ಕೆಂಪೇಗೌಡ ಬಡಾವಣೆ ಅಕ್ರಮ: ಬಿಡಿಎ ಕಾರ್ಯನಿರ್ವಾಹಕ ಎಂಜಿನಿಯರ್ ಮಾತೃ ಇಲಾಖೆಗೆ ವಾಪಸ್
ಬಿಡಿಎಯಲ್ಲಿ 14 ವರ್ಷಗಳಿಂದ ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್ ಸಿ.ಎನ್. ಅವರನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೀಸಲು ಜಾಗವನ್ನು ನಿವೇಶನಗಳಾಗಿ ಪರಿವರ್ತಿಸಿದ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈ
BDA-Engineer-Deputation-Withdrawn-After-14-Years


ಬೆಂಗಳೂರು, 10 ಅಕ್ಟೋಬರ್ (ಹಿ.ಸ.):

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಸಾರಿಗೆ ತಾಣಕ್ಕಾಗಿ ಮೀಸಲಿಟ್ಟಿದ್ದ ಜಾಗವನ್ನು ನಿಯಮಬಾಹಿರವಾಗಿ ವಸತಿ ನಿವೇಶನಗಳಾಗಿ ಪರಿವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ.

ಬಿಡಿಎಯಲ್ಲಿ ಕಳೆದ 14 ವರ್ಷಗಳಿಂದ ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ್ ಸಿ.ಎನ್. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಾರ್ಯಮುಕ್ತಗೊಳಿಸಿ, ಮಾತೃ ಇಲಾಖೆಯಾದ ಜಲಸಂಪನ್ಮೂಲ ಇಲಾಖೆಗೆ ವಾಪಸ್ ಕಳುಹಿಸಲಾಗಿದೆ.

ಸಾರಿಗೆ ಸೌಲಭ್ಯಕ್ಕಾಗಿ ಮೀಸಲಿಟ್ಟಿದ್ದ ಜಾಗವನ್ನು ವಸತಿ ನಿವೇಶನಗಳಾಗಿ ಪರಿವರ್ತಿಸಿರುವುದು ಗಂಭೀರ ಅಕ್ರಮದ ಆರೋಪಕ್ಕೆ ಕಾರಣವಾಗಿದೆ. ಈ ಕುರಿತು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾದ ಬೆನ್ನಲ್ಲೇ ನಗರಾಭಿವೃದ್ಧಿ ಇಲಾಖೆ ಕ್ರಮ ಕೈಗೊಂಡಿದೆ.

ಸರ್ಕಾರಿ ನಿಯಮಗಳ ಪ್ರಕಾರ ನಿಯೋಜನೆಗೆ ಸಂಬಂಧಿಸಿದ ಅವಧಿ ಮತ್ತು ನಿಯಮಗಳ ಪಾಲನೆ ಮಹತ್ವದ್ದಾಗಿದೆ. ಆದರೆ, ಅಶೋಕ್ ಸಿ.ಎನ್. ಅವರು ಸತತ 14 ವರ್ಷಗಳಿಂದ ಬಿಡಿಎಯಲ್ಲೇ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಅವರ ನಿಯೋಜನೆಯನ್ನು ಹಿಂಪಡೆದು, ಜಲಸಂಪನ್ಮೂಲ ಇಲಾಖೆಯಲ್ಲಿ ವರದಿ ಮಾಡಿಕೊಳ್ಳುವಂತೆ ಸರ್ಕಾರ ನಿರ್ದೇಶನ ನೀಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande