ಮಾರ್ಗಮಧ್ಯೆ ಇಂಡಿಗೋ ವಿಮಾನದಲ್ಲಿ ಬೆಂಕಿ: ಹೈದರಾಬಾದ್ ನಲ್ಲಿ ತುರ್ತು ಭೂಸ್ಪರ್ಶ
ಹಾರಾಟದ ವೇಳೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರ ಪವರ್ ಬ್ಯಾಂಕ್ಗೆ ಬೆಂಕಿ ಹೊತ್ತಿಕೊಂಡ ಹಿನ್ನೆಲೆಯಲ್ಲಿ ದೆಹಲಿಯಿಂದ ಚೆನ್ನೈಗೆ ತೆರಳುತ್ತಿದ್ದ ವಿಮಾನವನ್ನು ಹೈದರಾಬಾದ್ಗೆ ತಿರುಗಿಸಲಾಯಿತು. ವಿಮಾನ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದ್ದು, ಪ್ರಯಾಣಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಯಿತು.
indigo-flight-diverted-to-hyderabad-after-power-bank-catches-fire


ನವದೆಹಲಿ, 11 ಅಕ್ಟೋಬರ್ (ಹಿ.ಸ.):

ದೆಹಲಿಯಿಂದ ಚೆನೈಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರ ಪವರ್ ಬ್ಯಾಂಕ್ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ಭಾನುವಾರ ನಡೆದಿದೆ.

ದೆಹಲಿಯಿಂದ ಚೆನ್ನೈಗೆ ತೆರಳುತ್ತಿದ್ದ ಇಂಡಿಗೋ ವಿಮಾನವನ್ನು ತುರ್ತು ಕ್ರಮವಾಗಿ ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು.

ಇಂಡಿಗೋ ವಿಮಾನದ 6E 6115 ಸಂಖ್ಯೆಯ ವಿಮಾನದಲ್ಲಿ ಈ ಘಟನೆ ಸಂಭವಿಸಿದೆ. ಪ್ರಯಾಣಿಕರ ವೈಯಕ್ತಿಕ ಎಲೆಕ್ಟ್ರಾನಿಕ್ ಸಾಧನದಿಂದ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನದ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾದರು. ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಸಿಬ್ಬಂದಿ ತ್ವರಿತವಾಗಿ ಕ್ರಮ ಕೈಗೊಂಡರು.

ಸುರಕ್ಷಿತವಾಗಿ ಭೂಸ್ಪರ್ಶ

ವಿಮಾನಯಾನ ಸುರಕ್ಷತಾ ನಿಯಮಾವಳಿಗಳ ಪ್ರಕಾರ ಪೈಲಟ್ಗಳು ವಿಮಾನದ ಮಾರ್ಗ ಬದಲಿಸಿ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದರು. ಘಟನೆಯಲ್ಲಿ ಯಾವುದೇ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ. ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಪ್ರಯಾಣ ಮುಂದುವರಿಸಲು ಪರ್ಯಾಯ ವಿಮಾನ

ಘಟನೆಯಿಂದಾಗಿ ಪ್ರಯಾಣಿಕರ ಪ್ರಯಾಣಕ್ಕೆ ವ್ಯತ್ಯಯ ಉಂಟಾಗಿದ್ದು, ಚೆನ್ನೈಗೆ ತೆರಳಲು ಇಂಡಿಗೋ ಸಂಸ್ಥೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಿದೆ. ಅನಿರೀಕ್ಷಿತ ಘಟನೆಯಿಂದ ಉಂಟಾದ ಅನಾನುಕೂಲಕ್ಕೆ ವಿಷಾದ ವ್ಯಕ್ತಪಡಿಸಿರುವ ಸಂಸ್ಥೆ, ಪ್ರಯಾಣಿಕರಿಗೆ ಅಗತ್ಯ ನೆರವು ಹಾಗೂ ಮಾಹಿತಿ ಒದಗಿಸಲು ಕ್ರಮ ಕೈಗೊಂಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande