
ನವದೆಹಲಿ, 15 ಅಕ್ಟೋಬರ್ (ಹಿ.ಸ.):
ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ವಿಡಿಯೊ ಸಂವಾದದ ಮೂಲಕ ಲಡಾಖ್ನಲ್ಲಿ ಸುಮಾರು 3,350 ಕೋಟಿ ರೂ. ವೆಚ್ಚದ ಐದು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. ಈ ಯೋಜನೆಗಳಿಂದ ವಿಮಾನ ಸಂಪರ್ಕ, ಆಯಕಟ್ಟಿನ ರಸ್ತೆ ಸಂಪರ್ಕ, ವಿದ್ಯುತ್ ಪೂರೈಕೆ, ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಹಾಗೂ ಜಲ ಭದ್ರತೆಗೆ ಬಲ ದೊರೆಯುವ ನಿರೀಕ್ಷೆಯಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಲಡಾಖ್ನ ಪ್ರಗತಿ ಮತ್ತು ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ ಎಂದರು. ಯೋಜನೆಗಳಿಂದ ಜನರ ಪ್ರಯಾಣ ಸುಗಮವಾಗುವುದರ ಜತೆಗೆ ವಿದ್ಯುತ್ ಮತ್ತು ನೀರಿನ ಲಭ್ಯತೆ ಸುಧಾರಿಸಲಿದೆ. ಪ್ರಾಚೀನ ಪರಂಪರೆಯ ಸಂರಕ್ಷಣೆಗೂ ಹೆಚ್ಚಿನ ಬಲ ದೊರೆಯಲಿದೆ ಎಂದು ತಿಳಿಸಿದರು. ಯೋಜನೆಗಳ ನಿರ್ಮಾಣದಲ್ಲಿ ಕೊಡುಗೆ ನೀಡಿದ ಎಂಜಿನಿಯರ್ಗಳು, ಕಾರ್ಮಿಕರು, ಸ್ಥಳೀಯರು ಹಾಗೂ ಗಡಿ ರಸ್ತೆಗಳ ಸಂಘಟನೆಯ ಸಿಬ್ಬಂದಿಯನ್ನು ಶ್ಲಾಘಿಸಿದರು.
ವಿಮಾನ ನಿಲ್ದಾಣದ ಸಾಮರ್ಥ್ಯ ಹೆಚ್ಚಳ
ಲೆಹ್ನ ಕುಶೋಕ್ ಬಕುಲಾ ರಿಂಪೋಚೆ ವಿಮಾನ ನಿಲ್ದಾಣದಲ್ಲಿ ಸುಮಾರು 640 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಪ್ರಯಾಣಿಕರ ಟರ್ಮಿನಲ್ ಕಟ್ಟಡವನ್ನು ಪ್ರಧಾನಿ ಉದ್ಘಾಟಿಸಿದರು. ಸುಮಾರು 23,800 ಚದರ ಮೀಟರ್ ವಿಸ್ತೀರ್ಣ ಹೊಂದಿರುವ ಈ ಟರ್ಮಿನಲ್ನ ವಾರ್ಷಿಕ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯವು 10 ಲಕ್ಷದಿಂದ ಸುಮಾರು 35 ಲಕ್ಷಕ್ಕೆ ಹೆಚ್ಚಲಿದೆ.
ಇಂಧನ ದಕ್ಷತೆಯನ್ನು ಹೆಚ್ಚಿಸುವ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಭೂಶಾಖದ ಶಕ್ತಿಯನ್ನು ಆಧರಿಸಿದ ತಾಪನ ವ್ಯವಸ್ಥೆಯನ್ನು ಇಲ್ಲಿ ಅಳವಡಿಸಲಾಗಿದೆ. ಆಧುನಿಕ ಪ್ರಯಾಣಿಕರ ಸೌಲಭ್ಯಗಳೊಂದಿಗೆ ಲಡಾಖ್ನ ಸಾಂಸ್ಕೃತಿಕ ಪರಂಪರೆಯನ್ನೂ ಈ ಟರ್ಮಿನಲ್ನಲ್ಲಿ ಪ್ರತಿಬಿಂಬಿಸಲಾಗಿದೆ. ಇದರಿಂದ ಪ್ರದೇಶದ ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯುವ ನಿರೀಕ್ಷೆಯಿದೆ.
12 ಗಂಟೆಗಳ ಪ್ರಯಾಣ ಇನ್ನು ಮೂರು ಗಂಟೆಗಳಲ್ಲಿ
ಸುಮಾರು 2,500 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ 298 ಕಿ.ಮೀ. ಉದ್ದದ ನಿಮು–ಪದಮ್–ದರ್ಚಾ ರಸ್ತೆಯನ್ನು ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಿದರು. ಈ ರಸ್ತೆ ಲೆಹ್ನ ನಿಮುವನ್ನು ಹಿಮಾಚಲ ಪ್ರದೇಶದ ದರ್ಚಾದೊಂದಿಗೆ ಸಂಪರ್ಕಿಸುತ್ತದೆ. ಜಾನ್ಸ್ಕರ್ ಕಣಿವೆಯ ಮೂಲಕ ಹಾದುಹೋಗುವ ಈ ಮಾರ್ಗದಿಂದ ಈ ಹಿಂದೆ ಸುಮಾರು 12 ಗಂಟೆ ತೆಗೆದುಕೊಳ್ಳುತ್ತಿದ್ದ ಪ್ರಯಾಣವನ್ನು ಮೂರು ಗಂಟೆಗಳಲ್ಲಿ ಪೂರ್ಣಗೊಳಿಸಬಹುದು ಎಂದು ಪ್ರಧಾನಿ ತಿಳಿಸಿದರು.
ಈ ರಸ್ತೆಯಿಂದ ಸ್ಥಳೀಯರ ಸಂಚಾರ ಸುಗಮವಾಗುವುದರ ಜತೆಗೆ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳಿಗೂ ಅನುಕೂಲವಾಗಲಿದೆ. ಶ್ರೀನಗರ–ಲೆಹ್ ಮತ್ತು ಮನಾಲಿ–ಲೆಹ್ ಹೆದ್ದಾರಿಗಳಿಗೆ ಪರ್ಯಾಯ ಸಂಪರ್ಕ ಮಾರ್ಗವಾಗಿ ಇದು ಕಾರ್ಯನಿರ್ವಹಿಸಲಿದೆ. ದುರ್ಗಮ ಗಡಿ ಪ್ರದೇಶಗಳಲ್ಲಿ ಸಶಸ್ತ್ರ ಪಡೆಗಳ ಸಂಚಾರ ಹಾಗೂ ಅಗತ್ಯ ಸಾಮಗ್ರಿಗಳ ಸಾಗಣೆಯೂ ಸುಗಮವಾಗಲಿದೆ ಎಂದು ಹೇಳಿದರು.
ವಿದ್ಯುತ್ ಪೂರೈಕೆಗೆ ಬಲ
ಒಂಬತ್ತು ಮೆಗಾವಾಟ್ ಸಾಮರ್ಥ್ಯದ ಕಿರು ಜಲವಿದ್ಯುತ್ ಯೋಜನೆ ಹಾಗೂ 66 ಕೆ.ವಿ. ಸಾಮರ್ಥ್ಯದ ದಹ್–ಹನು–ಖಲ್ಸಿ ದ್ವಿ-ಸರ್ಕ್ಯೂಟ್ ವಿದ್ಯುತ್ ಪ್ರಸರಣ ಮಾರ್ಗವನ್ನೂ ಪ್ರಧಾನಿ ಉದ್ಘಾಟಿಸಿದರು. ಈ ಯೋಜನೆಗಳಿಂದ ವಿದ್ಯುತ್ ಪೂರೈಕೆಯ ವಿಶ್ವಾಸಾರ್ಹತೆ ಹೆಚ್ಚುವುದರ ಜತೆಗೆ ಉತ್ಪಾದನೆಯಾದ ವಿದ್ಯುತ್ ಪ್ರಸರಣ ವ್ಯವಸ್ಥೆ ಬಲಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.
ಲೆಹ್ನ ಸಿಂಧೂ ನದಿ ತೀರದಲ್ಲಿ ಭಾರತದ ಮೊದಲ ಶಿಲಾ ಕೆತ್ತನೆಗಳ ಸಂರಕ್ಷಣಾ ಉದ್ಯಾನವನ್ನೂ ಪ್ರಧಾನಿ ಉದ್ಘಾಟಿಸಿದರು. ಈ ಉದ್ಯಾನವು ಪ್ರದೇಶದಲ್ಲಿರುವ ಪ್ರಾಚೀನ ಶಿಲಾಚಿತ್ರಗಳು ಮತ್ತು ಕೆತ್ತನೆಗಳನ್ನು ಸಂರಕ್ಷಿಸುವುದು, ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಪರಂಪರೆಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶ ಹೊಂದಿದೆ.
40 ಗ್ರಾಮಗಳಲ್ಲಿ ಜಲಾಶಯಗಳ ಉದ್ಘಾಟನೆ
'ಅಮೃತ್ ಹಿಮ ಸರೋವರ' ಯೋಜನೆಯಡಿ ಲಡಾಖ್ನ 40 ಗ್ರಾಮಗಳಲ್ಲಿ ನಿರ್ಮಿಸಲಾದ 40 ಜಲಾಶಯಗಳನ್ನು ಪ್ರಧಾನಿ ಉದ್ಘಾಟಿಸಿದರು. ಜಲ ಸಂರಕ್ಷಣೆ ಮತ್ತು ಲಭ್ಯವಿರುವ ನೀರಿನ ಸಮರ್ಪಕ ನಿರ್ವಹಣೆ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಬಿತ್ತನೆಯ ನಿರ್ಣಾಯಕ ಅವಧಿಯಲ್ಲಿ ರೈತರಿಗೆ ನೀರು ಒದಗಿಸಲು, ನೀರಾವರಿ ವ್ಯವಸ್ಥೆಯನ್ನು ಸುಧಾರಿಸಲು ಹಾಗೂ ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡಿರುವ ಜನರ ಬದುಕನ್ನು ಸುಸ್ಥಿರಗೊಳಿಸಲು ಈ ಜಲಾಶಯಗಳು ನೆರವಾಗಲಿವೆ ಎಂದು ನಿರೀಕ್ಷಿಸಲಾಗಿದೆ.
ಯುವಜನರಿಗೆ ಶಿಕ್ಷಣ, ಕ್ರೀಡೆಗೆ ಉತ್ತೇಜನ
ಲಡಾಖ್ನ ಅಭಿವೃದ್ಧಿ ಮತ್ತು ಅಲ್ಲಿನ ಯುವಜನರಿಗೆ ಉತ್ತಮ ಅವಕಾಶಗಳನ್ನು ಒದಗಿಸುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದೆ ಎಂದು ಪ್ರಧಾನಿ ಹೇಳಿದರು. ಲೆಹ್ನಲ್ಲಿ ಉತ್ಕೃಷ್ಟತಾ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಭಾರತೀಯ ತಂತ್ರಜ್ಞಾನ ಸಂಸ್ಥೆ, ಜಮ್ಮು ಹಾಗೂ ಭಾರತೀಯ ನಿರ್ವಹಣಾ ಸಂಸ್ಥೆ, ಜಮ್ಮುಗಳ ಉಪಕೇಂದ್ರಗಳನ್ನು ಸ್ಥಾಪಿಸುವ ಪ್ರಸ್ತಾವನೆಗಳನ್ನೂ ಮುಂದಕ್ಕೆ ಕೊಂಡೊಯ್ಯಲಾಗುತ್ತಿದೆ ಎಂದು ತಿಳಿಸಿದರು.
ಇದರಿಂದ ಯುವಜನರಿಗೆ ತಮ್ಮದೇ ಪ್ರದೇಶದಲ್ಲಿ ಉನ್ನತ ಶಿಕ್ಷಣ, ಸಂಶೋಧನೆ, ತಂತ್ರಜ್ಞಾನ ಮತ್ತು ಹೊಸ ಕೌಶಲಗಳನ್ನು ಕಲಿಯುವ ಅವಕಾಶ ದೊರೆಯಲಿದೆ ಎಂದರು.
ಲಡಾಖ್ನ ಯುವಜನರು ಐಸ್ ಹಾಕಿ, ಚಳಿಗಾಲದ ಕ್ರೀಡೆಗಳು ಮತ್ತು ಪರ್ವತಾರೋಹಣದಲ್ಲಿ ವಿಶಿಷ್ಟ ಗುರುತನ್ನು ಮೂಡಿಸಿದ್ದಾರೆ ಎಂದು ಪ್ರಧಾನಿ ಹೇಳಿದರು. ಹೊಸ ಕ್ರೀಡಾ ನೀತಿಯ ಮೂಲಕ ಕ್ರೀಡಾ ಪ್ರತಿಭೆಗಳಿಗೆ ಉತ್ತಮ ತರಬೇತಿ ಮತ್ತು ಸೌಲಭ್ಯಗಳನ್ನು ಒದಗಿಸಿ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಪ್ರೋತ್ಸಾಹಿಸಲಾಗುತ್ತಿದೆ ಎಂದು ತಿಳಿಸಿದರು.
ಲಡಾಖ್ನ ನೈಸರ್ಗಿಕ ಪರಿಸ್ಥಿತಿಗಳಿಂದಾಗಿ ಜನರು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಆದರೆ ಹಿಂದಿನ ಸರ್ಕಾರಗಳು ಈ ಪ್ರದೇಶದ ಅಭಿವೃದ್ಧಿಗೆ ಸಾಕಷ್ಟು ಆದ್ಯತೆ ನೀಡಿರಲಿಲ್ಲ ಎಂದು ಪ್ರಧಾನಿ ಹೇಳಿದರು. ಪ್ರಸ್ತುತ ಕೇಂದ್ರ ಸರ್ಕಾರ ಲಡಾಖ್ನ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಹೊಸ ಯೋಜನೆಗಳು ಮೂಲಸೌಕರ್ಯವನ್ನು ಬಲಪಡಿಸುವುದರ ಜತೆಗೆ ಜನರ ಜೀವನಮಟ್ಟ ಸುಧಾರಿಸಲು ಸಹಕಾರಿಯಾಗಲಿವೆ ಎಂದು ತಿಳಿಸಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.