
ನವದೆಹಲಿ, 04 ಅಕ್ಟೋಬರ್ (ಹಿ.ಸ.):
ಕೇಂದ್ರ ಸಿಬ್ಬಂದಿ, ಸಾರ್ವಜನಿಕ ದೂರು ಹಾಗೂ ಪಿಂಚಣಿ ಸಚಿವಾಲಯದ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿಯಂತೆ, ಕೇಂದ್ರ ಸರ್ಕಾರದ 17ನೇ ಪಿಂಚಣಿ ಅದಾಲತ್‌ನಲ್ಲಿ ಅತಿ ಹಿರಿಯ ಪಿಂಚಣಿದಾರರು ಹಾಗೂ ಕುಟುಂಬ ಪಿಂಚಣಿದಾರರಿಗೆ ಸಂಬಂಧಿಸಿದ 897 ಬಾಕಿ ದೂರುಗಳನ್ನು ಇತ್ಯರ್ಥಪಡಿಸಲಾಗುವುದು.
ಅಕ್ಟೋಬರ್ 5ರಂದು ನವದೆಹಲಿಯ ಭಾರತೀಯ ಲೋಕ ಆಡಳಿತ ಸಂಸ್ಥೆಯಲ್ಲಿ ನಡೆಯಲಿರುವ ಪಿಂಚಣಿ ಅದಾಲತ್‌ಗೆ ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅಧ್ಯಕ್ಷತೆ ವಹಿಸಲಿದ್ದಾರೆ. 24 ಸಚಿವಾಲಯಗಳು ಮತ್ತು ಇಲಾಖೆಗೆ ಸಂಬಂಧಿಸಿದ ದೂರುಗಳನ್ನು ಅದಾಲತ್‌ನಲ್ಲಿ ಕೈಗೆತ್ತಿಕೊಳ್ಳಲಾಗುವುದು.
ಕೇಂದ್ರ ಸರ್ಕಾರಿ ಪಿಂಚಣಿದಾರರ ದೂರುಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸುವ ಪರ್ಯಾಯ ವ್ಯವಸ್ಥೆಯಾಗಿ ಪಿಂಚಣಿ ಅದಾಲತ್ ಕಾರ್ಯನಿರ್ವಹಿಸುತ್ತಿದೆ. ದೂರುಗಳಿಗೆ ಸಂಬಂಧಿಸಿದ ಎಲ್ಲರನ್ನು ಒಂದೇ ವೇದಿಕೆಗೆ ಕರೆತಂದು ದೀರ್ಘಕಾಲದಿಂದ ಬಾಕಿ ಇರುವ ಪ್ರಕರಣಗಳನ್ನು ಪರಿಹರಿಸುವುದು ಇದರ ಉದ್ದೇಶವಾಗಿದೆ. ಇದರಿಂದ ದುಬಾರಿ ಹಾಗೂ ಸಮಯ ತೆಗೆದುಕೊಳ್ಳುವ ನ್ಯಾಯಾಂಗ ಪ್ರಕ್ರಿಯೆಯ ಅಗತ್ಯವನ್ನು ಕಡಿಮೆ ಮಾಡಬಹುದಾಗಿದೆ ಎಂದು ಇಲಾಖೆ ತಿಳಿಸಿದೆ.
2017ರಲ್ಲಿ ಪಿಂಚಣಿ ಅದಾಲತ್ ವ್ಯವಸ್ಥೆಯನ್ನು ಆರಂಭಿಸಲಾಗಿತ್ತು. ಇದುವರೆಗೆ 16 ಅದಾಲತ್‌ಗಳು ನಡೆದಿದ್ದು, ಒಟ್ಟು 28,797 ದೂರುಗಳಲ್ಲಿ 20,676 ದೂರುಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲಾಗಿದೆ. ಶೇ.71.79ರಷ್ಟು ದೂರುಗಳು ಇತ್ಯರ್ಥಗೊಂಡಿವೆ. ಉಳಿದ ಪ್ರಕರಣಗಳನ್ನು ಸಂಬಂಧಿತ ಪಿಂಚಣಿ ಅದಾಲತ್‌ಗಳ ಬಳಿಕ ಇಲಾಖೆಯು ಆಯೋಜಿಸಿದ ಅಂತರ ಸಚಿವಾಲಯದ ಪರಿಶೀಲನಾ ಸಭೆಗಳ ಮೂಲಕ ಪರಿಹರಿಸಲಾಗಿದೆ.
17ನೇ ಪಿಂಚಣಿ ಅದಾಲತ್ ವಿಷಯಾಧಾರಿತವಾಗಿರಲಿದೆ. ಅತಿ ಹಿರಿಯ ಪಿಂಚಣಿದಾರರು ಹಾಗೂ ಕುಟುಂಬ ಪಿಂಚಣಿದಾರರಿಗೆ ಸಂಬಂಧಿಸಿದ 897 ದೂರುಗಳನ್ನು ಈ ಬಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ದೂರುಗಳನ್ನು ಪಿಂಚಣಿ ದೂರು ಪರಿಹಾರ ವ್ಯವಸ್ಥೆಯ ಮೂಲಕ ದಾಖಲಿಸಲಾಗಿದೆ.
ದೇಶದ ವಿವಿಧೆಡೆಯಿಂದ ಅತಿ ಹಿರಿಯ ಪಿಂಚಣಿದಾರರು, ಕುಟುಂಬ ಪಿಂಚಣಿದಾರರು ಹಾಗೂ ಅವರ ಕುಟುಂಬದವರು ಅದಾಲತ್‌ನಲ್ಲಿ ಭಾಗವಹಿಸಲಿದ್ದಾರೆ. ದೂರುದಾರರಿಗೆ ನೇರವಾಗಿ ಅಥವಾ ವಿಡಿಯೋ ಸಮಾವೇಶದ ಮೂಲಕ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಕಾರ್ಯಕ್ರಮದಲ್ಲಿ ಡಾ. ಜಿತೇಂದ್ರ ಸಿಂಗ್ ಅವರು ಮೇ 13ರಂದು ನಡೆದ 16ನೇ ಪಿಂಚಣಿ ಅದಾಲತ್‌ನ ಯಶೋಗಾಥೆಗಳನ್ನು ಒಳಗೊಂಡ ಕಿರುಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. ಕುಟುಂಬ ಪಿಂಚಣಿದಾರರಿಗೆ ಸಂಬಂಧಿಸಿದ ವಿಷಯಗಳ ಕುರಿತು ಪದೇಪದೇ ಕೇಳಲಾಗುವ ಪ್ರಶ್ನೆಗಳನ್ನು ಒಳಗೊಂಡ ಕಿರುಪುಸ್ತಕವನ್ನೂ ಬಿಡುಗಡೆ ಮಾಡಲಾಗುವುದು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.