ದಾವಣಗೆರೆ ಜಿಲ್ಲೆಯಲ್ಲಿ ಶೇ.39ರಷ್ಟು ಮಳೆ ಕೊರತೆ: ಕೇಂದ್ರ ಬರ ಅಧ್ಯಯನ ತಂಡ ಪರಿಶೀಲನೆ
ದಾವಣಗೆರೆ, 04 ಅಕ್ಟೋಬರ್ (ಹಿ.ಸ.): ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಉಂಟಾಗಿರುವ ತೀವ್ರ ಬರ ಪರಿಸ್ಥಿತಿಯನ್ನು ಅವಲೋಕಿಸಲು ಕೇಂದ್ರ ಸರ್ಕಾರದ ಅಂತರ ಸಚಿವಾಲಯದ ಕೇಂದ್ರ ಅಧ್ಯಯನ ತಂಡ ಭಾನುವಾರ ದಾವಣಗೆರೆ ಜಿಲ್ಲೆಗೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಪರಿಶೀಲಿಸಿತು. ಜಿಲ್ಲಾಡಳಿತವು ಕೇಂದ
ಕೇಂದ್ರ ಅಧ್ಯಯನ ತಂಡ ಭಾನುವಾರ ದಾವಣಗೆರೆ ಜಿಲ್ಲೆಗೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಪರಿಶೀಲಿಸಿತು.


ದಾವಣಗೆರೆ, 04 ಅಕ್ಟೋಬರ್ (ಹಿ.ಸ.):

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಉಂಟಾಗಿರುವ ತೀವ್ರ ಬರ ಪರಿಸ್ಥಿತಿಯನ್ನು ಅವಲೋಕಿಸಲು ಕೇಂದ್ರ ಸರ್ಕಾರದ ಅಂತರ ಸಚಿವಾಲಯದ ಕೇಂದ್ರ ಅಧ್ಯಯನ ತಂಡ ಭಾನುವಾರ ದಾವಣಗೆರೆ ಜಿಲ್ಲೆಗೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಪರಿಶೀಲಿಸಿತು.

ಜಿಲ್ಲಾಡಳಿತವು ಕೇಂದ್ರ ಅಧ್ಯಯನ ತಂಡದ ಮುಂದೆ ಮಳೆ ಕೊರತೆ, ಬೆಳೆ ಹಾನಿ, ಅಂತರ್ಜಲ ಕುಸಿತ ಹಾಗೂ ಕುಡಿಯುವ ನೀರಿನ ಸಮಸ್ಯೆ ಕುರಿತ ಸಮಗ್ರ ಅಂಕಿ-ಅಂಶಗಳನ್ನು ಮಂಡಿಸಿತು. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ನಿಯಮಾವಳಿಗಳ ಅನ್ವಯ ಪರಿಹಾರಕ್ಕೆ ಸಂಬಂಧಿಸಿದ ಅಂಕಿ-ಅಂಶಗಳನ್ನೂ ತಂಡಕ್ಕೆ ವಿವರಿಸಲಾಯಿತು.

ಶೇ.39ರಷ್ಟು ಮಳೆ ಕೊರತೆ

ಜೂನ್ 1ರಿಂದ ಸೆಪ್ಟೆಂಬರ್ 28ರವರೆಗಿನ ನೈರುತ್ಯ ಮುಂಗಾರು ಅವಧಿಯಲ್ಲಿ ಜಿಲ್ಲೆಯಲ್ಲಿ ವಾಡಿಕೆಯ 392.9 ಮಿ.ಮೀ. ಮಳೆಯಾಗಬೇಕಿದ್ದರೂ 238.5 ಮಿ.ಮೀ. ಮಾತ್ರ ಮಳೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಒಟ್ಟಾರೆ ಶೇ.39ರಷ್ಟು ಮಳೆ ಕೊರತೆ ದಾಖಲಾಗಿದೆ. ಜಿಲ್ಲೆಯ ಎಲ್ಲ ಆರು ತಾಲೂಕುಗಳನ್ನೂ ಬರಪೀಡಿತ ಎಂದು ಘೋಷಿಸಲಾಗಿದೆ.

ತಾಲೂಕುವಾರು ಮಳೆ ಕೊರತೆಯ ಪ್ರಮಾಣ ಚನ್ನಗಿರಿಯಲ್ಲಿ ಶೇ.43, ದಾವಣಗೆರೆಯಲ್ಲಿ ಶೇ.30, ಹರಿಹರದಲ್ಲಿ ಶೇ.42, ಹೊನ್ನಾಳಿಯಲ್ಲಿ ಶೇ.47, ಜಗಳೂರಿನಲ್ಲಿ ಶೇ.44 ಹಾಗೂ ನ್ಯಾಮತಿಯಲ್ಲಿ ಶೇ.48ರಷ್ಟಿದೆ. ಸತತ 3ರಿಂದ 4 ವಾರಗಳ ಕಾಲ ಮಳೆಯಿಲ್ಲದ ಅವಧಿ ಉಂಟಾಗಿದ್ದು, ಜಮೀನುಗಳಲ್ಲಿ ತೇವಾಂಶ ಸಂಪೂರ್ಣ ಕುಸಿದಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

1.26 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಬೆಳೆ ಹಾನಿ

ಜಿಲ್ಲೆಯಲ್ಲಿ ಒಟ್ಟು 2,14,938 ಹೆಕ್ಟೇರ್ ಕೃಷಿ ವಿಸ್ತೀರ್ಣದ ಗುರಿಯ ಪೈಕಿ 1,39,340 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು, ಇದು ಶೇ.64.83ರಷ್ಟಾಗಿದೆ.

ಒಟ್ಟು 1,26,113.18 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಇದರಲ್ಲಿ 1,24,022 ಹೆಕ್ಟೇರ್ ಕೃಷಿ ಬೆಳೆ ಹಾಗೂ 1,491.18 ಹೆಕ್ಟೇರ್ ತೋಟಗಾರಿಕೆ ಬೆಳೆ ಸೇರಿವೆ. ಮೆಕ್ಕೆಜೋಳ 51,880 ಹೆಕ್ಟೇರ್, ರಾಗಿ 17,344 ಹೆಕ್ಟೇರ್, ತೊಗರಿ 4,687 ಹೆಕ್ಟೇರ್ ಹಾಗೂ ಈರುಳ್ಳಿ ಸೇರಿದಂತೆ ವಿವಿಧ ಬೆಳೆಗಳು ಒಣಗಿ ತೀವ್ರ ಹಾನಿಗೊಳಗಾಗಿವೆ.

ಹರಿಹರ ಮತ್ತು ಜಗಳೂರು ತಾಲೂಕುಗಳಲ್ಲಿ ಮಳೆ ಕೊರತೆಯಿಂದ 24,477 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಸಾಧ್ಯವಾಗಿಲ್ಲ. ಈ ಪ್ರದೇಶಕ್ಕೆ ಸಂಬಂಧಿಸಿದಂತೆ 42.57 ಕೋಟಿ ರೂ. ಮೊತ್ತದ ಬೆಳೆ ವಿಮೆ ಪರಿಹಾರದ ಹಕ್ಕು ನಿರೀಕ್ಷಿಸಲಾಗಿದೆ ಎಂದು ಜಿಲ್ಲಾಡಳಿತದ ವರದಿಯಲ್ಲಿ ತಿಳಿಸಲಾಗಿದೆ.

463 ಕೆರೆಗಳಲ್ಲಿ ಶೇ.30ಕ್ಕಿಂತ ಕಡಿಮೆ ನೀರು

ಜಿಲ್ಲೆಯ ಒಟ್ಟು 600 ಸಣ್ಣ ನೀರಾವರಿ, ಜಿಲ್ಲಾ ಪಂಚಾಯಿತಿ, ಅರಣ್ಯ ಹಾಗೂ ಇತರ ಇಲಾಖೆಗಳ ಕೆರೆಗಳ ಪೈಕಿ 463 ಕೆರೆಗಳಲ್ಲಿ ಶೇ.30ಕ್ಕಿಂತ ಕಡಿಮೆ ನೀರಿದೆ. ಒಂದೇ ಒಂದು ಕೆರೆಯೂ ಶೇ.100ರಷ್ಟು ಭರ್ತಿಯಾಗಿಲ್ಲ.

ಅಂತರ್ಜಲ ಮಟ್ಟವೂ ತೀವ್ರವಾಗಿ ಕುಸಿದಿದೆ. ಕಳೆದ ವರ್ಷದ ಸರಾಸರಿ 5.63 ಮೀಟರ್‌ನಿಂದ ಪ್ರಸ್ತುತ 12.73 ಮೀಟರ್‌ಗೆ ಅಂತರ್ಜಲ ಮಟ್ಟ ಕುಸಿದಿದ್ದು, ಸರಾಸರಿ 7.1 ಮೀಟರ್ ನೀರಿನ ಮಟ್ಟದಲ್ಲಿ ಇಳಿಕೆಯಾಗಿದೆ. ಜಗಳೂರು ಶೇ.151.7 ಹಾಗೂ ಚನ್ನಗಿರಿ ಶೇ.125.17ರ ಪ್ರಮಾಣದೊಂದಿಗೆ ಅಂತರ್ಜಲ ಅತಿಯಾಗಿ ಬಳಕೆಯಾದ ಅತಿ ಸೂಕ್ಷ್ಮ ವಲಯಗಳಾಗಿವೆ.

27 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ

ಪ್ರಸ್ತುತ ಜಿಲ್ಲೆಯಲ್ಲಿ 27 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, 13 ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಅಲ್ಲದೆ, 30 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ. ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ 161 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಜಿಲ್ಲೆಯ 2.48 ಲಕ್ಷ ದೊಡ್ಡ ಜಾನುವಾರು ಹಾಗೂ 3.16 ಲಕ್ಷ ಸಣ್ಣ ಜಾನುವಾರುಗಳಿಗೆ ಮುಂದಿನ 24 ವಾರಗಳಿಗೆ ಸಾಕಾಗುವಷ್ಟು ಮೇವಿನ ಸಂಗ್ರಹವಿದೆ. ಮುಂದಿನ ದಿನಗಳಿಗಾಗಿ 11,752 ಮೇವಿನ ಕಿರು ಕಿಟ್‌ಗಳನ್ನು ವಿತರಿಸಿ ಮೇವು ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿ ನೀಡಲಾಯಿತು.

ವಿವಿಧ ಗ್ರಾಮಗಳಲ್ಲಿ ಬೆಳೆ, ಕೆರೆ ಪರಿಶೀಲನೆ

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಂತರ ಸಚಿವಾಲಯದ ಕೇಂದ್ರ ಅಧ್ಯಯನ ತಂಡದ ನಾಯಕ ಹಾಗೂ ಮೊದಲ ತಂಡದ ಗುಂಪಿನ ನಾಯಕ, ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ನಾಲ್ವರು ಸದಸ್ಯರ ತಂಡ ಜಿಲ್ಲೆಯಲ್ಲಿ ಪರಿಶೀಲನೆ ನಡೆಸಿತು. ತಂಡದಲ್ಲಿ ಚೇತ್ ರಾಮ್ ಮೀನಾ, ನೀತಿ ಆಯೋಗದ ಲೆಫ್ಟಿನೆಂಟ್ ಕರ್ನಲ್ ಅಮರೇಂದ್ರ ಸಿಂಗ್ ಹಾಗೂ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆಯ ನಿರ್ದೇಶಕ (ಮೇಲ್ವಿಚಾರಣೆ) ಡಾ. ಜೆ. ಹರ್ಷ ಇದ್ದರು.

ತಂಡವು ದಾವಣಗೆರೆ ತಾಲೂಕಿನ ನಿರ್ತಡಿ ಗ್ರಾಮದಲ್ಲಿ ಬರಪೀಡಿತ ಮೆಕ್ಕೆಜೋಳ ಬೆಳೆ ಪರಿಶೀಲಿಸಿತು. ಬಳಿಕ ನ್ಯಾಮತಿ ತಾಲೂಕಿನ ಮದನಭಾವಿ ಗ್ರಾಮದಲ್ಲಿ ಕೆರೆಯನ್ನು ವೀಕ್ಷಿಸಿ, ಬರಪೀಡಿತ ಮೆಕ್ಕೆಜೋಳ ಮತ್ತು ರಾಗಿ ಬೆಳೆಗಳನ್ನು ಪರಿಶೀಲಿಸಿತು. ನಂತರ ಹೊನ್ನಾಳಿ ತಾಲೂಕಿನ ಸೊರಟೂರು ಹಾಗೂ ಎಚ್. ಕಡದಕಟ್ಟೆ ಗ್ರಾಮಗಳಲ್ಲಿ ಬರಪೀಡಿತ ಮೆಕ್ಕೆಜೋಳ ಬೆಳೆಗಳ ಪರಿಶೀಲನೆ ನಡೆಸಿತು.

ಪರಿಶೀಲನೆಯ ವೇಳೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜಿ.ಎಂ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಾಹಿತ್ಯ ಎಂ. ಆಲದಕಟ್ಟಿ, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರಾಘವೇಂದ್ರ ಪ್ರಸಾದ್ ಸೇರಿದಂತೆ ಕಂದಾಯ, ಕೃಷಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸ್ಥಳೀಯ ರೈತರು ಹಾಜರಿದ್ದು ಅಗತ್ಯ ಮಾಹಿತಿ ಒದಗಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande