
ಬೆಂಗಳೂರು, 17 ಅಕ್ಟೋಬರ್ (ಹಿ.ಸ.):
ಬೆಂಬಲ ಬೆಲೆಗಾಗಿ ಸಮಿತಿ ರಚನೆ ಸೇರಿದಂತೆ ಕಬ್ಬು ಬೆಳೆಗಾರರ ಪರವಾಗಿ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದ್ದು, ಅವರ ಆಗ್ರಹಗಳನ್ನು ಈಡೇರಿಸುವ ಪ್ರಯತ್ನ ನಡೆದಿದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಮಾತ್ರ ತನ್ನ ಪಾಲಿನ ಕೆಲಸ ಮಾಡದೆ ಮೌನಕ್ಕೆ ಜಾರಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕೇಂದ್ರ ಸರ್ಕಾರ ಕಬ್ಬಿಗೆ ಬೆಂಬಲ ಬೆಲೆ ಬಗ್ಗೆ ತೀಮಾನ ಕೈಗೊಂಡಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮುತುವರ್ಜಿ ವಹಿಸಿ ಕೆಲಸ ಮಾಡಿದ್ದು, ಎಂಎಸ್ಪಿಗೆ ಸಂಬಂಧಿಸಿದಂತೆ ಆಯೋಗ ರಚಿಸಲಾಗಿದೆ. ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರ ಪರವಾಗಿದೆ. ರೈತರು ಏಳು ಬೇಡಿಕೆಗಳನ್ನು ಇಟ್ಟಿದ್ದು, ಅವುಗಳನ್ನು ಈಡೇರಿಸಲು ಕ್ರಮ ವಹಿಸಲಾಗುತ್ತಿದೆ. 2014 ಕ್ಕಿಂತ ಮುನ್ನ ರೈತರು ಕಬ್ಬು ನೀಡಿದ ಬಳಿ ವರ್ಷಗಟ್ಟಲೆ ಕಾಯಬೇಕಿತ್ತು. ಆಗ ಎಂಎಸ್ಪಿ ಇರಲಿಲ್ಲ. ರೈತರು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದರು. ಎನ್ಡಿಎ ಅಧಿಕಾರಕ್ಕೆ ಬಂದ ನಂತರ, ಯುಪಿಎ ಉಳಿಸಿಕೊಂಡಿದ್ದ 16,600 ಕೋಟಿ ರೂ. ಬಾಕಿಯನ್ನು ನೀಡಲಾಯಿತು. ಎಫ್ಆರ್ಪಿ ಮೊತ್ತವನ್ನು 30 ರಿಂದ 40 ರೂ. ಗೆ ಹೆಚ್ಚಿಸಿದ್ದು, 2026 ರಲ್ಲಿ 365 ರೂ. ನೀಡಲಾಗುತ್ತಿದೆ ಎಂದು ತಿಳಿಸಿದರು.
ಎಥೆನಾಲ್ ಉತ್ಪಾದನೆಗೆ ಯುಪಿಎ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನಾನು ಸಾರಿಗೆ ಸಚಿವನಾಗಿದ್ದಾಗ ಮೂರು ನಾಲ್ಕು ಬಾರಿ ಮನವಿ ಮಾಡಿದರೂ ಅನುಮತಿ ನೀಡಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಾಹನಗಳಿಗೆ ಎಥೆನಾಲ್ ಬಳಸುವ ಕ್ರಾಂತಿಕಾರಿ ಸುಧಾರಣೆ ತಂದಿದೆ. ಹಿಂದೆ ಕೋಟ್ಯಂತರ ಪ್ಲಾಸ್ಟಿಕ್ ಬಾಟಲ್ಗಳ ಬಳಕೆಯಾಗುತ್ತಿತ್ತು. ಈಗ ಬಯೋಪ್ಲಾಸ್ಟಿಕ್ ತಯಾರಿಸುವ ಪ್ರಯತ್ನ ನಡೆದಿದ್ದು, ಕರ್ನಾಟಕದ ಕಬ್ಬು ಅರೆಯುವ ಫ್ಯಾಕ್ಟರಿಗಳಲ್ಲಿ ಮರುಬಳಕೆಯಾಗುತ್ತಿದೆ. ಇದರಿಂದ ರೈತರಿಗೆ ಉತ್ತಮ ಆದಾಯ ಸಿಗುತ್ತಿದೆ. ಶೇ.27 ರಷ್ಟು ಸಕ್ಕರೆ ಉತ್ಪಾದನೆ ಜಾಸ್ತಿಯಾಗಿದೆ. ಆದರೂ ದರ ಇಳಿಕೆ ಮಾಡಿಲ್ಲ. ರಫ್ತನ್ನು 20 ಲಕ್ಷ ಟನ್ಗೆ ಹೆಚ್ಚಿಸಲಾಗಿದೆ. ಎಥೆನಾಲ್ ಮೊದಲು 38 ಕೋಟಿ ಲೀಟರ್ ಉತ್ಪಾದನೆಯಾಗುತ್ತಿದ್ದು, ಈಗ 1200 ಕೋಟಿ ಲೀಟರ್ ಉತ್ಪಾದನೆಯಾಗುತ್ತಿದೆ ಎಂದರು.
ಕಬ್ಬು ಬೆಳೆಗಾರರಿಗೆ ಬೇಗ ಪಾವತಿ ಮಾಡುತ್ತಿದ್ದು, ಈ ವರ್ಷ 99% ರೈತರಿಗೆ ಬಾಕಿ ನೀಡಲಾಗಿದೆ. ಮೋದಿ ಸರ್ಕಾರದಿಂದಾಗಿ ಇದು ದೊಡ್ಡ ಉದ್ಯಮವಾಗಿ ಬೆಳೆದಿದೆ. ಕಬ್ಬು ಬೆಳೆಗಾರರ ಆದಾಯ ಹೆಚ್ಚಾಗಿದೆ. ರೈತರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮೊದಲು ಕಬ್ಬಿನ ತೂಕದಲ್ಲಿ ಮೋಸ ಮಾಡುತ್ತಿದ್ದು, ಅದಕ್ಕೆ ನಿಯಂತ್ರಣ ಹೇರಲಾಗಿದೆ. 7-8% ವ್ಯರ್ಥ ಕಸ ಎಂದು ಲೆಕ್ಕ ಮಾಡುತ್ತಿದ್ದು, ಈಗ ಅದನ್ನೂ ನಿರ್ವಹಣೆ ಮಾಡಲಾಗುತ್ತಿದೆ ಎಂದರು.
*ಕಾಂಗ್ರೆಸ್ ಸರ್ಕಾರದಿಂದ ಕ್ರಮವಿಲ್ಲ*
ಇದರಿಂದ ರಾಜ್ಯ ಸರ್ಕಾರಕ್ಕೆ ಜಿಎಸ್ಟಿಯಿಂದ ಆದಾಯ ಬರುತ್ತಿದೆ. ಆದರೂ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಮಾತಾಡದೆ ಮೌನವಾಗಿದೆ. ಒಂದೊಂದು ಕಾರ್ಖಾನೆಯಲ್ಲಿ ಒಂದೊಂದು ದರವಿದೆ. ತ್ಯಾಜ್ಯವನ್ನು ಹೆಚ್ಚಾಗಿ ತೋರಿಸಿ ವಂಚಿಸಲಾಗುತ್ತಿದೆ. ಬೆಳೆ ವಿಮೆ ಕೂಡ ಸರಿಯಾಗಿ ಸಿಗುತ್ತಿಲ್ಲ. ರೈತರಿಗೆ ನೆರವಾಗಲು ಲ್ಯಾಬ್ಗಳನ್ನು ರಾಜ್ಯ ಸರ್ಕಾರ ನಿರ್ಮಿಸಬೇಕು. ಬೇರೆ ರಾಜ್ಯಗಳಲ್ಲಿ ರಾಜ್ಯ ಸಲಹಾ ಬೆಲೆ ಇದೆ. ಆದರೂ ಇಲ್ಲಿ ಮಾತ್ರ ಇದನ್ನು ಜಾರಿ ಮಾಡಿಲ್ಲ. ರಾಜ್ಯ ಸರ್ಕಾರ ರೈತರಿಗೆ ನ್ಯಾಯ ಕೊಟ್ಟಿದ್ದರೆ ಅವರು ಬೀದಿಗೆ ಇಳಿಯುತ್ತಿರಲಿಲ್ಲ. ಕೂಡಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇಂದ್ರ ಸರ್ಕಾರದ ಜೊತೆ ಮಾತಾಡುತ್ತಿದ್ದೇನೆ ಎಂದು ಹಾರಿಕೆ ಉತ್ತರ ನೀಡಿದ್ದಾರೆ. ಅವರು ದೆಹಲಿಯಲ್ಲೇ ಹೆಚ್ಚು ಸಮಯ ಕಳೆದಿದ್ದಾರೆ. ಈ ವಿಚಾರದಲ್ಲಿ ಅವರು ದೆಹಲಿಗೆ ಮಾತುಕತೆ ಮಾಡಲು ಹೋಗಿಲ್ಲ ಎಂದರು.
ಈ ಬಾರಿ ಆಡಂಬರದ ದಸರಾ ಬೇಡವೆಂದು ಜನರು ಹೇಳಿದ್ದರೂ ಹಠದಿಂದ ಮಾಡಲಾಗುತ್ತಿದೆ. ಕಂಬಳಕ್ಕೆ ನೂರಾರು ಕೋಟಿ ರೂ. ಖರ್ಚಾಗುತ್ತಿದೆ. ಮುಖ್ಯಮಂತ್ರಿಗಳು ಕೇಂದ್ರದ ಮಟ್ಟದಲ್ಲಿ ಮಾತುಕತೆ ನಡೆಸಬೇಕು. ಇದು ಕೇವಲ ಕೇಂದ್ರದ ಹೊಣೆಯಲ್ಲ. ಕೇಂದ್ರ ಉತ್ತಮ ಪರಿಹಾರ ಕ್ರಮ ಕೈಗೊಳ್ಳುತ್ತಿದ್ದು, ರಾಜ್ಯ ಸರ್ಕಾರ ಕೂಡ ಸಮನ್ವಯದಿಂದ ಕೆಲಸ ಮಾಡಬೇಕು. ಆರ್ಥಿಕ ಇಲಾಖೆ ಪಾಪರ್ ಎಂದು ಗೊತ್ತಾದ ನಂತರ ಪರಿಸ್ಥಿತಿ ಕಷ್ಟವಾಗಿದೆ. ರಾಜ್ಯ ಸರ್ಕಾರದಿಂದ ಪಾಲು ನೀಡಬೇಕೆಂಬ ಕಾರಣಕ್ಕೆ ಇವರು ಮಾತುಕತೆ ನಡೆಸುತ್ತಿಲ್ಲ. ಬರಗಾಲಕ್ಕೂ ಹಣ ನೀಡುತ್ತಿಲ್ಲ ಎಂದರು.
ಎಲ್ಲಕ್ಕೂ ದೆಹಲಿಗೆ ಹೋಗುವ ಸಿಎಂ ಡಿ.ಕೆ.ಶಿವಕುಮಾರ್, ಈಗಲೂ ಸರ್ವಪಕ್ಷಗಳ ನಿಯೋಗವನ್ನು ಕರೆದುಕೊಂಡು ಹೋಗಬೇಕು. ನಾನು ಸಚಿವನಾಗಿದ್ದಾಗ ಕಬ್ಬಿಗೆ ಬೆಲೆ ನಿಗದಿ ಮಾಡಿ ಸಮಸ್ಯೆ ಪರಿಹರಿಸಲಾಗಿತ್ತು ಎಂದರು.
*ಸುಳ್ಳು ಸುದ್ದಿ ಹಬ್ಬಿಸಿ ದಂಗೆ*
ಜಿಡಿಪಿ ಬೆಳವಣಿಗೆ ಬಹಳ ವೇಗವಾಗಿದೆ ಎಂದು ವಿವಿಧ ಸಮೀಕ್ಷೆಗಳು ಹೇಳಿದೆ. ಇಂತಹ ಸಮಯದಲ್ಲಿ ಕಾಂಗ್ರೆಸ್ ಕಾಕ್ರೋಚ್ ಪಾರ್ಟಿ ಜೊತೆ ಸೇರಿ, ನೇಪಾಳದಲ್ಲಿ ಮಾಡಿದಂತೆ ದಂಗೆ ಮಾಡುತ್ತೇವೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಪ್ರಚೋದನೆ ಮಾಡಲಾಗುತ್ತಿದೆ. ಜಿರಳೆ ಪಾರ್ಟಿಗೆ ಬೇರೆ ದೇಶಗಳಿಂದ ಹಣ ಬರುತ್ತಿದೆ ಎಂಬ ಆರೋಪ ಇದೆ. ದೇಶದ ಮೇಲೆ ಕತ್ತಿ ಮಸೆಯುವವರಿಗೆ ಬೇರೆ ದೇಶದಲ್ಲಿ ತರಬೇತಿ ಸಿಕ್ಕಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಜಿರಳೆ ಪಾರ್ಟಿಗೆ ಬೆಂಬಲವಿದೆ, ಎಲ್ಲಿ ಬೇಕಾದರೂ ಪ್ರತಿಭಟನೆ ಮಾಡಿ ಎಂದಿದ್ದಾರೆ. ಆರ್ಎಸ್ಎಸ್ ಹಾಗೂ ಬೇರೆ ಸಂಘಟನೆಗಳಿಗೆ ಮಾತ್ರ ಅನುಮತಿ ಬೇಕಾಗುತ್ತದೆ. ಈಗ ಕಾಂಗ್ರೆಸ್ನ ಕೈ ಚಿಹ್ನೆ ತೆಗೆದು ಜಿರಳೆ ಚಿತ್ರ ಹಾಕಿಕೊಳ್ಳುವುದು ಸೂಕ್ತ. ನ್ಯಾಷನಲ್ ಕಾಕ್ರೋಚ್ ಪಾರ್ಟಿ ಎಂದು ಹೆಸರು ಬದಲಾಯಿಸಿಕೊಳ್ಳಲಿ ಎಂದರು.
*ಜಿರಳೆ ಪಾರ್ಟಿ ಜೊತೆ ವಿಲೀನ?*
ಸಂವಿಧಾನದ ರಕ್ಷಣೆಗಾಗಿ ಹೋರಾಟ ಮಾಡುತ್ತೇವೆ ಎನ್ನುತ್ತಾರೆ. ಆದರೆ ಇದು ನೆಹರು-ಇಂದಿರಾ ಬರೆದ ಸಂವಿಧಾನವೇ ಹೊರತು, ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನವಲ್ಲ. ರಾಜಪ್ರಭುತ್ವ ಬಿಟ್ಟು ಪ್ರಜಾಪ್ರಭುತ್ವ ತರುತ್ತೇನೆ ಎಂದು ಅಂಬೇಡ್ಕರ್ ಹೇಳಿದರೆ, ತಮ್ಮ ಕುಟುಂಬದವರೇ ಬರಬೇಕೆಂದು ಗಾಂಧಿ ಕುಟುಂಬ ಹೇಳಿದೆ. ಕಾಂಗ್ರೆಸ್ ಪಕ್ಷದಲ್ಲಿ ಪ್ರಜಾಪ್ರಭುತ್ವ ಇಲ್ಲ. ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತ ಕೂಡ ಪ್ರಧಾನಿಯಾಗಬಹುದು. ಆದರೆ ಸಿಎಂ ಡಿ.ಕೆ.ಶಿವಕುಮಾರ್ ಪ್ರಧಾನಿಯಾಗಲು ಸಾಧ್ಯವಿಲ್ಲ. ತುರ್ತು ಪರಿಸ್ಥಿತಿ ಜಾರಿ ಮಾಡಿ ಎಲ್ಲರನ್ನೂ ಜೈಲಿಗೆ ಹಾಕಿರುವುದೇ ಇವರ ಪ್ರಜಾಪ್ರಭುತ್ವ. ಜಿರಳೆ ಪಾರ್ಟಿ ಜೊತೆ ವಿಲೀನ ಆಗುತ್ತದೆಯೇ ಎಂದು ರಾಹುಲ್ ಗಾಂಧಿ ಈಗ ತಿಳಿಸಬೇಕು. ಎಲ್ಲ ಕಡೆ ಸೋತಿರುವ ಇವರಿಗೆ ಒಂದು ವಾಹನ ಬೇಕಿದೆ. ಅದಕ್ಕಾಗಿ ಜಿರಳೆ ಪಾರ್ಟಿಯನ್ನು ಬಳಸಿಕೊಂಡಿದ್ದಾರೆ ಎಂದರು.
*ವಿಕಲಚೇತನರನ್ನು ತಡೆಯಬೇಡಿ*
ರಾಮನಗರದಲ್ಲಿ ಪ್ರತಿಭಟನೆ ಮಾಡುತ್ತಿರುವ ವಿಕಲಚೇತನರನ್ನು ಭೇಟಿ ಮಾಡಿದ್ದೆ. ಐದು ತಿಂಗಳಿಂದ ಅವರಿಗೆ ಮಾಸಾಶನ ನೀಡಿಲ್ಲ. ಆದರೆ ಪೊಲೀಸರು ಅವರನ್ನು ಬಂಧಿಸಿ ಲಾಠಿಪ್ರಹಾರ ಮಾಡಿರುವುದು ಸರಿಯಲ್ಲ. ಪೊಲೀಸರು ಈ ರೀತಿ ದೌರ್ಜನ್ಯ ಮಾಡಬಾರದು. ಅವರನ್ನು ಸರ್ಕಾರಿ ಕಚೇರಿಗಳಲ್ಲಿ ಹತ್ತು ಸಾವಿರ ರೂಪಾಯಿಗೆ ದುಡಿಸಿಕೊಳ್ಳಲಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ವಿಕಲಚೇತನರಿಗೂ 50 ಕೋಟಿ ರೂ. ಹಣ ಕೊಡುವ ಯೋಗ್ಯತೆ ಇಲ್ಲ. ಸರ್ಕಾರ ಕೂಡಲೇ ಅವರ ಮಾಸಾಶನ ಬಿಡುಗಡೆ ಮಾಡಿ, ಬೇಡಿಕೆಗಳನ್ನು ಈಡೇರಿಸಬೇಕು. ಅವರು ಬೆಂಗಳೂರಿಗೆ ಪಾದಯಾತ್ರೆ ಮಾಡಿ ವಿಧಾನಸೌಧಕ್ಕೆ ಬಂದರೆ ಸರ್ಕಾರದ ಮಾನ ಹರಾಜಾಗುತ್ತದೆ ಎಂದರು.
ಕೇಂದ್ರ ಸರ್ಕಾರದಿಂದ 5 ಕೆಜಿ ಅಕ್ಕಿ ಸಿಗುತ್ತಿದೆ. ಆದರೆ ರಾಜ್ಯ ಸರ್ಕಾರದಿಂದ ಇಂದಿರಾ ಕಿಟ್ ನೀಡುವುದು ಕನಸಿನ ಮಾತು ಎಂದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.