
ನವದೆಹಲಿ, 31 ಅಕ್ಟೋಬರ್ (ಹಿ.ಸ.):
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಗುಜರಾತ್ನ ಕೆವಾಡಿಯಾದ ಏಕತಾ ನಗರದಲ್ಲಿ ನಡೆಯುತ್ತಿರುವ ‘ಭಾರತ ಪರ್ವ 2026’ರ ಅಂಗವಾಗಿ ಕೇಂದ್ರ ಗುಡಿ ಕೈಗಾರಿಕೆಗಳ ನಿಗಮದ (ಸಿಸಿಐಸಿ) ಮಳಿಗೆಗೆ ಭೇಟಿ ನೀಡಿದರು.
ಕೇಂದ್ರ ಜವಳಿ ಸಚಿವಾಲಯದ ಪ್ರಕಾರ, ಪ್ರಧಾನಿಯವರ ಈ ಭೇಟಿಯು ಸಿಸಿಐಸಿಗೆ ಭಾರತದ ಶ್ರೀಮಂತ ಸಾಂಪ್ರದಾಯಿಕ ಕಲೆ, ಕರಕುಶಲ ಪರಂಪರೆ ಹಾಗೂ ನೇಕಾರರು ಮತ್ತು ಕುಶಲಕರ್ಮಿಗಳೊಂದಿಗೆ ಹೊಂದಿರುವ ದೀರ್ಘಕಾಲದ ಒಡನಾಟವನ್ನು ಪ್ರದರ್ಶಿಸಲು ಉತ್ತಮ ಅವಕಾಶ ಒದಗಿಸಿದೆ.
ಭಾರತದ ಸಾಂಪ್ರದಾಯಿಕ ಕೈಮಗ್ಗ ಮತ್ತು ಕರಕುಶಲ ಕಲೆಗಳನ್ನು ಉತ್ತೇಜಿಸುವ ನಿಗಮದ ನಿರಂತರ ಪ್ರಯತ್ನಗಳನ್ನು ಈ ಮಳಿಗೆ ಪರಿಚಯಿಸುತ್ತದೆ. ಕುಶಲಕರ್ಮಿಗಳು ಮತ್ತು ನೇಕಾರರಿಗೆ ಉತ್ತಮ ಮಾರುಕಟ್ಟೆ ಹಾಗೂ ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ಕಲ್ಪಿಸುವ ಮೂಲಕ ಅವರನ್ನು ಸಬಲೀಕರಣಗೊಳಿಸುವ ನಿಗಮದ ಕಾರ್ಯಚಟುವಟಿಕೆಗಳನ್ನೂ ಇಲ್ಲಿ ಪ್ರದರ್ಶಿಸಲಾಗಿದೆ.
‘ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹ’ ಹಾಗೂ ‘ಸ್ಥಳೀಯದಿಂದ ಜಾಗತಿಕ ಮಟ್ಟಕ್ಕೆ’ ಎಂಬ ಆಶಯಗಳಿಗೆ ಸಿಸಿಐಸಿ ಸಕ್ರಿಯವಾಗಿ ಕೊಡುಗೆ ನೀಡುತ್ತಿದೆ. ಸಾಂಪ್ರದಾಯಿಕ ಕರಕುಶಲ ಕಲೆಗಳನ್ನು ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸುವ ಕಾರ್ಯವನ್ನು ನಿಗಮ ಮಾಡುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
ಈ ಸಂದರ್ಭದಲ್ಲಿ ಸಿಸಿಐಸಿ ವ್ಯವಸ್ಥಾಪಕ ನಿರ್ದೇಶಕ ಬಿಮಲ್ ಗೋಪಾಲಾಚಾರಿ, ನಿಗಮದ ಅಧಿಕಾರಿಗಳು, ಕುಶಲಕರ್ಮಿಗಳು ಹಾಗೂ ನೇಕಾರರು ಉಪಸ್ಥಿತರಿದ್ದರು.
ದೇಶದ ವಿವಿಧ ಭಾಗಗಳ ಕುಶಲಕರ್ಮಿಗಳ ಅತ್ಯುತ್ತಮ ಕೌಶಲ ಮತ್ತು ಕಲಾಕೃತಿಗಳನ್ನು ಮಳಿಗೆಯಲ್ಲಿ ಪ್ರದರ್ಶಿಸಲಾಗಿದೆ. ವಿಶೇಷವಾಗಿ ಗುಜರಾತ್ನ ಕುಶಲಕರ್ಮಿಗಳು ತಯಾರಿಸಿರುವ ಅಗೇಟ್ ಮತ್ತು ಅರೆಬೆಲೆಬಾಳುವ ಕಲ್ಲುಗಳಿಂದ ರೂಪಿಸಿದ ಕಲಾಕೃತಿಗಳು ಹಾಗೂ ಸೂಕ್ಷ್ಮವಾದ ಬಟ್ಟೆ ತುಂಡುಗಳ ಜೋಡಣೆ ಕಲೆಯ ಕೃತಿಗಳು ಪ್ರವಾಸಿಗರ ಗಮನ ಸೆಳೆಯುತ್ತಿವೆ.
ಭಾರತದ ಶ್ರೀಮಂತ ಕಲೆ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಈ ಪ್ರದರ್ಶನವು ನವೆಂಬರ್ 15ರವರೆಗೆ ಏಕತಾ ನಗರದಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿರಲಿದೆ.
ಸಿಸಿಐಸಿ ದೇಶದ ವಿವಿಧ ಭಾಗಗಳ ಅತ್ಯುತ್ತಮ ಕೈಮಗ್ಗ ಮತ್ತು ಕರಕುಶಲ ಉತ್ಪನ್ನಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುತ್ತಿದ್ದು, ಭಾರತದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆ, ಸೃಜನಶೀಲತೆ ಹಾಗೂ ಸ್ವದೇಶಿ ಕಲಾಪ್ರಕಾರಗಳ ಸೌಂದರ್ಯವನ್ನು ಸಂರಕ್ಷಿಸಿ ಪ್ರೋತ್ಸಾಹಿಸುವ ಕಾರ್ಯದಲ್ಲಿ ತೊಡಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.