ಎಸ್ಐಆರ್: ಫಾರಂ–7 ಅರ್ಜಿಗಳ ಕುರಿತು ತನಿಖೆಯಾಗಲಿ; ತಪ್ಪು ನಡೆದಿದ್ದರೆ ಸತ್ಯಾಂಶ ಹೊರಬರಲಿದೆ:ಡಿಸಿಎಂ ಪರಮೇಶ್ವರ
ಬೆಂಗಳೂರು, 03 ಅಕ್ಟೋಬರ್ (ಹಿ.ಸ.): ಫಾರಂ–7 ಮೂಲಕ ಅರ್ಹ ಮತದಾರರ ಹೆಸರುಗಳನ್ನು ತೆಗೆದುಹಾಕಿರುವ ಆರೋಪಗಳ ಕುರಿತು ತನಿಖೆ ನಡೆಯಬೇಕು. ತನಿಖೆಯ ಬಳಿಕ ಸತ್ಯಾಂಶ ಹೊರಬರಲಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ. ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ಕಾಂಗ್ರೆಸ್
ಡಿಸಿಎಂ ಪರಮೇಶ್ವರ ಸಂಗ್ರಹ ಚಿತ್ರ


ಬೆಂಗಳೂರು, 03 ಅಕ್ಟೋಬರ್ (ಹಿ.ಸ.):

ಫಾರಂ–7 ಮೂಲಕ ಅರ್ಹ ಮತದಾರರ ಹೆಸರುಗಳನ್ನು ತೆಗೆದುಹಾಕಿರುವ ಆರೋಪಗಳ ಕುರಿತು ತನಿಖೆ ನಡೆಯಬೇಕು. ತನಿಖೆಯ ಬಳಿಕ ಸತ್ಯಾಂಶ ಹೊರಬರಲಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.

ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ಕಾಂಗ್ರೆಸ್ ನಾಯಕರು ತೆರಳಿದ ವಿಚಾರವಾಗಿ ಬಿಜೆಪಿ ಮಾಡುತ್ತಿರುವ ಟೀಕೆಗೆ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಪ್ರತಿಭಟನೆ ನಡೆಸಲು ಅಲ್ಲ, ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲು ತೆರಳಿದ್ದೆವು. ಮನವಿಗೆ ಸರಿಯಾದ ಉತ್ತರ ನೀಡದ ಹಿನ್ನೆಲೆಯಲ್ಲಿ ಉತ್ತರ ನೀಡುವವರೆಗೂ ಅಲ್ಲಿಯೇ ಕುಳಿತುಕೊಂಡಿದ್ದೆವು. ಮುಖ್ಯಮಂತ್ರಿ ಅಥವಾ ಸಚಿವರು ಪ್ರತಿಭಟನೆ ನಡೆಸಲು ಹೋಗಿರಲಿಲ್ಲ ಎಂದು ಹೇಳಿದರು.

ಫಾರಂ–7 ಅರ್ಜಿಗಳ ವಿಚಾರವಾಗಿ ಈಗಾಗಲೇ ಹಲವು ಕಡೆ ಪ್ರಕರಣಗಳು ದಾಖಲಾಗಿವೆ. ಅರ್ಜಿಗಳನ್ನು ಒಟ್ಟಾಗಿ ಸಂಗ್ರಹಿಸಿ, ಸಹಿ ಮಾಡಿ ಬಂಡಲ್‌ಗಳ ರೂಪದಲ್ಲಿ ಸಲ್ಲಿಸಿದವರ ವಿರುದ್ಧವೂ ಕೆಲವು ಕಡೆ ಪ್ರಕರಣ ದಾಖಲಾಗಿದೆ. ಈ ವಿಚಾರದಲ್ಲಿ ಪ್ರಕರಣ ದಾಖಲಿಸುವಂತೆ ಚುನಾವಣಾ ಆಯೋಗವನ್ನು ಕೋರಲಾಗಿದೆ. ಏಳು ದಿನಗಳ ಕಾಲ ನೋಟಿಸ್ ನೀಡಿ ಕಾಯ್ದು, ಬಳಿಕ ಪ್ರಕರಣ ದಾಖಲಿಸುವುದಾಗಿ ಚುನಾವಣಾ ಆಯೋಗ ಪತ್ರದ ಮೂಲಕ ತಿಳಿಸಿದೆ. ಅದರಂತೆ ಮುಂದಿನ ಕ್ರಮ ಕೈಗೊಳ್ಳಬೇಕಿದೆ ಎಂದರು.

ಫಾರಂ–7 ಅರ್ಜಿಗಳು ಎಲ್ಲಿ ಮುದ್ರಣವಾಗಿವೆ ಎಂಬ ಪ್ರಶ್ನೆಯೂ ಇದೆ. ಎಲ್ಲೋ ಒಂದು ಕಡೆ ಕೇಂದ್ರೀಕೃತವಾಗಿ ಅರ್ಜಿಗಳನ್ನು ಮುದ್ರಿಸಿ, ಸಂಪೂರ್ಣ ಮಾಹಿತಿಯನ್ನು ನಮೂದಿಸಲಾಗಿತ್ತು. ಬಳಿಕ ಅರ್ಜಿ ಸಲ್ಲಿಸುವವರ ಹೆಸರು ಮತ್ತು ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ಮಾತ್ರ ನಮೂದಿಸಿ ಸಹಿ ಮಾಡಲಾಗಿದೆ. ಒಂದೊಂದು ಬಂಡಲ್‌ನಲ್ಲಿ ಒಂದೇ ಸಮುದಾಯದ 50ರಿಂದ 60 ಜನರ ಅರ್ಜಿಗಳನ್ನು ಒಟ್ಟಾಗಿ ಸಲ್ಲಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈ ಮಾಹಿತಿ ಅರ್ಜಿ ಸಲ್ಲಿಸಿದವರಿಗೆ ಹೇಗೆ ಲಭ್ಯವಾಯಿತು, ಅರ್ಜಿಗಳನ್ನು ಯಾರು ಮತ್ತು ಎಲ್ಲಿ ಮುದ್ರಿಸಿದರು ಎಂಬುದರ ಕುರಿತು ತನಿಖೆಯಾಗಬೇಕಿದೆ ಎಂದು ಹೇಳಿದರು.

ಅಗತ್ಯ ಪುರಾವೆಗಳನ್ನು ಸೂಕ್ತ ಸಮಯದಲ್ಲಿ ಸಂಬಂಧಪಟ್ಟ ತನಿಖಾ ಸಂಸ್ಥೆಗಳ ಮುಂದೆ ಸಲ್ಲಿಸಲಾಗುವುದು. ಆರೋಪಗಳ ಕುರಿತು ತನಿಖೆ ನಡೆಯಬೇಕು. ತಪ್ಪು ನಡೆದಿದ್ದರೆ ಅದನ್ನು ತಪ್ಪು ಎಂದು ಹೇಳಲೇಬೇಕು. ಬೆಳಗಾವಿಯಲ್ಲಿ ಕೆಲವರು ತಪ್ಪಾಗಿದೆ ಎಂದು ಒಪ್ಪಿಕೊಂಡು ಲಿಖಿತವಾಗಿ ಅರ್ಜಿಗಳನ್ನು ಹಿಂಪಡೆದಿರುವ ಉದಾಹರಣೆಯೂ ಇದೆ ಎಂದರು.

ಅರ್ಜಿಗಳನ್ನು ಸಲ್ಲಿಸಿದವರು ಬೆದರಿಕೆಗೆ ಒಳಗಾಗಿ ಹಿಂಪಡೆದಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅರ್ಜಿ ಸಲ್ಲಿಸಿದವರು ಚಿಕ್ಕ ಮಕ್ಕಳಲ್ಲ. ಅರ್ಜಿ ಸಲ್ಲಿಸುವಾಗ ಅವರಿಗೆ ಪ್ರಜ್ಞೆ ಇತ್ತು. ಈಗ ತಮ್ಮನ್ನು ರಕ್ಷಿಸಿಕೊಳ್ಳಲು ವಿರೋಧ ಪಕ್ಷದವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದರು.

ಈ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕು. ತನಿಖೆ ನಡೆಸುವುದಕ್ಕೆ ಸರ್ಕಾರದ ಯಾವುದೇ ತಕರಾರಿಲ್ಲ. ತನಿಖೆಯಲ್ಲಿ ಯಾವುದೇ ತಪ್ಪು ನಡೆದಿಲ್ಲ ಮತ್ತು ಎಲ್ಲವೂ ಸರಿಯಾಗಿದೆ ಎಂದು ಸಾಬೀತಾದರೆ ಅದನ್ನು ಒಪ್ಪಿಕೊಳ್ಳಲು ಸಿದ್ಧ. ಆದರೆ ತಪ್ಪಾಗಿದೆ ಎಂಬುದು ನಮ್ಮ ಆರೋಪವಾಗಿದ್ದು, ಅದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಒದಗಿಸಲಾಗುವುದು. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಲಿ. ತನಿಖೆಯ ಬಳಿಕ ಸತ್ಯಾಂಶ ಹೊರಬರಲಿದೆ ಎಂದು ಡಾ. ಪರಮೇಶ್ವರ ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande