
ನವದೆಹಲಿ, 14 ಅಕ್ಟೋಬರ್ (ಹಿ.ಸ.):
ಭಾರತದ ಆಡಳಿತ ಮಾದರಿ ಕೇವಲ ಕಲ್ಯಾಣ ಯೋಜನೆಗಳ ಮೂಲಕ ನೆರವು ನೀಡುವುದಕ್ಕೆ ಸೀಮಿತವಾಗಿಲ್ಲ. ನಾಗರಿಕರನ್ನು ಸಬಲರನ್ನಾಗಿಸಿ, ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಪಾಲುದಾರರನ್ನಾಗಿ ಮಾಡುವ ಮಾಧ್ಯಮವಾಗಿ ರೂಪುಗೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸ್ವಚ್ಛತೆ, ಅಡುಗೆ ಅನಿಲ ಸಂಪರ್ಕ, ಆರೋಗ್ಯ ರಕ್ಷಣೆ ಮತ್ತು ಸುಲಭ ಸಾಲ ಸೌಲಭ್ಯಗಳಂತಹ ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೂ ಪ್ರಯೋಜನ ತಲುಪಿಸುವುದರ ಜತೆಗೆ ಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸಂವಹನ ಹಾಗೂ ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಬರೆದಿರುವ ಲೇಖನವನ್ನು ಪ್ರಧಾನಿ ಕಚೇರಿ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಯೋಜನೆಗಳ ಪ್ರಯೋಜನ ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತಿರುವುದು ಮತ್ತು ಜನರ ಭಾಗವಹಿಸುವಿಕೆ ಆಡಳಿತ ವ್ಯವಸ್ಥೆಯಲ್ಲಿ ನೈಜ ಬದಲಾವಣೆ ತರುತ್ತಿದೆ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಗುರಿಗೆ ಈ ದೃಷ್ಟಿಕೋನ ಪ್ರಮುಖ ಆಧಾರವಾಗಿದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ಸಿಂಧಿಯಾ ಅವರು ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ‘ಕಲ್ಯಾಣದಿಂದ ಸಬಲೀಕರಣದತ್ತ ಆಡಳಿತ ವ್ಯವಸ್ಥೆ’ ಎಂಬ ಶೀರ್ಷಿಕೆಯಡಿ ಲೇಖನ ಬರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಗೌರವ, ಅವಕಾಶ ಮತ್ತು ಜನರ ಭಾಗವಹಿಸುವಿಕೆಗೆ ಆಡಳಿತ ವ್ಯವಸ್ಥೆಯಲ್ಲಿ ಆದ್ಯತೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಮಹಾತ್ಮ ಗಾಂಧೀಜಿ ಅವರು ಸಮಾಜದ ಅತ್ಯಂತ ಬಡ ವ್ಯಕ್ತಿಗೂ ಧ್ವನಿ ನೀಡಬೇಕೆಂದು ಪ್ರತಿಪಾದಿಸಿದ್ದ ವಿಚಾರ ಹಾಗೂ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಅಂತ್ಯೋದಯ ತತ್ವವನ್ನು ಲೇಖನದಲ್ಲಿ ಉಲ್ಲೇಖಿಸಲಾಗಿದೆ.
ನೇರ ನಗದು ವರ್ಗಾವಣೆ ಮತ್ತು ಜನಧನ-ಮೊಬೈಲ್ ತಂತ್ರಜ್ಞಾನದ ಮೂಲಕ ಸುಮಾರು 50 ಲಕ್ಷ ಕೋಟಿ ರೂಪಾಯಿಗಳನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಸಿಂಧಿಯಾ ಲೇಖನದಲ್ಲಿ ತಿಳಿಸಿದ್ದಾರೆ. 2013-14ಕ್ಕೆ ಹೋಲಿಸಿದರೆ ದೇಶದ ಆರ್ಥಿಕತೆ ಸುಮಾರು ಮೂರು ಪಟ್ಟು ವೃದ್ಧಿಸಿ, 331 ಲಕ್ಷ ಕೋಟಿ ರೂಪಾಯಿಗಳ ಮಟ್ಟ ತಲುಪಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ದೇಶದಲ್ಲಿ 2.23 ಲಕ್ಷಕ್ಕೂ ಅಧಿಕ ನವೋದ್ಯಮಗಳು 23 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿವೆ ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ 10.5 ಕೋಟಿಗೂ ಅಧಿಕ ಅಡುಗೆ ಅನಿಲ ಸಂಪರ್ಕಗಳನ್ನು ಒದಗಿಸಲಾಗಿದೆ. ಸ್ವಚ್ಛ ಭಾರತ ಅಭಿಯಾನದಡಿ ಸುಮಾರು 12 ಕೋಟಿ ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆಯುಷ್ಮಾನ್ ಭಾರತ ಯೋಜನೆಯಡಿ 12 ಕೋಟಿ ಜನರಿಗೆ ಚಿಕಿತ್ಸೆ ಒದಗಿಸಲಾಗಿದೆ ಎಂದು ಸಿಂಧಿಯಾ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ 59 ಕೋಟಿಗೂ ಅಧಿಕ ಆಧಾರರಹಿತ ಸಾಲಗಳಿಗೆ ಅನುಮೋದನೆ ನೀಡಲಾಗಿದೆ. ಸ್ವಸಹಾಯ ಗುಂಪುಗಳಿಗೆ ಸೇರಿದ ಮೂರು ಕೋಟಿಗೂ ಅಧಿಕ ಗ್ರಾಮೀಣ ಮಹಿಳೆಯರು 'ಲಖಪತಿ ದೀದಿ'ಯರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಎಲ್ಲ ಉಪಕ್ರಮಗಳು ನಾಗರಿಕರನ್ನು ಸ್ವಾವಲಂಬಿಗಳನ್ನಾಗಿಸಿ, ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ನೆರವಾಗುತ್ತಿವೆ ಎಂಬುದಾಗಿ ಸಿಂಧಿಯಾ ತಮ್ಮ ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
-----------
ಹಿಂದೂಸ್ತಾನ್ ಸಮಾಚಾರ್ / Rakesh.M.B.