ಸಿಲ್ಕ್ ಬೋರ್ಡ್ ಜಂಕ್ಷನ್ ಸಮಗ್ರ ಅಭಿವೃದ್ಧಿಗೆ ಶಾಶ್ವತ ಯೋಜನೆ: ಕೃಷ್ಣ ಬೈರೇಗೌಡ ಸೂಚನೆ
ಬೆಂಗಳೂರು, 31 ಅಕ್ಟೋಬರ್ (ಹಿ.ಸ.): ನಗರದ ಅತ್ಯಂತ ಜನನಿಬಿಡ ಸಂಚಾರ ಕೇಂದ್ರಗಳಲ್ಲಿ ಒಂದಾದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನ ಸಮಗ್ರ ಅಭಿವೃದ್ಧಿಗೆ ಶಾಶ್ವತ ಯೋಜನೆ ರೂಪಿಸುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಂಚಾರ ದಟ್ಟಣೆ ನಿಯಂತ್ರಣ,
ವಾರ್ಡ್ ಒಂದು ಅಭಿಯಾನ ಪರಿಶೀಲಿಸಿದ ಸಚಿವರು


ಬೆಂಗಳೂರು, 31 ಅಕ್ಟೋಬರ್ (ಹಿ.ಸ.):

ನಗರದ ಅತ್ಯಂತ ಜನನಿಬಿಡ ಸಂಚಾರ ಕೇಂದ್ರಗಳಲ್ಲಿ ಒಂದಾದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನ ಸಮಗ್ರ ಅಭಿವೃದ್ಧಿಗೆ ಶಾಶ್ವತ ಯೋಜನೆ ರೂಪಿಸುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸಂಚಾರ ದಟ್ಟಣೆ ನಿಯಂತ್ರಣ, ಸಾರ್ವಜನಿಕ ಸೌಲಭ್ಯಗಳ ಕಲ್ಪನೆ, ಪಾದಚಾರಿ ಸುರಕ್ಷತೆ ಹಾಗೂ ಸೌಂದರ್ಯೀಕರಣಕ್ಕೆ ಆದ್ಯತೆ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಅವರು ನಿರ್ದೇಶನ ನೀಡಿದ್ದಾರೆ.

ಸಿಲ್ಕ್ ಬೋರ್ಡ್ ಜಂಕ್ಷನ್‌ನ ಮೇಲ್ಸೇತುವೆ ಕಂಬಗಳಿಗೆ ಬಣ್ಣ ಬಳಿಯುವ ಮೂಲಕ ಸಚಿವರು ವಾರ್ಡ್‌ ಒಂದು ಅಭಿಯಾನಕ್ಕೆ ಸಾಂಕೇತಿಕ ಚಾಲನೆ ನೀಡಿದರು. ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಐದು ನಗರ ಪಾಲಿಕೆಗಳ 43 ವಾರ್ಡ್‌ಗಳಲ್ಲಿ ಈ ಅಭಿಯಾನ ಅನುಷ್ಠಾನಗೊಳ್ಳುತ್ತಿದೆ.

ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕ್ರಮ

ಜಂಕ್ಷನ್‌ನಲ್ಲಿ ವಾಹನ ಸಂಚಾರ ಸುಗಮಗೊಳಿಸಲು ಮುಕ್ತ ಎಡತಿರುವು ವ್ಯವಸ್ಥೆ ಕಲ್ಪಿಸುವುದು, ರಸ್ತೆ ಮೂಲಸೌಕರ್ಯ ಸುಧಾರಿಸುವುದು ಹಾಗೂ ವಾಹನಗಳ ಸಂಚಾರ ವ್ಯವಸ್ಥೆಯನ್ನು ಪುನರ್‌ರೂಪಿಸುವ ಯೋಜನೆ ರೂಪಿಸಲಾಗಿದೆ.

ಮೇಲ್ಸೇತುವೆಯ ಕೆಳಭಾಗದ ಖಾಲಿ ಜಾಗವನ್ನು ಸಾರ್ವಜನಿಕ ಬಳಕೆಗೆ ಅಭಿವೃದ್ಧಿಪಡಿಸಲಾಗುವುದು. ಇಲ್ಲಿ ಆಸನ ವ್ಯವಸ್ಥೆ, ಬೆಳಕಿನ ಸೌಲಭ್ಯ ಹಾಗೂ ಮನರಂಜನಾ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಥ್ರೋಬಾಲ್ ಅಂಕಣ ನಿರ್ಮಿಸುವುದರ ಜತೆಗೆ ಮೇಜು ಟೆನಿಸ್ ಸೌಲಭ್ಯ ಕಲ್ಪಿಸುವ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು. ಖಾಲಿ ಜಾಗಗಳಲ್ಲಿ ಹಸಿರು ಉದ್ಯಾನವನ ಹಾಗೂ ನೆರಳಿನ ಆಸನ ವ್ಯವಸ್ಥೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.

ಪಾದಚಾರಿ ಸೌಲಭ್ಯಕ್ಕೆ ಆದ್ಯತೆ

ಜಂಕ್ಷನ್ ಸುತ್ತಮುತ್ತಲಿನ ಕಾಲುದಾರಿಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದು, ಮಳೆ ನೀರುಗಾಲುವೆಗಳ ಪಕ್ಕದಲ್ಲಿ ಪಾದಚಾರಿ ಮಾರ್ಗ ನಿರ್ಮಿಸುವುದು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಸಾರ್ವಜನಿಕ ಶೌಚಾಲಯಗಳನ್ನು ಕಲ್ಪಿಸುವ ಯೋಜನೆಯೂ ಇದೆ.

ಮಳೆ ನೀರುಗಾಲುವೆ ಕಾಮಗಾರಿಗೆ ವೇಗ

ಪ್ರಮುಖ 60 ಮೀಟರ್ ಮಳೆ ನೀರುಗಾಲುವೆ ಕಾಮಗಾರಿಯನ್ನು ತ್ವರಿತಗೊಳಿಸಲು ಸಚಿವರು ಸೂಚಿಸಿದ್ದಾರೆ. 30 ಗರ್ಡರ್‌ಗಳ ಅಳವಡಿಕೆ ಹಾಗೂ ಬಲವರ್ಧಿತ ಕಾಂಕ್ರೀಟ್ ತಡೆಗೋಡೆಯ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದ್ದಾರೆ.

ಮಳೆಗಾಲದಲ್ಲಿ ನೀರು ನಿಲ್ಲುವ ಸಮಸ್ಯೆ ತಡೆಗಟ್ಟಲು ಸಿಲ್ಕ್ ಬೋರ್ಡ್‌ನಿಂದ ಎಚ್‌ಎಸ್‌ಆರ್ ಬಡಾವಣೆಯ ಕಡೆಗೆ ಹೊಸ ಮಳೆ ನೀರುಗಾಲುವೆ ನಿರ್ಮಿಸುವ ಪ್ರಸ್ತಾವನೆಯನ್ನೂ ರೂಪಿಸಲಾಗಿದೆ.

ಒಳಚರಂಡಿ ನೀರು ಹರಿಸುವುದಕ್ಕೆ ಆಕ್ಷೇಪ

ಮಳೆ ನೀರುಗಾಲುವೆಗೆ ಕೊಳಚೆ ನೀರು ಸೇರುತ್ತಿರುವುದಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಇಂತಹ ಸಮಸ್ಯೆ ತಡೆಗಟ್ಟಲು ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.

ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ಅನುದಾನ ಮೀಸಲಿಡುವಂತೆ ಹಾಗೂ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಆಯುಕ್ತರಿಗೆ ನಿರ್ದೇಶನ ನೀಡಿದರು.

ಮೈಸೂರು ರೇಷ್ಮೆ ವಿನ್ಯಾಸದ ಸೌಂದರ್ಯೀಕರಣ

ಮೇಲ್ಸೇತುವೆಯ ಕೆಳಭಾಗದ ಸೌಂದರ್ಯೀಕರಣ ಯೋಜನೆಯನ್ನು ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಸಹಯೋಗದೊಂದಿಗೆ ಸಿಜಿಐ ಸಂಸ್ಥೆಯು ತನ್ನ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಕೈಗೆತ್ತಿಕೊಂಡಿದೆ. ಮೈಸೂರು ರೇಷ್ಮೆಯ ಸೊಬಗಿನಿಂದ ಪ್ರೇರಿತ ವಿನ್ಯಾಸದಲ್ಲಿ ಈ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇಂಡಿಯಾ ರೈಸಿಂಗ್ ಟ್ರಸ್ಟ್ ವಿನ್ಯಾಸ ಮತ್ತು ಕಾಮಗಾರಿಯ ಅನುಷ್ಠಾನದ ಜವಾಬ್ದಾರಿ ವಹಿಸಿಕೊಂಡಿದೆ.

ಒಟ್ಟಾರೆ ಸಿಲ್ಕ್ ಬೋರ್ಡ್ ಜಂಕ್ಷನ್‌ ಅನ್ನು ಸಂಚಾರ ದಟ್ಟಣೆ ಕಡಿಮೆ ಮಾಡುವ ಕೇಂದ್ರವಷ್ಟೇ ಅಲ್ಲದೆ, ಸ್ವಚ್ಛ, ಹಸಿರುಮಯ, ಸುರಕ್ಷಿತ ಹಾಗೂ ಸಾರ್ವಜನಿಕ ಸ್ನೇಹಿ ಪ್ರದೇಶವನ್ನಾಗಿ ರೂಪಿಸುವ ಉದ್ದೇಶವನ್ನು ಹೊಂದಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande