
ನವದೆಹಲಿ, 06 ಅಕ್ಟೋಬರ್ (ಹಿ.ಸ.):
ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಬೆಳಗ್ಗೆ ಎಂದಿನಂತೆ ಎಕ್ಸ್‌ನಲ್ಲಿ ಮಹತ್ವದ ಸುಭಾಷಿತವೊಂದನ್ನು ಹಂಚಿಕೊಂಡು, ಮನುಷ್ಯನನ್ನು ಶ್ರೇಷ್ಠನನ್ನಾಗಿ ಮಾಡುವ ಗುಣಗಳನ್ನು ವಿವರಿಸಿದ್ದಾರೆ.
ಪ್ರಧಾನಿ ಮೋದಿ ಅವರು ಸುಭಾಷಿತದ ರೂಪದಲ್ಲಿ, “ಜ್ಞಾನವಾಂಶ್ಚ ತಥಾ ವಾಗ್ಮೀ ಕರ್ಮಸ್ವಪಿ ಚ ನಿಷ್ಠಿತಃ। ಏವಂ ಯುಕ್ತೋಽಪಿ ನ ಶ್ರೇಯಾನ್ ಯದಿ ಶೀಲವಿವರ್ಜಿತಃ॥” ಎಂಬ ಶ್ಲೋಕವನ್ನು ಉಲ್ಲೇಖಿಸಿದ್ದಾರೆ.
ಈ ಶ್ಲೋಕವು ಪ್ರಾಚೀನ ‘ಸಮರಾಂಗಣಸೂತ್ರಧಾರ’ ಗ್ರಂಥದಿಂದ ಪಡೆಯಲಾಗಿದೆ. ವಾಸ್ತುಶಾಸ್ತ್ರ ಮತ್ತು ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಪ್ರಸಿದ್ಧ ಗ್ರಂಥವಾಗಿರುವ ಸಮರಾಂಗಣಸೂತ್ರಧಾರದಲ್ಲಿ ಮನುಷ್ಯನ ಗುಣಗಳು ಹಾಗೂ ಜೀವನ ಮೌಲ್ಯಗಳ ಬಗ್ಗೆಯೂ ವಿಚಾರಗಳನ್ನು ಕಾಣಬಹುದು.
ಪ್ರಧಾನಿ ಮೋದಿ ಅವರ ಎಕ್ಸ್ ಪೋಸ್ಟ್‌ನಲ್ಲಿ ಶ್ಲೋಕದ ಅರ್ಥವನ್ನು, ಜ್ಞಾನವಂತ, ವಾಗ್ಮಿ ಹಾಗೂ ಕಾರ್ಯಗಳಲ್ಲಿ ನಿಪುಣನಾಗಿದ್ದರೂ ಶೀಲ ಮತ್ತು ಸದಾಚಾರವನ್ನು ಹೊಂದಿರದ ವ್ಯಕ್ತಿ ನಿಜವಾಗಿಯೂ ಶ್ರೇಷ್ಠನೆನಿಸಿಕೊಳ್ಳುವುದಿಲ್ಲ. ಜ್ಞಾನ, ವಾಕ್‌ಚಾತುರ್ಯ ಮತ್ತು ಕಾರ್ಯನೈಪುಣ್ಯದ ಜೊತೆಗೆ ಶೀಲ ಹಾಗೂ ಸದಾಚಾರವನ್ನು ಹೊಂದಿರುವ ವ್ಯಕ್ತಿಯೇ ಜಗತ್ತಿನಲ್ಲಿ ನಿಜವಾದ ಶ್ರೇಷ್ಠನೆನಿಸಿಕೊಳ್ಳುತ್ತಾನೆ ಎಂದು ವಿವರಿಸಲಾಗಿದೆ.
ಸಂಸ್ಕೃತ ಭಾಷೆಯಲ್ಲಿ ರಚಿಸಲಾದ ‘ಸಮರಾಂಗಣಸೂತ್ರಧಾರ’ ಗ್ರಂಥವನ್ನು 11ನೇ ಶತಮಾನದಲ್ಲಿ ಧಾರದ ಪ್ರಸಿದ್ಧ ಪರಮಾರ ರಾಜ ಭೋಜದೇವ ರಚಿಸಿದ್ದಾರೆ. ಈ ಗ್ರಂಥದಲ್ಲಿ ಕಟ್ಟಡ ನಿರ್ಮಾಣ, ನಗರ ಯೋಜನೆ, ಕೋಟೆ ನಿರ್ಮಾಣ ಮತ್ತು ಶಿಲ್ಪಕಲೆ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿವರಿಸಲಾಗಿದೆ. ವಿವಿಧ ಬಗೆಯ ಯಂತ್ರಗಳು ಹಾಗೂ ವಿಮಾನಗಳ ನಿರ್ಮಾಣಕ್ಕೆ ಸಂಬಂಧಿಸಿದ ಸಿದ್ಧಾಂತಗಳನ್ನೂ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.