
ನವದೆಹಲಿ, 29 ಅಕ್ಟೋಬರ್ (ಹಿ.ಸ.):
ಹಸಿರು ಹೈಡ್ರೋಜನ್ ಕ್ಷೇತ್ರದಲ್ಲಿ ಭಾರತ ಮಹತ್ವದ ಪ್ರಗತಿ ಸಾಧಿಸಿದ್ದು, ೨೦೨೬ರ ಅಕ್ಟೋಬರ್ ವೇಳೆಗೆ ವಾರ್ಷಿಕ ೫,೫೫,೬೧೦ ಮೆಟ್ರಿಕ್ ಟನ್ ಪೂರೈಕೆ ಬದ್ಧತೆಯನ್ನು ತಲುಪಿದೆ. ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಅವರ ನೇತೃತ್ವದಲ್ಲಿ ಈ ವರ್ಷವೇ ವಾರ್ಷಿಕ ನಾಲ್ಕು ಲಕ್ಷ ಮೆಟ್ರಿಕ್ ಟನ್ಗೂ ಅಧಿಕ ಪೂರೈಕೆಗೆ ಸಂಬಂಧಿಸಿದ ೧೮ ಹೊಸ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಚಿವರ ಮಾಧ್ಯಮ ವಿಭಾಗ, ಭಾರತೀಯ ಕಂಪನಿಗಳು ಜಾಗತಿಕ ಮಟ್ಟದ ಬೃಹತ್ ಹಸಿರು ಹೈಡ್ರೋಜನ್ ಪೂರೈಕೆ ಒಪ್ಪಂದಗಳಿಗೆ ಸಹಿ ಹಾಕುವ ಮೂಲಕ ಈ ಕ್ಷೇತ್ರದಲ್ಲಿ ದೇಶದ ಸ್ಥಾನವನ್ನು ಬಲಪಡಿಸಿವೆ. ೨೦೨೩ರಲ್ಲಿ ರಾಷ್ಟ್ರೀಯ ಹಸಿರು ಹೈಡ್ರೋಜನ್ ಅಭಿಯಾನ ಆರಂಭವಾದಾಗಿನಿಂದ ಒಟ್ಟು ೨೩ ಪೂರೈಕೆ ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ಇವುಗಳ ಪೈಕಿ ಶೇ.೭೦ಕ್ಕೂ ಹೆಚ್ಚು ಪ್ರಮಾಣವನ್ನು ರಫ್ತಿಗೆ ಮೀಸಲಿಡಲಾಗಿದೆ.
ಭಾರತದ ಹಸಿರು ಹೈಡ್ರೋಜನ್ ಯೋಜನೆಗಳು ಸುಮಾರು ೯೦,೦೦೦ ಕೋಟಿ ರೂ. ಹೂಡಿಕೆ ಆಕರ್ಷಿಸುವ ನಿರೀಕ್ಷೆಯಿದೆ. ಭಾರತೀಯ ಪೂರೈಕೆದಾರರು ಹಸಿರು ಅಮೋನಿಯಾ ಮತ್ತು ಹಸಿರು ಮೆಥನಾಲ್ ಅನ್ನು ಸ್ಪರ್ಧಾತ್ಮಕ ಬೆಲೆಗಳಲ್ಲಿ ಒದಗಿಸುತ್ತಿದ್ದು, ಯುರೋಪ್ ಮತ್ತು ಜಪಾನ್ ಮಾರುಕಟ್ಟೆಗಳಲ್ಲಿ ಭಾರತದ ಸ್ಥಾನ ಬಲಗೊಳ್ಳುತ್ತಿದೆ.
ಹಡಗುಗಳಿಗೆ ಕಡಿಮೆ ಇಂಗಾಲದ ಹೊರಸೂಸುವಿಕೆಯ ಇಂಧನವಾಗಿ ಹಸಿರು ಅಮೋನಿಯಾ ಬಳಕೆ ಹೆಚ್ಚುತ್ತಿದೆ. ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಇಂಗಾಲದ ಹೊರಸೂಸುವಿಕೆ ತಗ್ಗಿಸಲು ಹಸಿರು ಅಮೋನಿಯಾ ಬಳಕೆಯ ಪ್ರಯತ್ನಗಳು ನಡೆಯುತ್ತಿವೆ. ರಸಗೊಬ್ಬರ ಉತ್ಪಾದನೆ ಮತ್ತು ಸಂಸ್ಕರಣಾ ಕ್ಷೇತ್ರಗಳಲ್ಲಿಯೂ ಹಸಿರು ಹೈಡ್ರೋಜನ್ ಆಧಾರಿತ ಉತ್ಪನ್ನಗಳ ಬಳಕೆ ವಿಸ್ತರಿಸುತ್ತಿದೆ.
ಅಕ್ಟೋಬರ್ ೨೦೨೬ರ ವೇಳೆಗೆ ಭಾರತದ ಹಸಿರು ಹೈಡ್ರೋಜನ್ ಉತ್ಪಾದನಾ ಸಂಸ್ಥೆಗಳು ಮತ್ತು ಕಂಪನಿಗಳ ಒಟ್ಟು ವಾರ್ಷಿಕ ಪೂರೈಕೆ ಬದ್ಧತೆ ೫,೫೫,೬೧೦ ಮೆಟ್ರಿಕ್ ಟನ್ ತಲುಪಿದೆ. ಇದು ರಾಷ್ಟ್ರೀಯ ಹಸಿರು ಹೈಡ್ರೋಜನ್ ಅಭಿಯಾನದ ಗುರಿಯ ಶೇ.೧೧ರಷ್ಟಾಗಿದೆ.
೯೦ ಸಾವಿರ ಕೋಟಿ ರೂ.ಗೂ ಅಧಿಕ ಹೂಡಿಕೆ ಅಗತ್ಯ
ದೇಶೀಯ ಮತ್ತು ಅಂತರರಾಷ್ಟ್ರೀಯ ಒಪ್ಪಂದಗಳಡಿ ಹಸಿರು ಹೈಡ್ರೋಜನ್ ಹಾಗೂ ಸಂಬಂಧಿತ ಉತ್ಪನ್ನಗಳ ಪೂರೈಕೆಗಾಗಿ ೯೦,೦೦೦ ಕೋಟಿ ರೂ.ಗೂ ಅಧಿಕ ಬಂಡವಾಳ ಹೂಡಿಕೆಯ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.
೨೦೨೯-೩೦ರವರೆಗೆ ೧೯,೭೪೪ ಕೋಟಿ ರೂ. ಆರಂಭಿಕ ವೆಚ್ಚದೊಂದಿಗೆ ರಾಷ್ಟ್ರೀಯ ಹಸಿರು ಹೈಡ್ರೋಜನ್ ಅಭಿಯಾನಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ೨೦೩೦ರ ವೇಳೆಗೆ ವಾರ್ಷಿಕ ಕನಿಷ್ಠ ೫೦ ಲಕ್ಷ ಮೆಟ್ರಿಕ್ ಟನ್ ಹಸಿರು ಹೈಡ್ರೋಜನ್ ಉತ್ಪಾದಿಸುವುದು ಇದರ ಗುರಿಯಾಗಿದೆ.
ಈ ಅಭಿಯಾನದಡಿ ೧೨೫ ಗಿಗಾವಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಸೇರ್ಪಡೆ, ಎಂಟು ಲಕ್ಷ ಕೋಟಿ ರೂ.ಗೂ ಅಧಿಕ ಒಟ್ಟು ಹೂಡಿಕೆ, ಆರು ಲಕ್ಷಕ್ಕೂ ಹೆಚ್ಚು ಉದ್ಯೋಗಗಳ ಸೃಷ್ಟಿ ಹಾಗೂ ವಾರ್ಷಿಕ ಐದು ಕೋಟಿ ಮೆಟ್ರಿಕ್ ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ತಡೆಯುವ ಗುರಿಗಳನ್ನು ಹೊಂದಲಾಗಿದೆ.
ಜಪಾನ್ ಜತೆ ಮಹತ್ವದ ಪೂರೈಕೆ ಒಪ್ಪಂದಗಳು
ಭಾರತದ ಎಸಿಎಂಇ ಸಮೂಹವು ಜಪಾನ್‌ನ ಐಎಚ್‌ಐ ಸಂಸ್ಥೆಯೊಂದಿಗೆ ವಾರ್ಷಿಕ ೪,೮೮,೦೦೦ ಮೆಟ್ರಿಕ್ ಟನ್ ಹಸಿರು ಅಮೋನಿಯಾ ಪೂರೈಕೆಗಾಗಿ ಒಪ್ಪಂದ ಮಾಡಿಕೊಂಡಿದೆ. ಇದೇ ಸಮೂಹವು ಜಪಾನ್‌ನ ಮಿತ್ಸುಬಿಷಿ ಗ್ಯಾಸ್ ಕೆಮಿಕಲ್ ಸಂಸ್ಥೆಗೆ ವಾರ್ಷಿಕ ಒಂದು ಲಕ್ಷ ಮೆಟ್ರಿಕ್ ಟನ್ ಹಸಿರು ಮೆಥನಾಲ್ ಪೂರೈಸಲು ಒಪ್ಪಂದಕ್ಕೆ ಸಹಿ ಹಾಕಿದೆ.
ಎಲ್ ಆ್ಯಂಡ್ ಟಿ ಮತ್ತು ಇಟೊಚು ಸಂಸ್ಥೆಗಳು ವಾರ್ಷಿಕ ಮೂರು ಲಕ್ಷ ಮೆಟ್ರಿಕ್ ಟನ್ ಹಸಿರು ಅಮೋನಿಯಾ ಪೂರೈಕೆಗಾಗಿ ವಿಶೇಷ ಉದ್ದೇಶದ ಸಂಸ್ಥೆಯನ್ನು ರಚಿಸಿವೆ. ೨೦೨೯ರ ಡಿಸೆಂಬರ್‌ನಿಂದ ಪೂರೈಕೆ ಆರಂಭವಾಗುವ ನಿರೀಕ್ಷೆಯಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್ ಸಿ ಆ್ಯಂಡ್ ಟಿ ಕಾರ್ಪೊರೇಷನ್ ಜತೆ ದೀರ್ಘಾವಧಿಯ ಪೂರೈಕೆ ಮತ್ತು ಖರೀದಿ ಒಪ್ಪಂದ ಮಾಡಿಕೊಂಡಿದೆ. ಮೂರು ಶತಕೋಟಿ ಅಮೆರಿಕನ್ ಡಾಲರ್‌ಗೂ ಅಧಿಕ ಮೌಲ್ಯದ ಈ ಒಪ್ಪಂದವು ಜಾಗತಿಕ ಮಟ್ಟದ ಅತಿದೊಡ್ಡ ಹಸಿರು ಅಮೋನಿಯಾ ಪೂರೈಕೆ ಒಪ್ಪಂದಗಳಲ್ಲಿ ಒಂದಾಗಿದೆ. ೨೦೨೮ರ ವೇಳೆಗೆ ಪೂರೈಕೆ ಆರಂಭವಾಗುವ ನಿರೀಕ್ಷೆಯಿದೆ.
ಅಗಸ್ತ್ಯ ಸಂಸ್ಥೆಯು ಶ್ರೀಲಂಕಾದ ಎಸ್‌ಎಆರ್ ಸಂಸ್ಥೆಗೆ ವಾರ್ಷಿಕ ೨.೫ ಲಕ್ಷ ಮೆಟ್ರಿಕ್ ಟನ್ ಹಸಿರು ಮೆಥನಾಲ್ ಪೂರೈಸುವ ಹಕ್ಕು ಪಡೆಯುವ ಪ್ರಕ್ರಿಯೆಯಲ್ಲಿದೆ.
ಎಎಂ ಗ್ರೀನ್ ಸಂಸ್ಥೆಯು ಜರ್ಮನಿಗೆ ನವೀಕರಿಸಬಹುದಾದ ಇಂಧನ ಮೂಲಗಳಿಂದ ಉತ್ಪಾದಿಸಿದ ಅಮೋನಿಯಾ ಪೂರೈಸಲು ದೀರ್ಘಾವಧಿಯ ಖರೀದಿ ಒಪ್ಪಂದ ಪಡೆದುಕೊಂಡಿದೆ. ಜರ್ಮನಿಯ ಹಿಂಟ್‌ಕೋ ಸಂಸ್ಥೆ ಹತ್ತು ವರ್ಷಗಳ ಅವಧಿಯಲ್ಲಿ ಕನಿಷ್ಠ ೫೮೫ ದಶಲಕ್ಷ ಯುರೋ ಮೌಲ್ಯದ ಅಮೋನಿಯಾವನ್ನು ಎಎಂ ಗ್ರೀನ್‌ನಿಂದ ಖರೀದಿಸಲಿದೆ.
ಜರ್ಮನಿಗೆ ಹಸಿರು ಅಮೋನಿಯಾ ಪೂರೈಕೆಗೆ ಒಪ್ಪಂದ
ಎಎಂ ಗ್ರೀನ್ ಸಂಸ್ಥೆಯು ಜರ್ಮನಿಯ ಯುನಿಪರ್ ಜತೆ ವಾರ್ಷಿಕ ೨.೫ ಲಕ್ಷ ಮೆಟ್ರಿಕ್ ಟನ್ ಹಸಿರು ಅಮೋನಿಯಾ ಪೂರೈಕೆಗಾಗಿ ದೃಢವಾದ ಒಪ್ಪಂದಕ್ಕೆ ಸಹಿ ಹಾಕಿದೆ. ಜಪಾನ್‌ನ ಪ್ರಮುಖ ವಿದ್ಯುತ್ ಉತ್ಪಾದನಾ ಸಂಸ್ಥೆ ಜೆಇಆರ್‌ಎ ಜತೆ ವಾರ್ಷಿಕ ೭೦,೦೦೦ ಮೆಟ್ರಿಕ್ ಟನ್ ಹಸಿರು ಅಮೋನಿಯಾ ಪೂರೈಕೆಗೆ ದೀರ್ಘಾವಧಿಯ ಒಪ್ಪಂದ ಮಾಡಿಕೊಂಡಿದೆ.
ಜೌನೊ ಜೌಲ್ಸ್ ಸಂಸ್ಥೆಯು ಸೆಲೆಕ್ಟ್ ಎನರ್ಜಿ ಸಂಸ್ಥೆಯೊಂದಿಗೆ ದಿನಕ್ಕೆ ೬೦೦ ಮೆಟ್ರಿಕ್ ಟನ್ ಉತ್ಪಾದನಾ ಸಾಮರ್ಥ್ಯಕ್ಕೆ ಅನುಗುಣವಾಗಿ ವಾರ್ಷಿಕ ಸುಮಾರು ೨.೧೯ ಲಕ್ಷ ಮೆಟ್ರಿಕ್ ಟನ್ ಹಸಿರು ಅಮೋನಿಯಾ ಪೂರೈಕೆ ಒಪ್ಪಂದಕ್ಕೆ ಸಹಿ ಹಾಕಿದೆ.
ದೇಶೀಯ ಬೇಡಿಕೆಗೂ ಆದ್ಯತೆ
ರಫ್ತಿನ ಜತೆಗೆ ದೇಶೀಯ ಬೇಡಿಕೆಯನ್ನು ಪೂರೈಸುವುದಕ್ಕೂ ಒತ್ತು ನೀಡಲಾಗಿದೆ. ದೇಶದ ೧೧ ರಸಗೊಬ್ಬರ ಘಟಕಗಳಿಗೆ ವಾರ್ಷಿಕ ೬.೭ ಲಕ್ಷ ಮೆಟ್ರಿಕ್ ಟನ್ ಹಸಿರು ಅಮೋನಿಯಾ ಉತ್ಪಾದನೆ ಮತ್ತು ಪೂರೈಕೆಗಾಗಿ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
ಹಸಿರು ಹೈಡ್ರೋಜನ್ ಪರಿವರ್ತನೆಗೆ ಉತ್ತೇಜನ ನೀಡುವ ಎಸ್‌ಐಜಿಎಚ್‌ಟಿ ಕಾರ್ಯಕ್ರಮದಡಿ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ನುಮಾಲಿಗಢ್ ಸಂಸ್ಕರಣಾಗಾರಗಳಿಗೆ ವಾರ್ಷಿಕ ೩೦,೦೦೦ ಮೆಟ್ರಿಕ್ ಟನ್ ಹಸಿರು ಹೈಡ್ರೋಜನ್ ಉತ್ಪಾದನೆ ಮತ್ತು ಪೂರೈಕೆಗಾಗಿ ಯೋಜನೆಗಳನ್ನು ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.