಕನಸಿನ ಯೋಜನೆಯಾದ ಮಂಡ್ಯದಲ್ಲಿ ವಾಹನ ಸಂಶೋಧನಾ ಸಂಸ್ಥೆ (ಎಆರ್‌ಎಐ) ಘಟಕ ಸ್ಥಾಪನೆಗೆ ಆರಂಭದಲ್ಲೇ ರೈತರ ವಿರೋಧ ವ್ಯಕ್ತವಾಗಿದೆ. ಬೃಹತ್ ಕೈಗಾರಿಕೆ ಸ್ಥಾಪನೆಗಾಗಿ ರಾಜ್ಯ ಸರ್ಕಾರ ಗುರುತಿಸಿರುವ 105 ಎಕರೆ ಕೃಷಿ ಭೂಮಿಯನ್ನು ಬಿಟ್ಟುಕೊಡಲು ಸ್ಥಳೀಯ ರೈತರು ನಿರಾಕರಿಸಿದ್ದು, ಯೋಜನೆ ಜಾರಿಗೆ ಮುನ್ನವೇ ಭೂ ವಿವಾದ ತಲೆದೋರಿದೆ.

ಮಂಡ್ಯ ತಾಲೂಕಿನ ಹೆಗ್ಗಡತಹಳ್ಳಿ ಮತ್ತು ಮುದ್ದನಘಟ್ಟ ಗ್ರಾಮಗಳ ವ್ಯಾಪ್ತಿಯಲ್ಲಿ ಎಆರ್‌ಎಐ ಘಟಕ ಸ್ಥಾಪನೆಗಾಗಿ ಜಿಲ್ಲಾಡಳಿತ 105 ಎಕರೆ ಜಾಗ ಗುರುತಿಸಿತ್ತು. ಈ ಸಂಬಂಧ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆಯನ್ನೂ ನಡೆಸಿತ್ತು. ಆದರೆ, ಕೃಷಿ ಭೂಮಿಯಲ್ಲಿ ಕೈಗಾರಿಕೆ ಸ್ಥಾಪಿಸುವ ಪ್ರಸ್ತಾಪಕ್ಕೆ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭೂಮಿ ನೀಡಲು ಸಿದ್ಧರಿದ್ದೇವೆ ಎಂದು ಹೇಳಿರುವ ಶಾಸಕ ಗಣಿಗ ರವಿಕುಮಾರ್ ಅವರ ನಿಲುವಿಗೂ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುದ್ದನಘಟ್ಟ ಗ್ರಾಮದ ರೈತರಾದ ದೇಶಿಲಿಂಗೇಗೌಡ ಮತ್ತು ರಾಜೇಗೌಡ, ಗ್ರಾಮದಲ್ಲಿ ಖಾಲಿ ಜಾಗವೇ ಇಲ್ಲ. ಕಳೆದ 40 ವರ್ಷಗಳಿಂದ ಇಲ್ಲಿ ನೆಲೆಸಿದ್ದು, ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದೇವೆ. ಯಾವುದೇ ಕಾರಣಕ್ಕೂ ಕೃಷಿ ಚಟುವಟಿಕೆಗೆ ಬಳಸುತ್ತಿರುವ ಭೂಮಿಯನ್ನು ಕೈಗಾರಿಕೆ ಸ್ಥಾಪನೆಗೆ ಬಿಟ್ಟುಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮುದ್ದನಘಟ್ಟ ಗ್ರಾಮದ ಸರ್ವೆ ಸಂಖ್ಯೆ 48 ಮತ್ತು ಹೆಗ್ಗಡತಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 35ರಲ್ಲಿರುವ ಉದ್ದೇಶಿತ ಸುಮಾರು 100 ಎಕರೆ ಭೂಮಿಯಲ್ಲಿ ಯಾರೂ ಉಳುಮೆ ಮಾಡುತ್ತಿಲ್ಲ, ಜಾಗ ಖಾಲಿಯಾಗಿದೆ ಎಂಬ ಶಾಸಕರ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದು ರೈತರು ಆರೋಪಿಸಿದ್ದಾರೆ.

ತಮ್ಮ ಬಳಿ ಪಹಣಿ, ಸಾಗುವಳಿ ಚೀಟಿ ಸೇರಿದಂತೆ ಅಗತ್ಯ ದಾಖಲೆಗಳಿವೆ. ಸ್ವಂತ ಹಣದಲ್ಲಿ ಕೊಳವೆಬಾವಿ ಕೊರೆಸಿ ರಾಗಿ, ಭತ್ತ ಮತ್ತು ತೆಂಗು ಬೆಳೆಗಳನ್ನು ಬೆಳೆಯುತ್ತಿದ್ದೇವೆ. ಜಮೀನುಗಳಲ್ಲಿ ಸುಮಾರು 50 ವರ್ಷ ಹಳೆಯ ಮರಗಳೂ ಇವೆ ಎಂದು ತಿಳಿಸಿದ್ದಾರೆ.

ರಾಜಕಾರಣಿಗಳು ಆಧಾರರಹಿತ ಹೇಳಿಕೆ ನೀಡುವ ಬದಲು ಶಾಸಕರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಬಂದು ಜಾಗದ ವಾಸ್ತವ ಸ್ಥಿತಿಯನ್ನು ಪರಿಶೀಲಿಸಲಿ. ಎಆರ್‌ಎಐ ಸಂಸ್ಥೆಯವರು ಸರ್ವೆ ಮಾಡಲು ಬಂದಾಗಲೇ ವಿರೋಧ ವ್ಯಕ್ತಪಡಿಸಿದ್ದೇವೆ. ಎಲ್ಲರೂ ಸೇರಿ ನಮ್ಮನ್ನು ವಂಚಿಸುತ್ತಿದ್ದಾರೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರೈತರ ಅಹವಾಲು ಆಲಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದ ಶಾಸಕರು, ತಮ್ಮ ವಿರೋಧವನ್ನು ರಾಜಕೀಯ ಪ್ರೇರಿತ ಎಂದು ತಳ್ಳಿಹಾಕುತ್ತಿರುವುದು ಉದ್ದೇಶಪೂರ್ವಕವಾಗಿದೆ ಎಂದು ದೂರಿದ್ದಾರೆ. ತಮ್ಮ ಜಮೀನು, ಬೆಳೆ ಮತ್ತು ಮಕ್ಕಳ ಭವಿಷ್ಯದ ಕುರಿತು ನಿರ್ಧಾರ ಕೈಗೊಳ್ಳುವ ಅರಿವು ತಮಗಿದೆ ಎಂದಿದ್ದಾರೆ.

ಇದೇ ವೇಳೆ, ನಮ್ಮ ಜೀವನದೊಂದಿಗೆ ಚೆಲ್ಲಾಟವಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿ ಇರುವುದಿಲ್ಲ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande