ಚಂಡಮಾರುತ ಅರ್ಣಬ್ ತೀವ್ರ ಸ್ವರೂಪಕ್ಕೆ: ಆಂಧ್ರ, ಒಡಿಶಾ ಸೇರಿ ಹಲವು ರಾಜ್ಯಗಳಲ್ಲಿ ಎಚ್ಚರಿಕೆ; 60ಕ್ಕೂ ಹೆಚ್ಚು ರೈಲುಗಳ ಸಂಚಾರ ರದ್ದು
ನವದೆಹಲಿ, 27 ಅಕ್ಟೋಬರ್ (ಹಿ.ಸ.): ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ಅರ್ಣಬ್ ಚಂಡಮಾರುತ ಅತ್ಯಂತ ತೀವ್ರ ಸ್ವರೂಪದ ಚಂಡಮಾರುತವಾಗಿ ಬದಲಾಗಿದೆ. ಈ ಚಂಡಮಾರುತ ಆಂಧ್ರಪ್ರದೇಶದ ಕರಾವಳಿಯ ಯಾನಂ ಸಮೀಪ ಅ. 28ರ ಬೆಳಗ್ಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
सांकेतिक।


ನವದೆಹಲಿ, 27 ಅಕ್ಟೋಬರ್ (ಹಿ.ಸ.):

ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ಅರ್ಣಬ್ ಚಂಡಮಾರುತ ಅತ್ಯಂತ ತೀವ್ರ ಸ್ವರೂಪದ ಚಂಡಮಾರುತವಾಗಿ ಬದಲಾಗಿದೆ. ಈ ಚಂಡಮಾರುತ ಆಂಧ್ರಪ್ರದೇಶದ ಕರಾವಳಿಯ ಯಾನಂ ಸಮೀಪ ಅ. 28ರ ಬೆಳಗ್ಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಆಂಧ್ರಪ್ರದೇಶ, ಒಡಿಶಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಎಚ್ಚರಿಕೆ ಘೋಷಿಸಲಾಗಿದ್ದು, ಚಂಡಮಾರುತದ ಪರಿಣಾಮವಾಗಿ ನವೆಂಬರ್ 4ರವರೆಗೆ 60ಕ್ಕೂ ಹೆಚ್ಚು ರೈಲುಗಳ ಸಂಚಾರ ರದ್ದುಪಡಿಸಲಾಗಿದೆ ಅಥವಾ ಮಾರ್ಗ ಬದಲಾಯಿಸಲಾಗಿದೆ.

ಚಂಡಮಾರುತವು ಪ್ರಸ್ತುತ ವಿಶಾಖಪಟ್ಟಣದಿಂದ ಸುಮಾರು 300 ಕಿ.ಮೀ. ದೂರದಲ್ಲಿದೆ. ಅ. 27ರ ಸಂಜೆವರೆಗೆ ಪಶ್ಚಿಮ-ವಾಯವ್ಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆಯಿದ್ದು, ಬಳಿಕ ವಾಯವ್ಯ ದಿಕ್ಕಿಗೆ ತಿರುಗುವ ನಿರೀಕ್ಷೆಯಿದೆ. ಅ. 28ರಂದು ಬಾಪಟ್ಲಾ ಮತ್ತು ವಿಶಾಖಪಟ್ಟಣದ ನಡುವಿನ ಯಾನಂ ಸಮೀಪ ಆಂಧ್ರಪ್ರದೇಶದ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ.

ಚಂಡಮಾರುತ ಕರಾವಳಿಯನ್ನು ದಾಟುವ ಸಂದರ್ಭದಲ್ಲಿ ಗಂಟೆಗೆ 115ರಿಂದ 125 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆಯಿದೆ. ಗಾಳಿಯ ವೇಗದ ಸೆಳೆತ ಗಂಟೆಗೆ 140 ಕಿ.ಮೀ. ತಲುಪಬಹುದು. ಆಂಧ್ರಪ್ರದೇಶದಾದ್ಯಂತ ಇಂದು ಮತ್ತು ನಾಳೆ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಆಂಧ್ರಪ್ರದೇಶ ಹಾಗೂ ದಕ್ಷಿಣ ಒಡಿಶಾದ ಕರಾವಳಿ ಪ್ರದೇಶಗಳಿಗೆ ಹವಾಮಾನ ಇಲಾಖೆ ಕೆಂಪು ಎಚ್ಚರಿಕೆ ನೀಡಿದೆ.

ಒಡಿಶಾದ ಆರು ಜಿಲ್ಲೆಗಳಲ್ಲಿ ಎಚ್ಚರಿಕೆ

ಚಂಡಮಾರುತದ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರವು ಗಂಜಾಂ, ಗಜಪತಿ, ರಾಯಗಡ, ಮಲ್ಕಾನಗಿರಿ, ಕೊರಾಪುಟ್ ಮತ್ತು ನಬರಂಗಪುರ ಜಿಲ್ಲೆಗಳಲ್ಲಿ ಎಚ್ಚರಿಕೆ ಘೋಷಿಸಿದೆ. ಪರಿಸ್ಥಿತಿಯ ಮೇಲ್ವಿಚಾರಣೆ ಹಾಗೂ ಸಿದ್ಧತೆಗಳ ನಿರ್ವಹಣೆಗಾಗಿ ಮುಖ್ಯಮಂತ್ರಿ ಎಂಟು ಸಚಿವರಿಗೆ ಜವಾಬ್ದಾರಿ ವಹಿಸಿದ್ದಾರೆ.

ಸಂಭಾವ್ಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ, ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ 225 ಅಗ್ನಿಶಾಮಕ ತಂಡಗಳನ್ನೂ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.

ಚಂಡಮಾರುತದ ಕುರಿತು ಮುದ್ರಣ, ವಿದ್ಯುನ್ಮಾನ ಮತ್ತು ಅಂತರ್ಜಾಲ ಮಾಧ್ಯಮಗಳಿಗೆ ಸರ್ಕಾರ ವಿಶೇಷ ಮಾರ್ಗಸೂಚಿ ಹೊರಡಿಸಿದೆ. ಭಾರತೀಯ ಹವಾಮಾನ ಇಲಾಖೆ, ವಿಶೇಷ ಪರಿಹಾರ ಆಯುಕ್ತರು ಹಾಗೂ ಅಧಿಕೃತ ಜಿಲ್ಲಾ ಆಡಳಿತ ಹೊರಡಿಸುವ ಮಾಹಿತಿಯನ್ನು ಮಾತ್ರ ಪ್ರಸಾರ ಮಾಡುವಂತೆ ಸೂಚಿಸಲಾಗಿದೆ. ದೃಢೀಕರಿಸದ ಮುನ್ಸೂಚನೆಗಳು, ಕಾಲ್ಪನಿಕ ಚಂಡಮಾರುತದ ಪಥದ ಮಾದರಿಗಳು ಹಾಗೂ ಜನರಲ್ಲಿ ಆತಂಕ ಸೃಷ್ಟಿಸುವ ಸುದ್ದಿಗಳನ್ನು ಪ್ರಸಾರ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.

ಗಂಜಾಂ ಜಿಲ್ಲೆಯಲ್ಲಿ ಅ. 27ರಿಂದ 29ರವರೆಗೆ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲಾಗಿದೆ. ಮಕ್ಕಳು ಮತ್ತು ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಒದಗಿಸುವ ಉದ್ದೇಶದಿಂದ ಮನೆಮನೆಗೆ ಒಣ ಪಡಿತರ ತಲುಪಿಸಲು ಸೂಚಿಸಲಾಗಿದೆ. ಕರಾವಳಿ ಮಾರ್ಗಗಳಲ್ಲಿ ಸುರಕ್ಷಿತ ಸಂಚಾರ ಖಚಿತಪಡಿಸಲು ರಾಜ್ಯ ಸಾರಿಗೆ ಪ್ರಾಧಿಕಾರವೂ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಹಲವು ರಾಜ್ಯಗಳಲ್ಲಿ ಭಾರಿ ಮಳೆಯ ಮುನ್ಸೂಚನೆ

ಚಂಡಮಾರುತದ ಪರಿಣಾಮ ಆಂಧ್ರಪ್ರದೇಶ ಮತ್ತು ಒಡಿಶಾಕ್ಕೆ ಮಾತ್ರ ಸೀಮಿತವಾಗದೆ ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್ ಹಾಗೂ ಪೂರ್ವ ಉತ್ತರ ಪ್ರದೇಶದ ಕೆಲವು ಭಾಗಗಳಲ್ಲೂ ಮಳೆಯಾಗುವ ಸಾಧ್ಯತೆಯಿದೆ. ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣದ ಕೆಲವು ಪ್ರದೇಶಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ.

ಚಂಡಮಾರುತದ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ತಮಿಳುನಾಡು ಮತ್ತು ಪುದುಚೇರಿಯ ಒಂಬತ್ತು ಬಂದರುಗಳಿಗೂ ಎಚ್ಚರಿಕೆ ನೀಡಲಾಗಿದೆ.

60ಕ್ಕೂ ಹೆಚ್ಚು ರೈಲುಗಳ ಸಂಚಾರ ರದ್ದು

ಚಂಡಮಾರುತದ ಅಪಾಯದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ನವೆಂಬರ್ 4ರವರೆಗೆ 60ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ರದ್ದುಪಡಿಸಿದ್ದು, ಕೆಲವು ರೈಲುಗಳ ಮಾರ್ಗ ಮತ್ತು ಕಾರ್ಯಾಚರಣೆಯಲ್ಲಿಯೂ ಬದಲಾವಣೆ ಮಾಡಿದೆ. ಅ. 27 ಮತ್ತು 28ರಂದು ಮಾತ್ರ 53 ರೈಲುಗಳ ಸಂಚಾರ ರದ್ದಾಗಲಿದೆ.

ರಾಜಮಂಡ್ರಿ–ವಿಜಯವಾಡ ನಡುವೆ ಸಂಚರಿಸುವ ರೈಲು ಸಂಖ್ಯೆ 67261, ವಿಜಯವಾಡ–ಮಚಲಿಪಟ್ಟಣಂ ನಡುವಿನ 67263 ಮತ್ತು 67265 ರೈಲುಗಳನ್ನು ಅ. 27 ಹಾಗೂ 28ರಂದು ರದ್ದುಪಡಿಸಲಾಗಿದೆ. ಮಚಲಿಪಟ್ಟಣಂ–ವಿಜಯವಾಡ ನಡುವಿನ 67264 ಮತ್ತು 67256 ರೈಲುಗಳೂ ಈ ಎರಡು ದಿನ ಸಂಚರಿಸುವುದಿಲ್ಲ.

ಮಚಲಿಪಟ್ಟಣಂ–ಗುಡಿವಾಡ ನಡುವಿನ 67271, 67272, 67252, 67253, 67254 ಮತ್ತು 67255 ರೈಲುಗಳ ಸಂಚಾರವನ್ನೂ ರದ್ದುಪಡಿಸಲಾಗಿದೆ. ಕಾಕಿನಾಡ ಬಂದರು–ವಿಶಾಖಪಟ್ಟಣ ನಡುವಿನ 17267 ಮತ್ತು 17268 ರೈಲುಗಳು ಹಾಗೂ ಪಾರ್ವತಿಪುರಂ–ವಿಶಾಖಪಟ್ಟಣ ನಡುವಿನ 07267 ಮತ್ತು 07268 ರೈಲುಗಳ ಸಂಚಾರವೂ ಅ. 27 ಮತ್ತು 28ರಂದು ಇರುವುದಿಲ್ಲ.

ಇಂದು ವಿಜಯವಾಡ–ನರಸಾಪುರ ನಡುವಿನ 67258, 17269 ಮತ್ತು 67257 ರೈಲುಗಳು ಸಂಚರಿಸುವುದಿಲ್ಲ. ನರಸಾಪುರ–ರಾಜಮಂಡ್ರಿ ನಡುವಿನ 67246, ನರಸಾಪುರ–ಭೀಮಾವರಂ ಜಂಕ್ಷನ್ ನಡುವಿನ 17264 ಹಾಗೂ ವಿಜಯವಾಡ–ಕಾಕಿನಾಡ ಬಂದರು ನಡುವಿನ 17257 ರೈಲುಗಳನ್ನೂ ರದ್ದುಪಡಿಸಲಾಗಿದೆ.

ಇದಲ್ಲದೆ, ವಿಜಯವಾಡ–ರಾಜಮಂಡ್ರಿ ನಡುವಿನ 67202, ವಿಜಯವಾಡ–ಮಚಲಿಪಟ್ಟಣಂ ನಡುವಿನ 67267, ನರಸಾಪುರ–ಗುಂಟೂರು ಜಂಕ್ಷನ್ ನಡುವಿನ 67247 ಮತ್ತು ನರಸಾಪುರ–ವಿಜಯವಾಡ ನಡುವಿನ 67276 ರೈಲುಗಳ ಸಂಚಾರವೂ ರದ್ದಾಗಿದೆ.

ಅ. 28ರಂದು ವಿಜಯವಾಡ–ಭೀಮಾವರಂ ಜಂಕ್ಷನ್ ನಡುವಿನ 67275 ಮತ್ತು 67281, ಭೀಮಾವರಂ–ನಿಡದವೋಲು ಜಂಕ್ಷನ್ ನಡುವಿನ 67277 ಮತ್ತು 67283 ಹಾಗೂ ಹಿಂತಿರುಗುವ ಮಾರ್ಗದ 67278 ಮತ್ತು 67284 ರೈಲುಗಳು ಸಂಚರಿಸುವುದಿಲ್ಲ.

ವಿಜಯವಾಡ–ಗುಂಟೂರು ಜಂಕ್ಷನ್ ನಡುವಿನ 67229, ಗುಂಟೂರು–ರೇಪಲ್ಲೆ ನಡುವಿನ 67223, ರೇಪಲ್ಲೆ–ತೇನಾಲಿ ನಡುವಿನ 67224 ಮತ್ತು ತೇನಾಲಿ–ವಿಜಯವಾಡ ನಡುವಿನ 67222 ರೈಲುಗಳನ್ನೂ ರದ್ದುಪಡಿಸಲಾಗಿದೆ. ನರಸಾಪುರ–ವಿಜಯವಾಡ ನಡುವಿನ 17270 ಹಾಗೂ ಕಾಕಿನಾಡ ಬಂದರು–ವಿಜಯವಾಡ ನಡುವಿನ 17258 ರೈಲುಗಳು ಕೂಡ ಅ. 28ರಂದು ಸಂಚರಿಸುವುದಿಲ್ಲ.

ಹಿರಾಕುಂಡ್ ಎಕ್ಸ್‌ಪ್ರೆಸ್ ಮಾರ್ಗ ಬದಲಾವಣೆ

ಚಂಡಮಾರುತದ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರ ಮಾರ್ಗದಲ್ಲಿಯೂ ಬದಲಾವಣೆ ಮಾಡಲಾಗಿದೆ. ಭುವನೇಶ್ವರದಿಂದ ಜಗದಲ್‌ಪುರಕ್ಕೆ ತೆರಳುವ ಹಿರಾಕುಂಡ್ ಎಕ್ಸ್‌ಪ್ರೆಸ್ (18447) ರೈಲನ್ನು ಅ. 27ರಿಂದ 30ರವರೆಗೆ ರಾಯಗಡದಲ್ಲೇ ಪ್ರಯಾಣ ಮುಕ್ತಾಯಗೊಳಿಸುವಂತೆ ವ್ಯವಸ್ಥೆ ಮಾಡಲಾಗಿದೆ.

ಜಗದಲ್‌ಪುರದಿಂದ ಭುವನೇಶ್ವರಕ್ಕೆ ತೆರಳುವ ಹಿರಾಕುಂಡ್ ಎಕ್ಸ್‌ಪ್ರೆಸ್ (18448) ರೈಲು ಅ. 28ರಿಂದ 31ರವರೆಗೆ ಕೊರಾಪುಟ್ ಬದಲಿಗೆ ರಾಯಗಡದಿಂದ ತನ್ನ ಪ್ರಯಾಣ ಆರಂಭಿಸಲಿದೆ.

ದಕ್ಷಿಣ ಕರಾವಳಿ ರೈಲ್ವೆ ವಲಯವು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿಗಳು ಮತ್ತು ನಿಲ್ದಾಣಗಳ ಸಹಾಯ ಕೇಂದ್ರಗಳನ್ನು ಸ್ಥಾಪಿಸಿದೆ. ಪ್ರಯಾಣಿಕರಿಗೆ ಹಣ ಮರುಪಾವತಿ, ಆಹಾರ, ಪರ್ಯಾಯ ವಿದ್ಯುತ್ ವ್ಯವಸ್ಥೆ ಹಾಗೂ ವೈದ್ಯಕೀಯ ನೆರವು ಒದಗಿಸಲು ಸಿದ್ಧತೆ ಮಾಡಲಾಗಿದೆ. ವಲಯ ಮತ್ತು ವಿಭಾಗೀಯ ಮುಖ್ಯ ಕಚೇರಿಗಳಲ್ಲಿಯೂ ದಿನದ 24 ಗಂಟೆ ಕಾರ್ಯನಿರ್ವಹಿಸುವ ತುರ್ತು ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದೆ.

ಪ್ರಯಾಣ ಆರಂಭಿಸುವ ಮೊದಲು ತಮ್ಮ ರೈಲಿನ ಸಂಚಾರ ಸ್ಥಿತಿಯನ್ನು ಅಧಿಕೃತ ರೈಲ್ವೆ ವಿಚಾರಣಾ ವ್ಯವಸ್ಥೆಯ ಮೂಲಕ ಪರಿಶೀಲಿಸಿಕೊಳ್ಳುವಂತೆ ಇಲಾಖೆ ಪ್ರಯಾಣಿಕರಿಗೆ ಮನವಿ ಮಾಡಿದೆ. ರೈಲುಗಳ ಸಂಚಾರ ರದ್ದತಿ ಹಾಗೂ ಬದಲಾವಣೆಯಿಂದ ಉಂಟಾಗುವ ಅನಾನುಕೂಲಕ್ಕೆ ರೈಲ್ವೆ ಇಲಾಖೆ ವಿಷಾದ ವ್ಯಕ್ತಪಡಿಸಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande