
ನವದೆಹಲಿ, 02 ಅಕ್ಟೋಬರ್ (ಹಿ.ಸ.):
ಭೂಮಿತಾಯಿಯನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿ ಕಾಪಾಡುವಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ. ವೀರೇಂದ್ರ ಕುಮಾರ್ ಕರೆ ನೀಡಿದರು.
ದೆಹಲಿಯ ಬಾಬು ಜಗಜೀವನ್ ರಾಮ್ ರಾಷ್ಟ್ರೀಯ ಪ್ರತಿಷ್ಠಾನದಲ್ಲಿ ಶುಕ್ರವಾರ ‘ಸ್ವಚ್ಛತಾ ಹೀ ಸೇವಾ–2026’ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ‘ಒಂದು ಮರ ತಾಯಿಯ ಹೆಸರಿನಲ್ಲಿ’ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಚ್ಛ ಮತ್ತು ಹಸಿರು ಪರಿಸರವನ್ನು ಉತ್ತೇಜಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದರು.
ಪ್ರಕೃತಿಯನ್ನು ಭೂಮಿತಾಯಿ ಪೋಷಿಸುವ ರೀತಿಗೂ, ತಾಯಂದಿರು ಮಾನವ ಜೀವನವನ್ನು ಪೋಷಿಸುವ ರೀತಿಗೂ ಇರುವ ಸಾಮ್ಯತೆಯನ್ನು ವಿವರಿಸಿದ ಡಾ. ವೀರೇಂದ್ರ ಕುಮಾರ್, ಪರಿಸರವನ್ನು ರಕ್ಷಿಸುವುದು ಮತ್ತು ಪೋಷಿಸುವುದರ ಮಹತ್ವವನ್ನು ಒತ್ತಿಹೇಳಿದರು. ಭೂಮಿತಾಯಿಯನ್ನು ಸ್ವಚ್ಛವಾಗಿ ಹಾಗೂ ಆರೋಗ್ಯಕರವಾಗಿ ಕಾಪಾಡಲು ಎಲ್ಲರೂ ಕೊಡುಗೆ ನೀಡಬೇಕು. ಪರಿಸರ ಸಂರಕ್ಷಣೆಗಾಗಿ ಸಾಮೂಹಿಕ ಪ್ರಯತ್ನಗಳು ಮುಂದಿನ ಪೀಳಿಗೆಗೆ ಆರೋಗ್ಯಕರ ಮತ್ತು ಹೆಚ್ಚು ಸುಸ್ಥಿರ ಪರಿಸರ ನಿರ್ಮಿಸಲು ನೆರವಾಗಲಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅವರು ಅಧಿಕಾರಿಗಳು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಸ್ವಚ್ಛ ಮತ್ತು ಹಸಿರು ಪರಿಸರಕ್ಕಾಗಿ ಕೊಡುಗೆ ನೀಡುವಂತೆ ಪ್ರತಿಜ್ಞೆ ಬೋಧಿಸಿದರು.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಸಸಿ ನೆಡುವ ಅಭಿಯಾನವು ‘ಸ್ವಚ್ಛತಾ ಹೀ ಸೇವಾ–2026’ರ ಉದ್ದೇಶಗಳು ಹಾಗೂ ಸ್ವಚ್ಛ ಭಾರತ ಮತ್ತು ಅಭಿವೃದ್ಧಿ ಹೊಂದಿದ ಭಾರತದ ವಿಶಾಲ ದೃಷ್ಟಿಕೋನದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದರು. ನಗರ ಪ್ರದೇಶಗಳ ಹಸಿರು ವಲಯಗಳನ್ನು ಪೋಷಿಸುವುದು ಹಾಗೂ ಪರಿಸರ ಸಂರಕ್ಷಣೆಯಲ್ಲಿ ಸಾಮೂಹಿಕ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಮಹತ್ವವನ್ನು ಈ ಉಪಕ್ರಮ ಒತ್ತಿಹೇಳುತ್ತದೆ ಎಂದು ಹೇಳಿದರು.
‘ಒಂದು ಮರ ತಾಯಿಯ ಹೆಸರಿನಲ್ಲಿ’ ಸಸಿ ನೆಡುವ ಚಟುವಟಿಕೆಯು ಪರಿಸರ ಹೊಣೆಗಾರಿಕೆ ಮತ್ತು ಸುಸ್ಥಿರ ಅಭಿವೃದ್ಧಿಯ ಸಂದೇಶವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ಸ್ವಚ್ಛ, ಹಸಿರು ಮತ್ತು ಆರೋಗ್ಯಕರ ಭಾರತ ನಿರ್ಮಾಣಕ್ಕೆ ನಾಗರಿಕರು ಹಾಗೂ ಸಂಸ್ಥೆಗಳು ಕೊಡುಗೆ ನೀಡುವಂತೆ ಪ್ರೋತ್ಸಾಹಿಸುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಬಿ.ಎಲ್. ವರ್ಮಾ, ಪ್ರತಿಷ್ಠಾನ, ಸಚಿವಾಲಯ ಹಾಗೂ ಬಾಬು ಜಗಜೀವನ್ ರಾಮ್ ರಾಷ್ಟ್ರೀಯ ಪ್ರತಿಷ್ಠಾನದ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಡಾ. ವೀರೇಂದ್ರ ಕುಮಾರ್ ಹಾಗೂ ಬಿ.ಎಲ್. ವರ್ಮಾ ಅವರು ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಅಂಗವಾಗಿ ಅವರಿಗೆ ಗೌರವ ನಮನ ಸಲ್ಲಿಸಿದರು. ಇತರರು ಬಾಬು ಜಗಜೀವನ್ ರಾಮ್ ಅವರಿಗೂ ಗೌರವ ನಮನ ಸಲ್ಲಿಸಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.