ಕೋಲಾರ ತಾಲ್ಲೂಕಿನ ಚಿಟ್ನಹಳ್ಳಿ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಗೋ ಪೂಜೆ
ಕೋಲಾರ ತಾಲ್ಲೂಕಿನ ಚಿಟ್ನಹಳ್ಳಿ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಗೋ ಪೂಜೆ
ಕೋಲಾರ ತಾಲ್ಲೂಕಿನ ಚಿಟ್ನಹಳ್ಳಿ ಗ್ರಾಮದ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ದೀಪಾವಳಿ ಬಲಿಪಾಢ್ಯಮಿ ಪ್ರಯುಕ್ತ ಗೋಪೂಜಾ ಕಾರ್ಯಕ್ರಮ ನಡೆಯಿತು.


ಕೋಲಾರ,10 ನವೆಂಬರ್ (ಹಿ.ಸ.)

ತಾಲ್ಲೂಕಿನ ಚಿಟ್ನಹಳ್ಳಿ ಗ್ರಾಮದ ಶ್ರೀ ರುಕ್ಮಣಿ ಸತ್ಯಭಾಮ ಸಮೇತ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ದೀಪಾವಳಿ ಬಲಿಪಾಢ್ಯಮಿ ಪ್ರಯುಕ್ತ ಗೋಪೂಜಾ ಹಾಗೂ ದೀಪಾರಾಧನ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು.

ಬಲಿಪಾಡ್ಯಮಿ ಪ್ರಯುಕ್ತ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ಗೋ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬಲಿ ಚಕ್ರವರ್ತಿ ತನ್ನ ಪ್ರಜೆಗಳ ಕಷ್ಟಸುಖಗಳನ್ನು ಗಮನಿಸಲು ಭೂಮಿಗೆ ಬರುತ್ತಾನೆಂಬ ನಂಬಿಕೆಯಿ0ದ ಈ ದಿನವನ್ನು ರೈತ ಕುಟುಂಬಗಳು ಅತ್ಯಂತ ಶ್ರದ್ದೆಯಿಂದ ಆಚರಿಸುತ್ತಾರೆ. ಬಲಿಪಾಡ್ಯಮಿ ದಿನದಂದು ಮನೆಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ರೈತರು ತಮ್ಮ ಕೃಷಿ ಉಪಕರಣಗಳು, ದನಕರುಗಳು ಹಾಗೂ ಭೂಮಿಯನ್ನು ಪೂಜಿಸಿ ಕೃಷಿ ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ. ವ್ಯಾಪಾರಿಗಳು ಹೊಸ ಲೆಕ್ಕಪತ್ರಗಳನ್ನು ಆರಂಭಿಸುವ ಸಂಪ್ರದಾಯವೂ ಇದೆ.

ಬಲಿಪಾಡ್ಯಮಿ ಹಬ್ಬದ ಮಹತ್ವ ಧರ್ಮ, ದಾನ ಮತ್ತು ಸಮೃದ್ಧಿಯ ಸಂಕೇತವಾಗಿದ್ದು, ಅಂದು ಗೋಪೂಜೆ ಮಾಡುವುದರಿಂದ ಗೋವಿನಲ್ಲಿರುವ ಮುಕ್ಕೋಟಿ ದೇವತೆಗಳ ಆಶೀರ್ವಾದವೂ ದೊರೆಯುತ್ತದೆ ಎಂಬ ನಂಬಿಕೆ ಇದೆ ಈ ಹಿನ್ನಲೆಯಲ್ಲಿ ಗೋಪೂಜೆಗೆ ಮಹತ್ವವಿದೆ ಎಂದು ಅರ್ಚಕರಾದ ಶ್ರೀನಿವಾಸಾಚಾರ್ಯ ತಿಳಿಸಿದರು.

ದೀಪಾವಳಿ ಹಬ್ಬದ ನಂತರ ಆಚರಿಸುವ ಬಲಿಪಾಡ್ಯಮಿ ಹಿಂದೂ ಧಾರ್ಮಿಕ ಪರಂಪರೆಯಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಈ ದಿನವನ್ನು ಬಲಿ ಪಾಢ್ಯಮಿ ಅಥವಾ ಬಲಿ ಪ್ರತಿಪದೆ ಎಂದೂ ಕರೆಯಲಾಗುತ್ತದೆ. ಮಹಾವಿಷ್ಣುವಿನ ವಾಮನ ಅವತಾರ ಹಾಗೂ ದಾನಶೂರ ಚಕ್ರವರ್ತಿ ಬಲಿಯ ಕಥೆಯೊಂದಿಗೆ ಈ ಹಬ್ಬವು ನಿಕಟ ಸಂಬAಧ ಹೊಂದಿದೆ.

ಪುರಾಣಗಳ ಪ್ರಕಾರ, ಮಹಾದಾನಿಯಾಗಿದ್ದ ಬಲಿ ಚಕ್ರವರ್ತಿ ತನ್ನ ದಾನಧರ್ಮ ಮತ್ತು ಪ್ರಜಾಪಾಲನೆಯಿಂದ ಪ್ರಸಿದ್ಧನಾಗಿದ್ದನು. ಆತನ ಅಹಂಕಾರವನ್ನು ಕಡಿಮೆ ಮಾಡಲು ಮಹಾವಿಷ್ಣು ವಾಮನ ಅವತಾರದಲ್ಲಿ ಬಂದು ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಕೇಳುತ್ತಾನೆ. ಬಲಿ ಚಕ್ರವರ್ತಿ ಒಪ್ಪಿಗೆ ನೀಡಿದಾಗ ವಾಮನನು ವಿಶ್ವರೂಪ ತಾಳಿ ಎರಡು ಹೆಜ್ಜೆಗಳಲ್ಲಿ ಭೂಮಿ ಮತ್ತು ಆಕಾಶವನ್ನು ಅಳೆಯುತ್ತಾನೆ. ಮೂರನೇ ಹೆಜ್ಜೆಯನ್ನು ಇಡಲು ತನ್ನ ತಲೆಯನ್ನೇ ಅರ್ಪಿಸಿದ ಬಲಿಯ ಭಕ್ತಿಗೆ ಮೆಚ್ಚಿದ ವಿಷ್ಣು ಆತನಿಗೆ ಪಾತಾಳ ಲೋಕದ ಅಧಿಪತ್ಯವನ್ನು ನೀಡುತ್ತಾನೆ ಎಂಬುದು ಪೌರಾಣಿಕ ನಂಬಿಕೆ.

ಈ ಹಬ್ಬವು ದಾನ, ಧರ್ಮ, ವಿನಯ, ಭಕ್ತಿ ಮತ್ತು ಪ್ರಜಾಹಿತದ ಮಹತ್ವವನ್ನು ಸಾರುತ್ತದೆ. ಅಹಂಕಾರವನ್ನು ತೊರೆದು ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಸಂದೇಶವನ್ನು ಬಲಿಪಾಡ್ಯಮಿ ಸಮಾಜಕ್ಕೆ ನೀಡುತ್ತದೆ.

ಪೂಜೆಯಲ್ಲಿ ಗ್ರಾಮದ ಮುಖಂಡರಾದ ಸಿಎಲ್.ಪುರುಷೋತ್ತಮ್, ಸಿ.ಎನ್.ಮುನಿಯಪ್ಪ, ಸಿ.ಬಿ.ನಾರಾಯಣಸ್ವಾಮಿ, ಸಿ.ಬಿ.ಆನಂದ್, ಶಿರಡಿ ಸಾಯಿಬಾಬಾ ದೇವಾಲಯದ ಧರ್ಮದರ್ಶಿ ವೆಂಕಟೇಶ್, ಸಿ.ಹೆಚ್.ಶ್ರೀನಿವಾಸಪ್ಪ, ಸಿ.ಬಿ.ಬೈರಪ್ಪ, ಸಿ.ವಿ.ತಮ್ಮೇಗೌಡ, ಪ್ರಧಾನ ಅರ್ಚಕ ಪಿ.ಶ್ರೀನಿವಾಸಾಚಾರ್ಯ, ಮತ್ತು ವಾಸ್ತುಪರಿಶೋಧಕರಾದ ತೊಟ್ಲಿ ಟಿ.ಎಸ್.ರಂಗಯ್ಯಚಾರ್ಯ, ಮುನಿತಾಯಮ್ಮ ಹಾಗೂ ಗ್ರಾಮಸ್ಥರು ಹಾಜರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande