
ಚೆನ್ನೈ, 04 ಅಕ್ಟೋಬರ್ (ಹಿ.ಸ.):
ಖ್ಯಾತ ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಸಿಂಗೀತಂ ಶ್ರೀನಿವಾಸರಾವ್ (94) ಅವರು ಶನಿವಾರ ರಾತ್ರಿ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಸಿನಿಮಾ ರಂಗಕ್ಕೆ ತಮ್ಮ ಬದುಕನ್ನೇ ಅರ್ಪಿಸಿಕೊಂಡಿದ್ದ ಸಿಂಗೀತಂ ಶ್ರೀನಿವಾಸರಾವ್ ಅವರು 90ರ ಇಳಿವಯಸ್ಸಿನಲ್ಲಿಯೂ ಚಿತ್ರ ನಿರ್ದೇಶನ ಮತ್ತು ನಿರ್ಮಾಣ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು.
ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ನೂರಾರು ಚಿತ್ರಗಳ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಅವರು ತಮ್ಮದೇ ಛಾಪು ಮೂಡಿಸಿದ್ದರು.
ಕನ್ನಡ ಚಿತ್ರರಂಗದಲ್ಲಿಯೂ ಸಿಂಗೀತಂ ಶ್ರೀನಿವಾಸರಾವ್ ಅವರ ಕೊಡುಗೆ ಗಮನಾರ್ಹವಾಗಿದೆ. ವರನಟ ಡಾ. ರಾಜ್ ಕುಮಾರ್ ಅಭಿನಯದ ‘ಹಾಲು ಜೇನು’, ‘ಚಲಿಸುವ ಮೋಡಗಳು’, ‘ಶ್ರಾವಣ ಬಂತು’ ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ಅವರು ನಿರ್ದೇಶಿಸಿದ್ದರು.
ಅದೇ ರೀತಿ ಕಮಲ್ ಹಾಸನ್ ಅಭಿನಯದ ಮಾತಿಲ್ಲದ ಚಿತ್ರ ‘ಪುಷ್ಪಕ ವಿಮಾನ’ ಕೂಡ ಸಿಂಗೀತಂ ಶ್ರೀನಿವಾಸರಾವ್ ಅವರ ನಿರ್ದೇಶನದಲ್ಲಿ ಮೂಡಿಬಂದ ಪ್ರಮುಖ ಚಿತ್ರವಾಗಿದೆ.
ವಿಭಿನ್ನ ಕಥಾಹಂದರ ಮತ್ತು ವಿಶಿಷ್ಟ ನಿರೂಪಣಾ ಶೈಲಿಯ ಮೂಲಕ ಭಾರತೀಯ ಚಿತ್ರರಂಗದಲ್ಲಿ ಅವರು ತಮ್ಮದೇ ಆದ ಸ್ಥಾನ ಗಳಿಸಿದ್ದರು.
ಸಿನಿಮಾ ರಂಗಕ್ಕೆ ತಮ್ಮ ಸುದೀರ್ಘ ಬದುಕನ್ನು ಅರ್ಪಿಸಿಕೊಂಡಿದ್ದ ಸಿಂಗೀತಂ ಶ್ರೀನಿವಾಸರಾವ್ ಅವರ ನಿಧನದಿಂದ ಭಾರತೀಯ ಚಿತ್ರರಂಗ ಒಬ್ಬ ಹಿರಿಯ ನಿರ್ದೇಶಕ ಹಾಗೂ ಸೃಜನಶೀಲ ಪ್ರತಿಭೆಯನ್ನು ಕಳೆದುಕೊಂಡಂತಾಗಿದೆ ಎಂದು ಕಲಾಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R