
ಬೆಂಗಳೂರು, 27 ಅಕ್ಟೋಬರ್ (ಹಿ.ಸ.):
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವು ಪೌರಕಾರ್ಮಿಕರು, ಸಂಚಾರ ಪೊಲೀಸರು ಸೇರಿದಂತೆ ರಸ್ತೆಗಳಲ್ಲಿ ನಿರಂತರವಾಗಿ ಕರ್ತವ್ಯ ನಿರ್ವಹಿಸುವ ಮುಂಚೂಣಿ ಕಾರ್ಮಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ನಗರದ 11,000ಕ್ಕೂ ಹೆಚ್ಚು ಮುಂಚೂಣಿ ಕಾರ್ಮಿಕರ ಆರೋಗ್ಯ ತಪಾಸಣೆಯಲ್ಲಿ ಶೇ. 45ರಷ್ಟು ಪೌರಕಾರ್ಮಿಕರು ಹಾಗೂ ಶೇ. 28ರಷ್ಟು ಸಂಚಾರ ಪೊಲೀಸ್ ಸಿಬ್ಬಂದಿಯ ಶ್ವಾಸಕೋಶದ ಕಾರ್ಯಕ್ಷಮತೆ ಕುಸಿದಿರುವುದು ಪತ್ತೆಯಾಗಿದೆ ಎಂದು ವರದಿಯಾಗಿದೆ.
ವಾಯು ಮಾಲಿನ್ಯ ಮತ್ತು ಧೂಳಿನಿಂದ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆಗಳ ಕುರಿತು ‘ವಾಯು’ ಕ್ಲಿನಿಕ್ ಆಯೋಜಿಸಿದ್ದ ದುಂಡುಮೇಜಿನ ಸಭೆಯಲ್ಲಿ ಈ ಆತಂಕಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ತಪಾಸಣೆಗೆ ಒಳಗಾದ ಬಿಎಂಟಿಸಿ ಸಿಬ್ಬಂದಿಯಲ್ಲಿ ಶೇ. 29.5ರಷ್ಟು ಹಾಗೂ ನಿರ್ಮಾಣ ಕಾರ್ಮಿಕರಲ್ಲಿ ಶೇ. 15ರಷ್ಟು ಜನರು ಶ್ವಾಸಕೋಶದ ದೌರ್ಬಲ್ಯದಿಂದ ಬಳಲುತ್ತಿರುವುದು ವರದಿಯಾಗಿದೆ.
ಯುವಜನರಲ್ಲೂ ಹೃದಯಾಘಾತದ ಅಪಾಯ:
ವಾಯು ಮಾಲಿನ್ಯವು ಕೇವಲ ಉಸಿರಾಟದ ಸಮಸ್ಯೆಗಳಿಗೆ ಸೀಮಿತವಾಗಿಲ್ಲ. ಹೃದಯದ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಹೃದ್ರೋಗ ತಜ್ಞರಾದ ಡಾ. ಸಿ.ಎನ್. ಮಂಜುನಾಥ್ ಮತ್ತು ಡಾ. ವಿವೇಕ್ ಜಾವಳಿ ಅವರು, ಕಳಪೆ ಗಾಳಿಯ ಗುಣಮಟ್ಟದಿಂದ ಯುವಜನರಲ್ಲಿಯೂ ಹೃದಯಾಘಾತ ಹಾಗೂ ಪಾರ್ಶ್ವವಾಯುವಿನ ಅಪಾಯ ಹೆಚ್ಚುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ವಾಹನಗಳ ಹೊಗೆ, ರಸ್ತೆ ಧೂಳು ಹಾಗೂ ನಿರಂತರವಾಗಿ ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ. ಅದರಲ್ಲೂ ದಿನವಿಡೀ ರಸ್ತೆಗಳಲ್ಲಿ ಕೆಲಸ ಮಾಡುವ ಪೌರಕಾರ್ಮಿಕರು ಮತ್ತು ಸಂಚಾರ ಪೊಲೀಸರ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೆಲಸದ ಅವಧಿ ಬದಲಾವಣೆ, ಮಾಸ್ಕ್ ಕಡ್ಡಾಯಕ್ಕೆ ಒತ್ತಾಯ:
ಮುಂಚೂಣಿ ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ತುರ್ತು ಕ್ರಮ ಕೈಗೊಳ್ಳಬೇಕು ಎಂದು ತಜ್ಞರು ಒತ್ತಾಯಿಸಿದ್ದಾರೆ. ವಾಹನ ದಟ್ಟಣೆ ಮತ್ತು ವಾಯು ಮಾಲಿನ್ಯ ಹೆಚ್ಚಿರುವ ಸಮಯದಲ್ಲಿ ಪೌರಕಾರ್ಮಿಕರು ಕಾರ್ಯನಿರ್ವಹಿಸುವ ವೇಳೆಯನ್ನು ಮರುಹೊಂದಿಸಬೇಕು. ಕರ್ತವ್ಯದ ವೇಳೆ ಸೂಕ್ತ ಸುರಕ್ಷತಾ ಮಾಸ್ಕ್ಗಳನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಸಲಹೆ ನೀಡಿದ್ದಾರೆ.
ಇದರ ಜೊತೆಗೆ, ಪೌರಕಾರ್ಮಿಕರು, ಸಂಚಾರ ಪೊಲೀಸರು, ಬಿಎಂಟಿಸಿ ಸಿಬ್ಬಂದಿ ಹಾಗೂ ನಿರ್ಮಾಣ ಕಾರ್ಮಿಕರಿಗೆ ನಿಯಮಿತವಾಗಿ ವೈದ್ಯಕೀಯ ತಪಾಸಣೆ ನಡೆಸಬೇಕು. ಶ್ವಾಸಕೋಶದ ಕಾರ್ಯಕ್ಷಮತೆ ಪರಿಶೀಲನೆ ಸೇರಿದಂತೆ ಅಗತ್ಯ ಆರೋಗ್ಯ ಪರೀಕ್ಷೆಗಳನ್ನು ವಾರ್ಷಿಕವಾಗಿ ಕೈಗೊಳ್ಳಬೇಕು. ಮಾಲಿನ್ಯದಿಂದ ಉಂಟಾಗುವ ಅಪಾಯಗಳ ಕುರಿತು ಕಾರ್ಮಿಕರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ, ಅವರ ಆರೋಗ್ಯ ರಕ್ಷಣೆಗೆ ಸೂಕ್ತ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ತಜ್ಞರು ಸೂಚಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R