ಹೀಗೊಂದು ನೆನಪು :ಶಿಕ್ಷಣ ಕ್ರಾಂತಿಯ ಹರಿಕಾರ, ರಾಷ್ಟೀಯ ಏಕತೆಯ ಪ್ರತೀಕ ಮೌಲಾನ ಅಬ್ದುಲ್ ಕಲಾಮ್ ಅಜಾದ್
ಬೆಂಗಳೂರು, 10 ನವೆಂಬರ್ (ಹಿ.ಸ.): ಹೀಗೊಂದು ನೆನಪು :ಶಿಕ್ಷಣ ಕ್ರಾಂತಿಯ ಹರಿಕಾರ, ರಾಷ್ಟೀಯ ಏಕತೆಯ ಪ್ರತೀಕ ಮೌಲಾನ ಅಬ್ದುಲ್ ಕಲಾಮ್ ಅಜಾದ್ ಲೇಖಕರು: ಖಾಸಿಂ ಸಾಬ್. ಎ, ಚಿಂತಕರು, ಬೆಂಗಳೂರು ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಕೇವಲ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ನಡೆದ ರಾಜಕೀ
ಲೇಖಕರು ನೀಡಿರುವ ಪೋಟೋ


ಬೆಂಗಳೂರು, 10 ನವೆಂಬರ್ (ಹಿ.ಸ.):

ಹೀಗೊಂದು ನೆನಪು :ಶಿಕ್ಷಣ ಕ್ರಾಂತಿಯ ಹರಿಕಾರ, ರಾಷ್ಟೀಯ ಏಕತೆಯ ಪ್ರತೀಕ ಮೌಲಾನ ಅಬ್ದುಲ್ ಕಲಾಮ್ ಅಜಾದ್

ಲೇಖಕರು: ಖಾಸಿಂ ಸಾಬ್. ಎ,

ಚಿಂತಕರು, ಬೆಂಗಳೂರು

ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಕೇವಲ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ನಡೆದ ರಾಜಕೀಯ ಸಂಘರ್ಷವಾಗಿ ನೋಡುವುದಕ್ಕಿಂತ, ಆಧುನಿಕ ಭಾರತದ ವೈಚಾರಿಕ ಅಡಿಪಾಯವನ್ನು ರೂಪಿಸಿದ ಮಹಾನ್ ವ್ಯಕ್ತಿತ್ವಗಳ ಚಿಂತನೆಗಳ ಮೂಲಕ ಅರ್ಥೈಸುವುದು ಹೆಚ್ಚು ಸೂಕ್ತ. ಈ ವೈಚಾರಿಕ ಪರಂಪರೆಯಲ್ಲಿ ಗಾಂಧಿಜಿ, ಜವಾಹರಲಾಲ್ ನೆಹರು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರಷ್ಟೇ ಮಹತ್ವದ ಸ್ಥಾನವನ್ನು ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಹೊಂದಿದ್ದಾರೆ.

ಆಜಾದ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು, ಧಾರ್ಮಿಕ ವಿದ್ವಾಂಸರಾಗಿದ್ದರು, ಪತ್ರಕರ್ತರಾಗಿದ್ದರು, ಶಿಕ್ಷಣತಜ್ಞರಾಗಿದ್ದರು, ಅದಕ್ಕಿಂತ ಮುಖ್ಯವಾಗಿ ಧರ್ಮದ ಗಡಿಗಳನ್ನು ಮೀರಿ ಭಾರತೀಯ ರಾಷ್ಟ್ರೀಯತೆಯನ್ನು ಪ್ರತಿಪಾದಿಸಿದ ಜಾತ್ಯತೀತ ಚಿಂತಕರಾಗಿದ್ದರು.

ಆಜಾದ್ ರವರಿಗೆ 1992ರಲ್ಲಿ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇವರ ವ್ಯಕ್ತಿತ್ವವನ್ನು ಒಂದು ಧರ್ಮದ ನಾಯಕತ್ವಕ್ಕೆ ಸೀಮಿತಗೊಳಿಸುವುದು ಅವರ ರಾಷ್ಟ್ರೀಯ ಕೊಡುಗೆಯನ್ನು ಕುಗ್ಗಿಸಿದಂತಾಗುತ್ತದೆ. ಅವರು ಭಾರತೀಯ ಬಹುತ್ವ, ಪ್ರಜಾಪ್ರಭುತ್ವ, ಶಿಕ್ಷಣ ಮತ್ತು ಸಂವಿಧಾನಾತ್ಮಕ ಮೌಲ್ಯಗಳ ಪರವಾಗಿ ನಿಂತ ರಾಷ್ಟ್ರನಾಯಕರಾಗಿದ್ದರು.

1923ರಲ್ಲಿ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ವಿಶೇಷ ಅಧಿವೇಶನದ ಅಧ್ಯಕ್ಷರಾಗಿ ಆಯ್ಕೆಯಾದ ಅವರು, ಆಗ ಕೇವಲ 35 ವರ್ಷದವರಾಗಿದ್ದರು. ಆ ಮೂಲಕ ಕಾಂಗ್ರೆಸ್‌ನ ಅತ್ಯಂತ ಕಿರಿಯ ಅಧ್ಯಕ್ಷರೆಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರ ಅಂದಿನ ಅಧ್ಯಕ್ಷಕ್ಷಿಯ ಭಾಷಣ ಅಭೂತಪೂರ್ವ. ನಂತರ 1940ರಿಂದ 1946ರವರೆಗೆ ಮತ್ತೊಮ್ಮೆ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.

1942ರ ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಆಜಾದ್ ಅವರನ್ನು ಇತರ ಪ್ರಮುಖ ನಾಯಕರೊಂದಿಗೆ ಬ್ರಿಟಿಷರು ಬಂಧಿಸಿ ಅಹಮದ್‌ನಗರ ಕೋಟೆಯಲ್ಲಿ ಸೆರೆವಾಸದಲ್ಲಿಟ್ಟರು. 1945ರವರೆಗೆ ಅವರು ಸೆರೆಮನೆಯಲ್ಲಿದ್ದರು. ಹೀಗೆ ಅವರ ರಾಜಕೀಯ ಬದುಕು ಪತ್ರಿಕೋದ್ಯಮ, ಜನಾಂದೋಲನ, ಜೈಲು ಜೀವನ ಮತ್ತು ರಾಷ್ಟ್ರೀಯ ನಾಯಕತ್ವದ ಮೂಲಕ ಸಾಗಿತು.

ಅಂಬೇಡ್ಕರ್ ಮತ್ತು ಆಜಾದ್ ಇವರಿಬ್ಬರ ನಡುವೆ ಸಾಮಾಜಿಕ ಹಿನ್ನೆಲೆ ಮತ್ತು ಹೋರಾಟದ ವಿಧಾನಗಳಲ್ಲಿ ವ್ಯತ್ಯಾಸಗಳಿದ್ದವು. ಅಂಬೇಡ್ಕರ್ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಮತ್ತು ಸಾಮಾಜಿಕ ಶೋಷಣೆಯ ವಿರುದ್ಧ ಸಂವಿಧಾನಾತ್ಮಕ ಹೋರಾಟ ನಡೆಸಿದರೆ, ಆಜಾದ್ ಧಾರ್ಮಿಕ ಸಾಮರಸ್ಯ, ರಾಷ್ಟ್ರೀಯ ಏಕತೆ ಮತ್ತು ಶಿಕ್ಷಣದ ಮೂಲಕ ಸಮಾಜದ ಪ್ರಗತಿಯನ್ನು ಪ್ರತಿಪಾದಿಸಿದರು. ಶಿಕ್ಷಣ, ಸಮಾನ ಅವಕಾಶ ಮತ್ತು ಮಾನವ ಗೌರವದ ಅಗತ್ಯದ ವಿಚಾರದಲ್ಲಿ ಇವರ ಚಿಂತನೆಗಳನ್ನು ಪರಸ್ಪರ ಪೂರಕವಾಗಿ ನೋಡಬಹುದು. ಅವರ ನಡುವೆ ನಡೆದ ಎಲ್ಲ ವಿಚಾರಗಳನ್ನೂ ನೇರ ಸಂಭಾಷಣೆಗಳೆಂದು ಹೇಳುವುದು ಇತಿಹಾಸಕ್ಕೆ ಸರಿಯಲ್ಲ. ಆದರೆ ಇವರ ಸಮಕಾಲೀನ ರಾಜಕೀಯ ಮತ್ತು ವೈಚಾರಿಕ ಚರ್ಚೆಗಳು ಭಾರತದ ಪ್ರಜಾಪ್ರಭುತ್ವದ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ.

ಆಜಾದರ ಪ್ರಕಾರ, ಭಾರತೀಯ ಮುಸ್ಲಿಮರು ಈ ದೇಶದ ಇತಿಹಾಸ ಮತ್ತು ಸಂಸ್ಕೃತಿಯ ಅವಿಭಾಜ್ಯ ಅಂಗ. ಹಿಂದೂ ಮತ್ತು ಮುಸ್ಲಿಮರು ಶತಮಾನಗಳ ಸಹಬಾಳ್ವೆಯ ಮೂಲಕ ರೂಪಿಸಿದ ಭಾರತೀಯ ಸಂಸ್ಕೃತಿಯನ್ನು ಕೃತಕ ರಾಜಕೀಯ ಗಡಿಗಳಿಂದ ಬೇರ್ಪಡಿಸಲು ಸಾಧ್ಯವಿಲ್ಲ.

1940ರ ರಾಮಗಢ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷೀಯ ಭಾಷಣದಲ್ಲಿ ಅವರು ಭಾರತೀಯತೆ ಮತ್ತು ಮುಸ್ಲಿಂ ಗುರುತಿನ ನಡುವಿನ ಸಂಬಂಧವನ್ನು ಅತ್ಯಂತ ಸ್ಪಷ್ಟವಾಗಿ ಪ್ರತಿಪಾದಿಸಿದರು. ಅಲ್ಲಿನ

ಅವರ ಪ್ರಸಿದ್ಧ ಮಾತು ನಾನು ಭಾರತೀಯನಾಗಿರುವುದಕ್ಕೆ ಹೆಮ್ಮೆಪಡುತ್ತೇನೆ. ಭಾರತೀಯ ರಾಷ್ಟ್ರೀಯತೆಯ ಅವಿಭಾಜ್ಯ ಏಕತೆಯ

ಒಂದು ಭಾಗವಾಗಿದ್ದೇನೆ. ನಾನ್ನಿಲ್ಲದೆ ಭಾರತದ ಈ ಭವ್ಯ ನಿರ್ಮಾಣ ಅಪೂರ್ಣ. ಎಂದಾಗಿತ್ತು.

ಇದು ಕೇವಲ ರಾಜಕೀಯ ಹೇಳಿಕೆಯಲ್ಲ ಭಾರತೀಯ ಮುಸ್ಲಿಮರ ರಾಷ್ಟ್ರೀಯ ಅಸ್ತಿತ್ವದ ಕುರಿತು ಅವರು ಮಂಡಿಸಿದ ವೈಚಾರಿಕ ಘೋಷಣೆಯಾಗಿತ್ತು.

ಆಜಾದರ ಅವಧಿಯಲ್ಲಿ 1951ರಲ್ಲಿ ಐಐಟಿ ಖರಗ್‌ಪುರ ಸ್ಥಾಪನೆಯಾಯಿತು. 1950ರಲ್ಲಿ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ICCR) ಸ್ಥಾಪನೆಯಾಯಿತು. 1953ರಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗದ (UGC) ಉದ್ಘಾಟನೆ ನಡೆಯಿತು. 1953ರಲ್ಲಿ ಸಂಗೀತ ನಾಟಕ ಅಕಾಡೆಮಿ ಹಾಗೂ 1954ರಲ್ಲಿ ಸಾಹಿತ್ಯ ಅಕಾಡೆಮಿ ಮತ್ತು ಲಲಿತ ಕಲಾ ಅಕಾಡೆಮಿಗಳ ಸ್ಥಾಪನೆಗೂ ಅವರ ಶಿಕ್ಷಣ ಮತ್ತು ಸಾಂಸ್ಕೃತಿಕ ದೃಷ್ಟಿಕೋನ ಮಹತ್ವದ ಕೊಡುಗೆ ನೀಡಿತು.

ಇವು ಕೇವಲ ಶಿಕ್ಷಣ ಸಂಸ್ಥೆಗಳ ಸ್ಥಾಪನೆಯಲ್ಲದೆ ಜ್ಞಾನ, ಸಂಶೋಧನೆ, ಕಲೆ ಮತ್ತು ಸಂಸ್ಕೃತಿಯನ್ನು ರಾಷ್ಟ್ರ ನಿರ್ಮಾಣದ ಅವಿಭಾಜ್ಯ ಭಾಗವನ್ನಾಗಿ ರೂಪಿಸಿದ ಪ್ರಯತ್ನಗಳಾಗಿದ್ದವು. ಈ ಕಾರಣಗಳಿಗಾಗಿಯೆ

ಅವರ ಜನ್ಮದಿನ ನವೆಂಬರ್ 11ರನ್ನು ಭಾರತದಲ್ಲಿ ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತಿದೆ.

ಆಜಾದ್ ರವರ ಧಾರ್ಮಿಕ ಸಾಮರಸ್ಯದ ಕುರಿತ ಚಿಂತನೆಗಳಾದ ' ಧಾರ್ಮಿಕ ಗುರುತುಗಳು ಬೇರೆಬೇರೆಯಾಗಿದ್ದರೂ ಮಾನವೀಯತೆ ಮತ್ತು ಸಹಬಾಳ್ವೆ ಜನರನ್ನು ಒಂದುಗೂಡಿಸಬೇಕು' ಎಂಬುದು ಇಂದಿಗೂ ಆದರ್ಶಪ್ರಾಯ.

ಶಿಕ್ಷಣದ ಕುರಿತ

ಅವರ ದೃಷ್ಟಿಕೋನದ ಕೇಂದ್ರ ಆಶಯ ' ಶಿಕ್ಷಣವು ಪ್ರತಿಯೊಬ್ಬ ಮಗುವಿನ ಹಕ್ಕಾಗಿರಬೇಕು, ಅದು ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳನ್ನು ಕಡಿಮೆ ಮಾಡುವ ಶಕ್ತಿಯಾಗಬೇಕು'. ಎಂಬುದು ಇಂದಿಗೂ ನಮ್ಮ ರಾಷ್ಟ್ರ ಹಾಗು ರಾಜ್ಯ ಶಿಕ್ಷಣ ನೀತಿ ಯಾಗಿದೆ.

ಆಜಾದ್ ಅವರು ಕೇವಲ ರಾಜಕಾರಣಿಯಾಗಿರಲಿಲ್ಲ. ಉರ್ದು ಸಾಹಿತ್ಯ ಮತ್ತು ಧಾರ್ಮಿಕ ತತ್ವಚಿಂತನೆಯಲ್ಲಿಯೂ ವಿಶಿಷ್ಟ ಸ್ಥಾನ ಪಡೆದ ಲೇಖಕರಾಗಿದ್ದರು. ಅವರ ಕೃತಿಗಳು ಅವರ ವೈಚಾರಿಕತೆಯ ಆಳ, ಭಾಷಾ ಪಾಂಡಿತ್ಯ ಮತ್ತು ವಿಶ್ಲೇಷಣಾತ್ಮಕ ಸಾಮರ್ಥ್ಯವನ್ನು ಪರಿಚಯಿಸುತ್ತವೆ.

ಆಜಾದ್ ರವರ ವೈಚಾರಿಕತೆಯ ಪಾಂಡಿತ್ಯವನ್ನು ನೋಡುವುದಾದರೆ, ಇವರ ಕೃತಿ India Wins Freedom

ಭಾರತದ ಸ್ವಾತಂತ್ರ್ಯ ಹೋರಾಟ, ಕಾಂಗ್ರೆಸ್ ರಾಜಕೀಯ, ಕ್ಯಾಬಿನೆಟ್ ಮಿಷನ್, ದೇಶ ವಿಭಜನೆಯ ಮಾತುಕತೆಗಳು ಮತ್ತು ಪ್ರಮುಖ ನಾಯಕರ ಪಾತ್ರದ ಕುರಿತು ಅವರ ಅನುಭವಾಧಾರಿತ ಬರಹ. 1959ರಲ್ಲಿ ಮರಣೋತ್ತರವಾಗಿ ಪ್ರಕಟವಾಯಿತು.

ಹಾಗೆಯೆ, Ghubar-e-Khatir

ಅಹಮದ್‌ನಗರ ಕೋಟೆಯ ಸೆರೆವಾಸದ ಅವಧಿಯಲ್ಲಿ ಬರೆದ ಪತ್ರಗಳ ಸಂಕಲನ. ಸಂಗೀತ, ಪ್ರಕೃತಿ, ತತ್ವಶಾಸ್ತ್ರ, ಸಾಹಿತ್ಯ, ಜೀವನ ಮತ್ತು ಮಾನವೀಯ ಅನುಭವಗಳ ಕುರಿತು ಆಳವಾದ ಚಿಂತನೆಗಳನ್ನು ಒಳಗೊಂಡಿದೆ. Tarjuman-ul-Quran

ಕುರ್‌ಆನ್‌ನ ಉರ್ದು ಅನುವಾದ ಮತ್ತು ವ್ಯಾಖ್ಯಾನ. ಧರ್ಮ, ಮಾನವೀಯತೆ, ನೈತಿಕತೆ ಮತ್ತು ತತ್ವಚಿಂತನೆಯ ಕುರಿತು ಅವರ ಅಧ್ಯಯನದ ಪ್ರಮುಖ ಕೃತಿಯಾಗಿದೆ.

ಬಹುಮುಖ್ಯವಾಗಿ Tazkirah

ಆಜಾದರ ಆರಂಭಿಕ ಜೀವನ, ಕುಟುಂಬದ ಹಿನ್ನೆಲೆ, ಧಾರ್ಮಿಕ ಶಿಕ್ಷಣ ಮತ್ತು ಬೌದ್ಧಿಕ ಬೆಳವಣಿಗೆಯ ಕುರಿತು ತಿಳಿಸುವ ಕೃತಿ ರಚಿಸಿದರು.

ಆ ನಂತರ Khutbat-e-Azad ಇದು

ಅವರ ಪ್ರಮುಖ ಭಾಷಣಗಳು, ಸಾರ್ವಜನಿಕ ವಿಚಾರಗಳು ಮತ್ತು ವೈಚಾರಿಕ ನಿಲುವುಗಳನ್ನು ಪರಿಚಯಿಸುವ ಸಂಕಲನವಾಗಿದೆ. ಇದಲ್ಲದೆ 'Al-Hilal', 'Al-Balagh' ಈ ಪುಸ್ತಕ ಇವರ ಪತ್ರಿಕೆಗಳ ಸಂಪಾದಕೀಯ ಬರಹಗಳು, 'Qaul-e-Faisal', 'Hijr-o-Visal' ಮತ್ತು 'Hamari Azadi' ಮುಂತಾದ ಕೃತಿಗಳೂ ಅವರ ಸಾಹಿತ್ಯಿಕ ಮತ್ತು ರಾಜಕೀಯ ಚಿಂತನೆಯ ಭಾಗವಾಗಿವೆ. ಇವು ಕೃತಿ ರೂಪದಲ್ಲಿ ಪ್ರಕಟಗೊಂಡಿದೆ.

ಈ ಮೂಲಕ ಆಜಾದ್ ರವರು ಒಂದು ಧರ್ಮದ ವ್ಯಕ್ತಿಯಾಗಿದ್ದುಕೊಂಡೇ ಎಲ್ಲ ಧರ್ಮಗಳ ಜನರ ರಾಷ್ಟ್ರನಾಯಕನಾಗಬಹುದು ಎಂಬುದನ್ನು ತಮ್ಮ ಬದುಕಿನ ಮೂಲಕ ಸಾಬೀತುಪಡಿಸಿದರು.

ಒಂದು ಸಮುದಾಯದ ನಾಯಕನಾಗಿ ಇತಿಹಾಸದಲ್ಲಿ ಉಳಿಯುವುದಕ್ಕಿಂತ, ಇಡೀ ದೇಶದ ವೈಚಾರಿಕ ಆಸ್ತಿಯಾಗಿ ಉಳಿಯುವುದು ದೊಡ್ಡ ಸಾಧನೆ.

ಮೌಲಾನಾ ಅಬುಲ್ ಕಲಾಂ ಆಜಾದ್ ಇದು ಅಪರೂಪದ ರಾಷ್ಟ್ರೀಯ ವ್ಯಕ್ತಿತ್ವ.

ಅವರ ಹೆಸರು ಆಜಾದ್. ಅವರ ಕನಸು ಸ್ವತಂತ್ರ ಭಾರತ. ಅವರ ಹೋರಾಟ ರಾಷ್ಟ್ರೀಯ ಏಕತೆ. ಅವರ ನಂಬಿಕೆ ಶಿಕ್ಷಣ. ಅವರ ವೈಚಾರಿಕ ಪರಂಪರೆ ಜಾತ್ಯತೀತ ಪ್ರಜಾಪ್ರಭುತ್ವ!

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande