
ಧಾರವಾಡ, 10 ನವೆಂಬರ್ (ಹಿ.ಸ.):
ಮಕ್ಕಳು ಮತ್ತು ಯುವಜನರಲ್ಲಿರುವ ಕಲಾ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಹಾಗೂ ಅವರ ಕಲಾ ನೈಪುಣ್ಯವನ್ನು ವೃದ್ಧಿಸುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಲಾಪ್ರತಿಭೋತ್ಸವ ಕಾರ್ಯಕ್ರಮ ಆಯೋಜಿಸಿದೆ. ಈ ಹಿನ್ನೆಲೆಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಮೂರು ವಿಭಾಗಗಳಲ್ಲಿ ಸ್ಪರ್ಧೆ
ಸ್ಪರ್ಧೆಗಳನ್ನು ಬಾಲ ಪ್ರತಿಭೆ, ಕಿಶೋರ ಪ್ರತಿಭೆ ಹಾಗೂ ಯುವ ಪ್ರತಿಭೆ ಎಂಬ ಮೂರು ವಿಭಾಗಗಳಲ್ಲಿ ಆಯೋಜಿಸಲಾಗುತ್ತದೆ.
* ಬಾಲ ಪ್ರತಿಭೆ: 8 ವರ್ಷ ಪೂರ್ಣಗೊಂಡು 14 ವರ್ಷಕ್ಕಿಂತ ಕಡಿಮೆ ವಯಸ್ಸಿನವರು.
* ಕಿಶೋರ ಪ್ರತಿಭೆ: 14 ವರ್ಷ ಪೂರ್ಣಗೊಂಡು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು.
* ಯುವ ಪ್ರತಿಭೆ: 18 ವರ್ಷ ಪೂರ್ಣಗೊಂಡು 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರು.
ವಯಸ್ಸಿನ ದೃಢೀಕರಣಕ್ಕಾಗಿ ಬಾಲ ಮತ್ತು ಕಿಶೋರ ಪ್ರತಿಭೆಗಳು ಶಾಲೆಯಿಂದ ಪಡೆದ ವಯಸ್ಸಿನ ಪ್ರಮಾಣಪತ್ರ ಸಲ್ಲಿಸಬೇಕು. ಯುವ ಪ್ರತಿಭೆಗಳು ಕಾಲೇಜಿನಿಂದ ಪಡೆದ ಪ್ರಮಾಣಪತ್ರ ಸಲ್ಲಿಸಬೇಕು. ಶಾಲೆ ಅಥವಾ ಕಾಲೇಜಿಗೆ ತೆರಳದ ಖಾಸಗಿ ಅಭ್ಯರ್ಥಿಗಳು ಪಂಚಾಯಿತಿ, ನಗರಸಭೆ, ಪುರಸಭೆ ಅಥವಾ ಮಹಾನಗರ ಪಾಲಿಕೆಯಿಂದ ಪಡೆದ ಜನನ ಪ್ರಮಾಣಪತ್ರ ಸಲ್ಲಿಸಬೇಕು.
ಏಕವ್ಯಕ್ತಿ ಸ್ಪರ್ಧೆಗಳ ವಿವರ
ಬಾಲ ಮತ್ತು ಕಿಶೋರ ಪ್ರತಿಭೆಗಳ ವಿಭಾಗದಲ್ಲಿ ಶಾಸ್ತ್ರೀಯ ನೃತ್ಯ (10 ನಿಮಿಷ), ಸುಗಮ ಸಂಗೀತ (7 ನಿಮಿಷ), ಚಿತ್ರಕಲೆ (120 ನಿಮಿಷ), ಜಾನಪದ ಗೀತೆ (7 ನಿಮಿಷ), ಹಿಂದೂಸ್ತಾನಿ ಅಥವಾ ಕರ್ನಾಟಕ ವಾದ್ಯ ಸಂಗೀತ (7 ನಿಮಿಷ) ಹಾಗೂ ಹಿಂದೂಸ್ತಾನಿ ಅಥವಾ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ (7 ನಿಮಿಷ) ಸ್ಪರ್ಧೆಗಳು ನಡೆಯಲಿವೆ.
ಯುವ ಪ್ರತಿಭೆಗಳ ವಿಭಾಗದಲ್ಲಿ ಆಶುಭಾಷಣ (7 ನಿಮಿಷ), ಶಾಸ್ತ್ರೀಯ ನೃತ್ಯ (10 ನಿಮಿಷ), ಸುಗಮ ಸಂಗೀತ (7 ನಿಮಿಷ), ಹಿಂದೂಸ್ತಾನಿ ಅಥವಾ ಕರ್ನಾಟಕ ಶಾಸ್ತ್ರೀಯ ಸಂಗೀತ (7 ನಿಮಿಷ), ಚಿತ್ರಕಲೆ (120 ನಿಮಿಷ), ಹಿಂದೂಸ್ತಾನಿ ಅಥವಾ ಕರ್ನಾಟಕ ವಾದ್ಯ ಸಂಗೀತ (7 ನಿಮಿಷ) ಹಾಗೂ ಜಾನಪದ ಗೀತೆ (7 ನಿಮಿಷ) ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.
ಸಮೂಹ ಸ್ಪರ್ಧೆಗಳಿಗೂ ಅವಕಾಶ
ಯುವ ಪ್ರತಿಭೆಗಳ ವಿಭಾಗದಲ್ಲಿ ನಾಟಕ ಮತ್ತು ಜಾನಪದ ನೃತ್ಯ ಸಮೂಹ ಸ್ಪರ್ಧೆಗಳು ನಡೆಯಲಿವೆ. ನಾಟಕಕ್ಕೆ 45 ನಿಮಿಷ ಹಾಗೂ ಜಾನಪದ ನೃತ್ಯಕ್ಕೆ 10 ನಿಮಿಷ ಕಾಲಾವಕಾಶ ನಿಗದಿಪಡಿಸಲಾಗಿದೆ. ಪ್ರತಿ ತಂಡದಲ್ಲಿ ಕನಿಷ್ಠ 10 ಹಾಗೂ ಗರಿಷ್ಠ 15 ಸದಸ್ಯರು ಇರಬೇಕು.
ಬಹುಮಾನ ಮತ್ತು ಪ್ರಮಾಣಪತ್ರ
ಜಿಲ್ಲಾ ಮಟ್ಟದ ಬಾಲ, ಕಿಶೋರ ಹಾಗೂ ಯುವ ಪ್ರತಿಭೆಗಳ ಎಲ್ಲ ಸ್ಪರ್ಧಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುತ್ತದೆ. ಜಿಲ್ಲಾ ಮತ್ತು ಬೆಳಗಾವಿ ವಲಯ ಮಟ್ಟದ ಸ್ಪರ್ಧೆಗಳಲ್ಲಿ ನಗದು ಬಹುಮಾನ ಇರುವುದಿಲ್ಲ. ರಾಜ್ಯಮಟ್ಟದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆಯುವವರಿಗೆ ನಗದು ಬಹುಮಾನ ಮತ್ತು ಪ್ರಮಾಣಪತ್ರ ನೀಡಲಾಗುತ್ತದೆ.
ಬೆಳಗಾವಿ ವಲಯ ಹಾಗೂ ರಾಜ್ಯಮಟ್ಟದ ಸ್ಪರ್ಧೆಗಳಿಗೆ ಆಗಮಿಸುವ ನಾಟಕ ನಿರ್ದೇಶಕರು, ಪಕ್ಕವಾದ್ಯಗಾರರು ಮತ್ತು ಸಹಕಲಾವಿದರಿಗೆ ವಾಸ್ತವಿಕ ಪ್ರಯಾಣ ವೆಚ್ಚದ ಜತೆಗೆ ಊಟ, ವಸತಿ ಹಾಗೂ ಪ್ರಮಾಣಪತ್ರದ ವ್ಯವಸ್ಥೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ
ಆಸಕ್ತ ಕಲಾವಿದರು ಅಗತ್ಯ ದಾಖಲೆಗಳೊಂದಿಗೆ ತಮ್ಮ ಸ್ವವಿವರ ಅರ್ಜಿಗಳನ್ನು ನವೆಂಬರ್ 21, 2026ರೊಳಗೆ ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸುವರ್ಣ ಸಾಂಸ್ಕೃತಿಕ ಸಮುಚ್ಚಯ, ಕಾಲೇಜು ರಸ್ತೆ, ಧಾರವಾಡ-580001 ವಿಳಾಸಕ್ಕೆ ಅಂಚೆ ಮೂಲಕ ಅಥವಾ ಖುದ್ದಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ 0836-2442909 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.