ಕೃಷಿ ಸಾಲಮನ್ನ ಮಾಡಲು ಒತ್ತಾಯಿಸಿ ರೈತ ಸಂಘದಿಂದ ಅಕ್ಟೋಬರ್ ೧೯ ರಂದು ಪ್ರತಿಭಟನೆ
ಕೃಷಿ ಸಾಲಮನ್ನ ಮಾಡಲು ಒತ್ತಾಯಿಸಿ ರೈತ ಸಂಘದಿAದ ಅಕ್ಟೋಬರ್ ೧೯ ರಂದು ಪ್ರತಿಭಟನೆ
ಪಾತಕೋಟ ನವೀನ್


ಕೋಲಾರ, 15 ಅಕ್ಟೋಬರ್ (ಹಿ.ಸ): ಜಿಲ್ಲೆಯಲ್ಲಿ ನಿರಂತರ ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್ಎಸ್) ಕೋಲಾರ ಜಿಲ್ಲಾ ಸಮಿತಿಯು ಅಕ್ಟೋಬರ್ ೧೯ರ ಸೋಮವಾರ ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ಯೋಜನೆಗಳ ಕೊರತೆಯಿಂದ ಕೃಷಿಯು ಮಳೆಯನ್ನೇ ಅವಲಂಬಿಸಿದೆ. ಮಳೆಯ ಅಭಾವದಿಂದ ಮಳೆಯಾಶ್ರಿತ ಬೆಳೆಗಳು ನಷ್ಟಕ್ಕೀಡಾಗುತ್ತಿದ್ದು, ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವುದರಿಂದ ನೀರಾವರಿ ಕೃಷಿಯೂ ಸಂಕಷ್ಟಕ್ಕೆ ಸಿಲುಕಿದೆ. ಸಾಲ ಮಾಡಿ ಬೆಳೆದ ಬೆಳೆಗಳಿಗೆ ನೀರಿಲ್ಲದೆ ಹಾಗೂ ಕಾಡುಪ್ರಾಣಿಗಳ ಹಾವಳಿಯಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ರೈತರು ಬೆಳೆದ ತರಕಾರಿ ಮತ್ತು ಹಣ್ಣುಗಳನ್ನು ಮಾರುಕಟ್ಟೆಗೆ ಕೊಂಡೊಯ್ದಾಗ ಗುಣಮಟ್ಟದ ನೆಪದಲ್ಲಿ ಕಡಿಮೆ ಬೆಲೆ ನೀಡಲಾಗುತ್ತಿದೆ. ಕೆ.ಸಿ. ವ್ಯಾಲಿ ನೀರಿನಿಂದ ಬೆಳೆದ ಉತ್ಪನ್ನಗಳೆಂದು ಹೇಳಿ ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ನೀಡದೆ ಕಡೆಗಣಿಸಲಾಗುತ್ತಿದೆ ಎಂಬ ದೂರುಗಳಿವೆ. ಕೃಷಿ ವೆಚ್ಚ ನಿರಂತರವಾಗಿ ಹೆಚ್ಚಾಗುತ್ತಿದ್ದರೂ ಬೆಳೆಗಳಿಗೆ ಲಾಭದಾಯಕ ಬೆಲೆ ಸಿಗದಿರುವುದರಿಂದ ರೈತರು ಕೃಷಿಯಿಂದ ವಿಮುಖರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವುದು, ಕೃಷ್ಣಾ ಕಣಿವೆಯ ನೀರಿನಲ್ಲಿ ಜಿಲ್ಲೆಯ ಪಾಲನ್ನು ಒದಗಿಸುವುದು ಹಾಗೂ ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸುವುದು ಸೇರಿದಂತೆ ರೈತರ ಪ್ರಮುಖ ಬೇಡಿಕೆಗಳನ್ನು ಸರ್ಕಾರ ಈಡೇರಿಸಿಲ್ಲ. ಇದರಿಂದ ಕೃಷಿಯನ್ನೇ ಅವಲಂಬಿಸಿರುವ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಉದ್ಯೋಗ ಅರಸಿ ಯುವಜನರು ನಗರ ಪ್ರದೇಶಗಳಿಗೆ ವಲಸೆ ಹೋಗುವಂತಾಗಿದೆ ಎಂದು ಜಿಲ್ಲಾ ಸಮಿತಿ ತಿಳಿಸಿದೆ.

ಬರಗಾಲದಿಂದ ಸಂಕಷ್ಟಕ್ಕೀಡಾದ ರೈತರು ಮತ್ತು ಕೃಷಿ ಕೂಲಿಕಾರರಿಗೆ ನೆರವಾಗಲು ತಕ್ಷಣ ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸಬೇಕು. ಬೆಳೆ ವಿಮೆ ಪಾವತಿಸಿರುವ ಅರ್ಹ ರೈತರಿಗೆ ವಿಮಾ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು. ಮಳೆಯ ಕೊರತೆಯಿಂದ ಬೆಳೆ ಕಳೆದುಕೊಂಡ ರೈತರಿಗೆ ಪ್ರತಿ ಎಕರೆಗೆ ೨೫ ಸಾವಿರ ಪರಿಹಾರ ನೀಡಬೇಕು ಎಂದು ಕೆಪಿಆರ್ಎಸ್ ಆಗ್ರಹಿಸಿದೆ.

ಕೆ.ಸಿ. ವ್ಯಾಲಿ ಮತ್ತು ಎಚ್.ಎನ್. ವ್ಯಾಲಿ ನೀರನ್ನು ಮೂರನೇ ಹಂತದಲ್ಲಿ ಶುದ್ಧೀಕರಿಸಿ ಪೂರೈಸಬೇಕು. ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿ, ಕೃಷ್ಣಾ ಕಣಿವೆಯ ನೀರಿನಲ್ಲಿ ಜಿಲ್ಲೆಯ ಪಾಲನ್ನು ಒದಗಿಸಬೇಕು. ಕಾಡುಪ್ರಾಣಿಗಳಿಂದ ಬೆಳೆಗಳಿಗೆ ಉಂಟಾಗುತ್ತಿರುವ ಹಾನಿಯನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

ಪಡಿತರ ವಿತರಣೆಯನ್ನು ದ್ವಿಗುಣಗೊಳಿಸಿ ರಾಗಿ, ಅಕ್ಕಿ, ಗೋಧಿ ಮತ್ತು ತೊಗರಿಬೇಳೆ ವಿತರಿಸಬೇಕು. ಸಹಕಾರ ಸಂಘಗಳ ಮೂಲಕ ಜಾನುವಾರುಗಳಿಗೆ ಮೇವು ಪೂರೈಸಬೇಕು. ಪ್ರತಿ ಲೀಟರ್ ಹಾಲಿಗೆ ೧೫ ಪ್ರೋತ್ಸಾಹಧನ ನೀಡಿ, ರೈತರಿಗೆ ಪ್ರತಿ ಲೀಟರ್ ಹಾಲಿಗೆ ಒಟ್ಟಾರೆ ೬೦ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಪಶು ಆಹಾರದ ಬೆಲೆಯನ್ನು ನಿಯಂತ್ರಿಸಿ, ಹಾಲು ಒಕ್ಕೂಟಕ್ಕೊಂದು ಪಶು ಆಹಾರ ಘಟಕ ಸ್ಥಾಪಿಸಬೇಕು. ಹೈನುಗಾರಿಕೆ ಹಾಗೂ ಕುರಿ-ಮೇಕೆ ಸಾಕಾಣಿಕೆಗೆ ಸಹಾಯಧನ ಸಹಿತ ಸಾಲ ಸೌಲಭ್ಯ ಒದಗಿಸಬೇಕು ಎಂದು ಸಂಘ ಒತ್ತಾಯಿಸಿದೆ.

ಕೊಳವೆಬಾವಿಗಳಿಗೆ ಕನಿಷ್ಠ ಎಂಟು ಗಂಟೆಗಳ ಕಾಲ ಸಮರ್ಪಕ ವಿದ್ಯುತ್ ಪೂರೈಸಬೇಕು. ಮನೆಗಳಿಗೆ ಸಂಜೆ ೬ರಿಂದ ಬೆಳಿಗ್ಗೆ ೬ರವರೆಗೆ ವಿದ್ಯುತ್ ನೀಡಬೇಕು. ಮುಂಗಡ ಪಾವತಿ ವಿದ್ಯುತ್ ಮೀಟರ್ ಪದ್ಧತಿಯನ್ನು ಕೈಬಿಡಬೇಕು. ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಸಹಕಾರ ಸಂಘಗಳ ಮೂಲಕ ಕೃಷಿಗಾಗಿ ಪಡೆದಿರುವ ಸಾಲಗಳನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದೆ.

ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲರ ಮಾಸಾಶನ ಮತ್ತು ಗೃಹಲಕ್ಷ್ಮಿ ಯೋಜನೆಯಡಿ ಬಾಕಿ ಇರುವ ಹಣವನ್ನು ತಕ್ಷಣ ಪಾವತಿಸಬೇಕು. ಬಗರ್ ಹುಕುಂ ಸಾಗುವಳಿಯನ್ನು ಸಕ್ರಮಗೊಳಿಸಿ, ಪಹಣಿ (ಪಿ. ನಂಬರ್) ಭೂದಾಖಲೆಗಳಲ್ಲಿನ ದೋಷಗಳನ್ನು ಸರಿಪಡಿಸಬೇಕು. ರೈತರ ಸಾಗುವಳಿ ಸಂಬAಧಿತ ಸಮಸ್ಯೆಗಳನ್ನು ಪರಿಹರಿಸಿ, ಭೂದಾಖಲೆಗಳನ್ನು ಸರಿಪಡಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದು ಕೆಪಿಆರ್ಎಸ್ ಒತ್ತಾಯಿಸಿದೆ.

ರೈತರ ಸಂಕಷ್ಟಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಿ ಬೇಡಿಕೆಗಳನ್ನು ಈಡೇರಿಸಬೇಕು ಎಂಬ ಉದ್ದೇಶದಿಂದ ನಡೆಯಲಿರುವ ಪ್ರತಿಭಟನೆಯಲ್ಲಿ ರೈತರು, ಕೃಷಿ ಕೂಲಿಕಾರರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೆಪಿಆರ್ಎಸ್ ಜಿಲ್ಲಾ ಸಮಿತಿಯ ಜಿಲ್ಲಾಧ್ಯಕ್ಷ ಎನ್.ಎನ್. ಶ್ರೀರಾಮ್ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್ಕುಮಾರ್ ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande