
ಬೆಂಗಳೂರು, 10 ನವೆಂಬರ್ (ಹಿ.ಸ.):
ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರಕ್ಕೆ ಅಗತ್ಯವಿರುವ ಉಪಕರಣಗಳನ್ನು ತಯಾರಿಸುವ ಬೆಂಗಳೂರಿನ ಪ್ರತಿಷ್ಠಿತ 'ಹೈಕ್ಯಾಲ್ ಟೆಕ್ನಾಲಜೀಸ್' ಸಂಸ್ಥೆಯಲ್ಲಿ 'ಪ್ರೇಮ್ಜಿ ಇನ್ವೆಸ್ಟ್' ಬೃಹತ್ ಮೊತ್ತದ ಹೂಡಿಕೆ ಮಾಡಿದೆ.
ಜಾಗತಿಕ ವಿಸ್ತರಣೆಯ ಗುರಿ ಹೊಂದಿರುವ ಕಂಪನಿ, ಅಜೀಂ ಪ್ರೇಮ್ಜಿ ಸ್ಥಾಪಿಸಿದ ಸಂಸ್ಥೆಯಿಂದ ಸುಮಾರು 30 ರಿಂದ 40 ಮಿಲಿಯನ್ ಡಾಲರ್ ಹೂಡಿಕೆ ಪಡೆದುಕೊಂಡಿದೆ.
40 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಹೈಕ್ಯಾಲ್ ಕಂಪನಿಯು, ಇದೇ ಮೊದಲ ಬಾರಿಗೆ ಈ ಪ್ರಮಾಣದ ಸಾಂಸ್ಥಿಕ ಬಂಡವಾಳವನ್ನು ಆಕರ್ಷಿಸಿದೆ.
ಈ ಬೃಹತ್ ಹೂಡಿಕೆ ಒಪ್ಪಂದದಲ್ಲಿ 'ಡೆಲಾಯ್ಟ್ ಕಾರ್ಪೊರೇಟ್ ಫೈನಾನ್ಸ್' ಸಂಸ್ಥೆಯು ಆರ್ಥಿಕ ಸಲಹೆಗಾರರಾಗಿ ಜವಾಬ್ದಾರಿ ನಿರ್ವಹಿಸಿದೆ.
ಜಾಗತಿಕ ಮಟ್ಟದಲ್ಲಿ ಹೈಕ್ಯಾಲ್ ಛಾಪು
1986ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ, ಏರೋಸ್ಪೇಸ್ (ಬಾಹ್ಯಾಕಾಶ) ಮತ್ತು ರಕ್ಷಣಾ ವಲಯದಲ್ಲಿ ತನ್ನದೇ ಆದ ಮೈಲಿಗಲ್ಲು ಸ್ಥಾಪಿಸಿದೆ. ಇಸ್ರೋದ ರಾಕೆಟ್ಗಳು ಮತ್ತು ಉಪಗ್ರಹಗಳಿಗೆ ಮಾತ್ರವಲ್ಲದೆ,
ಫ್ರಾನ್ಸ್ನ ರಫೇಲ್ ಯುದ್ಧವಿಮಾನಗಳು, ಬೋಯಿಂಗ್, ಏರ್ಬಸ್ ವಾಣಿಜ್ಯ ವಿಮಾನಗಳು ಹಾಗೂ ಜಲಾಂತರ್ಗಾಮಿಗಳಿಗೆ ಬೇಕಾದ ಅತ್ಯಂತ ಸೂಕ್ಷ್ಮ ಎಲೆಕ್ಟ್ರೋ-ಮೆಕ್ಯಾನಿಕಲ್ ಬಿಡಿಭಾಗಗಳನ್ನು ಈ ಕಂಪನಿ ವಿನ್ಯಾಸಗೊಳಿಸಿ ತಯಾರಿಸುತ್ತಿದೆ.
ಪರಿಣಾಮ ಹೈಕ್ಯಾಲ್ನ ಒಟ್ಟು ಆದಾಯದಲ್ಲಿ ಶೇ. 90 ರಷ್ಟು ಪಾಲು ಕೇವಲ ರಫ್ತು ವಹಿವಾಟಿನಿಂದಲೇ ಬರುತ್ತಿದೆ.
ಬೃಹತ್ ವಿಸ್ತರಣಾ ಯೋಜನೆ
ಪ್ರೇಮ್ಜಿ ಇನ್ವೆಸ್ಟ್ನಿಂದ ಬಂದಿರುವ ಈ ಬೃಹತ್ ಮೊತ್ತವನ್ನು ದಕ್ಷಿಣ ಭಾರತದಲ್ಲಿ ಕಂಪನಿಯ ಜಾಲವನ್ನು ವಿಸ್ತರಿಸಲು ಬಳಸಿಕೊಳ್ಳಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ದೇವನಹಳ್ಳಿಯಲ್ಲಿ ಇತ್ತೀಚೆಗಷ್ಟೇ ಹೊಸ ಘಟಕವೊಂದು ಶುರುವಾಗಿದ್ದು, ತಮಿಳುನಾಡಿನ ಹೊಸೂರಿನಲ್ಲಿ ಮತ್ತೊಂದು ಬೃಹತ್ ಘಟಕ ನಿರ್ಮಾಣವಾಗುತ್ತಿದೆ.
ಈ ಹೊಸ ಬಂಡವಾಳವನ್ನು ಅತ್ಯಾಧುನಿಕ ಯಂತ್ರಗಳ ಖರೀದಿ, ಸಂಶೋಧನೆ-ಅಭಿವೃದ್ಧಿ ಹಾಗೂ ಈ ಕ್ಷೇತ್ರಕ್ಕೆ ಬೇಕಾದ ಪರಿಣತ ತಜ್ಞರ ನೇಮಕಾತಿಗೆ ವಿನಿಯೋಗಿಸಲು ಕಂಪನಿ ಉದ್ದೇಶಿಸಿದೆ.
'ಆತ್ಮನಿರ್ಭರ್ ಭಾರತ್' ಆಶಯಕ್ಕೆ ಪುಷ್ಟಿ
ಹೈಕ್ಯಾಲ್ ಟೆಕ್ನಾಲಜೀಸ್ನ ಎಂಡಿ ಯಶಸ್ ಜೈವೀರ್ ಈ ಬಗ್ಗೆ ಮಾತನಾಡಿದ್ದು, ಕಳೆದ ನಾಲ್ಕು ದಶಕಗಳಿಂದ ನಾವು ಶಿಸ್ತಿನ ಮತ್ತು ಗುಣಮಟ್ಟದ ಉತ್ಪಾದನೆಗೆ ಒತ್ತು ನೀಡಿದ್ದೇವೆ.
ಕೇವಲ ನಮ್ಮ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದು ಮಾತ್ರವಲ್ಲದೆ, ಭಾರತದಲ್ಲೇ ತಯಾರಾದ ಅತ್ಯಾಧುನಿಕ ತಂತ್ರಜ್ಞಾನವನ್ನು ವಿಶ್ವಕ್ಕೆ ಪರಿಚಯಿಸುವುದು ನಮ್ಮ ಗುರಿಯಾಗಿದೆ.
ಜಾಗತಿಕ ಬೇಡಿಕೆಯನ್ನು ಪೂರೈಸಲು ಭಾರತೀಯ ಕಂಪನಿಗಳಿಗೆ ಇದೀಗ ಉತ್ತಮ ಅವಕಾಶವಿದ್ದು, ಇದಕ್ಕೆ ಪ್ರೇಮ್ಜಿ ಇನ್ವೆಸ್ಟ್ನ ಹೂಡಿಕೆ ಆನೆಬಲ ತಂದಿದೆ ಎಂದಿದ್ದಾರೆ.
ಪ್ರೇಮ್ಜಿ ಇನ್ವೆಸ್ಟ್ನ ಪಾಲುದಾರರಾದ ಮನೋಜ್ ಜೈಸ್ವಾಲ್ ಪ್ರತಿಕ್ರಿಯಿಸಿ, ರಕ್ಷಣಾ ಹಾಗೂ ಬಾಹ್ಯಾಕಾಶ ವಲಯದಲ್ಲಿ ಭಾರತವು ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುತ್ತಿರುವುದಕ್ಕೆ ಹೈಕ್ಯಾಲ್ ಉತ್ತಮ ನಿದರ್ಶನವಾಗಿದೆ.
ಜಗತ್ತಿನ ದಿಗ್ಗಜ ಕಂಪನಿಗಳು ಭಾರತದ ಇಂಜಿನಿಯರಿಂಗ್ ಪಾಲುದಾರರ ಕಡೆಗೆ ಮುಖ ಮಾಡುತ್ತಿದ್ದು, ಆ ಜಾಗತಿಕ ಬೇಡಿಕೆಯನ್ನು ಪೂರೈಸುವ ತಾಕತ್ತು ಹೈಕ್ಯಾಲ್ಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
'ಪ್ರೇಮ್ಜಿ ಇನ್ವೆಸ್ಟ್' ಐಟಿ ದಿಗ್ಗಜ ಅಜೀಮ್ ಪ್ರೇಮ್ಜಿ ಅವರು 2006ರಲ್ಲಿ ಹುಟ್ಟುಹಾಕಿದ ಜಾಗತಿಕ ಹೂಡಿಕೆ ಸಂಸ್ಥೆಯಾಗಿದ್ದು, 15 ಬಿಲಿಯನ್ ಡಾಲರ್ಗೂ ಹೆಚ್ಚಿನ ಬಂಡವಾಳ ಹೊಂದಿದೆ.
ಈ ಸಂಸ್ಥೆ, ಇದುವರೆಗೆ 160ಕ್ಕೂ ಹೆಚ್ಚು ಉದ್ಯಮಗಳಿಗೆ ಆರ್ಥಿಕ ಬೆಂಬಲ ನೀಡಿದೆ. ಇಲ್ಲಿ ಬರುವ ಲಾಭದ ಹಣವನ್ನು 'ಅಜೀಮ್ ಪ್ರೇಮ್ಜಿ ಫೌಂಡೇಶನ್'ನ ಶೈಕ್ಷಣಿಕ ಮತ್ತು ಸಮಾಜಮುಖಿ ಕೆಲಸಗಳಿಗೆ ಬಳಸಲಾಗುತ್ತದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R