ಚಿನ್ಮಯ ಮಿಷನ್ನ ಶತಮಾನೋತ್ಸವ ಪಯಣ, ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣದ ಗುರಿ ಒಟ್ಟಿಗೆ ಸಾಗಲಿವೆ: ಪ್ರಧಾನಿ ಮೋದಿ
ನವದೆಹಲಿ, 23 ಅಕ್ಟೋಬರ್ (ಹಿ.ಸ.): 2047ರಲ್ಲಿ ಭಾರತ ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವ ವೇಳೆಗೆ ಚಿನ್ಮಯ ಮಿಷನ್ ಕೂಡ ತನ್ನ ಸ್ಥಾಪನೆಯ ನೂರು ವರ್ಷಗಳನ್ನು ಪೂರ್ಣಗೊಳಿಸುವತ್ತ ಸಾಗಲಿದೆ. ಚಿನ್ಮಯ ಮಿಷನ್‌ನ ಶತಮಾನೋತ್ಸವ ಪಯಣ ಮತ್ತು ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣದ ಅಭಿಯಾನ ಎರಡೂ ಒಂದೇ ಗುರ
प्रधानमंत्री नरेन्द्र मोदी शुक्रवार को भारत मंडपम में आयोजित चिन्मय अमृत महोत्सव वैश्विक सम्मेलन के उद्घाटन समारोह को संबोधित करते हुए


ನವದೆಹಲಿ, 23 ಅಕ್ಟೋಬರ್ (ಹಿ.ಸ.):

2047ರಲ್ಲಿ ಭಾರತ ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವ ವೇಳೆಗೆ ಚಿನ್ಮಯ ಮಿಷನ್ ಕೂಡ ತನ್ನ ಸ್ಥಾಪನೆಯ ನೂರು ವರ್ಷಗಳನ್ನು ಪೂರ್ಣಗೊಳಿಸುವತ್ತ ಸಾಗಲಿದೆ. ಚಿನ್ಮಯ ಮಿಷನ್‌ನ ಶತಮಾನೋತ್ಸವ ಪಯಣ ಮತ್ತು ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣದ ಅಭಿಯಾನ ಎರಡೂ ಒಂದೇ ಗುರಿ ಹಾಗೂ ಉದ್ದೇಶಗಳನ್ನು ಹೊಂದಿದ್ದು, ಒಟ್ಟಿಗೆ ಮುನ್ನಡೆಯಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇಲ್ಲಿನ ಭಾರತ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಚಿನ್ಮಯ ಅಮೃತ ಮಹೋತ್ಸವ ಜಾಗತಿಕ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶವನ್ನು ವಿಭಜಿಸಲು ಪ್ರಯತ್ನಿಸುವ ಶಕ್ತಿಗಳ ವಿರುದ್ಧ ಸಮಾಜವನ್ನು ಒಗ್ಗೂಡಿಸುವುದು, ಸ್ವಾವಲಂಬನೆಗಾಗಿ ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಸಂಕಲ್ಪದಲ್ಲಿ ಪ್ರತಿಯೊಬ್ಬರನ್ನೂ ಪಾಲುದಾರರನ್ನಾಗಿಸುವುದು ಇಂದಿನ ಪ್ರಮುಖ ಅಗತ್ಯಗಳಾಗಿವೆ. ಈ ಗುರಿಗಳನ್ನು ಸಾಧಿಸಲು ಎಲ್ಲರೂ ಇನ್ನಷ್ಟು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

ಚಿನ್ಮಯ ಮಿಷನ್ ಕೇವಲ ಒಂದು ಸಂಸ್ಥೆಯಲ್ಲ, ಅದೊಂದು ವಿಚಾರಧಾರೆ. ಸ್ವಾಮಿ ಚಿನ್ಮಯಾನಂದರು ಸ್ಥಾಪಿಸಿದ ಈ ಮಿಷನ್‌ನ ಹಲವು ದಶಕಗಳ ಪಯಣ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಂಕಲ್ಪಗಳಿಂದ ಕೂಡಿದೆ. ಜಗತ್ತಿನಾದ್ಯಂತ ಮಿಷನ್‌ನೊಂದಿಗೆ ಗುರುತಿಸಿಕೊಂಡಿರುವ ಸಂತರು, ಆಚಾರ್ಯರು, ಸಾಧಕರು ಮತ್ತು ಅನುಯಾಯಿಗಳಿಗೆ ಅಮೃತ ಮಹೋತ್ಸವದ ಶುಭಾಶಯಗಳನ್ನು ತಿಳಿಸಿದ ಪ್ರಧಾನಿ, ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣದಲ್ಲಿ ಅವರು ಮಹತ್ವದ ಪಾತ್ರ ವಹಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸ್ವಾಮಿ ಚಿನ್ಮಯಾನಂದರೊಂದಿಗಿನ ನೆನಪು ಮೆಲುಕು

ಆಧುನಿಕ ತಂತ್ರಜ್ಞಾನದ ಮೂಲಕ ಸ್ವಾಮಿ ಚಿನ್ಮಯಾನಂದರ ಹೊಲೊಗ್ರಾಮ್ ರೂಪವನ್ನು ವೀಕ್ಷಿಸಿ ಅವರೊಂದಿಗೆ ಸಂವಾದ ನಡೆಸಿದ ಅನುಭವವನ್ನು ಪ್ರಧಾನಿ ಸ್ಮರಿಸಿದರು. ಈ ಅನುಭವದಿಂದ ತಾವು 33 ವರ್ಷಗಳ ಹಿಂದಿನ ಕಾಲಕ್ಕೆ ಮರಳಿದಂತೆ ಭಾಸವಾಯಿತು ಎಂದು ಹೇಳಿದರು.

1993ರಲ್ಲಿ ಬರೋಡಾದಲ್ಲಿ ಗುರುದೇವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದ ಕ್ಷಣಗಳು, ಅವರ ಪ್ರೀತಿ ಮತ್ತು ಆಶೀರ್ವಾದದ ನೆನಪುಗಳು ಮತ್ತೆ ಜೀವಂತವಾದವು. ಒಂದು ಕ್ಷಣ ತಾವು ಗುರುದೇವರ ನೇರ ಸಾನ್ನಿಧ್ಯದಲ್ಲಿದ್ದಂತೆ ಅನುಭವವಾಯಿತು ಎಂದು ಮೋದಿ ತಿಳಿಸಿದರು. ಈ ವಿಶೇಷ ಅನುಭವಕ್ಕಾಗಿ ಚಿನ್ಮಯ ಮಿಷನ್‌ನ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.

1993ರಲ್ಲಿ ಅಮೆರಿಕದ ಚಿಕಾಗೊದಲ್ಲಿ ನಡೆಯಲಿದ್ದ ವಿಶ್ವ ಧರ್ಮ ಸಂಸತ್ತಿನ ಶತಮಾನೋತ್ಸವ ಕಾರ್ಯಕ್ರಮಕ್ಕೆ ಸ್ವಾಮಿ ಚಿನ್ಮಯಾನಂದರನ್ನು ಆಹ್ವಾನಿಸಲು ತೆರಳಿದ್ದ ಘಟನೆಯನ್ನೂ ಅವರು ನೆನಪಿಸಿಕೊಂಡರು. ಸ್ವಾಮಿ ವಿವೇಕಾನಂದರ ಐತಿಹಾಸಿಕ ಭಾಷಣದ ನೂರು ವರ್ಷಗಳು ಪೂರ್ಣಗೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ವಾಮಿ ಚಿನ್ಮಯಾನಂದರು ಆಹ್ವಾನವನ್ನು ಸ್ವೀಕರಿಸಿ, ವಿವಿಧ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದ್ದರು ಎಂದು ಹೇಳಿದರು.

ಆದರೆ, ಧರ್ಮ ಸಂಸತ್ತಿನ ಕಾರ್ಯಕ್ರಮಕ್ಕೆ ಕೆಲವೇ ವಾರಗಳ ಮೊದಲು, ಆಗಸ್ಟ್ 3ರಂದು ಅಮೆರಿಕದ ಸ್ಯಾನ್ ಡಿಯಾಗೊದಲ್ಲಿ ಸ್ವಾಮಿ ಚಿನ್ಮಯಾನಂದರು ನಿಧನರಾದರು. ಸೆಪ್ಟೆಂಬರ್ 11ರಂದು ಚಿಕಾಗೊದಲ್ಲಿ ನಡೆದ ಧರ್ಮ ಸಂಸತ್ತಿನ ಸಂದರ್ಭದಲ್ಲಿ ಗುರುದೇವರ ಅನುಪಸ್ಥಿತಿ ತೀವ್ರವಾಗಿ ಕಾಡಿತ್ತು ಎಂದು ಮೋದಿ ಸ್ಮರಿಸಿದರು.

ಗುರುದೇವರೊಂದಿಗಿನ ಕೊನೆಯ ಭೇಟಿಯಲ್ಲಿ ಯುವಶಕ್ತಿಯನ್ನು ರೂಪಿಸುವುದು ಹಾಗೂ ಅದರ ಮೂಲಕ ಬಲಿಷ್ಠ ಮತ್ತು ಸಮರ್ಥ ಭಾರತವನ್ನು ನಿರ್ಮಿಸುವ ಕುರಿತು ಗಂಭೀರ ಚರ್ಚೆ ನಡೆದಿತ್ತು ಎಂದು ಅವರು ಹೇಳಿದರು.

ಗುರುದೇವರೊಂದಿಗಿನ ಭೇಟಿಯ ಕೆಲವು ವರ್ಷಗಳ ಬಳಿಕ ಗುಜರಾತ್ ಮುಖ್ಯಮಂತ್ರಿಯಾಗಿ ಜನಸೇವೆ ಮಾಡುವ ಅವಕಾಶ ದೊರೆಯಿತು. ಅಂದಿನಿಂದ ಕಳೆದ 25 ವರ್ಷಗಳಿಂದ ಸರ್ಕಾರದ ಮುಖ್ಯಸ್ಥನಾಗಿ ದೇಶದ ಸೇವೆ ಸಲ್ಲಿಸುತ್ತಿದ್ದು, ಈ ಸಂಪೂರ್ಣ ಪಯಣದಲ್ಲಿ ಗುರುದೇವರ ಆಶೀರ್ವಾದ ತಮ್ಮೊಂದಿಗಿದೆ ಎಂದು ಮೋದಿ ತಿಳಿಸಿದರು. ತಮ್ಮ ಪ್ರಯತ್ನಗಳು ಮತ್ತು ನೀತಿಗಳ ಕೇಂದ್ರಬಿಂದುವಿನಲ್ಲಿ ದೇಶದ ಯುವಜನರೇ ಇದ್ದಾರೆ ಎಂದರು.

300 ದಿನಗಳಲ್ಲಿ 40 ಸಾವಿರ ಕಿ.ಮೀ. ಪಯಣ

ಚಿನ್ಮಯ ಅಮೃತ ಮಹೋತ್ಸವದಲ್ಲಿ ಯುವಜನರು ವಹಿಸಿರುವ ಪಾತ್ರವನ್ನು ಪ್ರಧಾನಿ ಶ್ಲಾಘಿಸಿದರು. ಮಿಷನ್‌ನ ಯುವ ಸದಸ್ಯರು ಸುಮಾರು 300 ದಿನಗಳಲ್ಲಿ 40 ಸಾವಿರ ಕಿಲೋಮೀಟರ್ ಪ್ರಯಾಣಿಸಿ, ಒಂದು ಲಕ್ಷಕ್ಕೂ ಅಧಿಕ ಯುವಜನರನ್ನು ಸಂಪರ್ಕಿಸಿದ್ದಾರೆ ಎಂದು ತಿಳಿಸಿದರು. ಈ ಮಹತ್ವದ ಪ್ರಯತ್ನಕ್ಕಾಗಿ ಇಡೀ ತಂಡವನ್ನು ಅಭಿನಂದಿಸಿದರು.

ಉಪನಿಷತ್ತುಗಳ ‘ವಯಂ ಅಮೃತಸ್ಯ ಪುತ್ರಾಃ’ ಎಂಬ ವಾಕ್ಯವನ್ನು ಉಲ್ಲೇಖಿಸಿದ ಮೋದಿ, ಇದರ ಅರ್ಥ ‘ನಾವು ಅಮೃತದ ಮಕ್ಕಳು’ ಎಂಬುದಾಗಿದೆ ಎಂದು ಹೇಳಿದರು. ಇದು ಕೇವಲ ಆಧ್ಯಾತ್ಮಿಕ ತತ್ತ್ವವಲ್ಲ, ಭಾರತದ ಸಾಂಸ್ಕೃತಿಕ ನಂಬಿಕೆಯೂ ಆಗಿದೆ. ಇಲ್ಲಿ ಅಮರತ್ವ ಎಂದರೆ ದೇಹದ ಶಾಶ್ವತತೆಯಲ್ಲ; ಬದಲಾಗಿ ಚೈತನ್ಯ, ಜ್ಞಾನ ಮತ್ತು ಅರಿವಿನ ಶಾಶ್ವತತೆ ಎಂದರು.

ಈ ಅರಿವಿನ ಬಲದಿಂದಲೇ ಭಾರತ ಸಾವಿರಾರು ವರ್ಷಗಳಿಂದ ತನ್ನ ಸಾಂಸ್ಕೃತಿಕ ಗುರುತನ್ನು ಉಳಿಸಿಕೊಂಡು ಬಂದಿದೆ ಎಂದು ಹೇಳಿದರು.

ವೇದಗಳ ‘ವಯಂ ರಾಷ್ಟ್ರೇ ಜಾಗೃಯಾಮ ಪುರೋಹಿತಾಃ’ ಎಂಬ ಮಂತ್ರವನ್ನು ಉಲ್ಲೇಖಿಸಿದ ಅವರು, ರಾಷ್ಟ್ರದ ಹಿತವನ್ನು ಬಯಸುವವರು ದೇಶವನ್ನು ಜಾಗೃತಗೊಳಿಸಲು ಮತ್ತು ಉನ್ನತಿಯತ್ತ ಕೊಂಡೊಯ್ಯಲು ಕಾರ್ಯನಿರ್ವಹಿಸಬೇಕು ಎಂದರು. ಸ್ವಾಮಿ ಚಿನ್ಮಯಾನಂದರು ತಮ್ಮ ಇಡೀ ಜೀವನವನ್ನು ಇದೇ ಆಶಯಕ್ಕೆ ಅನುಗುಣವಾಗಿ ಮುಡಿಪಾಗಿಟ್ಟಿದ್ದರು. ಆಧ್ಯಾತ್ಮಿಕ ವಿಷಯಗಳ ಜತೆಗೆ ರಾಷ್ಟ್ರಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆಯೂ ಅವರು ಸ್ಪಷ್ಟವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು ಎಂದು ತಿಳಿಸಿದರು.

ಆಧ್ಯಾತ್ಮಿಕ ಉನ್ನತಿಯೊಂದಿಗೆ ರಾಷ್ಟ್ರದ ಪ್ರಗತಿಗೂ ಆದ್ಯತೆ

ಆಧ್ಯಾತ್ಮಿಕ ಉನ್ನತಿಯನ್ನು ವೈಯಕ್ತಿಕ ಪ್ರಗತಿಯೊಂದಿಗೆ ಹಾಗೂ ವೈಯಕ್ತಿಕ ಪ್ರಗತಿಯನ್ನು ರಾಷ್ಟ್ರದ ಅಭಿವೃದ್ಧಿಯೊಂದಿಗೆ ಬೆಸೆಯಬೇಕು ಎಂಬುದು ಸ್ವಾಮಿ ಚಿನ್ಮಯಾನಂದರ ಸಂದೇಶವಾಗಿತ್ತು ಎಂದು ಪ್ರಧಾನಿ ಹೇಳಿದರು.

ಭಾರತೀಯರಲ್ಲಿ ದೇಶದ ಬಗ್ಗೆ ಸ್ವಾಭಿಮಾನ ಮೂಡಿಸುವುದು ಅವರ ಮಿಷನ್‌ನ ಪ್ರಮುಖ ಉದ್ದೇಶವಾಗಿತ್ತು. ಈ ನಿಟ್ಟಿನಲ್ಲಿ ಅವರು ಗೀತಾ ಜ್ಞಾನ ಯಜ್ಞವನ್ನು ಆರಂಭಿಸಿ, ಉಪನಿಷತ್ತುಗಳು, ವೇದಾಂತ ಮತ್ತು ಭಾರತೀಯ ಶಾಸ್ತ್ರಗಳ ಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸುವ ಅಭಿಯಾನ ನಡೆಸಿದರು ಎಂದು ಸ್ಮರಿಸಿದರು.

ಚಿನ್ಮಯ ಮಿಷನ್‌ನ ಪ್ರಯತ್ನಗಳಿಂದ ಇಂದು ಲಕ್ಷಾಂತರ ಯುವಜನರು ಭಾರತೀಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುತ್ತಿದ್ದಾರೆ. ಅವರು ದೇಶದ ಸಾಂಸ್ಕೃತಿಕ ರಾಯಭಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಿಷನ್‌ನ ನೂರಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳು ಲಕ್ಷಾಂತರ ಮಕ್ಕಳು ಮತ್ತು ಯುವಜನರ ಭವಿಷ್ಯ ರೂಪಿಸುವಲ್ಲಿ ಕೊಡುಗೆ ನೀಡುತ್ತಿವೆ. ಈ ಸಂಸ್ಥೆಗಳಲ್ಲಿ ಆಧುನಿಕ ಶಿಕ್ಷಣದ ಜತೆಗೆ ಭಾರತೀಯ ಸಂಸ್ಕಾರಗಳನ್ನೂ ಕಲಿಸಲಾಗುತ್ತಿದೆ ಎಂದು ಮೋದಿ ತಿಳಿಸಿದರು.

ಸ್ವಾಮಿ ಚಿನ್ಮಯಾನಂದರಂತಹ ದೂರದೃಷ್ಟಿಯುಳ್ಳವರು ದೇಶದ ಶಿಕ್ಷಣ ವ್ಯವಸ್ಥೆಯನ್ನು ಭಾರತೀಯ ಮೌಲ್ಯಗಳೊಂದಿಗೆ ಬೆಸೆಯುವ ಆಶಯ ಹೊಂದಿದ್ದರು. ಇದೇ ದಿಕ್ಕಿನಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ಈ ನೀತಿಯಲ್ಲಿ ಭಾರತೀಯ ಜ್ಞಾನ ಪರಂಪರೆ, ಮಾತೃಭಾಷೆಯಲ್ಲಿನ ಶಿಕ್ಷಣ, ಆಧುನಿಕ ವಿಜ್ಞಾನ ಮತ್ತು ಹೊಸ ತಂತ್ರಜ್ಞಾನಗಳಿಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ವಿವೇಕಾನಂದ ಶಿಲಾಸ್ಮಾರಕ ನಿರ್ಮಾಣಕ್ಕೆ ಸ್ವಾಮಿ ಚಿನ್ಮಯಾನಂದರ ಕೊಡುಗೆ

ಕನ್ಯಾಕುಮಾರಿಯ ವಿವೇಕಾನಂದ ಶಿಲಾಸ್ಮಾರಕ ನಿರ್ಮಾಣದಲ್ಲಿ ಸ್ವಾಮಿ ಚಿನ್ಮಯಾನಂದರು ನೀಡಿದ ಕೊಡುಗೆಯನ್ನು ಪ್ರಧಾನಿ ಸ್ಮರಿಸಿದರು. ಏಕನಾಥ ರಾನಡೆಯವರ ಈ ಸಂಕಲ್ಪಕ್ಕೆ ಗುರುದೇವರು ಬಲವಾಗಿ ಬೆಂಬಲವಾಗಿ ನಿಂತಿದ್ದರು. ಈ ಮಹತ್ವದ ಕಾರ್ಯಕ್ಕೆ ಮೊದಲ ಆರ್ಥಿಕ ನೆರವನ್ನೂ ಸ್ವಾಮಿ ಚಿನ್ಮಯಾನಂದರೇ ನೀಡಿದ್ದರು ಎಂದು ತಿಳಿಸಿದರು.

ಇಂದು ಈ ಸ್ಮಾರಕವು ದೇಶ-ವಿದೇಶಗಳಿಂದ ಆಗಮಿಸುವ ಲಕ್ಷಾಂತರ ಜನರಿಗೆ ಸ್ಫೂರ್ತಿಯ ಕೇಂದ್ರವಾಗಿದೆ ಎಂದರು.

ಉತ್ತರದಿಂದ ದಕ್ಷಿಣದವರೆಗೆ, ಪೂರ್ವದಿಂದ ಪಶ್ಚಿಮದವರೆಗೆ ಭಾರತದ ಸಾಂಸ್ಕೃತಿಕ ಕೇಂದ್ರಗಳ ಪುನರುಜ್ಜೀವನ ನಡೆಯುತ್ತಿದೆ ಎಂದು ಮೋದಿ ಹೇಳಿದರು. ಕಾಶಿ ವಿಶ್ವನಾಥ ಧಾಮದ ನವೀಕೃತ ರೂಪ, ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ, ಉಜ್ಜಯಿನಿಯ ಮಹಾಕಾಲ್ ಮಹಾಲೋಕ್ ಹಾಗೂ ಕೇದಾರನಾಥ ಮತ್ತು ಬದರಿನಾಥದಂತಹ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಈ ದಿಕ್ಕಿನ ಪ್ರಮುಖ ಉದಾಹರಣೆಗಳಾಗಿವೆ. ಕೇದಾರನಾಥದಲ್ಲಿ ಆದಿ ಶಂಕರಾಚಾರ್ಯರ ಭವ್ಯ ಪ್ರತಿಮೆ ಸ್ಥಾಪಿಸಿರುವುದನ್ನೂ ಅವರು ಉಲ್ಲೇಖಿಸಿದರು.

ಒಂದು ಕಾಲದಲ್ಲಿ ಭಾರತದಿಂದ ಅನೇಕ ಪ್ರಾಚೀನ ಮೂರ್ತಿಗಳನ್ನು ಕಳವು ಮಾಡಿ ವಿದೇಶಗಳಿಗೆ ಸಾಗಿಸಿ ಮಾರಾಟ ಮಾಡಲಾಗಿತ್ತು. ಕಳೆದ 12 ವರ್ಷಗಳಲ್ಲಿ ಇಂತಹ ಕಳವುಗೈದ ಪ್ರಾಚೀನ ಮೂರ್ತಿಗಳನ್ನು ಮರಳಿ ತರುವ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನಿ ಹೇಳಿದರು.

ದೇಶದ ಸಾಂಸ್ಕೃತಿಕ ಕೇಂದ್ರಗಳಿಗೆ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸ್ಥಾನ ದೊರೆಯುತ್ತಿದೆ. ಸ್ವಾಮಿ ಚಿನ್ಮಯಾನಂದರು ಭಾರತೀಯ ಧರ್ಮ ಮತ್ತು ತತ್ತ್ವಶಾಸ್ತ್ರವನ್ನು ಜಗತ್ತಿಗೆ ಪರಿಚಯಿಸಿದಂತೆ, ಅಂತರರಾಷ್ಟ್ರೀಯ ಯೋಗ ದಿನವೂ ಭಾರತದ ಪ್ರಾಚೀನ ಪರಂಪರೆಗಳೊಂದಿಗೆ ಜಗತ್ತಿನ ಜನರನ್ನು ಸಂಪರ್ಕಿಸುತ್ತಿದೆ ಎಂದು ತಿಳಿಸಿದರು.

2047ರ ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣಕ್ಕೆ ಕರೆ

ತಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಹೊಂದುವುದು ಮತ್ತು ಗುಲಾಮಗಿರಿಯ ಮನೋಭಾವದಿಂದ ಹೊರಬರುವ ಆತ್ಮವಿಶ್ವಾಸವು ಭಾರತವು ತನ್ನ ಋಷಿಮುನಿಗಳು ಹಾಗೂ ರಾಷ್ಟ್ರಭಕ್ತರು ಶತಮಾನಗಳಿಂದ ಕಂಡ ಕನಸಿನ ಹಾದಿಯಲ್ಲಿ ಮುನ್ನಡೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಮೋದಿ ಹೇಳಿದರು. ಈ ಪಯಣದಲ್ಲಿ ದೇಶದ ವಿಚಾರಶಕ್ತಿಯೇ ಅತ್ಯಂತ ದೊಡ್ಡ ಬಲವಾಗಿದೆ ಎಂದರು.

ವಿವಿಧ ಸಂಸ್ಥೆಗಳಿಗೆ ತಮ್ಮದೇ ಆದ ಉದ್ದೇಶಗಳಿರಬಹುದು. ಆದರೆ ದೇಶದ ಅಭಿವೃದ್ಧಿ ಮತ್ತು ಗೌರವವನ್ನು ಹೆಚ್ಚಿಸುವುದು ಎಲ್ಲರನ್ನೂ ಒಗ್ಗೂಡಿಸುವ ಸಾಮಾನ್ಯ ಗುರಿಯಾಗಿದೆ ಎಂದು ಹೇಳಿದರು.

ಸ್ವಾಮಿ ಚಿನ್ಮಯಾನಂದರ ಕಾಲದಲ್ಲಿ ದೇಶ ಎದುರಿಸುತ್ತಿದ್ದ ಸವಾಲುಗಳಿಗೆ ಅನುಗುಣವಾಗಿ ಅವರು ತಮ್ಮ ಸಂಕಲ್ಪಗಳನ್ನು ರೂಪಿಸಿಕೊಂಡಿದ್ದರು. ಕಾಲ ಬದಲಾದಂತೆ ಹೊಸ ಸವಾಲುಗಳು ಮತ್ತು ಸಾಮಾಜಿಕ ವಿರೂಪಗಳು ಎದುರಾಗುತ್ತಿವೆ. ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಪ್ರಧಾನಿ ತಿಳಿಸಿದರು.

ದೇಶವನ್ನು ವಿಭಜಿಸಲು ಪ್ರಯತ್ನಿಸುವ ಶಕ್ತಿಗಳ ವಿರುದ್ಧ ಸಮಾಜ ಒಗ್ಗಟ್ಟಿನಿಂದ ನಿಲ್ಲಬೇಕು, ಸ್ವಾವಲಂಬನೆಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಹಾಗೂ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಸಂಕಲ್ಪವನ್ನು ಪ್ರತಿಯೊಬ್ಬರಿಗೂ ತಲುಪಿಸಬೇಕು ಎಂದು ಮೋದಿ ಕರೆ ನೀಡಿದರು.

ಗುರುದೇವರ ಮಹಾನ್ ಪರಂಪರೆ, ಹಲವು ದಶಕಗಳ ಅನುಭವ ಮತ್ತು ಜಗತ್ತಿನಾದ್ಯಂತ ಸಮರ್ಪಣಾಭಾವದಿಂದ ಕಾರ್ಯನಿರ್ವಹಿಸುತ್ತಿರುವ ಆಚಾರ್ಯರು, ಸಾಧಕರು ಹಾಗೂ ಕಾರ್ಯಕರ್ತರ ವಿಶಾಲ ಕುಟುಂಬ ಚಿನ್ಮಯ ಮಿಷನ್‌ಗೆ ಇದೆ. ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣದಲ್ಲಿ ಮಿಷನ್ ಪ್ರಮುಖ ಪಾತ್ರ ವಹಿಸಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಕೊನೆಯಲ್ಲಿ ಸ್ವಾಮಿ ಚಿನ್ಮಯಾನಂದರಿಗೆ ನಮನ ಸಲ್ಲಿಸಿದ ಪ್ರಧಾನಿ, ಚಿನ್ಮಯ ಮಿಷನ್‌ನ ಎಲ್ಲ ಸಂತರು, ಆಚಾರ್ಯರು, ಸಾಧಕರು ಮತ್ತು ಸೇವಾ ಮನೋಭಾವದ ಕಾರ್ಯಕರ್ತರಿಗೆ ಅಮೃತ ಮಹೋತ್ಸವದ ಶುಭಾಶಯಗಳನ್ನು ತಿಳಿಸಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande