
ಬೆಂಗಳೂರು, 23 ಅಕ್ಟೋಬರ್ (ಹಿ.ಸ.):
ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿಯ ಅಂಗವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಆರ್. ಅಶೋಕ, ಬಿಜೆಪಿ ನಾಯಕ ಸಿ.ಟಿ. ರವಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಗೌರವ ನಮನ ಸಲ್ಲಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿ, ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿಯರಲ್ಲಿ ಒಬ್ಬರಾದ ಕಿತ್ತೂರು ರಾಣಿ ಚೆನ್ನಮ್ಮ ಅವರಿಗೆ ಗೌರವಪೂರ್ವಕ ನಮನ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಪರಕೀಯರ ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದ ಕಿತ್ತೂರು ರಾಣಿ ಚೆನ್ನಮ್ಮ ಅವರ ಹೋರಾಟ ಕನ್ನಡ ನೆಲದ ಸಾರ್ವಭೌಮತ್ವ ಹಾಗೂ ಸ್ವಾಭಿಮಾನದ ಪ್ರತೀಕವಾಗಿದೆ ಎಂದು ಸ್ಮರಿಸಿದ್ದಾರೆ. ಬ್ರಿಟಿಷ್ ಸೈನ್ಯವನ್ನು ರಣರಂಗದಲ್ಲಿ ಹಿಮ್ಮೆಟ್ಟಿಸಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರಂತಹ ನಿಸ್ವಾರ್ಥ ದೇಶಭಕ್ತರೊಂದಿಗೆ ಕಿತ್ತೂರಿನ ಸ್ವಾತಂತ್ರ್ಯದ ಧ್ವಜವನ್ನು ಎತ್ತಿಹಿಡಿದ ಅವರ ಅಪ್ರತಿಮ ಶೌರ್ಯ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಉಳಿದಿದೆ ಎಂದು ಹೇಳಿದ್ದಾರೆ.
ಸ್ತ್ರೀಶಕ್ತಿಯ ಸಾಕಾರ ಮೂರ್ತಿಯಾಗಿದ್ದ ಚೆನ್ನಮ್ಮ ಅವರ ಬದುಕು ಅನ್ಯಾಯವನ್ನು ಸಹಿಸದೆ ಸ್ವಾಭಿಮಾನವನ್ನು ರಕ್ಷಿಸಿಕೊಳ್ಳಬೇಕೆಂಬ ಸಂದೇಶ ಸಾರುತ್ತದೆ. ಅವರ ತ್ಯಾಗ ಮತ್ತು ದೇಶಪ್ರೇಮದ ಆದರ್ಶಗಳನ್ನು ಮೈಗೂಡಿಸಿಕೊಂಡು ನಾಡಿನ ಹಿರಿಮೆಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯಲು ಎಲ್ಲರೂ ಬದ್ಧರಾಗಬೇಕು ಎಂದು ಕರೆ ನೀಡಿದ್ದಾರೆ.
ಪ್ರತಿಪಕ್ಷ ನಾಯಕ ಆರ್. ಅಶೋಕ ಅವರು, ಬ್ರಿಟಿಷರ ವಿರುದ್ಧ ಹೋರಾಡಿದ ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಶೌರ್ಯ ಎಂದೆಂದಿಗೂ ಸ್ಮರಣೀಯ ಎಂದು ಹೇಳಿದ್ದಾರೆ. ಅವರ ಜಯಂತಿಯ ಶುಭಾಶಯಗಳನ್ನು ತಿಳಿಸಿದ್ದಾರೆ.
ಬಿಜೆಪಿ ನಾಯಕ ಸಿ.ಟಿ. ರವಿ ಅವರು, ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ರಣಕಹಳೆ ಮೊಳಗಿಸಿ ಸ್ವಾಭಿಮಾನದ ಜ್ಯೋತಿಯನ್ನು ಬೆಳಗಿದ ಕನ್ನಡ ನಾಡಿನ ಸಾಹಸ ಸಿಂಹಿಣಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಅಪ್ರತಿಮ ಶೌರ್ಯ ಮತ್ತು ತ್ಯಾಗ ಪ್ರತಿಯೊಬ್ಬ ಕನ್ನಡಿಗನಿಗೂ ಸದಾ ಸ್ಫೂರ್ತಿಯಾಗಿದೆ ಎಂದು ಸ್ಮರಿಸಿದ್ದಾರೆ. ಕನ್ನಡಿಗರ ಹೆಮ್ಮೆಯ ವೀರರಾಣಿ ಚೆನ್ನಮ್ಮ ಅವರ ಜಯಂತಿಯಂದು ಗೌರವ ನಮನ ಸಲ್ಲಿಸಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು, ಕನ್ನಡ ನಾಡಿನ ವೀರವನಿತೆ ಹಾಗೂ ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿಯಂದು ಗೌರವಪೂರ್ವಕ ನಮನ ಸಲ್ಲಿಸಿದ್ದಾರೆ. ಬ್ರಿಟಿಷರ ವಿರುದ್ಧ ಧೈರ್ಯದಿಂದ ಹೋರಾಡಿ ನಾಡಿನ ಸ್ವಾಭಿಮಾನ ಮತ್ತು ಸ್ವಾತಂತ್ರ್ಯಕ್ಕಾಗಿ ಅಚಲವಾಗಿ ನಿಂತ ಅವರ ಶೌರ್ಯ, ಸಾಹಸ ಹಾಗೂ ದೇಶಭಕ್ತಿ ಪ್ರತಿಯೊಬ್ಬ ಕನ್ನಡಿಗನಿಗೂ ಸದಾ ಸ್ಫೂರ್ತಿಯಾಗಿದೆ. ನಾಡಿನ ಸ್ವಾಭಿಮಾನಕ್ಕಾಗಿ ಹೋರಾಡಿದ ವೀರವನಿತೆಯ ಧೈರ್ಯ ಎಂದಿಗೂ ಅಜರಾಮರ ಎಂದು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.