₹54 ಕೋಟಿ ಮೌಲ್ಯದ ಸರ್ಕಾರಿ ಭೂ ಕಬಳಿಕೆ ಆರೋಪ: ಸಚಿವ ಎಚ್.ಸಿ. ಬಾಲಕೃಷ್ಣ ವಿರುದ್ಧ ರಾಜ್ಯಪಾಲರಿಗೆ ದೂರು
ಸಚಿವ ಎಚ್.ಸಿ. ಬಾಲಕೃಷ್ಣ ಹಾಗೂ ಅವರ ಪತ್ನಿ ರಾಧಾ ಬಾಲಕೃಷ್ಣ ವಿರುದ್ಧ ₹54 ಕೋಟಿಗೂ ಅಧಿಕ ಮೌಲ್ಯದ ಸರ್ಕಾರಿ ಗೋಮಾಳ ಭೂಮಿ ಕಬಳಿಕೆ ಆರೋಪ ಕೇಳಿಬಂದಿದ್ದು, ಬಿಜೆಪಿ ಮುಖಂಡ ಎನ್.ಆರ್. ರಮೇಶ್ ರಾಜ್ಯಪಾಲರಿಗೆ ದೂರು ನೀಡಿ ತನಿಖೆಗೆ ಒತ್ತಾಯಿಸಿದ್ದಾರೆ.
hc-balakrishna-faces-rs54-crore-government-land-grab-allegation


ಬೆಂಗಳೂರು, 03 ಅಕ್ಟೋಬರ್ (ಹಿ.ಸ.):

ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ ಹಾಗೂ ಅವರ ಪತ್ನಿ ರಾಧಾ ಬಾಲಕೃಷ್ಣ ವಿರುದ್ಧ ಸರ್ಕಾರಿ ಗೋಮಾಳ ಭೂಮಿಯನ್ನು ಅಕ್ರಮವಾಗಿ ಕಬಳಿಸಿದ ಆರೋಪ ಕೇಳಿಬಂದಿದೆ.

ಬಿಜೆಪಿ ಮುಖಂಡ ಹಾಗೂ ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್. ರಮೇಶ್ ಅವರು ಈ ಸಂಬಂಧ ರಾಜ್ಯಪಾಲರಿಗೆ ದೂರು ಸಲ್ಲಿಸಿ, ಸಚಿವರು ಹಾಗೂ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.

ತಾವರೆಕೆರೆ ಹೋಬಳಿಯ ಕುರುಬರಹಳ್ಳಿ ಗ್ರಾಮದ ಸರ್ಕಾರಿ ಭೂಮಿಗೆ ಸಂಬಂಧಿಸಿದಂತೆ ಈ ಆರೋಪ ಮಾಡಲಾಗಿದೆ.

ರಮೇಶ್ ಅವರ ದೂರಿನ ಪ್ರಕಾರ, ಮೂಲತಃ ಸರ್ವೆ ನಂಬರ್ 158ರಲ್ಲಿದ್ದ ಸರ್ಕಾರಿ ಗೋಮಾಳ ಜಮೀನಿನ ದಾಖಲೆಗಳನ್ನು ಬದಲಾಯಿಸಿ, ಸರ್ವೆ ನಂಬರ್ 233, 234, 235 ಮತ್ತು 236 ಎಂದು ಪೋಡಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ದೂರಿನಲ್ಲಿ ಉಲ್ಲೇಖಿಸಿರುವಂತೆ, ಒಟ್ಟು 8 ಎಕರೆ ಭೂಮಿಯನ್ನು ನರಸಿಂಹಯ್ಯ, ಗಂಗೂಬಾಯಿ, ನಾಗಮ್ಮ ಹಾಗೂ ನೀಲಮ್ಮ ಅವರ ಕುಟುಂಬಸ್ಥರ ಹೆಸರಿನಿಂದ ರಾಧಾ ಬಾಲಕೃಷ್ಣ ಅವರ ಹೆಸರಿಗೆ 2025ರ ಏಪ್ರಿಲ್ 3 ಮತ್ತು ಮೇ 15ರಂದು ಕೆಂಗೇರಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಕ್ರಯಪತ್ರ ಮಾಡಲಾಗಿದೆ ಎಂದು ರಮೇಶ್ ಆರೋಪಿಸಿದ್ದಾರೆ.

ಈ ಜಮೀನಿನ ಮೌಲ್ಯ ₹54 ಕೋಟಿಗೂ ಅಧಿಕ ಎಂದು ಅವರು ಹೇಳಿದ್ದಾರೆ. ಇದೇ ಆರೋಪದ ಕುರಿತು 2025ರಲ್ಲಿ ರಮೇಶ್ ಅವರು ಲೋಕಾಯುಕ್ತಕ್ಕೂ ದೂರು ನೀಡಿದ್ದರು.

2006ರಲ್ಲಿ ಸಲ್ಲಿಕೆಯಾಗಿದ್ದ ಎ.ಟಿ. ರಾಮಸ್ವಾಮಿ ಆಯೋಗದ ವರದಿಯಲ್ಲಿ ಕುರುಬರಹಳ್ಳಿ ಗ್ರಾಮದ ಈ ಪ್ರದೇಶವನ್ನು ಸರ್ಕಾರಿ ಗೋಮಾಳ ಎಂದು ದಾಖಲಿಸಲಾಗಿದೆ ಎಂಬುದನ್ನೂ ರಮೇಶ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಪ್ರಕರಣದಲ್ಲಿ ಸಚಿವ ಎಚ್.ಸಿ. ಬಾಲಕೃಷ್ಣ, ಅವರ ಪತ್ನಿ ರಾಧಾ ಬಾಲಕೃಷ್ಣ ಹಾಗೂ ದಾಖಲೆಗಳ ಬದಲಾವಣೆಗೆ ಸಹಕರಿಸಿದ್ದಾರೆ ಎನ್ನಲಾದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಲೋಕಾಯುಕ್ತ ಮತ್ತು ಜಾರಿ ನಿರ್ದೇಶನಾಲಯಕ್ಕೂ ದಾಖಲೆಗಳೊಂದಿಗೆ ದೂರು ನೀಡಿರುವುದಾಗಿ ರಮೇಶ್ ತಿಳಿಸಿದ್ದಾರೆ. ಅಲ್ಲದೆ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande