ರಾಹುಲ್ ನಾಯಕತ್ವದಲ್ಲಿ ಕಾಂಗ್ರೆಸ್ಗೆ ಸೋಲಿನ ಶತಕ: ಪ್ರಲ್ಹಾದ ಜೋಶಿ ಟೀಕೆ
ನವದೆಹಲಿ, 28 ಅಕ್ಟೋಬರ್ (ಹಿ.ಸ.): ಕರ್ನಾಟಕ ವಿಧಾನ ಪರಿಷತ್ತಿನ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್‌ಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ. ದೆಹಲಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಪ್ರಹ್ಲಾದ ಜೋಶಿ ಸಂಗ್ರಹ ಚಿತ್ರ


ನವದೆಹಲಿ, 28 ಅಕ್ಟೋಬರ್ (ಹಿ.ಸ.):

ಕರ್ನಾಟಕ ವಿಧಾನ ಪರಿಷತ್ತಿನ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್‌ಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ದೆಹಲಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಸತತ ಚುನಾವಣಾ ಸೋಲುಗಳನ್ನು ಎದುರಿಸುತ್ತಿದೆ ಎಂದು ಟೀಕಿಸಿದರು. ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಬಳಿಕ ಇದೀಗ ಕಾಂಗ್ರೆಸ್ ಸೋಲಿನ ಶತಕ ಪೂರೈಸಿದೆ ಎಂದು ವ್ಯಂಗ್ಯವಾಡಿದರು.

ದೇಶದ 28 ಕಡೆಗಳಲ್ಲೂ ಕಾಂಗ್ರೆಸ್‌ಗೆ ಸೋಲು

ದೇಶದ 28 ಕಡೆಗಳಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಗಳಲ್ಲಿ ಕಾಂಗ್ರೆಸ್ ಒಂದರಲ್ಲೂ ಗೆಲುವು ಸಾಧಿಸಿಲ್ಲ ಎಂದು ಪ್ರಲ್ಹಾದ ಜೋಶಿ ಆರೋಪಿಸಿದರು. ರಾಹುಲ್ ಗಾಂಧಿ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸದಿರುವುದೇ ಪಕ್ಷದ ಹಿನ್ನಡೆಗೆ ಕಾರಣ ಎಂದು ಅಭಿಪ್ರಾಯಪಟ್ಟರು.

ಚುನಾವಣೆ ನಡೆಯುವ ಸಂದರ್ಭದಲ್ಲಿ ರಾಹುಲ್ ಗಾಂಧಿ ಎಲ್ಲಿರುತ್ತಾರೆ ಎಂಬುದು ಅವರ ಭದ್ರತಾ ಸಿಬ್ಬಂದಿಗೂ ತಿಳಿದಿರುವುದಿಲ್ಲ. ಚುನಾವಣೆ ಮುಗಿದ ಬಳಿಕ ಚುನಾವಣಾ ಆಯೋಗ ಮತ್ತು ವಿದ್ಯುನ್ಮಾನ ಮತಯಂತ್ರಗಳ ವಿರುದ್ಧ ಆರೋಪ ಮಾಡುತ್ತಾರೆ ಎಂದು ಟೀಕಿಸಿದ ಅವರು, ವಿದೇಶಗಳಿಗೆ ತೆರಳುವ ಬದಲು ಚುನಾವಣಾ ಕಣದಲ್ಲಿ ನಿಂತು ಎದುರಿಸಲಿ ಎಂದು ಹೇಳಿದರು.

ಬ್ಯಾಲೆಟ್ ಪೇಪರ್‌ನಲ್ಲೂ ಕಾಂಗ್ರೆಸ್‌ಗೆ ಹಿನ್ನಡೆ

ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ನಿರಂತರ ಆರೋಪ ಮಾಡುತ್ತಿದ್ದ ಕಾಂಗ್ರೆಸ್‌ಗೆ ಈ ಬಾರಿ ಮತಪತ್ರಗಳ ಮೂಲಕವೇ ಮತದಾರರು ಉತ್ತರ ನೀಡಿದ್ದಾರೆ ಎಂದು ಸಚಿವರು ಹೇಳಿದರು.

ಕರ್ನಾಟಕ ಸೇರಿದಂತೆ ದೇಶದ 28 ಕಡೆಗಳಲ್ಲಿ ಮತಪತ್ರಗಳ ಮೂಲಕ ಚುನಾವಣೆ ನಡೆದಿದೆ. ಕರ್ನಾಟಕದ 133 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸುಮಾರು 2.60 ಲಕ್ಷ ಮತದಾರರು ಮತಪತ್ರಗಳ ಮೂಲಕ ತಮ್ಮ ತೀರ್ಪು ನೀಡಿದ್ದಾರೆ. ಹೀಗಿರುವಾಗ ದೇಶದ ಚುನಾವಣಾ ವ್ಯವಸ್ಥೆಯ ವಿರುದ್ಧ ಆಧಾರರಹಿತ ಆರೋಪ ಮಾಡುವುದನ್ನು ಕಾಂಗ್ರೆಸ್ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಈ ಹಿಂದೆ ವಿದ್ಯುನ್ಮಾನ ಮತಯಂತ್ರಗಳು ಮತ್ತು ಚುನಾವಣಾ ಆಯೋಗದ ಮುಖ್ಯಸ್ಥರ ವಿರುದ್ಧ ಆರೋಪ ಮಾಡಿತ್ತು. ಈಗ ಮತಪತ್ರಗಳ ಮೂಲಕ ನಡೆದ ಚುನಾವಣೆಯಲ್ಲೂ ಹಿನ್ನಡೆ ಅನುಭವಿಸಿರುವ ಕಾಂಗ್ರೆಸ್, ಮುಂದೇನು 'ಮತಪತ್ರ ಕಳವು' ಅಭಿಯಾನ ಆರಂಭಿಸುತ್ತದೆಯೇ ಎಂದು ಪ್ರಶ್ನಿಸಿದರು.

ಧಾರವಾಡದಲ್ಲಿ ಬಿಜೆಪಿಗೆ ಶೇ. 54ರಷ್ಟು ಮತ

ಧಾರವಾಡದಲ್ಲಿ ಬಿಜೆಪಿಗೆ ಶೇ. 54ರಷ್ಟು ಮತಗಳು ಲಭಿಸಿದ್ದರೆ, ಕಾಂಗ್ರೆಸ್‌ಗೆ ಶೇ. 40ರಷ್ಟು ಮತಗಳು ಬಂದಿವೆ ಎಂದು ಪ್ರಲ್ಹಾದ ಜೋಶಿ ತಿಳಿಸಿದರು. ಬೆಂಗಳೂರಿನಲ್ಲಿ ಬಿಜೆಪಿ ಶೇ. 58ರಷ್ಟು ಮತ್ತು ಕಾಂಗ್ರೆಸ್ ಶೇ. 38ರಷ್ಟು ಮತಗಳನ್ನು ಪಡೆದಿದೆ ಎಂದರು.

ಎನ್‌ಡಿಎ ಮೈತ್ರಿಕೂಟ ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದೆ. ಕಾಂಗ್ರೆಸ್‌ನಂತೆ ಮೈತ್ರಿಕೂಟದ ಪಕ್ಷಗಳ ನಡುವೆ ಸೌಹಾರ್ದ ಸ್ಪರ್ಧೆ ನಡೆಸಿಲ್ಲ ಎಂದು ಅವರು ಹೇಳಿದರು.

ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಶಿಕ್ಷಕರು ಮತ್ತು ಪದವೀಧರ ಮತದಾರರಿಗೆ ಹಣ ಹಂಚಲು ಕಾಂಗ್ರೆಸ್ ಹಲವು ರೀತಿಯ ಪ್ರಯತ್ನಗಳನ್ನು ಮಾಡಿದೆ ಎಂದು ಸಚಿವರು ಆರೋಪಿಸಿದರು. ಆದರೆ ಮತದಾರರ ಮುಂದೆ ಕಾಂಗ್ರೆಸ್‌ನ ಪ್ರಯತ್ನಗಳು ಫಲಿಸಲಿಲ್ಲ ಎಂದ ಅವರು, ಚುನಾವಣಾ ಫಲಿತಾಂಶವು ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಜನರು ನೀಡಿರುವ ಎಚ್ಚರಿಕೆ ಎಂದು ಹೇಳಿದರು.

ಕಾಂಗ್ರೆಸ್ ಅಭಿವೃದ್ಧಿಯತ್ತ ಗಮನಹರಿಸುವ ಬದಲು ರಾಜಕೀಯ ನಾಟಕಗಳಲ್ಲಿ ತೊಡಗಿದೆ ಎಂದು ಟೀಕಿಸಿದ ಪ್ರಲ್ಹಾದ ಜೋಶಿ, ರಾಹುಲ್ ಗಾಂಧಿ ಮಕ್ಕಳನ್ನು ಕರೆತಂದು ಪ್ರತಿಭಟನೆಗಳ ಮೂಲಕ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕರ್ನಾಟಕ ಸರ್ಕಾರಕ್ಕೆ ಇನ್ನೂ ಒಂದೂವರೆ ವರ್ಷ ಕಾಲಾವಕಾಶವಿದೆ. ಅನಗತ್ಯ ಆರೋಪಗಳನ್ನು ಮಾಡುವುದನ್ನು ಬಿಟ್ಟು ಉತ್ತಮ ಆಡಳಿತ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದರು.

ರಾಜ್ಯ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಲ್ಹಾದ ಜೋಶಿ ಆರೋಪಿಸಿದರು. ಶಾಸಕರು ಹಣ ಕೇಳುತ್ತಿದ್ದಾರೆ ಮತ್ತು ಗುತ್ತಿಗೆದಾರರು ಶೇ. 50ರಷ್ಟು ಕಮಿಷನ್ ನೀಡಬೇಕಾಗಿದೆ ಎಂದು ಆರೋಪಿಸುತ್ತಿದ್ದಾರೆ ಎಂಬುದನ್ನೂ ಪ್ರಸ್ತಾಪಿಸಿದರು.

ರಾಜ್ಯದ ಗೃಹ ಸಚಿವರು ಸಂಬಂಧವಿಲ್ಲದ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ ಅವರು, ಗೃಹ ಸಚಿವರು ಅನಗತ್ಯ ಹೇಳಿಕೆಗಳನ್ನು ನೀಡುವುದರಲ್ಲೇ ತೊಡಗಿದ್ದಾರೆ ಎಂದು ವ್ಯಂಗ್ಯವಾಡಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande