
ಕಲಬುರಗಿ, 01 ನವೆಂಬರ್ (ಹಿ.ಸ.):
ಕನ್ನಡ ರಾಜ್ಯೋತ್ಸವದ ಸಂಭ್ರಮದ ನಡುವೆಯೇ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಘೋಷಿಸಬೇಕೆಂಬ ಕೂಗು ಮತ್ತೆ ಮೊಳಗಿದೆ.
ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಮುಂದಿಟ್ಟುಕೊಂಡು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಪ್ರತ್ಯೇಕ ಧ್ವಜಾರೋಹಣಕ್ಕೆ ಯತ್ನಿಸಿದ್ದಾರೆ.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಮುಖಂಡ ಎಂ.ಎಸ್. ಪಾಟೀಲ್ ನರಿಬೋಳ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ಪ್ರತ್ಯೇಕ ರಾಜ್ಯದ ಪರವಾಗಿ ಘೋಷಣೆಗಳನ್ನು ಕೂಗಿದ ಹೋರಾಟಗಾರರು, ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ರಾಜ್ಯದ ಮಾನ್ಯತೆ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನಾಕಾರರು ಪ್ರತ್ಯೇಕ ಧ್ವಜಾರೋಹಣಕ್ಕೆ ಮುಂದಾದ ಹಿನ್ನೆಲೆಯಲ್ಲಿ 10ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸರ್ಕಾರದ ವಿರುದ್ಧ ಆಕ್ರೋಶ
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ. ಸಂವಿಧಾನದ 371(ಜೆ) ಕಲಂ ಅಡಿಯಲ್ಲಿ ವಿಶೇಷ ಸ್ಥಾನಮಾನ ದೊರೆತಿದ್ದರೂ, ಈ ಭಾಗದಲ್ಲಿ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ, ಉದ್ಯೋಗ, ಆರೋಗ್ಯ, ಮೂಲಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಲ್ಯಾಣ ಕರ್ನಾಟಕ ಇನ್ನೂ ಹಿಂದುಳಿದಿದೆ. ವಿಶೇಷ ಸ್ಥಾನಮಾನದ ಸೌಲಭ್ಯಗಳು ಸಮರ್ಪಕವಾಗಿ ಜನರಿಗೆ ತಲುಪುತ್ತಿಲ್ಲ. ಹೀಗಾಗಿ ಈ ಭಾಗದ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ರಾಜ್ಯ ರಚನೆ ಅಗತ್ಯವಾಗಿದೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R