
ಬೆಂಗಳೂರು, 02 ಅಕ್ಟೋಬರ್ (ಹಿ.ಸ.):
ರಾಜ್ಯದ ಪ್ರಮುಖ ನಗರಗಳಲ್ಲಿ ಶುಕ್ರವಾರ ವಾಯು ಗುಣಮಟ್ಟದಲ್ಲಿ ಏರಿಳಿತ ಕಂಡುಬಂದಿದ್ದು, ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಕಳಪೆ ಮಟ್ಟದಲ್ಲಿದೆ. ನಗರದಲ್ಲಿ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ 120ರಿಂದ 135ರ ವ್ಯಾಪ್ತಿಯಲ್ಲಿ ದಾಖಲಾಗಿದೆ.
ನಗರದ ವಾಹನ ಸಂಚಾರ ದಟ್ಟಣೆ, ರಸ್ತೆ ಧೂಳು ಸೇರಿದಂತೆ ವಿವಿಧ ಕಾರಣಗಳಿಂದ ವಾಯುಮಾಲಿನ್ಯ ಹೆಚ್ಚಾಗಿದೆ. ಬೆಂಗಳೂರಿನ ಬಿಟಿಎಂ ಲೇಔಟ್ ಪ್ರದೇಶದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 130ಕ್ಕೂ ಅಧಿಕ ದಾಖಲಾಗಿದ್ದು, ನಗರದಲ್ಲೇ ಹೆಚ್ಚಿನ ಮಾಲಿನ್ಯ ಕಂಡುಬಂದ ಪ್ರದೇಶಗಳಲ್ಲಿ ಒಂದಾಗಿದೆ.
ಬಿಡಬ್ಲುಎಸ್ಎಸ್ ಬಿ ಪ್ರದೇಶ ಹಾಗೂ ಪೀಣ್ಯದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 65ರಿಂದ 85ರ ಆಸುಪಾಸಿನಲ್ಲಿ ದಾಖಲಾಗಿದ್ದು, ವಾಯು ಗುಣಮಟ್ಟ ಸಾಧಾರಣ ಮಟ್ಟದಲ್ಲಿದೆ.
PM2.5 ಮತ್ತು PM10 ಸೂಕ್ಷ್ಮ ಕಣಗಳ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಮಕ್ಕಳು, ವೃದ್ಧರು ಹಾಗೂ ಉಸಿರಾಟದ ಸಮಸ್ಯೆ ಹೊಂದಿರುವವರು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎಂದು ತಿಳಿಸಲಾಗಿದೆ.
ಇನ್ನು ರಾಜ್ಯದ ಇತರೆ ನಗರಗಳಿಗೆ ಹೋಲಿಸಿದರೆ ಮಲೆನಾಡು ಹಾಗೂ ಉತ್ತರ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ವಾಯು ಗುಣಮಟ್ಟ ಉತ್ತಮವಾಗಿದೆ.
ಮಡಿಕೇರಿಯಲ್ಲಿವಾಯು ಗುಣಮಟ್ಟ ಸೂಚ್ಯಂಕ 25ರಿಂದ 35ರ ನಡುವೆ ದಾಖಲಾಗಿದ್ದು, ಉತ್ತಮ ಗಾಳಿಯ ಗುಣಮಟ್ಟ ಕಂಡುಬಂದಿದೆ. ಗದಗ ಮತ್ತು ಹುಬ್ಬಳ್ಳಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ 36ರಿಂದ 60ರಷ್ಟಿದ್ದರೆ, ಮೈಸೂರು ಮತ್ತು ಮಂಗಳೂರಿನಲ್ಲಿ 50ರಿಂದ 75ರ ನಡುವೆ ದಾಖಲಾಗಿದೆ.
ಬೆಂಗಳೂರಿನಂತಹ ಹೆಚ್ಚಿನವಾಯು ಗುಣಮಟ್ಟ ಸೂಚ್ಯಂಕ ದಾಖಲಾಗುವ ಪ್ರದೇಶಗಳಲ್ಲಿ ಬೆಳಗಿನ ಜಾವ ಹೊರಾಂಗಣ ವ್ಯಾಯಾಮ ಅಥವಾ ವಾಯುವಿಹಾರ ನಡೆಸುವಾಗ ಮುನ್ನೆಚ್ಚರಿಕೆ ವಹಿಸುವುದು, ಅಗತ್ಯವಿದ್ದಲ್ಲಿ ಮಾಸ್ಕ್ ಧರಿಸುವುದು ಹಾಗೂ ತೆರೆದ ಸ್ಥಳಗಳಲ್ಲಿ ದೀರ್ಘಕಾಲ ಇರುವುದನ್ನು ಕಡಿಮೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಸೂಕ್ತ ಎಂದು ತಜ್ಞರು ಸಲಹೆ ನೀಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R