ಗೌರವಧನ ಹೆಚ್ಚಳಕ್ಕೆ ಆಗ್ರಹ: ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ಬೆಂಗಳೂರು, 12 ಅಕ್ಟೋಬರ್ (ಹಿ.ಸ.): ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ (ಎಐಯುಟಿಯುಸಿ) ನೇತೃತ್ವದಲ್ಲಿ ಅಕ್ಟೋಬರ್ 5ರಿಂದ 12ರವರೆಗೆ ರಾಜ್ಯಾದ್ಯಂತ ಪ್ರತಿಭಟನಾ ಸಪ್ತಾಹ ನಡೆಸಲಾಯಿತು. ರಾಜ್ಯದ ಗ್ರಾಮೀಣ ಹಾಗೂ
asha-workers-statewide-protest-demanding-honorarium-hike-samasta-app-fix


ಬೆಂಗಳೂರು, 12 ಅಕ್ಟೋಬರ್ (ಹಿ.ಸ.):

ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ (ಎಐಯುಟಿಯುಸಿ) ನೇತೃತ್ವದಲ್ಲಿ ಅಕ್ಟೋಬರ್ 5ರಿಂದ 12ರವರೆಗೆ ರಾಜ್ಯಾದ್ಯಂತ ಪ್ರತಿಭಟನಾ ಸಪ್ತಾಹ ನಡೆಸಲಾಯಿತು.

ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಆರೋಗ್ಯ ಸೇವೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ರಾಜ್ಯದ ವಿವಿಧ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಯಿತು.

ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಬಿಎ (ಬಿಬಿಎಂಪಿ) ಆಶಾ ಸಂಘದ ಜಿಲ್ಲಾ ಅಧ್ಯಕ್ಷೆ ರಮಾ ಟಿ.ಸಿ. ಮಾತನಾಡಿ, ಆಶಾ ಕಾರ್ಯಕರ್ತೆಯರು ಹಲವು ವರ್ಷಗಳಿಂದ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕಳೆದ ಒಂಬತ್ತು ವರ್ಷಗಳಲ್ಲಿ ಕೇವಲ 1,500 ರೂ. ಗೌರವಧನ ಹೆಚ್ಚಳವಾಗಿದ್ದು, ಬೆಲೆ ಏರಿಕೆಗೆ ಅನುಗುಣವಾಗಿ ಗೌರವಧನ ಹೆಚ್ಚಿಸಿಲ್ಲ. ಕೇರಳ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಹರಿಯಾಣ ಮತ್ತು ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಆಶಾ ಕಾರ್ಯಕರ್ತೆಯರು ಮಾಸಿಕ 15 ಸಾವಿರ ರೂ.ಗೂ ಅಧಿಕ ಗೌರವಧನ ಪಡೆಯುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಗೌರವಧನ ಹೆಚ್ಚಿಸುವುದಾಗಿ ಸರ್ಕಾರ ನೀಡಿದ್ದ ಭರವಸೆಗಳು ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಬಿಎ ಆಶಾ ಸಂಘದ ಜಿಲ್ಲಾ ಕಾರ್ಯದರ್ಶಿ ಪರಾನ ಮಾತನಾಡಿ, ರಾಜ್ಯ ಸರ್ಕಾರದ ಗೌರವಧನ ಹಾಗೂ ಕೇಂದ್ರ ಸರ್ಕಾರದ ಪ್ರೋತ್ಸಾಹಧನವನ್ನು ಒಟ್ಟುಗೂಡಿಸಿ ಕನಿಷ್ಠ 15 ಸಾವಿರ ರೂ. ಮಾಸಿಕ ಗೌರವಧನ ನಿಗದಿಪಡಿಸಬೇಕು. ಹಲವು ತಿಂಗಳುಗಳಿಂದ ಬಾಕಿ ಉಳಿದಿರುವ ಪ್ರೋತ್ಸಾಹಧನವನ್ನು ತಕ್ಷಣವೇ ಕಾರ್ಯಕರ್ತೆಯರ ಖಾತೆಗಳಿಗೆ ಜಮಾ ಮಾಡಬೇಕು. ಪ್ರತಿ ತಿಂಗಳು ನಿಗದಿತ ಸಮಯಕ್ಕೆ ಗೌರವಧನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ನಗರ ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಮಾತನಾಡಿ, ಆಶಾ ಕಾರ್ಯಕರ್ತೆಯರಿಗೆ ಮೊಬೈಲ್ ಆಧಾರಿತ ಕೆಲಸಗಳನ್ನು ನಿರ್ವಹಿಸಲು ಉತ್ತಮ ಗುಣಮಟ್ಟದ ಮೊಬೈಲ್‌ಗಳನ್ನು ಒದಗಿಸಬೇಕು. ಮೊಬೈಲ್ ಬಳಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು.

ನೆಲಮಂಗಲ ತಾಲೂಕು ಆಶಾ ಸಂಘದ ಕಾರ್ಯದರ್ಶಿ ವೀಣಾ ಮಾತನಾಡಿ, ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಆಶಾ ಕಾರ್ಯಕರ್ತೆಯರು ಶಾಂತಿಯುತವಾಗಿ ಪ್ರತಿಭಟನಾ ಸಪ್ತಾಹ ನಡೆಸಿದ್ದಾರೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಪ್ರಮುಖ ಬೇಡಿಕೆಗಳು

- ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗೌರವಧನ ಹಾಗೂ ಪ್ರೋತ್ಸಾಹಧನ ಸೇರಿಸಿ ಕನಿಷ್ಠ 15 ಸಾವಿರ ರೂ. ಮಾಸಿಕ ಗೌರವಧನ ನೀಡಬೇಕು.

- ಆಶಾ ಕಾರ್ಯಕರ್ತೆಯರಿಗೆ ಉತ್ತಮ ಗುಣಮಟ್ಟದ ಮೊಬೈಲ್‌ಗಳನ್ನು ಒದಗಿಸಬೇಕು. ಮೊಬೈಲ್ ಆಧಾರಿತ ಕೆಲಸಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಬೇಕು.

- ಬಾಕಿ ಉಳಿದಿರುವ ಪ್ರೋತ್ಸಾಹಧನವನ್ನು ತಕ್ಷಣ ಬಿಡುಗಡೆ ಮಾಡಬೇಕು.

- ಆರ್‌ಸಿಎಚ್ ಪೋರ್ಟಲ್ ಮೂಲಕ ಕಾರ್ಯಕರ್ತೆಯರು ನಿರ್ವಹಿಸಿದ ಕೆಲಸಕ್ಕೆ ಅನುಗುಣವಾಗಿ ಕೇಂದ್ರದ ಪ್ರೋತ್ಸಾಹಧನ ಪಾವತಿಯಾಗದ ಸಮಸ್ಯೆಯನ್ನು ಬಗೆಹರಿಸಬೇಕು.

- ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸುತ್ತೋಲೆಗಳಿದ್ದರೂ ಆಶಾ ಕಾರ್ಯಕರ್ತೆಯರನ್ನು ಕಫದ ಮಾದರಿ ಸಂಗ್ರಹಿಸಿ ತರುವಂತೆ ಒತ್ತಾಯಿಸಲಾಗುತ್ತಿದೆ. ಇಂತಹ ಒತ್ತಡವನ್ನು ತಡೆಯಲು ಕ್ರಮ ಕೈಗೊಳ್ಳಬೇಕು.

- ಆಶಾ ಕಾರ್ಯಕರ್ತೆಯರು ಜಿಪಿಎಸ್ ಸ್ಥಳದ ಮಾಹಿತಿ ದಾಖಲಿಸಬೇಕೆಂಬ ನಿಯಮ ಅಥವಾ ನಿರ್ದೇಶನಗಳಿಲ್ಲದಿದ್ದರೂ ಒತ್ತಡ ಹೇರುವುದನ್ನು ನಿಲ್ಲಿಸಬೇಕು.

ಪ್ರತಿಭಟನೆಯಲ್ಲಿ ಜಿಬಿಎ ಆಶಾ ಸಂಘದ ಉಪಾಧ್ಯಕ್ಷರಾದ ಸುಮಿತ್ರಾ ಮತ್ತು ಮಮತಾ, ಬೆಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷೆ ಶೋಭಾ, ದೊಡ್ಡಬಳ್ಳಾಪುರ ತಾಲೂಕು ಆಶಾ ಸಂಘದ ಉಪಾಧ್ಯಕ್ಷೆ ಆಶಾ, ಹೊಸಕೋಟೆಯ ಪವಿತ್ರಾ ಮತ್ತು ಪುಷ್ಪಲತಾ ಸೇರಿದಂತೆ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande