ವ್ಯಸನದ ಹೊಡೆತಕ್ಕೆ ಕುಟುಂಬ ಬಲಿಯಾಗದಂತೆ ತಡೆಯಬೇಕು: ಲಕ್ಷ್ಮೀ ಹೆಬ್ಬಾಳಕರ್
ಬೆಳಗಾವಿ, 05 ಅಕ್ಟೋಬರ್ (ಹಿ.ಸ.): ಪಾನವ್ಯಸನವು ಕೇವಲ ಒಬ್ಬ ವ್ಯಕ್ತಿಯ ಸಮಸ್ಯೆಯಲ್ಲ. ಅದರ ಪರಿಣಾಮ ಕುಟುಂಬದ ನೆಮ್ಮದಿ, ಆರ್ಥಿಕ ಸ್ಥಿತಿ, ಮಕ್ಕಳ ಶಿಕ್ಷಣ ಮತ್ತು ಭವಿಷ್ಯದ ಮೇಲೂ ಬೀಳುತ್ತದೆ. ಹೀಗಾಗಿ ವ್ಯಸನಮುಕ್ತ ಸಮಾಜ ನಿರ್ಮಾಣವು ವ್ಯಕ್ತಿಯನ್ನು ವ್ಯಸನದಿಂದ ಹೊರತರುವುದರ ಜತೆಗೆ ಕುಟುಂಬವನ್ನು ಉಳಿಸ
ಹೆಬ್ಬಾಳಕರ್


ಬೆಳಗಾವಿ, 05 ಅಕ್ಟೋಬರ್ (ಹಿ.ಸ.):

ಪಾನವ್ಯಸನವು ಕೇವಲ ಒಬ್ಬ ವ್ಯಕ್ತಿಯ ಸಮಸ್ಯೆಯಲ್ಲ. ಅದರ ಪರಿಣಾಮ ಕುಟುಂಬದ ನೆಮ್ಮದಿ, ಆರ್ಥಿಕ ಸ್ಥಿತಿ, ಮಕ್ಕಳ ಶಿಕ್ಷಣ ಮತ್ತು ಭವಿಷ್ಯದ ಮೇಲೂ ಬೀಳುತ್ತದೆ. ಹೀಗಾಗಿ ವ್ಯಸನಮುಕ್ತ ಸಮಾಜ ನಿರ್ಮಾಣವು ವ್ಯಕ್ತಿಯನ್ನು ವ್ಯಸನದಿಂದ ಹೊರತರುವುದರ ಜತೆಗೆ ಕುಟುಂಬವನ್ನು ಉಳಿಸುವ ಹಾಗೂ ಮುಂದಿನ ಪೀಳಿಗೆಯ ಭವಿಷ್ಯವನ್ನು ಕಾಪಾಡುವ ಸಾಮಾಜಿಕ ಹೊಣೆಗಾರಿಕೆಯಾಗಿದೆ ಎಂದು ಮಾಜಿ ಸಚಿವೆ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಹಲಗಾ ಗ್ರಾಮದ ಸುವರ್ಣ ಗಾರ್ಡನ್ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜನಾಭಿವೃದ್ಧಿ ವೇದಿಕೆ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಜನಜಾಗೃತಿ ಜಾಥಾ, ಗಾಂಧಿ ಸ್ಮೃತಿ ಹಾಗೂ ಪಾನಮುಕ್ತರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿ ಜಯಂತಿ ಸಂದರ್ಭದಲ್ಲಿ ವ್ಯಸನಮುಕ್ತಿಯ ಕುರಿತು ಜಾಗೃತಿ ಮೂಡಿಸುವುದು ಮತ್ತು ವ್ಯಸನದಿಂದ ಹೊರಬಂದು ಹೊಸ ಬದುಕು ಆರಂಭಿಸಿರುವವರನ್ನು ಗೌರವಿಸುವುದು ಕೇವಲ ಕಾರ್ಯಕ್ರಮವಲ್ಲ, ಸಾಮಾಜಿಕ ಸಂಕಲ್ಪವಾಗಿದೆ ಎಂದು ಹೇಳಿದರು.

ಪಾನವ್ಯಸನಕ್ಕೆ ವ್ಯಕ್ತಿಯೊಬ್ಬರು ಒಳಗಾದಾಗ ಅದರ ಮೊದಲ ಪರಿಣಾಮ ಕುಟುಂಬದ ಮೇಲಾಗುತ್ತದೆ. ಪತ್ನಿ ನೋವು ಅನುಭವಿಸುವುದರ ಜತೆಗೆ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತದೆ, ಕುಟುಂಬದ ಆರ್ಥಿಕ ಸ್ಥಿತಿ ಹದಗೆಡುತ್ತದೆ ಮತ್ತು ಮನೆಯ ನೆಮ್ಮದಿ ಕಳೆದುಹೋಗುತ್ತದೆ. ವ್ಯಸನವು ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರಬಹುದು. ಆದ್ದರಿಂದ ವ್ಯಸನಮುಕ್ತಿಯ ಹೋರಾಟವು ವ್ಯಕ್ತಿಯ ಬದುಕಿನ ಬದಲಾವಣೆಯಷ್ಟೇ ಅಲ್ಲದೆ ಕುಟುಂಬ ಹಾಗೂ ಸಮಾಜದ ಹಿತದ ಪ್ರಯತ್ನವಾಗಿದೆ ಎಂದರು.

ಪಾನಮುಕ್ತರಿಗೆ ಅಭಿನಂದನೆ

ವ್ಯಸನದಿಂದ ಹೊರಬಂದು ಹೊಸ ಬದುಕು ಆರಂಭಿಸಿರುವವರನ್ನು ಅಭಿನಂದಿಸಿದ ಲಕ್ಷ್ಮೀ ಹೆಬ್ಬಾಳಕರ್, ವ್ಯಸನ ತ್ಯಜಿಸಲು ಮನೋಬಲ, ಕುಟುಂಬದ ಬೆಂಬಲ ಮತ್ತು ಸಮಾಜದ ಪ್ರೋತ್ಸಾಹ ಅಗತ್ಯ. ಎಲ್ಲಕ್ಕಿಂತ ಮುಖ್ಯವಾಗಿ ‘ನಾನು ಬದಲಾಗಬೇಕು’ ಎಂಬ ದೃಢ ಸಂಕಲ್ಪ ಇರಬೇಕು. ಅಂತಹ ಸಂಕಲ್ಪ ತೋರಿಸಿರುವ ಪಾನಮುಕ್ತರು ಅಭಿನಂದನಾರ್ಹರು ಎಂದು ಹೇಳಿದರು.

ಅವರನ್ನು ಗೌರವಿಸುವುದು ವೈಯಕ್ತಿಕ ಸಾಧನೆಗಾಗಿ ಮಾತ್ರವಲ್ಲ. ಅವರು ತಮ್ಮ ಕುಟುಂಬವನ್ನು ಮತ್ತೆ ಸಂತೋಷದತ್ತ ಕರೆದೊಯ್ಯುತ್ತಿರುವುದು, ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸುತ್ತಿರುವುದು ಹಾಗೂ ತಮ್ಮ ಜೀವನದ ಮೇಲೆ ಮತ್ತೆ ನಿಯಂತ್ರಣ ಸಾಧಿಸಿರುವುದಕ್ಕಾಗಿ ಎಂದು ವಿವರಿಸಿದರು.

ಯುವಕರಲ್ಲಿ ಜಾಗೃತಿ ಅಗತ್ಯ

ವ್ಯಸನಕ್ಕೆ ಒಳಗಾದ ಬಳಿಕ ಚಿಕಿತ್ಸೆ ನೀಡುವುದಕ್ಕಿಂತ, ಯುವಕರು ವ್ಯಸನಕ್ಕೆ ಒಳಗಾಗದಂತೆ ಮುನ್ನೆಚ್ಚರಿಕೆ ಹಾಗೂ ಜಾಗೃತಿ ಮೂಡಿಸುವುದು ಮುಖ್ಯ. ಕುಟುಂಬಗಳು, ಶಿಕ್ಷಣ ಸಂಸ್ಥೆಗಳು, ಸಂಘ-ಸಂಸ್ಥೆಗಳು ಮತ್ತು ಸಮಾಜ ಈ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ವ್ಯಸನದಿಂದ ಹೊರಬರಲು ಪ್ರಯತ್ನಿಸುವವರನ್ನು ಸಮಾಜ ಹೀಯಾಳಿಸಬಾರದು. ಬದಲಾಗಿ ಅವರಿಗೆ ಬೆಂಬಲ ನೀಡಿ ಪ್ರೋತ್ಸಾಹಿಸಬೇಕು. ವ್ಯಸನಮುಕ್ತ ಸಮಾಜ ನಿರ್ಮಾಣವು ಸರ್ಕಾರದ ಇಲಾಖೆಗಳ ಜವಾಬ್ದಾರಿ ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕನ ಸಾಮಾಜಿಕ ಹೊಣೆಗಾರಿಕೆಯೂ ಆಗಿದೆ ಎಂದು ಹೇಳಿದರು.

ಗಾಂಧೀಜಿ ಕನಸು ಕಂಡ ಸ್ವಚ್ಛ, ಆರೋಗ್ಯವಂತ ಮತ್ತು ಸ್ವಾಭಿಮಾನಿ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಕಾರ್ಯಕ್ರಮದಲ್ಲಿ ತಾರಿಹಾಳ ಗ್ರಾಮದ ಪರಮಪೂಜ್ಯ ಶ್ರೀ ಅಡವೀಶ್ವರ ದೇವರು, ಡಾ. ಜಿ.ಆರ್. ಸೊನೇರ್, ನಟರಾಜ ಬಾದಾಮಿ, ದಯಾಶೀಲ್, ಡಾ. ಶ್ರೀಕಾಂತ್ ವಿ.ಎನ್., ಚಾರುಕೀರ್ತಿ ಸೈಬಣ್ಣವರ್, ಮಲ್ಲಿಕಾರ್ಜುನ ವಾಲಿ, ವಿಠ್ಠಲ ಪಿಶೆ, ಜಗದೀಶ್ ಹಾರೂಗೊಪ್ಪ, ಬಸವರಾಜ ಸೊಪ್ಪಿಮಠ್, ಸತೀಶ್ ನಾಯ್ಕ್, ಸುರೇಶ್ ಇಟಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande