ಕಬ್ಬಿಗೆ ನ್ಯಾಯಯುತ ಬೆಲೆಗೆ ಆಗ್ರಹಿಸಿ ಇಂದು ಪ್ರತಿಭಟನೆ: ಗಣಂಗೂರು ಟೋಲ್ ಬಳಿ ಬಿಗಿ ಪೊಲೀಸ್ ಭದ್ರತೆ
ಕಬ್ಬಿಗೆ ಪ್ರತಿ ಟನ್ಗೆ ₹5,500 ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ಇಂದು ಗಣಂಗೂರು ಟೋಲ್ಗೆ ಮುತ್ತಿಗೆ ಹಾಕಿ ಮೈಸೂರು–ಬೆಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಟೋಲ್ ಬಳಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
farmers-protest-sugarcane-price-demand-gananguru-toll-police-security


ಮಂಡ್ಯ, 23 ಅಕ್ಟೋಬರ್ (ಹಿ.ಸ.):

ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ಮೈಸೂರು–ಬೆಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ಮುಂದಾಗಿರುವ ಹಿನ್ನೆಲೆಯಲ್ಲಿ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಗಣಂಗೂರು ಟೋಲ್ ಬಳಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

ಇಂದು ಬೆಳಿಗ್ಗೆ 11.30ಕ್ಕೆ ಗಣಂಗೂರು ಟೋಲ್ಗೆ ಮುತ್ತಿಗೆ ಹಾಕಿ, ಟೋಲ್ ಬಂದ್ ಮಾಡುವುದರೊಂದಿಗೆ ಮೈಸೂರು–ಬೆಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ರೈತರು ನಿರ್ಧರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹5,500 ಬೆಲೆ ನಿಗದಿಪಡಿಸಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ. ಅಲ್ಲದೆ, ಸಕ್ಕರೆ ಕಾರ್ಖಾನೆಗಳು ರೈತರಿಗೆ ಪಾವತಿಸಬೇಕಿರುವ ಬಾಕಿ ಹಣವನ್ನು ಯಾವುದೇ ವಿಳಂಬವಿಲ್ಲದೆ ಸಂಪೂರ್ಣವಾಗಿ ರೈತರ ಖಾತೆಗಳಿಗೆ ಜಮೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದ ರೈತರು ಕೃಷಿ ಕ್ಷೇತ್ರದಲ್ಲಿ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಅವರ ಸಂಪೂರ್ಣ ಕೃಷಿ ಸಾಲವನ್ನು ಮನ್ನಾ ಮಾಡಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ.

ರೈತರ ಬೇಡಿಕೆಗಳು ಈಡೇರದ ಹಿನ್ನೆಲೆಯಲ್ಲಿ ಹೋರಾಟಕ್ಕೆ ಮುಂದಾಗಿದ್ದು, ಗಣಂಗೂರು ಟೋಲ್ ಮುತ್ತಿಗೆ ಹಾಗೂ ಹೆದ್ದಾರಿ ತಡೆ ಪ್ರತಿಭಟನೆಯ ಸಂದರ್ಭದಲ್ಲಿ ಸಂಚಾರ ವ್ಯವಸ್ಥೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande