
ಬಾಗಲಕೋಟೆ , 12 ಅಕ್ಟೋಬರ್ (ಹಿ.ಸ.)
ಮುಧೋಳ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಾಗರಿಕ ಮಾಹಿತಿ ಹಕ್ಕು ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಮಹತ್ವ, ನಾಗರಿಕರಿಗೆ ಕಾನೂನು ನೀಡಿರುವ ಹಕ್ಕುಗಳು ಹಾಗೂ ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಅಗತ್ಯತೆ ಕುರಿತು ಗಣ್ಯರು ವಿಚಾರ ಮಂಡಿಸಿದರು.
ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕರಿಗೆ ತಮ್ಮ ಹಕ್ಕುಗಳು ಹಾಗೂ ಸರ್ಕಾರದ ಆಡಳಿತಾತ್ಮಕ ಕಾರ್ಯವೈಖರಿ ಕುರಿತು ಮಾಹಿತಿ ಪಡೆಯುವ ಅವಕಾಶ ಕಲ್ಪಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ. ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸುವ ಮೂಲಕ ಭ್ರಷ್ಟಾಚಾರ ನಿಯಂತ್ರಣ ಹಾಗೂ ಜನಪರ ಆಡಳಿತಕ್ಕೆ ಮಾಹಿತಿ ಹಕ್ಕು ಕಾಯ್ದೆ ನೆರವಾಗುತ್ತದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಬಸವರಾಜೇಂದ್ರ ಶ್ರೀಗಳು ವಹಿಸಿದ್ದರು. ಕಾನೂನು ಅರಿವು ಪ್ರತಿಯೊಬ್ಬ ನಾಗರಿಕನಿಗೂ ಅಗತ್ಯವಾಗಿದ್ದು, ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಂಡು ಅವುಗಳನ್ನು ಕಾನೂನುಬದ್ಧವಾಗಿ ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.
ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ, ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಸೇರಿದಂತೆ ಗಣ್ಯರು ಮಾಹಿತಿ ಹಕ್ಕು ಕಾಯ್ದೆಯ ವಿವಿಧ ಆಯಾಮಗಳ ಕುರಿತು ಮಾತನಾಡಿದರು. ಸರ್ಕಾರದ ವಿವಿಧ ಇಲಾಖೆಗಳ ಕಾರ್ಯವೈಖರಿ, ಸಾರ್ವಜನಿಕ ಹಣದ ಬಳಕೆ, ಅಭಿವೃದ್ಧಿ ಕಾಮಗಾರಿಗಳು ಹಾಗೂ ಜನರಿಗೆ ಲಭ್ಯವಾಗಬೇಕಾದ ಸರ್ಕಾರಿ ಸೇವೆಗಳ ಕುರಿತು ಅಗತ್ಯ ಮಾಹಿತಿ ಪಡೆಯಲು ಮಾಹಿತಿ ಹಕ್ಕು ಕಾಯ್ದೆ ನಾಗರಿಕರಿಗೆ ಪ್ರಮುಖ ಕಾನೂನುಬದ್ಧ ಅವಕಾಶ ಒದಗಿಸುತ್ತದೆ ಎಂದು ತಿಳಿಸಲಾಯಿತು.
ಸಮಾರಂಭದಲ್ಲಿ ನಿವೃತ್ತ ನ್ಯಾಯಾಧೀಶರಾದ ಎಸ್.ಎಚ್. ಮಿಟ್ಟಲಕೋಡ, ಎಚ್.ಜಿ. ರಮೇಶ, ಹುಸೇನಸಾಬ ನದಾಫ್, ಕೆ.ಎಚ್. ವೆಂಕಟೇಶ, ಚಂದ್ರಶೇಖರ ಉಪ್ಪಾರ, ಹನಮಂತ ಶಿಂಧೆ, ರದ್ರೇಶ್, ಗಣೇಶ ಮೇತ್ರಿ, ಶಿವಮೊಗ್ಗ ಜಿಲ್ಲಾಧ್ಯಕ್ಷ ಮೂರ್ತಿ, ರಾಜ್ಯ ಸಂಘಟನಾ ಕಾರ್ಯದರ್ಶಿ ರವಿಕುಮಾರ್, ಬಸವರಾಜ ಮನಿಗಾರ, ವೆಂಕಣ್ಣ ಅರಕೇರಿ, ಎಚ್.ಜಿ. ಕುಣಿಗಲ್ಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಾಗರಿಕರು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಬೇಕು, ಕಾನೂನುಬದ್ಧ ಮಾರ್ಗದಲ್ಲಿ ಮಾಹಿತಿ ಪಡೆದು ಸಾರ್ವಜನಿಕ ವ್ಯವಸ್ಥೆಯಲ್ಲಿನ ಪಾರದರ್ಶಕತೆ ಹಾಗೂ ಉತ್ತರದಾಯಿತ್ವವನ್ನು ಬಲಪಡಿಸಲು ಸಹಕರಿಸಬೇಕು ಎಂಬ ಸಂದೇಶ ನೀಡಲಾಯಿತು. ಮಾಹಿತಿ ಹಕ್ಕಿನ ಕುರಿತು ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಇಂತಹ ಕಾರ್ಯಕ್ರಮಗಳು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ನಿರಂತರವಾಗಿ ನಡೆಯಬೇಕೆಂಬ ಅಭಿಪ್ರಾಯವೂ ವ್ಯಕ್ತವಾಯಿತು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande