ಹಂಚಿಕೊಂಡ ಬದ್ಧತೆಗಳನ್ನು ಕಾರ್ಯರೂಪದ ಫಲಿತಾಂಶಗಳಾಗಿ ಪರಿವರ್ತಿಸಿ: ಬ್ರಿಕ್ಸ್ ರಾಷ್ಟ್ರಗಳಿಗೆ ಓಂ ಬಿರ್ಲಾ ಕರೆ
ನವದೆಹಲಿ, 26 ಅಕ್ಟೋಬರ್ (ಹಿ.ಸ.): ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ತಮ್ಮ ಹಂಚಿಕೊಂಡ ಬದ್ಧತೆಗಳನ್ನು ಸ್ಪಷ್ಟ ಹಾಗೂ ಕಾರ್ಯರೂಪದ ಫಲಿತಾಂಶಗಳಾಗಿ ಪರಿವರ್ತಿಸಬೇಕು ಎಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಕರೆ ನೀಡಿದ್ದಾರೆ. ಸೋಮವಾರ ನವದೆಹಲಿಯ ಸಂವಿಧಾನ ಸದನದಲ್ಲಿ ಆರಂಭವಾದ 2026ರ 12ನೇ ಬ್ರಿಕ್ಸ್ ಸಂಸದೀ
लोकसभा अध्यक्ष ओम बिरला सोमवार को 12वें ब्रिक्स संसदीय मंच, 2026 के उद्घाटन सत्र को संबोधित करते हुए


ನವದೆಹಲಿ, 26 ಅಕ್ಟೋಬರ್ (ಹಿ.ಸ.):

ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ತಮ್ಮ ಹಂಚಿಕೊಂಡ ಬದ್ಧತೆಗಳನ್ನು ಸ್ಪಷ್ಟ ಹಾಗೂ ಕಾರ್ಯರೂಪದ ಫಲಿತಾಂಶಗಳಾಗಿ ಪರಿವರ್ತಿಸಬೇಕು ಎಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಕರೆ ನೀಡಿದ್ದಾರೆ.

ಸೋಮವಾರ ನವದೆಹಲಿಯ ಸಂವಿಧಾನ ಸದನದಲ್ಲಿ ಆರಂಭವಾದ 2026ರ 12ನೇ ಬ್ರಿಕ್ಸ್ ಸಂಸದೀಯ ವೇದಿಕೆಯ ಉದ್ಘಾಟನಾ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಅವರು, ಕಾನೂನು ರಚನೆ, ಆಯವ್ಯಯ, ಚರ್ಚೆ ಹಾಗೂ ಮೇಲ್ವಿಚಾರಣೆಯ ಮೂಲಕ ಸಂಸತ್ತುಗಳು ಈ ನಿಟ್ಟಿನಲ್ಲಿ ಮಹತ್ವದ ಕೊಡುಗೆ ನೀಡಬಹುದು ಎಂದು ಹೇಳಿದರು.

ಜಾಗತಿಕ ಸವಾಲುಗಳ ನಡುವೆ ಸಂವಾದ, ರಾಜತಾಂತ್ರಿಕತೆ ಮತ್ತು ಪರಸ್ಪರ ಸಹಕಾರದ ಮಹತ್ವ ಹೆಚ್ಚಾಗಿದೆ. ಅಂತರರಾಷ್ಟ್ರೀಯ ಉದ್ವಿಗ್ನತೆಯನ್ನು ತಗ್ಗಿಸುವಲ್ಲಿ ಹಾಗೂ ಸಮಸ್ಯೆಗಳಿಗೆ ಶಾಂತಿಯುತ ಪರಿಹಾರ ಕಂಡುಕೊಳ್ಳುವಲ್ಲಿ ಸಂಸತ್ತುಗಳು ಪ್ರಮುಖ ಪಾತ್ರ ವಹಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಬ್ರಿಕ್ಸ್ ಸಂಸದೀಯ ಸಹಕಾರದ ನಿಜವಾದ ಶಕ್ತಿ, ವೈವಿಧ್ಯತೆಯನ್ನು ಸಾಮೂಹಿಕ ಪ್ರಗತಿಯಾಗಿ ಪರಿವರ್ತಿಸುವ ಸಾಮರ್ಥ್ಯದಲ್ಲಿದೆ ಎಂದು ಬಿರ್ಲಾ ಹೇಳಿದರು. ಸದಸ್ಯ ಹಾಗೂ ಪಾಲುದಾರ ರಾಷ್ಟ್ರಗಳ ಸಂಸದೀಯ ಪ್ರತಿನಿಧಿಗಳನ್ನು ಸ್ವಾಗತಿಸಿದ ಅವರು, ಭಾರತದ ಐತಿಹಾಸಿಕ ಸಂವಿಧಾನ ಸದನದಲ್ಲಿ ಅವರ ಉಪಸ್ಥಿತಿಯು ಸಂವಾದ, ಪರಸ್ಪರ ಗೌರವ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಬಗೆಗಿನ ಹಂಚಿಕೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದರು.

ಬ್ರಿಕ್ಸ್ ಸ್ಥಾಪನೆಯಾಗಿ ಈ ವರ್ಷ 20 ವರ್ಷಗಳು ಪೂರ್ಣಗೊಳ್ಳುತ್ತಿವೆ. ಸಂಘಟನೆಯ ವ್ಯಾಪ್ತಿ ವಿಸ್ತರಿಸುತ್ತಿದ್ದು, ಜಾಗತಿಕ ಬೆಳವಣಿಗೆಗಳು ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವೂ ಹೆಚ್ಚುತ್ತಿದೆ. ಬ್ರಿಕ್ಸ್ ರಾಷ್ಟ್ರಗಳು ವಿಶ್ವದ ಸುಮಾರು ಅರ್ಧದಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುತ್ತಿದ್ದು, ಜಾಗತಿಕ ಆರ್ಥಿಕತೆ ಮತ್ತು ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಮಹತ್ವದ ಪಾಲು ಹೊಂದಿವೆ. ಇದು ಅವುಗಳ ಸಾಮೂಹಿಕ ಶಕ್ತಿಯ ಜೊತೆಗೆ ಜಾಗತಿಕ ಜವಾಬ್ದಾರಿಯನ್ನೂ ತೋರಿಸುತ್ತದೆ ಎಂದು ತಿಳಿಸಿದರು.

ಭೌಗೋಳಿಕ, ಸಾಂಸ್ಕೃತಿಕ, ಭಾಷಿಕ ಮತ್ತು ಸಾಮಾಜಿಕ ವೈವಿಧ್ಯತೆಗಳ ಹೊರತಾಗಿಯೂ ಪ್ರಜಾಸತ್ತಾತ್ಮಕ ಮೌಲ್ಯಗಳು ಹಾಗೂ ಮಾನವೀಯತೆಯ ಬಗೆಗಿನ ಸಾಮೂಹಿಕ ಜವಾಬ್ದಾರಿ ಬ್ರಿಕ್ಸ್ ರಾಷ್ಟ್ರಗಳನ್ನು ಒಗ್ಗೂಡಿಸುತ್ತವೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ಜಂಟಿ ಘೋಷಣೆಯನ್ನು ಸರ್ವಾನುಮತದಿಂದ ಅಂಗೀಕರಿಸಿರುವುದು ಮಹತ್ವದ ಸಾಧನೆ. ಈಗ ಆ ಬದ್ಧತೆಗಳನ್ನು ಸ್ಪಷ್ಟ ಫಲಿತಾಂಶಗಳಾಗಿ ಪರಿವರ್ತಿಸುವ ಅಗತ್ಯವಿದೆ ಎಂದು ಬಿರ್ಲಾ ಹೇಳಿದರು.

ಪ್ರಾದೇಶಿಕ ಸಂಘರ್ಷಗಳು, ಯುದ್ಧಗಳು, ಆರ್ಥಿಕ ಅಸ್ಥಿರತೆ, ವ್ಯಾಪಾರ ಉದ್ವಿಗ್ನತೆ, ಭಯೋತ್ಪಾದನೆ ಮತ್ತು ಹವಾಮಾನ ಬದಲಾವಣೆ ಸೇರಿದಂತೆ ಜಗತ್ತು ಹಲವು ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಇವುಗಳ ಪರಿಣಾಮ ಯಾವುದೇ ಒಂದು ದೇಶದ ಗಡಿಗಳಿಗೆ ಸೀಮಿತವಾಗಿರುವುದಿಲ್ಲ. ಹೀಗಾಗಿ ಪರಸ್ಪರ ತಿಳಿವಳಿಕೆ ಮತ್ತು ವಿಶ್ವಾಸವನ್ನು ಬಲಪಡಿಸುವುದು, ಅಂತರರಾಷ್ಟ್ರೀಯ ಉದ್ವಿಗ್ನತೆಯನ್ನು ಕಡಿಮೆ ಮಾಡುವುದು ಹಾಗೂ ಜಾಗತಿಕ ಸಮಸ್ಯೆಗಳಿಗೆ ಶಾಂತಿಯುತ ಪರಿಹಾರ ಕಂಡುಕೊಳ್ಳುವುದು ಸಂಸತ್ತುಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಭಾರತವನ್ನು ಪ್ರಜಾಪ್ರಭುತ್ವದ ತೊಟ್ಟಿಲು ಎಂದು ಕರೆಯಲಾಗುತ್ತದೆ. ಇಲ್ಲಿ ಸಂವಾದ, ವಿಚಾರಗಳ ವೈವಿಧ್ಯತೆ ಹಾಗೂ ಒಪ್ಪಿಗೆ ಮತ್ತು ಭಿನ್ನಾಭಿಪ್ರಾಯಗಳ ನಡುವೆಯೂ ಪರಸ್ಪರ ಗೌರವಿಸುವ ಮನೋಭಾವಕ್ಕೆ ಮಹತ್ವ ನೀಡಲಾಗುತ್ತದೆ. ಈ ಪ್ರಜಾಸತ್ತಾತ್ಮಕ ಶಕ್ತಿಯ ಆಧಾರದಲ್ಲಿ ಭಾರತ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ. ಕಾನೂನುಗಳು ಮತ್ತು ನೀತಿಗಳ ಮೂಲಕ ದೇಶದ ಬಹುಮುಖ ಪ್ರಗತಿಗೆ ಸಂಸತ್ತು ಭದ್ರ ಅಡಿಪಾಯ ಹಾಕಿದೆ ಎಂದು ಅವರು ತಿಳಿಸಿದರು.

ಜನಕೇಂದ್ರಿತ ಅಭಿವೃದ್ಧಿಗೆ ಸಂಸತ್ತುಗಳ ಬಲವರ್ಧನೆ

ಜಾಗತಿಕ ದಕ್ಷಿಣದ ರಾಷ್ಟ್ರಗಳ ಧ್ವನಿಯನ್ನು ಬಲಪಡಿಸುವ ವೇದಿಕೆಯಾಗಿ ಬ್ರಿಕ್ಸ್ ಕಾರ್ಯನಿರ್ವಹಿಸುತ್ತಿದೆ ಎಂದು ಬಿರ್ಲಾ ಹೇಳಿದರು. ಸದಸ್ಯ ರಾಷ್ಟ್ರಗಳ ಆಶಯಗಳು ಚರ್ಚೆಗಳಿಗೆ ಮಾತ್ರ ಸೀಮಿತವಾಗದೆ, ಸ್ಪಷ್ಟ ನೀತಿಗಳು ಮತ್ತು ಪ್ರಾಯೋಗಿಕ ಸಹಕಾರದಲ್ಲಿ ಪ್ರತಿಫಲಿಸಬೇಕು ಎಂದರು.

12ನೇ ಬ್ರಿಕ್ಸ್ ಸಂಸದೀಯ ವೇದಿಕೆಯ ವಿಷಯವಾದ ‘ಜನಕೇಂದ್ರಿತ ಅಭಿವೃದ್ಧಿಗಾಗಿ ಸಂಸತ್ತುಗಳ ಬಲವರ್ಧನೆ’ ಈ ದೃಷ್ಟಿಯಿಂದ ವಿಶೇಷ ಮಹತ್ವ ಹೊಂದಿದೆ ಎಂದು ಅವರು ಹೇಳಿದರು.

ಎರಡು ದಿನಗಳ ಈ ವೇದಿಕೆಯಲ್ಲಿ ಸ್ಥಿತಿಸ್ಥಾಪಕತ್ವ ಮತ್ತು ಸವಾಲುಗಳನ್ನು ಎದುರಿಸುವ ಸಾಮರ್ಥ್ಯ, ನಾವೀನ್ಯತೆ, ಸಹಕಾರ ಹಾಗೂ ಸುಸ್ಥಿರ ಅಭಿವೃದ್ಧಿ ಎಂಬ ನಾಲ್ಕು ಪ್ರಮುಖ ವಿಷಯಗಳ ಕುರಿತು ಸಮಗ್ರ ಚರ್ಚೆ ನಡೆಯಲಿದೆ. ಸವಾಲಿನ ಸಂದರ್ಭಗಳಲ್ಲಿಯೂ ಶಾಸಕಾಂಗದ ನಿರಂತರತೆ, ಹೊಣೆಗಾರಿಕೆ ಮತ್ತು ಪ್ರಜಾಸತ್ತಾತ್ಮಕ ಮೇಲ್ವಿಚಾರಣೆಯನ್ನು ಖಚಿತಪಡಿಸುವ ಸಂಸ್ಥೆಗಳಾಗಿ ಸಂಸತ್ತುಗಳನ್ನು ರೂಪಿಸಬೇಕು. ಇದಕ್ಕಾಗಿ ಸಂಸದೀಯ ಕಾರ್ಯವಿಧಾನಗಳಲ್ಲಿ ನಾವೀನ್ಯತೆ, ಪಾರದರ್ಶಕತೆ ಮತ್ತು ಜನರ ಪಾಲ್ಗೊಳ್ಳುವಿಕೆಗೆ ಉತ್ತೇಜನ ನೀಡಬೇಕು ಎಂದು ತಿಳಿಸಿದರು.

ಸಂಸದೀಯ ಸಹಕಾರದ ಉದ್ದೇಶ ಕೇವಲ ವಿಚಾರಗಳು ಮತ್ತು ಅನುಭವಗಳನ್ನು ವಿನಿಮಯ ಮಾಡಿಕೊಳ್ಳುವುದಲ್ಲ. ಸಾಮಾನ್ಯ ಸವಾಲುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವುದು ಹಾಗೂ ಪರಸ್ಪರರ ಉತ್ತಮ ಕಾರ್ಯವಿಧಾನಗಳಿಂದ ಕಲಿಯುವುದೂ ಆಗಿದೆ. ನಾಗರಿಕರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವ, ಹೆಚ್ಚು ನ್ಯಾಯಸಮ್ಮತ, ಒಳಗೊಳ್ಳುವಿಕೆಯುಳ್ಳ ಮತ್ತು ಶಾಂತಿಯುತ ಜಗತ್ತಿನ ನಿರ್ಮಾಣಕ್ಕೆ ನೆರವಾಗುವ ಪರಿಹಾರಗಳನ್ನು ರೂಪಿಸಬೇಕು ಎಂದು ಕರೆ ನೀಡಿದರು.

ಅಭಿವೃದ್ಧಿ ಮತ್ತು ಪರಿಸರ ಪರಸ್ಪರ ಪೂರಕವಾಗಿವೆ ಎಂದು ಹೇಳಿದ ಬಿರ್ಲಾ, ಸುಸ್ಥಿರ ಅಭಿವೃದ್ಧಿಯ ಜೊತೆಗೆ ಮುಂದಿನ ಪೀಳಿಗೆಯ ಹಿತಾಸಕ್ತಿಗಳನ್ನು ರಕ್ಷಿಸುವ ನೀತಿಗಳಿಗೆ ಸಂಸತ್ತುಗಳು ಉತ್ತೇಜನ ನೀಡಬೇಕು ಎಂದರು.

ಯುವಜನರ ಆಶಯಗಳನ್ನು ಉಲ್ಲೇಖಿಸಿದ ಅವರು, ಇಂದಿನ ಯುವಜನರಿಗೆ ಗುಣಮಟ್ಟದ ಶಿಕ್ಷಣ ಮತ್ತು ತಾಂತ್ರಿಕ ಜ್ಞಾನ ಲಭ್ಯವಿದೆ. ಅವರ ಪ್ರತಿಭೆಗೆ ತಕ್ಕ ಅವಕಾಶಗಳು ಹಾಗೂ ಗೌರವಯುತ ಜೀವನ ದೊರೆಯಬೇಕು. ಯುವಜನರ ಧ್ವನಿಗೆ ಸೂಕ್ತ ಸ್ಥಾನ ನೀಡುವುದು ಮತ್ತು ಅವರ ಪ್ರತಿಭೆಯನ್ನು ರಾಷ್ಟ್ರ ನಿರ್ಮಾಣಕ್ಕೆ ಬಳಸಿಕೊಳ್ಳುವುದು ಸಂಸತ್ತುಗಳ ಕರ್ತವ್ಯವಾಗಿದೆ ಎಂದು ಹೇಳಿದರು.

ತಮ್ಮ ತಮ್ಮ ಸಾರ್ವಭೌಮತ್ವವನ್ನು ಗೌರವಿಸುತ್ತಲೇ ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಪ್ರಜಾಸತ್ತಾತ್ಮಕ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವುದರಲ್ಲಿ ಸಂಸದೀಯ ರಾಜತಾಂತ್ರಿಕತೆಯ ನಿಜವಾದ ಶಕ್ತಿ ಅಡಗಿದೆ. ಸದಸ್ಯ ರಾಷ್ಟ್ರಗಳು ತಮ್ಮ ಅನುಭವಗಳನ್ನು ಸಾಮೂಹಿಕ ಕಾರ್ಯಾಚರಣೆಯಾಗಿ, ಪರಸ್ಪರ ತಿಳಿವಳಿಕೆಯನ್ನು ವಿಶ್ವಾಸವಾಗಿ ಮತ್ತು ಸಂವಾದವನ್ನು ಸ್ಪಷ್ಟ ಸಹಕಾರವಾಗಿ ಪರಿವರ್ತಿಸಬೇಕು ಎಂದು ಬಿರ್ಲಾ ಕರೆ ನೀಡಿದರು.

ಬ್ರಿಕ್ಸ್ ಅನ್ನು ‘ಪರಿಹಾರಗಳ ಪರಿಸರ ವ್ಯವಸ್ಥೆ’ಯನ್ನಾಗಿ ರೂಪಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ವಿಚಾರವನ್ನು ಪ್ರಸ್ತಾಪಿಸಿದ ಅವರು, ಯಾವುದೇ ಉಪಕ್ರಮದ ಯಶಸ್ಸನ್ನು ಕೇವಲ ಚರ್ಚೆಗಳ ಆಧಾರದಲ್ಲಿ ಅಳೆಯಬಾರದು; ಅದರಿಂದ ದೊರೆಯುವ ಸ್ಪಷ್ಟ ಫಲಿತಾಂಶಗಳೇ ಮುಖ್ಯ ಎಂದರು.

ಶಾಂತಿ, ಭದ್ರತೆ, ಪರಸ್ಪರ ಗೌರವ, ಸಮಾನ ಅವಕಾಶಗಳು ಮತ್ತು ನಾಗರಿಕರ ಉತ್ತಮ ಜೀವನ ಎಂಬ ಸಾಮಾನ್ಯ ಗುರಿಗಳಿಗಾಗಿ ಸದಸ್ಯ ರಾಷ್ಟ್ರಗಳು ಒಗ್ಗೂಡಿ ಕಾರ್ಯಯೋಜನೆ ರೂಪಿಸಬೇಕು ಎಂದು ಹೇಳಿದರು.

12ನೇ ಬ್ರಿಕ್ಸ್ ಸಂಸದೀಯ ವೇದಿಕೆಯು ಸದಸ್ಯ ರಾಷ್ಟ್ರಗಳ ನಡುವಿನ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಿ, ಹೆಚ್ಚು ಒಳಗೊಳ್ಳುವಿಕೆಯುಳ್ಳ, ಶಾಂತಿಯುತ ಮತ್ತು ಸುಸ್ಥಿರ ಜಗತ್ತಿನ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಲಿದೆ ಎಂಬ ವಿಶ್ವಾಸವನ್ನು ಬಿರ್ಲಾ ವ್ಯಕ್ತಪಡಿಸಿದರು.

ಎರಡು ದಿನಗಳ ಈ ವೇದಿಕೆಯಲ್ಲಿ ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಹಾಗೂ ಆಹ್ವಾನಿತ ರಾಷ್ಟ್ರಗಳ ಸಂಸದೀಯ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಭಾರತವು 2026ರಲ್ಲಿ ನಾಲ್ಕನೇ ಬಾರಿಗೆ ಬ್ರಿಕ್ಸ್ ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande