
ನವದೆಹಲಿ, 10 ಅಕ್ಟೋಬರ್ (ಹಿ.ಸ.):
ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮಿಳುನಾಡಿನ ರಾಜಧಾನಿ ಚೆನ್ನೈಗೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ 13 ಸಾವಿರ ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಹಲವು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಮೆಟ್ರೋ ರೈಲು, ರಾಷ್ಟ್ರೀಯ ಹೆದ್ದಾರಿ, ರೈಲ್ವೆ, ಬಂದರು, ಪೆಟ್ರೋಲಿಯಂ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಸಂಬಂಧಿಸಿದ ಯೋಜನೆಗಳು ಇದರಲ್ಲಿ ಸೇರಿವೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ಚೆನ್ನೈ ಮೆಟ್ರೋ ರೈಲು ಮಾರ್ಗ ಉದ್ಘಾಟನೆ
ಪ್ರಧಾನಿ ಮೋದಿ ಅವರು ಚೆನ್ನೈ ಮೆಟ್ರೋ ರೈಲು ಯೋಜನೆಯ ಎರಡನೇ ಹಂತದ ಪೂನಮಲ್ಲಿ-ವಡಪಳನಿ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಸುಮಾರು 4,900 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಈ ಮಾರ್ಗದಲ್ಲಿ 3.7 ಕಿಲೋಮೀಟರ್ ಉದ್ದದ ದ್ವಿಮಹಡಿ ರಚನೆಯೂ ಸೇರಿದೆ. ಚಾಲಕರಹಿತ ರೈಲು ಸಂಚಾರಕ್ಕೆ ಅನುಕೂಲವಾಗುವ ಆಧುನಿಕ ಸಂಕೇತ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಈ ಮಾರ್ಗ ಸಂಚಾರಕ್ಕೆ ಮುಕ್ತವಾಗುವುದರಿಂದ ಚೆನ್ನೈನ ಪಶ್ಚಿಮ ಉಪನಗರಗಳು ಮತ್ತು ನಗರದ ಕೇಂದ್ರ ಭಾಗದ ನಡುವಿನ ಸಂಪರ್ಕ ಸುಧಾರಿಸಲಿದೆ. ಪ್ರಯಾಣದ ಸಮಯವೂ ಕಡಿಮೆಯಾಗುವ ನಿರೀಕ್ಷೆಯಿದೆ.
ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ
ತಮಿಳುನಾಡಿನಲ್ಲಿ ಸುಮಾರು 3,700 ಕೋಟಿ ರೂ. ವೆಚ್ಚದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದು, ಕೆಲವು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.
ರಾಷ್ಟ್ರೀಯ ಹೆದ್ದಾರಿ-744ರ ವಡುಗಪಟ್ಟಿ-ತೇರ್ಕುವೇಂಗನಲ್ಲೂರು ನಡುವಿನ 36 ಕಿಲೋಮೀಟರ್ ಉದ್ದದ ನಾಲ್ಕು ಪಥಗಳ ರಸ್ತೆ ಹಾಗೂ ಮದುರೈ ವರ್ತುಲ ರಸ್ತೆಯ 30 ಕಿಲೋಮೀಟರ್ ಉದ್ದದ ನಾಲ್ಕು ಪಥಗಳ ರಸ್ತೆ ಯೋಜನೆಗಳು ಇದರಲ್ಲಿ ಸೇರಿವೆ.
ರಾಷ್ಟ್ರೀಯ ಹೆದ್ದಾರಿ-83ರ ನಾಗಪಟ್ಟಿಣಂ-ತಂಜಾವೂರು ಮಾರ್ಗದಲ್ಲಿ ತಿರುವಾರೂರು ಬೈಪಾಸ್ ನಿರ್ಮಾಣಕ್ಕೂ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳಿಂದ ವಾಹನ ಸಂಚಾರ ಸುಗಮವಾಗುವುದರ ಜತೆಗೆ ಸಂಚಾರ ದಟ್ಟಣೆ ಕಡಿಮೆಯಾಗಿ ಪ್ರಾದೇಶಿಕ ಸಂಪರ್ಕ ಬಲಗೊಳ್ಳುವ ನಿರೀಕ್ಷೆಯಿದೆ.
ರೈಲ್ವೆ ಮೂಲಸೌಕರ್ಯಕ್ಕೆ ಉತ್ತೇಜನ
750 ಕೋಟಿ ರೂ.ಗೂ ಅಧಿಕ ವೆಚ್ಚದ ರೈಲ್ವೆ ಮೂಲಸೌಕರ್ಯ ಯೋಜನೆಗಳನ್ನು ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಕರೈಕಾಲ್-ಪೆರಳಂ ರೈಲು ಮಾರ್ಗ ಹಾಗೂ ಕೊಯಮತ್ತೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರ್ಮಿಸಿರುವ ಮೂರು ರೈಲು ಮೇಲ್ಸೇತುವೆಗಳು ಇದರಲ್ಲಿ ಸೇರಿವೆ.
ಅಮೃತ ಭಾರತ ನಿಲ್ದಾಣ ಯೋಜನೆಯಡಿ ಮರುಅಭಿವೃದ್ಧಿಪಡಿಸಿರುವ ಪಳನಿ, ವೇಲೂರು ಕಂಟೋನ್ಮೆಂಟ್, ಅಂಬಾಸಮುದ್ರಂ, ಪರಮಕುಡಿ ಮತ್ತು ನಮಕ್ಕಲ್ ರೈಲು ನಿಲ್ದಾಣಗಳನ್ನೂ ಉದ್ಘಾಟಿಸಲಿದ್ದಾರೆ.
ಈ ಯೋಜನೆಗಳಿಂದ ರೈಲ್ವೆ ಸಂಪರ್ಕ ಸುಧಾರಿಸುವುದರ ಜತೆಗೆ ರೈಲ್ವೆ ಗೇಟ್‌ಗಳಲ್ಲಿ ಉಂಟಾಗುವ ವಾಹನ ದಟ್ಟಣೆ ಮತ್ತು ಕಾಯುವ ಸಮಯ ಕಡಿಮೆಯಾಗುವ ನಿರೀಕ್ಷೆಯಿದೆ.
ಬಂದರುಗಳ ಅಭಿವೃದ್ಧಿಗೆ ಒತ್ತು
ಚೆನ್ನೈ ಬಂದರು, ಕಾಮರಾಜರ್ ಬಂದರು ಮತ್ತು ವಿ.ಒ. ಚಿದಂಬರನಾರ್ ಬಂದರುಗಳಿಗೆ ಸಂಬಂಧಿಸಿದ ವಿವಿಧ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಲಿದ್ದು, ಕೆಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಚೆನ್ನೈ ಬಂದರಿನಲ್ಲಿ ಪಕ್ಕಾ ಸಂಗ್ರಹಣಾ ಪ್ರದೇಶ, ನಾಲ್ಕು ಆಮದು-ರಫ್ತು ಗೋದಾಮುಗಳು, ಸುಧಾರಿತ ಪ್ರವಾಸಿ ಹಡಗು ಟರ್ಮಿನಲ್ ಮತ್ತು ನಾವಿಕರ ಕ್ಲಬ್ ಅನ್ನು ಉದ್ಘಾಟಿಸಲಾಗುತ್ತದೆ.
ವಿ.ಒ. ಚಿದಂಬರನಾರ್ ಬಂದರಿನಲ್ಲಿ ಎಂಟು ಪ್ರಮುಖ ಅಭಿವೃದ್ಧಿ ಯೋಜನೆಗಳು ಸರಕು ಮತ್ತು ಕಂಟೇನರ್ ನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸುವುದರ ಜತೆಗೆ ಸಾಗಣೆ ವ್ಯವಸ್ಥೆಯನ್ನು ಸುಧಾರಿಸಲು ನೆರವಾಗಲಿವೆ.
ಕಾಮರಾಜರ್ ಬಂದರಿನಲ್ಲಿ ಕಲ್ಲಿದ್ದಲು ಬರ್ತ್-3 ಯೋಜನೆಯನ್ನು ಉದ್ಘಾಟಿಸಲಾಗುತ್ತದೆ. ಕಂಟೇನರ್ ಟರ್ಮಿನಲ್‌ನ ಮೊದಲ ಹಂತದ ಎರಡನೇ ಭಾಗಕ್ಕೆ ಸಂಬಂಧಿಸಿದ ಬಂಡವಾಳ ಹೂಡಿಕೆಯ ಹೂಳೆತ್ತುವ ಕಾಮಗಾರಿಗೂ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಮನಾಲಿ ತೈಲ ಸಂಸ್ಕರಣಾಗಾರದಲ್ಲಿ ಹೊಸ ಯೋಜನೆ
ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ ಮನಾಲಿ ತೈಲ ಸಂಸ್ಕರಣಾಗಾರದಲ್ಲಿ ಲೂಬ್ರಿಕಂಟ್ ಮೂಲ ತೈಲ ಉತ್ಪಾದನಾ ಯೋಜನೆಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸುಮಾರು 1,620 ಕೋಟಿ ರೂ. ವೆಚ್ಚದ ಈ ಯೋಜನೆಯು ವಾರ್ಷಿಕ 2.70 ಲಕ್ಷ ಮೆಟ್ರಿಕ್ ಟನ್ ಉತ್ಪಾದನಾ ಸಾಮರ್ಥ್ಯ ಹೊಂದಿರಲಿದೆ.
ಭಾರತದಲ್ಲಿ ಉತ್ತಮ ಗುಣಮಟ್ಟದ ಲೂಬ್ರಿಕಂಟ್‌ಗಳನ್ನು ತಯಾರಿಸಲು ಅಗತ್ಯವಿರುವ ಗುಂಪು-2 ಮತ್ತು ಗುಂಪು-3 ವರ್ಗದ ಮೂಲ ತೈಲವನ್ನು ಈ ಯೋಜನೆಯಡಿ ಉತ್ಪಾದಿಸಲಾಗುತ್ತದೆ.
ಐಐಟಿ ಮದ್ರಾಸ್‌ನಲ್ಲಿ ಮೆದುಳು ಸಂಶೋಧನಾ ಕೇಂದ್ರ
ಪ್ರಧಾನಿ ಮೋದಿ ಅವರು ಭಾರತೀಯ ತಂತ್ರಜ್ಞಾನ ಸಂಸ್ಥೆ ಮದ್ರಾಸ್‌ನಲ್ಲಿ ಸ್ಥಾಪಿಸಿರುವ ಸುಧಾ ಗೋಪಾಲಕೃಷ್ಣನ್ ಮೆದುಳು ಸಂಶೋಧನಾ ಕೇಂದ್ರವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಕೇಂದ್ರದ ಜಾಗತಿಕ ವೈಜ್ಞಾನಿಕ ಅಭಿಯಾನಕ್ಕೂ ಚಾಲನೆ ನೀಡಲಿದ್ದಾರೆ.
ಈ ಅಭಿಯಾನದಡಿ ಭ್ರೂಣಾವಸ್ಥೆಯಿಂದ ವೃದ್ಧಾಪ್ಯದವರೆಗೆ ಮಾನವ ಜೀವನದ ವಿವಿಧ ಹಂತಗಳಿಗೆ ಸೇರಿದ 100ಕ್ಕೂ ಹೆಚ್ಚು ಮಾನವ ಮೆದುಳುಗಳ ಕೋಶಮಟ್ಟದ ಮೂರು ಆಯಾಮದ ನಕ್ಷೆಗಳನ್ನು ಸಿದ್ಧಪಡಿಸಲಾಗುತ್ತದೆ.
ಈ ಸಂದರ್ಭದಲ್ಲಿ ಮಾನವ ಮೆದುಳಿನ ರಕ್ತಕೊರತೆಯಿಂದ ಉಂಟಾಗುವ ಪಾರ್ಶ್ವವಾಯುವಿಗೆ ಸಂಬಂಧಿಸಿದ ‘ಸಿ-ಸ್ಟ್ರೋಕ್’ ನಕ್ಷೆಯನ್ನೂ ಬಿಡುಗಡೆ ಮಾಡಲಾಗುತ್ತದೆ. ಪಾರ್ಶ್ವವಾಯುವಿನಿಂದ ಬಾಧಿತ ಮೆದುಳಿನ 1,000ಕ್ಕೂ ಹೆಚ್ಚು ಗುರುತಿಸಲಾದ ಸೂಕ್ಷ್ಮ ಭಾಗಗಳನ್ನು ಇದು ಒಳಗೊಂಡಿದೆ. ಈ ಸಂಶೋಧನೆಯು ಚಿಕಿತ್ಸೆಗೆ ಸಂಬಂಧಿಸಿದ ಹೊಸ ಗುರಿಗಳನ್ನು ಗುರುತಿಸಲು ಸಂಶೋಧಕರಿಗೆ ನೆರವಾಗುವ ನಿರೀಕ್ಷೆಯಿದೆ.
ಶಾಲೆಯ ಸುವರ್ಣ ಮಹೋತ್ಸವದಲ್ಲಿ ಭಾಗಿ
ಚೆನ್ನೈನ ಜಯಗೋಪಾಲ್ ಗರೋಡಿಯಾ ಹಿಂದೂ ವಿದ್ಯಾಲಯ ಮೆಟ್ರಿಕ್ಯುಲೇಷನ್ ಉನ್ನತ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿಯೂ ಪ್ರಧಾನಿ ಭಾಗವಹಿಸಿ ಮಾತನಾಡಲಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸಂಸ್ಥೆಯ ಐದು ದಶಕಗಳ ಕೊಡುಗೆಯನ್ನು ಈ ಕಾರ್ಯಕ್ರಮ ಗುರುತಿಸಲಿದೆ.
ಪ್ರಧಾನಿ ಕಾರ್ಯಕ್ರಮದ ವೇಳಾಪಟ್ಟಿ
ಭಾನುವಾರ ಬೆಳಿಗ್ಗೆ ಸುಮಾರು 11.30ಕ್ಕೆ ಪೂನಮಲ್ಲಿ ಬೈಪಾಸ್ ಮೆಟ್ರೋ ನಿಲ್ದಾಣದಿಂದ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಲಿರುವ ಪ್ರಧಾನಿ, ಮಧ್ಯಾಹ್ನ ಸುಮಾರು 12.15ಕ್ಕೆ ಚೆನ್ನೈನ ಜಲಕಂಠೇಶ್ವರರ್ ದೇವಸ್ಥಾನದಲ್ಲಿ ದರ್ಶನ ಮತ್ತು ಪೂಜೆ ನೆರವೇರಿಸಲಿದ್ದಾರೆ. ಬಳಿಕ ಐಐಟಿ ಮದ್ರಾಸ್‌ನ ಮೆದುಳು ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ.
ಮಧ್ಯಾಹ್ನ ಸುಮಾರು 1.30ಕ್ಕೆ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಮಧ್ಯಾಹ್ನ 3 ಗಂಟೆಗೆ ಶಾಲೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.