ದೆಹಲಿ ಸೇರಿದಂತೆ ಆರು ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಗಡುವು ವಿಸ್ತರಣೆ
ನವದೆಹಲಿ, 30 ಅಕ್ಟೋಬರ್ (ಹಿ.ಸ.): ದೆಹಲಿ, ಮಹಾರಾಷ್ಟ್ರ, ಹರಿಯಾಣ, ಆಂಧ್ರಪ್ರದೇಶ, ತೆಲಂಗಾಣ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯಕ್ರಮದ ಗಡುವನ್ನು ಚುನಾವಣಾ ಆಯೋಗ ವಿಸ್ತರಿಸಿದೆ. ಈ ರಾಜ್ಯಗಳಲ್ಲಿ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್
केंद्रीय चुनाव आयोग को भेजी गई बीएलओ की हार्ट अटैक से मौत की रिपोर्ट ( केंद्रीय निर्वाचन आयोग )


ನವದೆಹಲಿ, 30 ಅಕ್ಟೋಬರ್ (ಹಿ.ಸ.):

ದೆಹಲಿ, ಮಹಾರಾಷ್ಟ್ರ, ಹರಿಯಾಣ, ಆಂಧ್ರಪ್ರದೇಶ, ತೆಲಂಗಾಣ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯಕ್ರಮದ ಗಡುವನ್ನು ಚುನಾವಣಾ ಆಯೋಗ ವಿಸ್ತರಿಸಿದೆ.

ಈ ರಾಜ್ಯಗಳಲ್ಲಿ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವುದು, ಅವುಗಳ ವಿಲೇವಾರಿ ಹಾಗೂ ಅಂತಿಮ ಮತದಾರರ ಪಟ್ಟಿ ಪ್ರಕಟಿಸುವ ದಿನಾಂಕಗಳಲ್ಲಿ ಬದಲಾವಣೆ ಮಾಡಲಾಗಿದೆ. ಆಯಾ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳ ಮನವಿ ಮತ್ತು ಅಲ್ಲಿನ ಪರಿಸ್ಥಿತಿಗಳನ್ನು ಪರಿಶೀಲಿಸಿದ ಬಳಿಕ ಆಯೋಗ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ.

ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಸಂದೀಪ್ ಕುಮಾರ್ ಮತ್ತು ಕಾರ್ಯದರ್ಶಿ ಪವನ್ ದಿವಾನ್ ಹೊರಡಿಸಿರುವ ನಿರ್ದೇಶನದಲ್ಲಿ, ಪರಿಷ್ಕೃತ ವೇಳಾಪಟ್ಟಿಯನ್ನು ವಿವಿಧ ಪ್ರಚಾರ ಮಾಧ್ಯಮಗಳ ಮೂಲಕ ವ್ಯಾಪಕವಾಗಿ ಜನರಿಗೆ ತಲುಪಿಸುವಂತೆ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ಸೂಚಿಸಲಾಗಿದೆ. ಮಾನ್ಯತೆ ಪಡೆದ ಎಲ್ಲ ರಾಜಕೀಯ ಪಕ್ಷಗಳಿಗೂ ಪರಿಷ್ಕೃತ ವೇಳಾಪಟ್ಟಿಯ ಲಿಖಿತ ಮಾಹಿತಿ ನೀಡುವಂತೆ ನಿರ್ದೇಶಿಸಲಾಗಿದೆ. ಅರ್ಹ ಮತದಾರರು ನಿಗದಿತ ಅವಧಿಯೊಳಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಅನುಕೂಲವಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ.

ಆರು ರಾಜ್ಯಗಳ ಪರಿಷ್ಕೃತ ವೇಳಾಪಟ್ಟಿ

ದೆಹಲಿ: ಅಕ್ಟೋಬರ್ 1 ಅರ್ಹತಾ ದಿನಾಂಕದ ಆಧಾರದಲ್ಲಿ ನಡೆಯುತ್ತಿರುವ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸುವ ಕೊನೆಯ ದಿನಾಂಕವನ್ನು ನವೆಂಬರ್ 25ರವರೆಗೆ ವಿಸ್ತರಿಸಲಾಗಿದೆ. ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 31ರಂದು ಪ್ರಕಟಿಸಲಾಗಿತ್ತು. ಈ ಹಿಂದೆ ಅಕ್ಟೋಬರ್ 30 ಕೊನೆಯ ದಿನವಾಗಿತ್ತು. ನೋಟಿಸ್ ಜಾರಿ ಮತ್ತು ಹಕ್ಕು-ಆಕ್ಷೇಪಣೆಗಳ ವಿಲೇವಾರಿ ಪ್ರಕ್ರಿಯೆಯನ್ನು ಡಿಸೆಂಬರ್ 15ರೊಳಗೆ ಪೂರ್ಣಗೊಳಿಸಲಾಗುತ್ತದೆ. ಅಂತಿಮ ಮತದಾರರ ಪಟ್ಟಿಯನ್ನು ಡಿಸೆಂಬರ್ 22, 2026ರಂದು ಪ್ರಕಟಿಸಲಾಗುತ್ತದೆ.

ಮಹಾರಾಷ್ಟ್ರ: ಅಕ್ಟೋಬರ್ 1 ಅರ್ಹತಾ ದಿನಾಂಕದ ಆಧಾರದಲ್ಲಿ ನಡೆಯುತ್ತಿರುವ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಹೆಸರು ಸೇರ್ಪಡೆ, ತೆಗೆದುಹಾಕುವಿಕೆ ಮತ್ತು ತಿದ್ದುಪಡಿಗೆ ಸಂಬಂಧಿಸಿದ ಹಕ್ಕು ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ನವೆಂಬರ್ 13 ಕೊನೆಯ ದಿನಾಂಕವಾಗಿದೆ. ನೋಟಿಸ್ ಜಾರಿ ಮತ್ತು ಅವುಗಳ ವಿಲೇವಾರಿ ಪ್ರಕ್ರಿಯೆಯನ್ನು ನವೆಂಬರ್ 25ರೊಳಗೆ ಪೂರ್ಣಗೊಳಿಸಲಾಗುತ್ತದೆ. ಅಂತಿಮ ಮತದಾರರ ಪಟ್ಟಿ ನವೆಂಬರ್ 30ರಂದು ಪ್ರಕಟವಾಗಲಿದೆ.

ಹರಿಯಾಣ: ಜುಲೈ 1 ಅರ್ಹತಾ ದಿನಾಂಕದ ಆಧಾರದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆಯಡಿ ನೋಟಿಸ್ ಜಾರಿ ಮತ್ತು ಹಕ್ಕು-ಆಕ್ಷೇಪಣೆಗಳ ವಿಲೇವಾರಿಗೆ ನವೆಂಬರ್ 20ರವರೆಗೆ ಕಾಲಾವಕಾಶ ನೀಡಲಾಗಿದೆ. ಅಂತಿಮ ಮತದಾರರ ಪಟ್ಟಿ ನವೆಂಬರ್ 30ರಂದು ಪ್ರಕಟವಾಗಲಿದೆ.

ಆಂಧ್ರಪ್ರದೇಶ: ಜುಲೈ 1 ಅರ್ಹತಾ ದಿನಾಂಕದ ಆಧಾರದಲ್ಲಿ ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿಗೆ ನವೆಂಬರ್ 20 ಕೊನೆಯ ದಿನಾಂಕವಾಗಿದೆ. ಅಂತಿಮ ಮತದಾರರ ಪಟ್ಟಿ ನವೆಂಬರ್ 30ರಂದು ಬಿಡುಗಡೆಯಾಗಲಿದೆ.

ತೆಲಂಗಾಣ: ಅಕ್ಟೋಬರ್ 1 ಅರ್ಹತಾ ದಿನಾಂಕದ ಆಧಾರದಲ್ಲಿ ನಡೆಯುತ್ತಿರುವ ಪರಿಷ್ಕರಣೆ ಪ್ರಕ್ರಿಯೆಯಡಿ ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿಗೆ ನವೆಂಬರ್ 26ರವರೆಗೆ ಕಾಲಾವಕಾಶ ನೀಡಲಾಗಿದೆ. ಅಂತಿಮ ಪಟ್ಟಿ ನವೆಂಬರ್ 30ರಂದು ಪ್ರಕಟವಾಗಲಿದೆ.

ನಾಗಾಲ್ಯಾಂಡ್: ಅಕ್ಟೋಬರ್ 1 ಅರ್ಹತಾ ದಿನಾಂಕದ ಆಧಾರದಲ್ಲಿ ನಡೆಯುತ್ತಿರುವ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಮುಖ್ಯ ಚುನಾವಣಾಧಿಕಾರಿಗಳ ಮನವಿಯ ಮೇರೆಗೆ ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಗಡುವನ್ನು ನವೆಂಬರ್ 25ರವರೆಗೆ ವಿಸ್ತರಿಸಲಾಗಿದೆ. ಅಂತಿಮ ಮತದಾರರ ಪಟ್ಟಿ ನವೆಂಬರ್ 30ರಂದು ಪ್ರಕಟವಾಗಲಿದೆ.

ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಆರು ರಾಜ್ಯಗಳಲ್ಲಿಯೂ ಅರ್ಹ ಮತದಾರರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಸಂಬಂಧಿತ ಆಕ್ಷೇಪಣೆಗಳನ್ನು ಸಲ್ಲಿಸಲು ಹೆಚ್ಚುವರಿ ಕಾಲಾವಕಾಶ ದೊರೆತಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande