ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಪೂವಮ್ಮಗೆ ಸಿಎಂ ಅಭಿನಂದನೆ
ಏಷ್ಯನ್ ಗೇಮ್ಸ್ನಲ್ಲಿ 4×400 ಮೀಟರ್ ರಿಲೇಯಲ್ಲಿ ಚಿನ್ನದ ಪದಕ ಗೆದ್ದ ಕರ್ನಾಟಕದ ಓಟಗಾರ್ತಿ ಎಂ.ಆರ್. ಪೂವಮ್ಮ ಅವರನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿನಂದಿಸಿ, ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
cm-dk-shivakumar-congratulates-karnataka-athlete-mr-poovamma-on-asian-games-gold


ಬೆಂಗಳೂರು, 03 ಅಕ್ಟೋಬರ್ (ಹಿ.ಸ.):

ಜಪಾನ್ನ ಐಚಿ–ನಗೋಯಾದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ನ ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಚಿನ್ನದ ಪದಕ ಗೆದ್ದ ಕರ್ನಾಟಕದ ಅಥ್ಲೀಟ್ ಎಂ.ಆರ್. ಪೂವಮ್ಮ ಅವರನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿನಂದಿಸಿದ್ದಾರೆ.

ಪೂವಮ್ಮ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿದ ಮುಖ್ಯಮಂತ್ರಿ, ಅವರ ಸಾಧನೆಯನ್ನು ಶ್ಲಾಘಿಸಿ ದೇಶಕ್ಕೆ ಹಾಗೂ ಕರ್ನಾಟಕಕ್ಕೆ ಹೆಮ್ಮೆ ತಂದಿದ್ದೀರಿ ಎಂದು ಅಭಿನಂದಿಸಿದರು.

ಅಥ್ಲೆಟಿಕ್ಸ್ ಬಗ್ಗೆ ತಾವು ಸದಾ ಆಸಕ್ತಿ ಹೊಂದಿದ್ದು, ಕ್ರೀಡಾಪಟುಗಳಿಗೆ ಸರ್ಕಾರದಿಂದ ಸಾಧ್ಯವಿರುವ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಪೂವಮ್ಮ, ಕಿರಣ್ ಪಹಲ್, ಪ್ರಾಚಿ ಚೌಧರಿ ಹಾಗೂ ವಿತ್ತ್ಯಾ ರಾಮರಾಜ್ ಅವರ ತಂಡ 3:29.69 ಸಮಯದಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದಿದೆ. ಅಲ್ಲದೆ, ಮಿಶ್ರ 4×400 ಮೀಟರ್ ರಿಲೇಯಲ್ಲೂ ಪೂವಮ್ಮ ಬೆಳ್ಳಿ ಪದಕ ಗೆದ್ದಿದ್ದಾರೆ.

ಪೂವಮ್ಮ ಅವರ ಸಾಧನೆ ಮುಂದಿನ ಪೀಳಿಗೆಯ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಇದೇ ವೇಳೆ, ಅಕ್ಟೋಬರ್ 6ರಂದು ತಮ್ಮನ್ನು ಭೇಟಿ ಮಾಡುವಂತೆ ಪೂವಮ್ಮ ಅವರನ್ನು ಆಹ್ವಾನಿಸಿದ್ದಾರೆ.

“ನಿಮ್ಮ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನೀವು ದೇಶಕ್ಕೆ ಹೆಮ್ಮೆ ತಂದಿದ್ದೀರಿ. ನಿಮಗೆ ಸಾಧ್ಯವಿರುವ ಎಲ್ಲ ರೀತಿಯಲ್ಲೂ ನಾವು ಸಹಾಯ ಮಾಡುತ್ತೇವೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande