
ಬೆಂಗಳೂರು, 26 ಅಕ್ಟೋಬರ್ (ಹಿ.ಸ.):
ಕಲಬುರಗಿ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಕುರಿತು ನಿರಂತರವಾಗಿ ಪ್ರಶ್ನೆಗಳನ್ನು ಎತ್ತುತ್ತಿರುವ ಬಿಜೆಪಿ ನಾಯಕರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಕಲಬುರಗಿಯ ತೊಗರಿ ಮತ್ತು ಖಡಕ್ ರೊಟ್ಟಿಯ ಕುರಿತು ಪ್ರಸ್ತಾಪಿಸಿರುವುದನ್ನು ಉಲ್ಲೇಖಿಸಿರುವ ಅವರು, ತಮ್ಮ ಸಾಧನೆಗಳಿಗೆ ಕೇಂದ್ರ ಸರ್ಕಾರವೇ ಪುರಾವೆ ನೀಡುತ್ತಿದೆ ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, “ಬಿಜೆಪಿಯವರ ಪ್ರಶ್ನೆಗಳಿಗೆ ನಾನು ಉತ್ತರಿಸುವುದಕ್ಕಿಂತ ಕೇಂದ್ರ ಸರ್ಕಾರ ನನ್ನ ಕೆಲಸಗಳ ಬಗ್ಗೆ ಪುರಾವೆಗಳನ್ನು ನೀಡುತ್ತಿದೆ. ಮೋದಿಯವರ ಮನ್ ಕಿ ಬಾತ್ನಲ್ಲಿ ನಮ್ಮ ಕಾಮ್ ಕಿ ಬಾತ್ ಸದ್ದು ಮಾಡಿವೆ” ಎಂದು ವ್ಯಂಗ್ಯವಾಡಿದ್ದಾರೆ.
ಕಲಬುರಗಿಗೆ ಪ್ರಿಯಾಂಕ್ ಖರ್ಗೆ ಮಾಡಿದ್ದೇನು ಎಂದು ಪ್ರಶ್ನಿಸುವ ಬಿಜೆಪಿಯವರು ಪ್ರಧಾನಿ ಮೋದಿಯವರ ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ಆಲಿಸಬೇಕು ಎಂದು ಅವರು ಹೇಳಿದ್ದಾರೆ.
“ನನ್ನ ಸಾಧನೆಗಳನ್ನು ಮತ್ತು ಕೆಲಸಗಳನ್ನು ಪ್ರಶ್ನಿಸುವುದು ಬಿಜೆಪಿ ಸ್ನೇಹಿತರಿಗೆ ನಿತ್ಯದ ಉದ್ಯೋಗದಂತಾಗಿದೆ. ಉತ್ತರ ಸಿಕ್ಕರೂ ಮತ್ತೆ ಅದೇ ಪ್ರಶ್ನೆಗಳನ್ನು ಎತ್ತುವುದು ಅವರ ಹವ್ಯಾಸವಾಗಿದೆ. ನಮ್ಮ ಸಾಧನೆಗಳನ್ನು ಪ್ರಧಾನಿ ಮೋದಿಯವರು ಮೆಚ್ಚುತ್ತಿದ್ದರೂ ಕರ್ನಾಟಕದ ಬಿಜೆಪಿಯವರು ಮೆಚ್ಚಲು ಸಿದ್ಧರಿಲ್ಲ” ಎಂದು ಟೀಕಿಸಿದ್ದಾರೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಲಬುರಗಿ ಉತ್ಪನ್ನಗಳಿಗೆ ಮನ್ನಣೆ
ಕಲಬುರಗಿಯ ಖಡಕ್ ರೊಟ್ಟಿಯ ಬ್ರ್ಯಾಂಡಿಂಗ್ ಹಾಗೂ ಮಾರುಕಟ್ಟೆ ವಿಸ್ತರಣೆಗೆ ಕೈಗೊಂಡ ಕ್ರಮಗಳಿಂದ ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಗುರುತು ದೊರಕಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಹಿಂದೆ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಕಲಬುರಗಿ ರೊಟ್ಟಿಯ ಕುರಿತು ಪ್ರಸ್ತಾಪಿಸಿದ್ದ ಪ್ರಧಾನಿ ಮೋದಿ, ಇದೀಗ ಭೌಗೋಳಿಕ ಸೂಚಕ (ಜಿಐ) ಟ್ಯಾಗ್ ಪಡೆದಿರುವ ಕಲಬುರಗಿ ತೊಗರಿಯನ್ನು ಮಾಲ್ಡೀವ್ಸ್ಗೆ ರಫ್ತು ಮಾಡುವ ಉಪಕ್ರಮದ ಬಗ್ಗೆಯೂ ಮಾತನಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
“ಕಲಬುರಗಿಯ ವೈಶಿಷ್ಟ್ಯಪೂರ್ಣ ತೊಗರಿಗೆ ಜಾಗತಿಕ ಮಾರುಕಟ್ಟೆ ಕಲ್ಪಿಸುವ ಮೂಲಕ ಜಿಲ್ಲೆಯ ರೈತರಿಗೆ ಶೇ. 30ರಷ್ಟು ಹೆಚ್ಚಿನ ಧಾರಣೆ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದೇವೆ. ರೈತರ ಉತ್ಪನ್ನಗಳಿಗೆ ಹೆಚ್ಚಿನ ಮೌಲ್ಯ ದೊರಕಿಸುವುದು ನಮ್ಮ ಉದ್ದೇಶವಾಗಿದೆ” ಎಂದು ತಿಳಿಸಿದ್ದಾರೆ.
ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಒತ್ತು
ಕಲಬುರಗಿ ಜಿಲ್ಲೆಯಲ್ಲಿ ಬೆಳೆಯುವ ಹೆಸರು, ತೊಗರಿ, ಉದ್ದು ಹಾಗೂ ಹುರುಳಿ ಸೇರಿದಂತೆ ವಿವಿಧ ಕೃಷಿ ಉತ್ಪನ್ನಗಳನ್ನು ಸ್ಥಳೀಯವಾಗಿಯೇ ಮೌಲ್ಯವರ್ಧನೆ ಮಾಡುವ ಉದ್ದೇಶದಿಂದ ಎನರ್ಜಿ ಬಾರ್ಗಳನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸುವ ಕಾರ್ಯಕ್ರಮ ಜಾರಿಯಲ್ಲಿದೆ ಎಂದು ಹೇಳಿದ್ದಾರೆ.
ಕಲಬುರಗಿ ಪಲ್ಸ್, ಭೀಮಾ ಪಲ್ಸ್, ಕಲಬುರಗಿ ಖಡಕ್ ರೊಟ್ಟಿ ಹಾಗೂ ಕಮಲಾಪುರ ಕೆಂಪು ಬಾಳೆ ಸೇರಿದಂತೆ ಜಿಲ್ಲೆಯ ಕೃಷಿ ಉತ್ಪನ್ನಗಳಿಗೆ ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ಮತ್ತು ಪ್ರತ್ಯೇಕ ಗುರುತು ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ. ಈ ಮೂಲಕ ರೈತರು ಹಾಗೂ ಕಾರ್ಮಿಕರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಗುರಿ ಹೊಂದಲಾಗಿದೆ ಎಂದು ವಿವರಿಸಿದ್ದಾರೆ.
“ಬಿಜೆಪಿಯವರು ನನ್ನನ್ನು ಪ್ರಶ್ನಿಸುವ ಮತ್ತು ಟೀಕಿಸುವ ಮುನ್ನ ಮೋದಿಯವರ ಮನ್ ಕಿ ಬಾತ್ ಕೇಳಲಿ. ನಂತರ ಆತ್ಮಸಾಕ್ಷಿಯಿಂದ ತಮ್ಮ ದಿಲ್ ಕಿ ಬಾತ್ ಆಡಲಿ” ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R