ಇಂಧನ ಕೊರತೆ: ವಿಜಯಪುರ ಜಿಲ್ಲೆಯಲ್ಲಿ ಬಹುತೇಕ ಬಸ್ ಸಂಚಾರ ಸ್ಥಗಿತ
ವಿಜಯಪುರ, 12 ಅಕ್ಟೋಬರ್ (ಹಿ.ಸ.) ಇಂಧನ ಕೊರತೆಯಿಂದಾಗಿ ವಿಜಯಪುರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಾರಿಗೆ ಸಂಸ್ಥೆಯ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಬಹುತೇಕ ಮಾರ್ಗಗಳಲ್ಲಿ ಬಸ್ಗಳ ಸಂಚಾರ ಸ್ಥಗಿತಗೊಂಡಿರುವ ಪರಿಣಾಮ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಜಿಲ್ಲೆಯ ವಿವಿಧ ಗ್ರಾಮಗಳ
Indhan ಕೊರತೆ


ವಿಜಯಪುರ, 12 ಅಕ್ಟೋಬರ್ (ಹಿ.ಸ.)

ಇಂಧನ ಕೊರತೆಯಿಂದಾಗಿ ವಿಜಯಪುರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಾರಿಗೆ ಸಂಸ್ಥೆಯ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಬಹುತೇಕ ಮಾರ್ಗಗಳಲ್ಲಿ ಬಸ್ಗಳ ಸಂಚಾರ ಸ್ಥಗಿತಗೊಂಡಿರುವ ಪರಿಣಾಮ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಜಿಲ್ಲೆಯ ವಿವಿಧ ಗ್ರಾಮಗಳು, ತಾಲೂಕು ಕೇಂದ್ರಗಳು ಹಾಗೂ ವಿಜಯಪುರ ನಗರಕ್ಕೆ ಪ್ರತಿನಿತ್ಯ ಉದ್ಯೋಗ, ಶಿಕ್ಷಣ, ವ್ಯಾಪಾರ ಹಾಗೂ ವಿವಿಧ ಕೆಲಸಗಳಿಗಾಗಿ ಸಂಚರಿಸುವ ಪ್ರಯಾಣಿಕರು ಬಸ್ಗಳನ್ನೇ ಅವಲಂಬಿಸಿದ್ದಾರೆ. ಆದರೆ ಇಂಧನದ ಕೊರತೆಯಿಂದ ಬಸ್ಗಳು ರಸ್ತೆಗಿಳಿಯದ ಹಿನ್ನೆಲೆಯಲ್ಲಿ ಪ್ರಯಾಣಿಕರು ಬಸ್ ನಿಲ್ದಾಣಗಳಲ್ಲಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಶೇಷವಾಗಿ ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ಪ್ರಮುಖ ಮಾರ್ಗಗಳಲ್ಲಿ ಬಸ್ ಸಂಚಾರ ಕಡಿಮೆಯಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಬಸ್ಗಳಿಗಾಗಿ ಕಾಯುತ್ತಿದ್ದ ಪ್ರಯಾಣಿಕರು ಖಾಸಗಿ ವಾಹನಗಳು ಹಾಗೂ ಇತರ ಪರ್ಯಾಯ ಸಾರಿಗೆ ವ್ಯವಸ್ಥೆಗಳನ್ನು ಅವಲಂಬಿಸುವಂತಾಗಿದೆ. ಇದರಿಂದ ಪ್ರಯಾಣಿಕರಿಗೆ ಹೆಚ್ಚುವರಿ ಹಣ ಹಾಗೂ ಸಮಯ ವ್ಯಯವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಶಕ್ತಿ ಯೋಜನೆ ಜಾರಿಯಾದ ಬಳಿಕ ಪ್ರಯಾಣಿಕರ ಸಂಖ್ಯೆ ಹೆಚ್ಚಳಗೊಂಡಿದ್ದು, ಅದಕ್ಕೆ ತಕ್ಕಂತೆ ಸಾರಿಗೆ ಸಂಸ್ಥೆಯ ಆರ್ಥಿಕ ಹಾಗೂ ಕಾರ್ಯಾಚರಣಾ ವ್ಯವಸ್ಥೆಯನ್ನು ಬಲಪಡಿಸಬೇಕಾಗಿತ್ತು. ಆದರೆ ಇದೀಗ ಇಂಧನ ಖರೀದಿಗೂ ಸಮಸ್ಯೆ ಎದುರಾಗಿರುವುದು ಸಾರಿಗೆ ಸಂಸ್ಥೆಯ ನಿರ್ವಹಣೆಯ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚುನಾವಣೆ ಪೂರ್ವದಲ್ಲಿ ಜನತೆಗೆ ನೀಡಿದ್ದ ವಿವಿಧ ಭರವಸೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ಇದೀಗ ಸಾರ್ವಜನಿಕ ಸಾರಿಗೆಯಂತಹ ಮೂಲಭೂತ ಸೇವೆಯ ಮೇಲೂ ಪರಿಣಾಮ ಬೀರುತ್ತಿದೆ ಎಂದು ಪ್ರಯಾಣಿಕರು ಟೀಕಿಸಿದ್ದಾರೆ. ಜನರಿಗೆ ಉಚಿತ ಅಥವಾ ರಿಯಾಯಿತಿ ಪ್ರಯಾಣದ ಭರವಸೆ ನೀಡುವುದಷ್ಟೇ ಅಲ್ಲದೆ, ಆ ಯೋಜನೆಯನ್ನು ಸಮರ್ಪಕವಾಗಿ ನಿರ್ವಹಿಸಲು ಅಗತ್ಯವಿರುವ ಹಣಕಾಸು ಹಾಗೂ ಮೂಲಸೌಕರ್ಯ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಜಯಪುರ ನಗರದ ಪ್ರಯಾಣಿಕ ಅಬ್ದುಲ್ ರಜಾಕ್ ಮನಗೂಳಿ ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸಾರ್ವಜನಿಕರಿಗೆ ಅತ್ಯಂತ ಅಗತ್ಯವಾಗಿರುವ ಬಸ್ ಸೇವೆಯೇ ಸ್ಥಗಿತಗೊಂಡರೆ ಸಾಮಾನ್ಯ ಜನರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಮಹಿಳೆಯರು, ಕಾರ್ಮಿಕರು, ರೈತರು ಹಾಗೂ ದಿನಗೂಲಿ ನೌಕರರು ಬಸ್ ಸೇವೆಯನ್ನೇ ಅವಲಂಬಿಸಿದ್ದು, ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾದರೆ ಅವರ ದಿನನಿತ್ಯದ ಬದುಕಿನ ಮೇಲೆಯೇ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.

ಇಂಧನದ ಕೊರತೆಯಿಂದಾಗಿ ಜಿಲ್ಲೆಯ ಹಲವು ಭಾಗಗಳಲ್ಲಿ ಬಸ್ಗಳು ಡಿಪೋಗಳಲ್ಲೇ ನಿಲ್ಲುವಂತಾಗಿದೆ ಎಂಬ ಆರೋಪ ಕೇಳಿಬರುತ್ತಿದ್ದು, ಈ ಕುರಿತು ಸಾರಿಗೆ ಸಂಸ್ಥೆ ತಕ್ಷಣ ಕ್ರಮ ಕೈಗೊಂಡು ಅಗತ್ಯ ಪ್ರಮಾಣದ ಇಂಧನ ಪೂರೈಕೆ ಮಾಡಬೇಕು. ಸ್ಥಗಿತಗೊಂಡಿರುವ ಮಾರ್ಗಗಳಲ್ಲಿ ಬಸ್ ಸಂಚಾರವನ್ನು ಕೂಡಲೇ ಪುನರಾರಂಭಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಸಾರ್ವಜನಿಕ ಸಾರಿಗೆ ವ್ಯವಸ್ಥೆ ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳದಂತೆ ಸರ್ಕಾರ ಹಾಗೂ ಸಾರಿಗೆ ಸಂಸ್ಥೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಇಂಧನ ಪೂರೈಕೆ, ಬಸ್ಗಳ ನಿರ್ವಹಣೆ ಹಾಗೂ ಮಾರ್ಗಗಳ ಕಾರ್ಯಾಚರಣೆಗೆ ಅಗತ್ಯ ಹಣಕಾಸು ವ್ಯವಸ್ಥೆ ಕಲ್ಪಿಸುವ ಮೂಲಕ ಪ್ರಯಾಣಿಕರಿಗೆ ನಿರಂತರ ಸೇವೆ ಒದಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande