
ಭೋಪಾಲ್, 24 ಅಕ್ಟೋಬರ್ (ಹಿ.ಸ.):
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ತಮ್ಮ ನಿಯಮಿತ ಪ್ರವಾಸದ ಭಾಗವಾಗಿ ಅಕ್ಟೋಬರ್ 24ರಿಂದ 26ರವರೆಗೆ ಮೂರು ದಿನಗಳ ಪ್ರವಾಸಕ್ಕಾಗಿ ಶನಿವಾರ ಮಧ್ಯಪ್ರದೇಶದ ಜಬಲ್ಪುರಕ್ಕೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಸಂಘದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವರು, ಸ್ವಯಂಸೇವಕರು ಹಾಗೂ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿ ಮಾರ್ಗದರ್ಶನ ನೀಡಲಿದ್ದಾರೆ.
ಮಹಾಕೌಶಲ ಪ್ರಾಂತದ ಪ್ರಾಂತ ಪ್ರಚಾರ ಪ್ರಮುಖ ವಿನೋದ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದು, ಪ್ರವಾಸದ ಮೊದಲ ದಿನವಾದ ಶನಿವಾರ ಜಬಲ್ಪುರ ಮಹಾನಗರದಲ್ಲಿ ನೆಲೆಸಿರುವ ಸಂಘದ ಪ್ರಮುಖ ಸ್ಥಳೀಯ ಪದಾಧಿಕಾರಿಗಳನ್ನು ಡಾ. ಭಾಗವತ್ ಭೇಟಿಯಾಗಲಿದ್ದಾರೆ. ಬಳಿಕ ಮುಖ್ಯ ಶಿಕ್ಷಕರು ಹಾಗೂ ಅದಕ್ಕಿಂತ ಮೇಲಿನ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಯಚಟುವಟಿಕೆಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಿ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಅಕ್ಟೋಬರ್ 25ರಂದು ಮಹಾಕೌಶಲ ಪ್ರಾಂತದ ಮಹಾವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸ್ವಯಂಸೇವಕರ ಶಿಬಿರವನ್ನು ಡಾ. ಭಾಗವತ್ ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮದ ಮೂಲಕ ಯುವ ಸ್ವಯಂಸೇವಕರೊಂದಿಗೆ ನೇರ ಸಂವಾದ ನಡೆಸಲಿದ್ದಾರೆ.
ಮಹಾಕೌಶಲ ಪ್ರಾಂತವು ಸಂಘದ ಮಧ್ಯ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ. ಈ ಪ್ರಾಂತದಲ್ಲಿ 38 ಕಂದಾಯ ಜಿಲ್ಲೆಗಳಿದ್ದು, ಜಬಲ್ಪುರ, ಸಾಗರ ಮತ್ತು ರೇವಾ ನಗರಗಳು ವಿಭಾಗೀಯ ಕೇಂದ್ರಗಳಾಗಿವೆ.
ಪ್ರವಾಸದ ಕೊನೆಯ ದಿನವಾದ ಅಕ್ಟೋಬರ್ 26ರಂದು ಮಹಾಕೌಶಲ ಪ್ರಾಂತದ ಕಾರ್ಯಕಾರಿಣಿ ಹಾಗೂ ವಿಭಾಗ ಮಟ್ಟದ ತಂಡಗಳ ಸದಸ್ಯರೊಂದಿಗೆ ಡಾ. ಭಾಗವತ್ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಸಂಘಟನೆಯ ಕಾರ್ಯಗಳು, ಚಟುವಟಿಕೆಗಳು ಮತ್ತು ಸಮಕಾಲೀನ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಮುಂದಿನ ಕಾರ್ಯಯೋಜನೆಗಳ ಬಗ್ಗೆಯೂ ಸಮಾಲೋಚನೆ ನಡೆಸಲಾಗುತ್ತದೆ.
ಡ್ರೋನ್ ಹಾರಾಟಕ್ಕೆ ನಿರ್ಬಂಧ
ಸರಸಂಘಚಾಲಕರ ಮೂರು ದಿನಗಳ ಪ್ರವಾಸದ ಹಿನ್ನೆಲೆಯಲ್ಲಿ ಜಬಲ್ಪುರ ಜಿಲ್ಲಾಡಳಿತವು ವ್ಯಾಪಕ ಸಿದ್ಧತೆಗಳನ್ನು ಕೈಗೊಂಡಿದೆ. ಭದ್ರತಾ ದೃಷ್ಟಿಯಿಂದ ರೈಲು ನಿಲ್ದಾಣ, ರೈಟ್ ಟೌನ್ನಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿ ಕೇಶವ ಕುಟಿ, ನರಸಿಂಹ ಮಂದಿರದ ಶಾತ್ರೀ ಸೇತುವೆ ಸಮೀಪದ ಸರಸ್ವತಿ ಶಿಕ್ಷಣ ಪರಿಷತ್ ಹಾಗೂ ಕರಮೇಟಾದಲ್ಲಿರುವ ಶ್ರೀರಾಮ ಎಂಜಿನಿಯರಿಂಗ್ ಕಾಲೇಜಿನ ಸುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಹೆಚ್ಚುವರಿ ಜಿಲ್ಲಾಧಿಕಾರಿ ರವಿಶಂಕರ್ ರಾಯ್ ಅವರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ–2023ರ ಕಲಂ 163ರ ಅಡಿಯಲ್ಲಿ ಈ ನಿರ್ಬಂಧದ ಆದೇಶ ಹೊರಡಿಸಿದ್ದು, ಅದು ತಕ್ಷಣದಿಂದಲೇ ಜಾರಿಗೆ ಬಂದಿದೆ.
ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಈ ಆದೇಶವನ್ನು ಉಲ್ಲಂಘಿಸಿದರೆ, ಭಾರತೀಯ ನ್ಯಾಯ ಸಂಹಿತೆ–2023ರ ಕಲಂ 223 ಸೇರಿದಂತೆ ಇತರ ಕಾನೂನು ನಿಬಂಧನೆಗಳ ಅಡಿಯಲ್ಲಿ ದಂಡನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.