
ಗದಗ, 07 ಅಕ್ಟೋಬರ್ (ಹಿ.ಸ.):
ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ವಾಗ್ದಾಳಿ ನಡೆಸಿದ್ದು, ರಾಜ್ಯದಲ್ಲಿ ಭ್ರಷ್ಟಾಚಾರ, ಬರ ನಿರ್ವಹಣೆ ಹಾಗೂ ಆರ್ಥಿಕ ಪರಿಸ್ಥಿತಿ ಕುರಿತು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇಂದು ಗದಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಇದ್ದರೂ ಸರ್ಕಾರ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ರೈತರಿಗೆ ಏಳು ಗಂಟೆ ವಿದ್ಯುತ್ ನೀಡುವುದಾಗಿ ಹೇಳಿದ್ದರೂ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಮಳೆ ಕೊರತೆ ಎದುರಾಗುವ ಮುನ್ಸೂಚನೆ ಇದ್ದರೂ ಹೊರರಾಜ್ಯಗಳಿಂದ ಮುಂಚಿತವಾಗಿ ವಿದ್ಯುತ್ ಖರೀದಿಸುವ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.
ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಗದಗ ನಗರದಲ್ಲಿ 20 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ ಎಂದು ಆರೋಪಿಸಿದ ವಿಜಯೇಂದ್ರ, ಹಿರಿಯ ನಾಯಕ ಹಾಗೂ ಸಚಿವ ಎಚ್.ಕೆ. ಪಾಟೀಲ್ ಅವರು ಜಿಲ್ಲೆಯ ಜನತೆಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ಬರಗಾಲದಲ್ಲಿ ರೈತರಿಗೆ ₹2,500 ನೆರವು ನೀಡುವುದಾಗಿ ಘೋಷಿಸಿ, ಇದುವರೆಗೆ ಹಣ ನೀಡಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ಕಳೆದ ಮೂರ್ನಾಲ್ಕು ತಿಂಗಳಿಂದ ರಸ್ತೆ ಗುಂಡಿಗಳನ್ನು ಮುಚ್ಚಿಲ್ಲ. ರಾಜ್ಯದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ಆರೋಪಿಸಿದರು.
‘ಸಿಎಂ ರಿಯಲ್ ಎಸ್ಟೇಟ್ ದಂಧೆಯಲ್ಲಿ ಮುಳುಗಿದ್ದಾರೆ’
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ವಿಜಯೇಂದ್ರ ವಾಗ್ದಾಳಿ ನಡೆಸಿದರು. ಮುಖ್ಯಮಂತ್ರಿ ಸ್ಥಾನದಲ್ಲಿರುವುದನ್ನು ಮರೆತು ರಿಯಲ್ ಎಸ್ಟೇಟ್ ದಂಧೆಯಲ್ಲಿ ಮುಳುಗಿದ್ದಾರೆ ಎಂದು ಆರೋಪಿಸಿದ ಅವರು, ಬರಗಾಲದ ಸಂದರ್ಭದಲ್ಲಿ ದೆಹಲಿ ಹಾಗೂ ಬೆಂಗಳೂರಿನ ಎಸಿ ಕೊಠಡಿಗಳಲ್ಲಿ ಕುಳಿತು ಆಡಳಿತ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.
ಮಂಗಳೂರಿನಲ್ಲಿ ₹32 ಸಾವಿರ ಕೋಟಿ ಅಭಿವೃದ್ಧಿ ಯೋಜನೆಗಳನ್ನು ಘೋಷಿಸಲಾಗಿದೆ. ಆದರೆ ಹೊಸ ಘೋಷಣೆಗಳನ್ನು ಮಾಡದಂತೆ ಆರ್ಥಿಕ ಇಲಾಖೆ ಅಧಿಕಾರಿಗಳೇ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ ಎಂದು ವಿಜಯೇಂದ್ರ ಹೇಳಿದರು. ಸರ್ಕಾರಿ ನೌಕರರಿಗೆ ಹಾಗೂ ಸಾರಿಗೆ ಸಿಬ್ಬಂದಿಗೆ ಸಮರ್ಪಕವಾಗಿ ವೇತನ ನೀಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದ್ದು, ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಆರೋಪಿಸಿದರು.
‘ಸ್ಟಿಂಗ್ ಆಪರೇಷನ್ ಚರಿತ್ರೆ ಕಾಂಗ್ರೆಸ್ನವರಿಗೆ ಗೊತ್ತಿದೆ’
ಸಚಿವರ ನಿದ್ದೆಗೆಡಿಸಿರುವ ರಹಸ್ಯ ಕಾರ್ಯಾಚರಣೆ ಹಾಗೂ ಸ್ಟಿಂಗ್ ಆಪರೇಷನ್ ವಿಚಾರವಾಗಿ ಮಾತನಾಡಿದ ವಿಜಯೇಂದ್ರ, ಸ್ಟಿಂಗ್ ಆಪರೇಷನ್ನ ಚರಿತ್ರೆ ಯಾರದ್ದು ಎಂಬುದು ಕಾಂಗ್ರೆಸ್ನವರಿಗೆ ಗೊತ್ತಿದೆ ಎಂದು ಹೇಳಿದರು. ಆಡಳಿತ ಪಕ್ಷದ ಶಾಸಕ ಎಚ್.ಕೆ. ಪಾಟೀಲ್ ಹಾಗೂ ಸಚಿವರನ್ನು ಕೇಳಿದರೆ ಈ ವಿಚಾರದ ಬಗ್ಗೆ ಅವರೇ ಉತ್ತರಿಸುತ್ತಾರೆ ಎಂದು ವ್ಯಂಗ್ಯವಾಡಿದರು.
ಕ್ಯಾಬಿನೆಟ್ ಸಚಿವರಿಗೆ ಲಂಚ ಪಡೆಯಬೇಕಾದರೆ ಮೊಬೈಲ್ ಹೊರಗಿಟ್ಟು, ಬಾಗಿಲು ಹಾಕಿಕೊಂಡು ಭ್ರಷ್ಟಾಚಾರ ಮಾಡಿ ಎಂಬ ರೀತಿಯಲ್ಲಿ ಎಚ್ಚರಿಕೆ ನೀಡಲಾಗಿದೆ ಎಂದು ಆರೋಪಿಸಿದ ಅವರು, ರಹಸ್ಯ ಕಾರ್ಯಾಚರಣೆ ನಡೆಸುತ್ತಿರುವ ಏಜೆನ್ಸಿಗಳನ್ನು ಸಾಕುತ್ತಿರುವವರು ಯಾರು ಎಂಬುದನ್ನು ಮುಖ್ಯಮಂತ್ರಿ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
‘ಪ್ರಭಾವಿ ನಾಯಕನಿಂದ ರಿಯಲ್ ಎಸ್ಟೇಟ್ ಉದ್ಯಮಿಗೆ ಡೀಲ್’
ಸರ್ಕಾರದ ದೊಡ್ಡ ಸ್ಥಾನದಲ್ಲಿರುವ ಪ್ರಭಾವಿ ನಾಯಕರು ಕೆಲ ದಿನಗಳ ಹಿಂದೆ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಕರೆಸಿಕೊಂಡು, ಮೊಬೈಲ್ ಸ್ವಿಚ್ ಆಫ್ ಮಾಡಿಸಿ ಒಳಗೆ ಕೂರಿಸಿಕೊಂಡು ಹಣದ ಬೇಡಿಕೆ ಇಟ್ಟಿದ್ದಾರೆ ಎಂದು ವಿಜಯೇಂದ್ರ ಗಂಭೀರ ಆರೋಪ ಮಾಡಿದರು.
ಈ ಹಿಂದೆ ₹75 ನೀಡುತ್ತಿದ್ದೀರಿ, ಇದೀಗ ₹150 ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಅಷ್ಟು ಹಣ ನೀಡಲು ಸಾಧ್ಯವಿಲ್ಲ ಎಂದು ಉದ್ಯಮಿ ಹೇಳಿದಾಗ, ರಾಜ್ಯ ಬಿಟ್ಟು ಹೋಗುವಂತೆ ಎಚ್ಚರಿಕೆ ನೀಡಿದ್ದಾರೆ ಎಂದು ಆರೋಪಿಸಿದರು. ಈ ಆರೋಪದ ಕುರಿತು ಮುಖ್ಯಮಂತ್ರಿ ಮೊದಲು ಬಾಯಿಬಿಟ್ಟು ಸ್ಪಷ್ಟನೆ ನೀಡಬೇಕು ಎಂದು ವಿಜಯೇಂದ್ರ ಒತ್ತಾಯಿಸಿದರು.
‘ಕಾಂಗ್ರೆಸ್ 138ರಿಂದ 38ಕ್ಕೆ ಇಳಿಯಬಹುದು’
ಪಂಚಪೀಠದ ಜಗದ್ಗುರುಗಳ ಸಮ್ಮುಖದಲ್ಲಿ ಮೂರು ಸಾವಿರ ಮಠವೋ, ಆರು ಸಾವಿರ ಮಠವೋ ಎಂಬ ವಿಚಾರವಾಗಿ ಅಪಹಾಸ್ಯ ಮಾಡಲಾಗಿದೆ ಎಂದು ವಿಜಯೇಂದ್ರ ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಡಳಿತ ವಿರೋಧಿ ಅಲೆ ಇದೆ. ಈಗಲೇ ಚುನಾವಣೆ ನಡೆದರೆ 138 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಪಕ್ಷ 38 ಸ್ಥಾನಗಳಿಗೆ ಕುಸಿಯುವ ಸಾಧ್ಯತೆಯಿದೆ ಎಂದು ವಿಜಯೇಂದ್ರ ಭವಿಷ್ಯ ನುಡಿದರು.
ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಜೀವನಕ್ಕೆ 25 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿರುವ ಸೇವಾ ಜ್ಯೋತಿ ಅಭಿಯಾನ ಯಶಸ್ವಿಯಾಗಿ ನಡೆದಿದೆ. ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು. 2047ರ ವೇಳೆಗೆ ವಿಕಸಿತ, ಸ್ವಾವಲಂಬಿ ಹಾಗೂ ಸಶಕ್ತ ಭಾರತ ನಿರ್ಮಾಣಕ್ಕಾಗಿ ಪ್ರತಿಯೊಬ್ಬ ಭಾರತೀಯರೂ ಸಂಕಲ್ಪದೊಂದಿಗೆ ಶ್ರಮಿಸಬೇಕು ಎಂದು ವಿಜಯೇಂದ್ರ ಕರೆ ನೀಡಿದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP