
ಬೆಂಗಳೂರು, 31 ಅಕ್ಟೋಬರ್ (ಹಿ.ಸ.):
ಕರ್ನಾಟಕದ ಇತಿಹಾಸದಲ್ಲೇ ಹಿಂದೆಂದೂ ಕಾಣದ ರೀತಿಯಲ್ಲಿ ಬೆಲೆ ಏರಿಕೆ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದ್ದಾರೆ.
ಕೆಎಂಎಫ್ ಮೂಲಕ ಮೊಸರಿನ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿರುವ ಸರ್ಕಾರ, ತನ್ನ ಆರ್ಥಿಕ ದುರಾಡಳಿತ ಹಾಗೂ ಖಾಲಿಯಾಗಿರುವ ಬೊಕ್ಕಸವನ್ನು ಸರಿದೂಗಿಸಲು ಜನರ ಮೇಲೆ ಹೊರೆ ಹಾಕುತ್ತಿದೆ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಟೀಕಿಸಿದ್ದಾರೆ.
ಅರ್ಧ ಲೀಟರ್ ಮೊಸರಿನ ದರವನ್ನು 28 ರೂ.ಗಳಿಂದ 34 ರೂ.ಗಳಿಗೆ ಹೆಚ್ಚಿಸಲಾಗಿದೆ. ಇದರಿಂದ 6 ರೂ. ಏರಿಕೆಯಾಗಿದ್ದು, ಶೇಕಡಾ 21.43ರಷ್ಟು ಹೆಚ್ಚಳವಾಗಿದೆ. ಅದೇ ರೀತಿ ಒಂದು ಲೀಟರ್ ಮೊಸರಿನ ದರವನ್ನು 54 ರೂ.ಗಳಿಂದ 68 ರೂ.ಗಳಿಗೆ ಹೆಚ್ಚಿಸಲಾಗಿದ್ದು, 14 ರೂ. ಏರಿಕೆಯೊಂದಿಗೆ ಶೇಕಡಾ 25.93ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಹಾಲಿನ ದರವನ್ನು ಪ್ರತಿ ಲೀಟರ್ಗೆ 8 ರೂ. ಹೆಚ್ಚಿಸಿದ್ದ ಸರ್ಕಾರ, ಇದೀಗ ಒಂದೇ ಬಾರಿಗೆ ಶೇಕಡಾ 21ರಿಂದ 26ರಷ್ಟು ಮೊಸರಿನ ಬೆಲೆ ಏರಿಕೆ ಮಾಡಿದೆ. ಇದರಿಂದ ಬಡವರು ಹಾಗೂ ಕೆಳಮಧ್ಯಮ ವರ್ಗದ ಕುಟುಂಬಗಳಿಗೆ ಹೆಚ್ಚಿನ ಆರ್ಥಿಕ ಹೊರೆ ಉಂಟಾಗಿದೆ ಎಂದು ಆರೋಪಿಸಿದ್ದಾರೆ.
ಮೊಸರು ಐಷಾರಾಮಿ ವಸ್ತುವಲ್ಲ, ಅದು ಪ್ರತಿದಿನದ ಆಹಾರದ ಭಾಗವಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡದೆ, ಆಡಳಿತಾತ್ಮಕ ವೈಫಲ್ಯದಿಂದ ರಾಜ್ಯದ ಬೊಕ್ಕಸವನ್ನು ಬರಿದು ಮಾಡಿಕೊಂಡಿರುವ ಸರ್ಕಾರ, ತನ್ನ ರಾಜಕೀಯ ತಪ್ಪುಗಳಿಗೆ ಬಡ ಜನರಿಂದ ದಂಡ ವಸೂಲಿ ಮಾಡುತ್ತಿದೆ. ಈ ಬೆಲೆ ಏರಿಕೆ ಜನಸಾಮಾನ್ಯರ ಮೇಲಿನ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಪ್ರಹ್ಲಾದ ಜೋಶಿ ಟೀಕಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.